ADVERTISEMENT

ವಾರಾಂತ್ಯದ ಕರ್ಫ್ಯೂ, ಭಾಗಶಃ ಲಾಕ್‌ಡೌನ್‌: ರಿಟೇಲ್‌ ಉದ್ಯಮಕ್ಕೆ ಪೆಟ್ಟು

ಪಿಟಿಐ
Published 25 ಆಗಸ್ಟ್ 2020, 14:05 IST
Last Updated 25 ಆಗಸ್ಟ್ 2020, 14:05 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಕೆಲವು ರಾಜ್ಯಗಳಲ್ಲಿ ವಾರಾಂತ್ಯದ ಕರ್ಫ್ಯೂ ಮತ್ತು ಭಾಗಶಃ ಲಾಕ್‌ಡೌನ್‌ ಜಾರಿಯಲ್ಲಿರುವುದು ರಿಟೇಲ್‌ ಉದ್ಯಮದ ಚೇತರಿಕೆಗೆ ಅಡ್ಡಿಯಾಗುತ್ತಿದೆ ಎಂದು ರಿಟೇಲ್‌ ಅಸೋಸಿಯೇಷನ್‌ ಆಫ್‌ ಇಂಡಿಯಾ ಹೇಳಿದೆ.

ಲಾಕ್‌ಡೌನ್‌ನಿಂದಾಗಿ ನಾಲ್ಕು ತಿಂಗಳು ರಿಟೇಲ್‌ ವಹಿವಾಟುದಾರರು ನಷ್ಟ ಅನುಭವಿಸಿದ್ದಾರೆ. ಹೀಗಾಗಿ, ನಷ್ಟದಿಂದ ಹೊರಬರಲು ವಾರಾಂತ್ಯದ ವಹಿವಾಟಿನ ಮೇಲೆ ಅವಲಂಬಿತರಾಗಿದ್ದಾರೆ. ವಾರದ ಒಟ್ಟಾರೆ ವಹಿವಾಟಿನಲ್ಲಿ ಶೇಕಡ 45ರಷ್ಟು ಶನಿವಾರ ಮತ್ತು ಭಾನುವಾರವೇ ನಡೆಯುತ್ತದೆ. ಆದರೆ, ವಾರಾಂತ್ಯದ ಕರ್ಫ್ಯೂ ಮತ್ತು ಭಾಗಶಃ ಲಾಕ್‌ಡೌನ್‌ನಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಪರಿಸ್ಥಿತಿಯನ್ನು ವಿವರಿಸಿದೆ.

ಪಂಜಾಬ್‌, ಹರಿಯಾಣ, ಕೇರಳ, ಮಧ್ಯಪ್ರದೇಶ, ಉತ್ತರ ಪ್ರದೇಶ ಸೇರಿದಂತೆ 10ಕ್ಕೂ ಅಧಿಕ ರಾಜ್ಯಗಳು ವಾರಾಂತ್ಯದ ಲಾಕ್‌ಡೌನ್‌ ಜಾರಿಗೊಳಿಸಿವೆ. ಇದರಿಂದ ರಿಟೇಲ್‌ ವಹಿವಾಟಿನ ಚೇತರಿಕೆಗೆ ಅಡ್ಡಿಯಾಗಿದೆ ಎಂದು ತಿಳಿಸಿದೆ.

ADVERTISEMENT

‘ರಿಟೇಲ್‌ ಉದ್ಯಮದ ಚೇತರಿಕೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು’ ಒಕ್ಕೂಟದ ಸಿಇಒ ಕುಮಾರ್‌ ರಾಜಗೋಪಾಲನ್‌ ಮನವಿ ಮಾಡಿದ್ದಾರೆ.

‘ಭಾರತವು ಉಪಭೋಗ ಆರ್ಥಿಕತೆಯಾಗಿದೆ. ರಿಟೇಲ್‌ ಉದ್ಯಮ ಸಂಕಷ್ಟಕ್ಕೆ ಒಳಗಾದರೆ, ತಯಾರಿಕೆ, ಮನರಂಜನೆ, ಸಣ್ಣ ಉದ್ದಿಮೆಗಳು ಹೀಗೆ ಒಟ್ಟಾರೆಯಾಗಿ ವ್ಯವಸ್ಥೆಯ ಮೇಲೆ ಅಡ್ಡಪರಿಣಾಮ ಉಂಟಾಗಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.