ADVERTISEMENT

ಭಾರತದ ಜಿಡಿಪಿ | 1991ರ ನಂತರ ಅತ್ಯಂತ ಕಳಪೆ ವೃದ್ಧಿ ದರದ ಅಂದಾಜು

ಪಿಟಿಐ
Published 13 ಏಪ್ರಿಲ್ 2020, 4:47 IST
Last Updated 13 ಏಪ್ರಿಲ್ 2020, 4:47 IST
   

ವಾಷಿಂಗ್ಟನ್‌: ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು (ಜಿಡಿಪಿ) 1991ರ ಆರ್ಥಿಕ ಉದಾರೀಕರಣ ನಂತರದ ಅತ್ಯಂತ ಕಳಪೆ ಮಟ್ಟದಲ್ಲಿ ಇರಲಿದೆ ಎಂದು ವಿಶ್ವಬ್ಯಾಂಕ್‌ ಅಂದಾಜಿಸಿದೆ.

‘ಕೊರೊನಾ–2’ ವೈರಾಣು ಪಿಡುಗಿನಿಂದ ತೀವ್ರವಾಗಿ ಬಾಧಿತವಾಗಿರುವ ಭಾರತದ ಆರ್ಥಿಕತೆಯು, 2020ರ ಏಪ್ರಿಲ್‌ನಿಂದ 2021ರ ಮಾರ್ಚ್‌ವರೆಗಿನ ಅವಧಿಯಲ್ಲಿ ಶೇ 1.5 ರಿಂದ ಶೇ 2.8ರ ಮಧ್ಯೆ ಪ್ರಗತಿ ಕಾಣಲಿದೆ ಎಂದು ತನ್ನ ‘ದಕ್ಷಿಣ ಏಷ್ಯಾ ಆರ್ಥಿಕತೆ ಕೇಂದ್ರಿತ’ ವರದಿಯಲ್ಲಿ ತಿಳಿಸಿದೆ.

ಹಿಂದಿನ ವರ್ಷದ ಅಕ್ಟೋಬರ್‌ನಲ್ಲಿ 2020ನೇ ಸಾಲಿನ ‘ಜಿಡಿಪಿ’ ಶೇ 5.4 ರಿಂದ ಶೇ 4.1ರಷ್ಟು ಇರಲಿದೆ ಎಂದು ಅಂದಾಜಿಸಿತ್ತು. 2019–20ನೇ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆಯು ಶೇ 4.8 ರಿಂದ ಶೇ 5ರಷ್ಟು ಇರಲಿದೆ ಎಂದೂ ತಿಳಿಸಿದೆ.

ADVERTISEMENT

ಹಣಕಾಸು ಕ್ಷೇತ್ರದಲ್ಲಿನ ನಿರಂತರ ಬಿಕ್ಕಟ್ಟಿನಿಂದಾಗಿ ಮೊದಲೇ ಮಂದಗತಿಯಲ್ಲಿ ಸಾಗಿದ್ದ ಭಾರತದ ಆರ್ಥಿಕತೆಗೆ ‘ಕೋವಿಡ್‌–19’ ಪಿಡುಗು ದೊಡ್ಡ ಹೊಡೆತ ನೀಡಿದೆ. ಆರ್ಥಿಕ ಚಟುವಟಿಕೆಗಳ ಮೇಲಿನ ನಿರ್ಬಂಧದಿಂದಾಗಿ ಸರಕುಗಳ ಪೂರೈಕೆ ವ್ಯತ್ಯಯ ಉಂಟಾಗಿದೆ. ಸರಕು ಮತ್ತು ಸೇವೆಗಳ ಬೇಡಿಕೆಯು ಗಮನಾರ್ಹವಾಗಿ ಕುಸಿದಿದೆ. ಸೇವಾ ವಲಯವೂ ತೀವ್ರವಾಗಿ ಬಾಧಿತವಾಗಿದೆ. 2019ರ ವರ್ಷಾಂತ್ಯದ ವೇಳೆಗೆ ಆರ್ಥಿಕತೆಯಲ್ಲಿ ಕಂಡು ಬಂದಿದ್ದ ಚೇತರಿಕೆಗೆ ಜಾಗತಿಕ ಆರ್ಥಿಕ ಬಿಕ್ಕಟ್ಟು ತೀವ್ರ ಅಡಚಣೆ ಒಡ್ಡಿದೆ.

