ADVERTISEMENT

ಆರೋಗ್ಯ ವಿಮೆ | ಸಂಪೂರ್ಣ ನಗದು ರಹಿತ ಪಾವತಿ ಶೀಘ್ರ: ಐಆರ್‌ಡಿಎಐ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2023, 16:30 IST
Last Updated 6 ಸೆಪ್ಟೆಂಬರ್ 2023, 16:30 IST
   

ಮುಂಬೈ: ವೈದ್ಯಕೀಯ ವಿಮೆ ಮೊತ್ತವು ಸಂಪೂರ್ಣವಾಗಿ ನಗದು ರಹಿತವಾಗಿ ಆಸ್ಪತ್ರೆಗಳಿಗೆ ಪಾವತಿ ಆಗುವಂತೆ ಮಾಡಲು ವಿಮಾ ಕಂಪ‍ನಿಗಳ ಜೊತೆ ಕೆಲಸ ಮಾಡುತ್ತಿರುವುದಾಗಿ ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರವು (ಐಆರ್‌ಡಿಎಐ) ಬುಧವಾರ ಹೇಳಿದೆ.

ಸದ್ಯ, ನಗದುರಹಿತ ಪಾವತಿಯು ಸರಿಯಾಗಿ ಇಲ್ಲ. ವಿಮಾ ಕಂಪನಿಗಳು ಒಟ್ಟು ಬಿಲ್‌ ಮೊತ್ತದಲ್ಲಿ ಶೇ 10ರಷ್ಟನ್ನು ಕಡಿತ ಮಾಡುತ್ತಿವೆ. ಅಲ್ಲದೆ, ‌ವಿಮಾ ಉತ್ಪನ್ನಗಳು ನಗದುರಹಿತ ಸೌಲಭ್ಯವನ್ನು ನೀಡಿದರೂ ಹಲವು ಆಸ್ಪತ್ರೆಗಳು ರೋಗಿಯನ್ನು ದಾಖಲು ಮಾಡಿಕೊಳ್ಳುವಾಗ ಆ ಸೌಲಭ್ಯವನ್ನು ನೀಡುತ್ತಿಲ್ಲ.

ಜಾಗತಿಕ ಫಿನ್‌ಟೆಕ್‌ ಉತ್ಸವವನ್ನು ಉದ್ದೇಶಿಸಿ ಮಾತನಾಡಿದ ಐಆರ್‌ಡಿಎಐನ ಅಧ್ಯಕ್ಷ ದೆಬಶಿಶ್ ಪಂಡಾ ಅವರು, ಶೇ 100ರಷ್ಟು ನಗದುರಹಿತ ಪಾವತಿ ವ್ಯವಸ್ಥೆಯನ್ನು ಶೀಘ್ರದಲ್ಲೇ ಜಾರಿಗೊಳಿಸಲು ಆರೋಗ್ಯ ವಿಮಾ ಕಂಪನಿಗಳು, ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಮತ್ತು ವಿಮಾ ಮಂಡಳಿಯ ಜೊತೆ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ADVERTISEMENT

ನಗದುರಹಿತ ಪಾವತಿ ಸೌಲಭ್ಯಕ್ಕಾಗಿ ರಾಷ್ಟ್ರೀಯ ಆರೋಗ್ಯ ವಿನಿಮಯ ಕೇಂದ್ರಕ್ಕೆ ಹೆಚ್ಚಿನ ಆಸ್ಪತ್ರೆಗಳನ್ನು ಸೇರಿಸಲು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿ ಇರುವುದಾಗಿ ಐಆರ್‌ಡಿಎಐ ಹೇಳಿದೆ.

ಹಿರಿಯರಿಗೆ ಕೈಗೆಟಕುವ ಬೆಲೆಗೆ ಉತ್ತಮವಾದ ಆರೋಗ್ಯ ವಿಮೆ ಒದಗಿಸುವ ನಿಟ್ಟಿನಲ್ಲಿಯೂ ಕೆಲಸ ನಡೆಯುತ್ತಿದೆ. ಈಗಿನ ವೈದ್ಯಕೀಯ ಯೋಜನೆಗಳು ಹಿರಿಯರ ಕೈಗೆಟುಕದಂತಾಗಿವೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.