ADVERTISEMENT

ಮತ್ತೆ ಚಿನ್ನದ ದರ ಏರಿಕೆ: ಜಾಗತಿಕ ಮಾರುಕಟ್ಟೆಯಲ್ಲಿ 8 ವರ್ಷಗಳ ಗರಿಷ್ಠ ಮಟ್ಟ

ಏಜೆನ್ಸೀಸ್
Published 24 ಜೂನ್ 2020, 5:38 IST
Last Updated 24 ಜೂನ್ 2020, 5:38 IST
ಚಿನ್ನ–ಪ್ರಾತಿನಿಧಿಕ ಚಿತ್ರ
ಚಿನ್ನ–ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಜಾಗತಿಕವಾಗಿ ಚಿನ್ನದ ದರ ಏರಿಕೆ ಕಂಡಿದ್ದು, ಭಾರತದಲ್ಲಿಯೂ ಚಿನ್ನದ ಬೆಲೆ ದಾಖಲೆಯ ಮಟ್ಟ ತಲುಪಿದೆ. ದೇಶದ ಬಹು ಬಗೆಯ ಸರಕು ವಿನಿಮಯ ಕೇಂದ್ರದ (ಎಂಸಿಎಕ್ಸ್‌ ) ಆಗಸ್ಟ್‌ ಚಿನ್ನದ ಫ್ಯೂಚರ್ಸ್‌ 10 ಗ್ರಾಂಗೆ ಶೇ 0.33ರಷ್ಟು ಏರಿಕೆಯಾಗಿ ₹48,392 ತಲುಪಿದೆ. ಹಿಂದಿನ ಚಿನ್ನದ ಫ್ಯೂಚರ್ಸ್‌ ಅಧಿಕ ಮಟ್ಟ ₹48,289 ಇತ್ತು.

ಚಿನ್ನದ ದರ ಹೆಚ್ಚಳವಾಗಿದ್ದರೆ, ಬೆಳ್ಳಿ ದರ ಇಳಿಕೆ ಕಂಡಿದೆ. ಎಂಸಿಎಕ್ಸ್‌ನಲ್ಲಿ ಪ್ರತಿ ಕೆ.ಜಿ. ಬೆಳ್ಳಿ ಶೇ 0.14ರಷ್ಟು ಕಡಿಮೆಯಾಗಿ ₹48,716ರಲ್ಲಿ ವಹಿವಾಟು ನಡೆದಿದೆ. ವಿಶ್ವದಲ್ಲಿ ಕೊರೊನಾ ವೈರಸ್‌ ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಚಿನ್ನದ ಬೇಡಿಕೆಯೂ ಹೆಚ್ಚಿದೆ.

ಜಾಗತಿಕ ಚಿನಿವಾರ ಪೇಟೆಯಲ್ಲಿ ಚಿನ್ನದ ದರ 8 ವರ್ಷ ಗರಿಷ್ಠ ಮಟ್ಟ ತಲುಪಿದೆ. ಪ್ರತಿ ಔನ್ಸ್‌ (28.34 ಗ್ರಾಂ) ಚಿನ್ನ ಶೇ 0.2ರಷ್ಟು ಹೆಚ್ಚಳವಾಗಿ 1,769.59 ಡಾಲರ್‌ ಆಗಿದೆ. ದರ 1,773 ಡಾಲರ್‌ ( ಸುಮಾರು ₹1,34,225) ಸಹ ತಲುಪಿತ್ತು. 2012ರಿಂದ ಇದೇ ಮೊದಲು ಈ ಮಟ್ಟ ಮುಟ್ಟಿದೆ. ಅಮೆರಿಕದ ಚಿನ್ನದ ಫ್ಯೂಚರ್ಸ್‌ ಪ್ರತಿ ಔನ್ಸ್‌ಗೆ ಶೇ 0.4ರಷ್ಟು ಏರಿಕೆಯೊಂದಿಗೆ 1,789.20 ಡಾಲರ್‌ ಆಗಿದೆ.

ADVERTISEMENT

ಚಿನ್ನದ ದರ ಈ ವರ್ಷ ಶೇ 24ರಷ್ಟು ಏರಿಕೆಯಾಗಿದೆ. 2019ರಲ್ಲಿ ಒಟ್ಟು ಹೆಚ್ಚಳ ಶೇ 25 ದಾಖಲಾಗಿದೆ. ಆರ್ಥಿಕ ಕಠಿಣ ಪರಿಸ್ಥಿತಿಗಳಲ್ಲಿ ಹಾಗೂ ಹಣದುಬ್ಬರದ ವಿರುದ್ಧದ ತಡೆಯಾಗಿ ಚಿನ್ನವನ್ನು ಕಾಣಲಾಗುತ್ತದೆ. ಕಚ್ಚಾ ತೈಲ ದರ ಇಳಿಕೆ ಸಹ ಜಾಗತಿಕವಾಗಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.