ADVERTISEMENT

ವಿಐಎಲ್‌ಗೆ ಹೆಚ್ಚುವರಿ ಸಮಯ: ಕೇಂದ್ರ ಸಂಪುಟದ ತೀರ್ಮಾನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2025, 17:34 IST
Last Updated 31 ಡಿಸೆಂಬರ್ 2025, 17:34 IST
ವೊಡಾಫೋನ್‌ ಐಡಿಯಾ
ವೊಡಾಫೋನ್‌ ಐಡಿಯಾ    

ನವದೆಹಲಿ: ವೊಡಾಫೋನ್‌ ಐಡಿಯಾ ಕಂಪನಿಯು (ವಿಐಎಲ್‌) ಬಾಕಿ ಉಳಿಸಿಕೊಂಡಿರುವ ಮೊತ್ತದ ಪಾವತಿಗೆ ಐದು ವರ್ಷಗಳ ಹೆಚ್ಚುವರಿ ಸಮಯ ನೀಡಲು ಕೇಂದ್ರ ಸಚಿವ ಸಂಪುಟವು ಬುಧವಾರ ತೀರ್ಮಾನಿಸಿದೆ.

ಅಲ್ಲದೆ, ಬಾಕಿ ಮೊತ್ತವು ಡಿಸೆಂಬರ್‌ 31ಕ್ಕೆ ಎಷ್ಟಿತ್ತೋ ಅದೇ ಮಟ್ಟದಲ್ಲಿ ಅದನ್ನು ಇರಿಸಲು ಕೂಡ ಸಂಪುಟ ನಿರ್ಧರಿಸಿದೆ. ಸಾಲದ ಸುಳಿಗೆ ಸಿಲುಕಿರುವ ವೊಡಾಫೋನ್ ಐಡಿಯಾ ಕಂಪನಿಗೆ ಈ ತೀರ್ಮಾನವು ಮಹತ್ವದ ನೆರವು ಎಂದು ಪರಿಗಣಿಸಲಾಗಿದೆ.

ಕಂಪನಿಯು ಬಾಕಿ ಇರಿಸಿಕೊಂಡಿ ರುವ ಎಜಿಆರ್‌ ಮೊತ್ತ ₹87,695 ಕೋಟಿ. ಇದನ್ನು ಈ ಮಟ್ಟದಲ್ಲೇ ಉಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಂಪುಟವು ನಿರ್ಧರಿಸಿದೆ. ಈ ಮೊತ್ತದ ಪಾವತಿಯನ್ನು ಕಂಪನಿಯು 2031–32ರಿಂದ ಆರಂಭಿಸಿ, 2040–41ರೊಳಗೆ
ಪೂರ್ಣಗೊಳಿಸಬೇಕಿದೆ ಎಂದು ಸಂಪುಟದ ತೀರ್ಮಾನದ ಕುರಿತು ಮೂಲಗಳು ವಿವರಿಸಿವೆ.

ADVERTISEMENT

ಹೊಂದಾಣಿಕೆ ಮಾಡಿದ ಒಟ್ಟು ವರಮಾನಕ್ಕೆ (ಎಜಿಆರ್‌) ಸಂಬಂಧಿಸಿದ ಬಾಕಿ ಅಂದರೆ, ದೂರಸಂಪರ್ಕ ಸೇವಾ ಕಂಪನಿಗಳು ತಮ್ಮ ಎಜಿಆರ್‌ ಆಧಾರದಲ್ಲಿ ಸರ್ಕಾರಕ್ಕೆ ‍ಪಾವತಿಸಬೇಕಿರುವ ಮೊತ್ತ. ಈ ವರಮಾನದ ಆಧಾರದಲ್ಲಿ ಕಂಪನಿಗಳು ಸರ್ಕಾರಕ್ಕೆ ಪರವಾನಗಿ ಶುಲ್ಕ, ತರಂಗಾಂತರ ಬಳಕೆ ವೆಚ್ಚವನ್ನು ಪಾವತಿಸಬೇಕಾಗುತ್ತದೆ. ಕಂಪನಿಗಳ ಎಲ್ಲ ವರಮಾನಗಳನ್ನು (ಬಾಡಿಗೆ ವರಮಾನ, ಆಸ್ತಿ ಮಾರಾಟದಿಂದ ಬರುವ ವರಮಾನ ಇತ್ಯಾದಿ) ಇದು ಒಳಗೊಳ್ಳುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.

ವೊಡಾಫೋನ್‌ ಐಡಿಯಾ ಲಿಮಿಟೆಡ್‌ ಕಂಪನಿಯು 2017–18 ಹಾಗೂ 2018–19ಕ್ಕೆ ಸಂಬಂಧಿಸಿದಂತೆ ಪಾವತಿ ಮಾಡಬೇಕಿರುವ ಎಜಿಆರ್‌ ಬಾಕಿಯನ್ನು ಕೂಡ ಸುಪ್ರೀಂ ಕೋರ್ಟ್‌ನ 2020ರ ಆದೇಶದ ನಂತರ
ಅಂತಿಮಗೊಳಿಸಲಾಗಿದೆ. ಈ ಮೊತ್ತವನ್ನು ಕಂಪನಿಯು 2025–26ರಿಂದ ಆರಂಭಿಸಿ 2030–31ಕ್ಕೆ ಮೊದಲು ಪಾವತಿಸಬೇಕು, ಇದರಲ್ಲಿ ಬದಲಾವಣೆ ಇಲ್ಲ ಎಂದು ಮೂಲಗಳು ವಿವರಿಸಿವೆ.

