ಪ್ರಾತಿನಿದಿಕ ಚಿತ್ರ
ನವದೆಹಲಿ: ಇ–ಕಾಮರ್ಸ್ ವೇದಿಕೆಗಳಲ್ಲಿ ವಾಕಿ–ಟಾಕಿಗಳ ಅನಧಿಕೃತ ಪ್ರದರ್ಶನ ಮತ್ತು ಮಾರಾಟಕ್ಕೆ ಕಡಿವಾಣ ಹಾಕಲು ಕೇಂದ್ರ ಗ್ರಾಹಕ ಹಿತರಕ್ಷಣಾ ಪ್ರಾಧಿಕಾರವು (ಸಿಸಿಪಿಎ), ಹೊಸ ಮಾರ್ಗಸೂಚಿ ಪ್ರಕಟಿಸಿದೆ.
ವಾಕಿ–ಟಾಕಿಗಳ ಬಗ್ಗೆ ಸೂಕ್ತ ಮಾಹಿತಿ, ಪರವಾನಗಿ ಅಥವಾ ಸಲಕರಣೆ ಪ್ರಕಾರದ ಬಗ್ಗೆ ಅನುಮೋದನೆ ಪಡೆಯದೆ ಮಾರಾಟ ಮಾಡಲಾಗುತ್ತಿದೆ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆ 2019ರ ಸ್ಪಷ್ಟ ಉಲ್ಲಂಘನೆಯಾಗಿದೆ. ಇದನ್ನು ತಡೆಯುವ ಉದ್ದೇಶದಿಂದ ಹೊಸ ಚೌಕಟ್ಟು ರೂಪಿಸಲಾಗಿದೆ ಎಂದು ಸಿಸಿಪಿಎ ಹೇಳಿದೆ.
ಕೇಂದ್ರ ದೂರಸಂಪರ್ಕ ಇಲಾಖೆ ಮತ್ತು ಕೇಂದ್ರ ಗೃಹ ಸಚಿವಾಲಯದ ಜೊತೆಗೆ ಸಮಾಲೋಚನೆ ನಡೆಸಿದ ಬಳಿಕ ಈ ಮಾರ್ಗಸೂಚಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದೆ.
ಇ–ಕಾಮರ್ಸ್ ವೇದಿಕೆಗಳಲ್ಲಿ ಸರ್ಕಾರದ ನಿಯಮಾವಳಿ ಮತ್ತು ವೈರ್‌ಲೆಸ್ ಕಾರ್ಯಾಚರಣೆಯ ಪರವಾನಗಿ ಅಥವಾ ಸಂಬಂಧಪಟ್ಟ ಕಾನೂನನ್ನು ಉಲ್ಲಂಘಿಸಿ ವಾಕಿ–ಟಾಕಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದೆ.
ವಾಕಿ–ಟಾಕಿಗಳ ಫ್ರೀಕ್ವೆನ್ಸಿ ಸಾಮರ್ಥ್ಯದ ಬಗ್ಗೆ ವಿವರಣೆ ಇರುವುದಿಲ್ಲ. ಭಾರತೀಯ ಟೆಲಿಗ್ರಾಫ್ ಕಾಯ್ದೆ 1885, ವೈರ್‌ಲೆಸ್ ಟೆಲಿಪ್ರಾಫ್ ಕಾಯ್ದೆ 1993, ಕಡಿಮೆ ಶಕ್ತಿ ಹೊಂದಿದ ರೇಡಿಯೊ ಫ್ರೀಕ್ವೆನ್ಸಿ ಸಾಧನಗಳ ಬಳಕೆಗೆ ಸಂಬಂಧಿಸಿದಂತೆ 2018ರಲ್ಲಿ ರೂಪಿಸಿರುವ ನಿಯಮಾವಳಿಗಳನ್ನು ಉಲ್ಲಂಘಿಸಿ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಮಾರ್ಗಸೂಚಿ ರೂಪಿಸಲಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.