2021–22ರ ಹಣಕಾಸು ವರ್ಷದಲ್ಲಿ ಆರ್ಥಿಕ ಪ್ರಗತಿಯು ಶೇ 5ರಷ್ಟು ಇರಲಿದೆ ಎಂದು ನಿರೀಕ್ಷಿಸಬಹುದು. ಅಷ್ಟು ಹೊತ್ತಿಗೆ ‘ಕೊವಿಡ್‌–19’ ತೀಕ್ಷತೆ ತಗ್ಗಿರಲಿದೆ. ಸರ್ಕಾರ ಮತ್ತು ಆರ್‌ಬಿಐನ ವಿತ್ತೀಯ ಹಾಗೂ ಹಣಕಾಸು ಉತ್ತೇಜನಾ ಕೊಡುಗೆಗಳು ಫಲ ನೀಡಲು ಆರಂಭಿಸಿರುತ್ತವೆ ಎಂದು ತಿಳಿಸಿದೆ.

ಇತ್ತೀಚಿನ ದಿನಗಳಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳೆಲ್ಲವು ಭಾರತದ ‘ಜಿಡಿಪಿ’ ಕುರಿತ ತಮ್ಮ ಈ ಮೊದಲಿನ ಅಂದಾಜನ್ನು ಕೆಳಮುಖವಾಗಿ ಪರಿಷ್ಕರಿಸಿವೆ.

ಚೇತರಿಕೆಗೆ ಸಲಹೆ

‘ಭಾರತದ ಆರ್ಥಿಕತೆಯ ಭವಿಷ್ಯ ಆಶಾದಾಯಕವಾಗಿಲ್ಲ. ದಿಗ್ಬಂಧನ ಮುಂದುವರೆದಷ್ಟೂ ಅದರಿಂದ ಆರ್ಥಿಕತೆ ಮೇಲಿನ ಪ್ರತಿಕೂಲ ಪರಿಣಾಮ ತೀವ್ರ ಸ್ವರೂಪದಲ್ಲಿ ಇರಲಿದೆ. ‘ಕೋವಿಡ್‌–19’ ಹರಡುವಿಕೆಗೆ ಕಡಿವಾಣ ಮತ್ತು ಎಲ್ಲರಿಗೂ ಆಹಾರ ದೊರೆಯಲು ಆದ್ಯತೆ ನೀಡಬೇಕು’ ಎಂದು ವಿಶ್ವಬ್ಯಾಂಕ್‌ನ ದಕ್ಷಿಣ ಏಷ್ಯಾದ ಮುಖ್ಯ ಆರ್ಥಿಕ ತಜ್ಞ ಹ್ಯಾನ್ಸ್‌ ಟಿಮ್ಮರ್‌ ಹೇಳಿದ್ದಾರೆ.

‘ಸ್ಥಳೀಯ ಮಟ್ಟದಲ್ಲಿ ತಾತ್ಪೂರ್ತಿಕ ಉದ್ಯೋಗ ಅವಕಾಶ ಕಲ್ಪಿಸಬೇಕು. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಸ್‌ಎಂಇ) ದಿವಾಳಿ ಏಳದಂತೆ ಎಚ್ಚರವಹಿಸಬೇಕು. ದೀರ್ಘಾವಧಿಯಲ್ಲಿ ಭಾರತದ ಆರ್ಥಿಕತೆಯನ್ನು ಹಣಕಾಸು ಮತ್ತು ಸಾಮಾಜಿಕ ನೆಲೆಯಲ್ಲಿ ಸುಸ್ಥಿರ ಪ್ರಗತಿಯ ಹಾದಿಗೆ ತರಲು ಸಾಧ್ಯವಾಗಲಿದೆ’ ಎಂದು ಹೇಳಿದ್ದಾರೆ.

ಅಂಕಿ ಅಂಶ

ಜಾಗತಿಕ ಸಂಸ್ಥೆ; ಜಿಡಿಪಿ ಅಂದಾಜು (%)

ಏಷ್ಯಾ ಅಭಿವೃದ್ಧಿ ಬ್ಯಾಂಕ್‌; 4.0

ಇಂಡಿಯಾ ರೇಟಿಂಗ್ಸ್‌ ಆ್ಯಂಡ್‌ ರಿಸರ್ಚ್‌;3.6

ಎಸ್‌ಆ್ಯಂಡ್‌ಪಿ ಗ್ಲೋಬಲ್‌ ರೇಟಿಂಗ್ಸ್‌;3.5

ಮೂಡೀಸ್‌ ಇನ್ವೆಸ್ಟರ್ಸ್‌ ಸರ್ವೀಸ್‌;2.5

ಫಿಚ್‌ ರೇಟಿಂಗ್ಸ್‌;2.00

ವಿಶ್ವಬ್ಯಾಂಕ್‌;1.5 – 2.8

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.