ADVERTISEMENT

ವಹಿವಾಟು ತಗ್ಗಿಸಿದ ವೈರಸ್

ಹೂಡಿಕೆದಾರರಲ್ಲಿ ಆತಂಕ: ಸತತ ಎರಡನೇ ದಿನವೂ ಸೂಚ್ಯಂಕ ಇಳಿಕೆ

ಪಿಟಿಐ
Published 28 ಜನವರಿ 2020, 19:59 IST
Last Updated 28 ಜನವರಿ 2020, 19:59 IST
   

ಮುಂಬೈ:ಜಾಗತಿಕ ಆರ್ಥಿಕತೆಯ ಮೇಲೆಚೀನಾದ ಕೊರೊನಾ ವೈರಸ್‌ ನಕಾರಾತ್ಮಕ ಪರಿಣಾಮ ಉಂಟುಮಾಡುವ ಆತಂಕದಿಂದಾಗಿ ಮಂಗಳವಾರವೂ ದೇಶಿ ಷೇರುಪೇಟೆಗಳಲ್ಲಿ ಮಾರಾಟದ ಒತ್ತಡ ಕಂಡುಬಂದಿತು.

ಮೂರನೇ ತ್ರೈಮಾಸಿಕದಲ್ಲಿ ಕಂಪನಿಗಳ ಆರ್ಥಿಕ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದೇ ಇರುವುದು, ತೆರಿಗೆ ಸಂಗ್ರಹದಲ್ಲಿ ಇಳಿಕೆಯಾಗುವ ಸಾಧ್ಯತೆ, ಕೇಂದ್ರ ಬಜೆಟ್‌ ಮಂಡನೆ ಹತ್ತಿರದಲ್ಲಿ ಇರುವುದು ಸಹ ಸದ್ಯದ ಮಟ್ಟಿಗೆ ಹೂಡಿಕೆ ಚಟುವಟಿಕೆ ತಗ್ಗಿಸಿವೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ 188 ಅಂಶ ಕುಸಿತ 40,967 ಅಂಶಗಳಲ್ಲಿ ವಹಿವಾಟು ಅಂತ್ಯಗೊಂಡಿದೆ.

ADVERTISEMENT

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 63 ಅಂಶ ಇಳಿಕೆಯಾಗಿ 12,056 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ಗರಿಷ್ಠ ನಷ್ಟ: ದಿನದ ವಹಿವಾಟಿನಲ್ಲಿ ಭಾರ್ತಿ ಏರ್‌ಟೆಲ್‌ ಷೇರು ಶೇ 4.55ರಷ್ಟು ಗರಿಷ್ಠ ನಷ್ಟ ಕಂಡಿತು. ಟಾಟಾ ಸ್ಟೀಲ್‌, ಆರ್‌ಐಎಲ್‌, ಮಾರುತಿ, ಐಟಿಸಿ, ನೆಸ್ಲೆ ಇಂಡಿಯಾ ಮತ್ತು ಐಸಿಐಸಿಐ ಬ್ಯಾಂಕ್‌ ಷೇರುಗಳೂ ಇಳಿಕೆ ಕಂಡಿವೆ.

‘ವಾಹನ ಮಾರಾಟ ಇಳಿಕೆ ಕಂಡಿರುವುದು ಉದ್ಯಮದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ.3ನೇ ತ್ರೈಮಾಸಿಕದಲ್ಲಿ ಕಾರ್ಪೊರೇಟ್‌ ಗಳಿಕೆಯು ನಿರೀಕ್ಷಿತ ಮಟ್ಟದ ಚೇತರಿಕೆ ಕಾಣುತ್ತಿಲ್ಲ. ಜಾಗತಿಕ ಮಾರುಕಟ್ಟೆಯು ಚೀನಾದ ವೈರಸ್‌ ಬಗ್ಗೆ ಆತಂಕಕ್ಕೆ ಒಳಗಾಗಿದೆ’ ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.