ಈ ಮೊತ್ತವು ವಾರ್ಷಿಕ ಅಂದಾಜು ₹120 ಕೋಟಿಯಷ್ಟಾಗಲಿದೆ. ಆರು ವರ್ಷಗಳಲ್ಲಿ ಇದು ಅಂದಾಜು ₹700 ಕೋಟಿಯಿಂದ ₹800 ಕೋಟಿಯಷ್ಟು ಆಗಲಿದೆ ಎಂದು ಮೂಲಗಳು
ತಿಳಿಸಿವೆ.

ವೊಡಾಫೋನ್ ಐಡಿಯಾ ಕಂಪನಿಯು ಬಹುಕಾಲದಿಂದ ಹಣಕಾಸಿನ ಸಮಸ್ಯೆಗೆ ಸಿಲುಕಿದೆ. ದೂರಸಂಪರ್ಕ ಕ್ಷೇತ್ರದಲ್ಲಿನ ತೀವ್ರ ದರಸಮರ, ಭಾರಿ ಮೊತ್ತದ ಸಾಲ, ಭಾರಿ ಮೊತ್ತದ ಎಜಿಆರ್‌ ಬಾಕಿ ಕಂಪನಿಯ ಪಾಲಿಗೆ ಸವಾಲಾಗಿವೆ. ಕಂಪನಿಯು ನಿರಂತರವಾಗಿ ನಷ್ಟ ಅನುಭವಿಸುತ್ತಿದೆ. ಅಲ್ಲದೆ, ಕಂಪನಿಯ ಚಂದಾದಾರರ ಸಂಖ್ಯೆ ಕಡಿಮೆ ಆಗುತ್ತಿದೆ, ತನ್ನ ಜಾಲವನ್ನು ವಿಸ್ತರಿಸಲು ಕಂಪನಿಗೆ ಹೆಚ್ಚು ಸಾಮರ್ಥ್ಯ ಇಲ್ಲದಂತಾಗಿದೆ.

ಸರ್ಕಾರವು ಮತ್ತೆ ಮತ್ತೆ ನೆರವು ನೀಡಿರುವುದು, ಬಾಕಿ ಮೊತ್ತವನ್ನು ಸರ್ಕಾರವು ಷೇರುಗಳನ್ನಾಗಿ ಪರಿವರ್ತನೆ ಮಾಡಿರುವುದು ಕಂಪನಿಯು ಮುಳುಗದಂತೆ ಕಾಪಾಡಿವೆ.

ಕೇಂದ್ರ ಸಂಪುಟವು ಎಜಿಆರ್‌ ಬಾಕಿಯಲ್ಲಿ ಒಂದಿಷ್ಟು ಪಾಲನ್ನು ಮನ್ನಾ ಮಾಡುತ್ತದೆ ಎಂಬ ನಿರೀಕ್ಷೆಯು ಕೆಲವರಲ್ಲಿ ಇತ್ತು. ಆದರೆ, ಈ ಬಗೆಯ ಕ್ರಮ ಕೈಗೊಳ್ಳದೆ, ಬಾಕಿ ಪಾವತಿಗೆ ಹೆಚ್ಚಿನ ಕಾಲಾವಕಾಶ ನೀಡುವ ತೀರ್ಮಾನವನ್ನು ಸಂಪುಟ ಕೈಗೊಂಡಿದೆ. ಕಂಪನಿಯಲ್ಲಿ ಈಗ ಕೇಂದ್ರ ಸರ್ಕಾರವು ಶೇ 48.9ರಷ್ಟು ಪಾಲು
ಹೊಂದಿದೆ.

‘ಸರ್ಕಾರ ಬದ್ಧ’

ದೂರಸಂಪರ್ಕ ವಲಯವು ಬಹಳ ಮಹತ್ವದ ಮೂಲಸೌಕರ್ಯ ವಲಯ. ಇದಕ್ಕೂ ಅರ್ಥ ವ್ಯವಸ್ಥೆಯ ಬೆಳವಣಿಗೆಗೂ ಉದ್ಯೋಗ ಸೃಷ್ಟಿಗೂ ಬಲವಾದ ನಂಟಿದೆ. ಹೀಗಾಗಿ, ಈ ವಲಯಕ್ಕೆ ಬೆಂಬಲ ನೀಡಲು ಸರ್ಕಾರ ಬದ್ಧವಾಗಿದೆ ಎಂದು ಮೂಲಗಳು ವಿವರಿಸಿವೆ.

ಗ್ರಾಹಕರು ಮತ್ತು
ಸ್ಪರ್ಧಾತ್ಮಕತೆಯ ಹಿತದೃಷ್ಟಿಯಿಂದ ಈ ವಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಪನಿಗಳು ಉಳಿಯಬೇಕು ಎಂಬುದು ಸರ್ಕಾರ ನಿಲುವಾಗಿದೆ. ಹೀಗಾಗಿ ಈ ಕಂಪನಿಯ ಉಳಿವು ಮುಖ್ಯವಾಗುತ್ತದೆ ಎಂದು ಅವು ಹೇಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.