ADVERTISEMENT

ಯೆಸ್‌ ಬ್ಯಾಂಕ್‌: ‘ನೆಫ್ಟ್‌’ ಸೇವೆಗೆ ಚಾಲನೆ

ಪಿಟಿಐ
Published 11 ಮಾರ್ಚ್ 2020, 2:47 IST
Last Updated 11 ಮಾರ್ಚ್ 2020, 2:47 IST
   

ನವದೆಹಲಿ:ಯೆಸ್‌ ಬ್ಯಾಂಕ್‌ನ ಗ್ರಾಹಕರಿಗಾಗಿ ತಕ್ಷಣ ಪಾವತಿ (ಐಎಂಪಿಎಸ್‌) ಮತ್ತು ಎಲೆಕ್ಟ್ರಾನಿಕ್‌ ಹಣ ವರ್ಗಾವಣೆಯ (ಎನ್‌ಇಎಫ್‌ಟಿ) ಒಳಬರುವ ಸೇವೆಗಳಿಗೆ ಚಾಲನೆ ನೀಡಲಾಗಿದೆ.

ಗ್ರಾಹಕರು ಇತರ ಬ್ಯಾಂಕ್‌ಗಳ ಖಾತೆಗಳ ಮೂಲಕ ಯೆಸ್‌ ಬ್ಯಾಂಕ್‌ನ ಖಾತೆಗಳಿಗೆ ಈ ಎರಡೂ ವಿಧಾನಗಳ ಮೂಲಕ ಹಣ ವರ್ಗಾಯಿಸಬಹುದಾಗಿದೆ. ಈ ಸೌಲಭ್ಯ ಬಳಸಿಕೊಂಡು ಯೆಸ್‌ ಬ್ಯಾಂಕ್‌ನ ಕ್ರೆಡಿಟ್‌ ಕಾರ್ಡ್‌ನ ಬಾಕಿ ಮೊತ್ತ ಮತ್ತು ಸಾಲ ಮರುಪಾವತಿಸಬಹುದು ಎಂದು ಬ್ಯಾಂಕ್‌ ತನ್ನ ಅಧಿಕೃತ ಟ್ವಿಟರ್‌ ಖಾತೆ ಮೂಲಕ ತಿಳಿಸಿದೆ.

ಬ್ಯಾಂಕ್‌ನ ಎಟಿಎಂಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ನಿಗದಿಪಡಿಸಿದ ಮೊತ್ತವನ್ನು ಗ್ರಾಹಕರು ಇತರ ಬ್ಯಾಂಕ್‌ಗಳ ಎಟಿಎಂಗಳಿಂದಲೂ ಪಡೆಯಬಹುದು.

ADVERTISEMENT

ಖಾತೆಯಿಂದ ಹಣ ಹಿಂದೆ ಪಡೆಯುವ ಗರಿಷ್ಠ ₹ 50 ಸಾವಿರದ ಮಿತಿಗೆ ಈ ವಾರಾಂತ್ಯದಲ್ಲಿ ವಿನಾಯ್ತಿ ದೊರೆಯುವ ಸಾಧ್ಯತೆ ಇದೆ.

ಇತರ ಬ್ಯಾಂಕ್‌ಗಳ ಪರಾಮರ್ಶೆ ಸದ್ಯಕ್ಕಿಲ್ಲ: ಯೆಸ್‌ ಬ್ಯಾಂಕ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಖಾಸಗಿ ವಲಯದ ಇತರ ಬ್ಯಾಂಕ್‌ಗಳ ಕಾರ್ಯವೈಖರಿಯನ್ನು ಪರಿಶೀಲನೆಗೆ ಒಳಪಡಿಸುವ ಸಾಧ್ಯತೆ ಸದ್ಯಕ್ಕೆ ಇಲ್ಲ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಪಂಜಾಬ್‌ ಆ್ಯಂಡ್‌ ಮಹಾರಾಷ್ಟ್ರ ಸಹಕಾರಿ ಬ್ಯಾಂಕ್‌ (ಪಿಎಂಸಿ) ಮತ್ತು ಯೆಸ್‌ ಬ್ಯಾಂಕ್‌ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಖಾಸಗಿ ವಲಯದ ಇತರ ಬ್ಯಾಂಕ್‌ಗಳ ಕಾರ್ಯವೈಖರಿಯನ್ನು ಪರಿಶೀಲನೆಗೆ ಒಳಪಡಿಸುವುದಿಲ್ಲ. ಅಗತ್ಯಬಿದ್ದರೆ ಭಾರತೀಯ ರಿಸರ್ವ್‌ ಬ್ಯಾಂಕ್‌ ಮತ್ತು ಕೇಂದ್ರ ಸರ್ಕಾರವು ಸಕಾಲದಲ್ಲಿ ಕ್ರಮ ಕೈಗೊಳ್ಳಲಿವೆ. ಯೆಸ್‌ ಬ್ಯಾಂಕ್‌ ಪುನಶ್ಚೇತನಕ್ಕೆ ಕ್ರಮ ಮುಂದುವರೆಯಲಿದೆ ಎಂದು ಮೂಲಗಳು ತಿಳಿಸಿವೆ.

ಬ್ಯಾಂಕಿಂಗ್‌ ವಹಿವಾಟು ನಂಬಿಕೆ ಮತ್ತು ವಿಶ್ವಾಸ ಆಧರಿಸಿರುವುದರಿಂದ ಖಾಸಗಿ ವಲಯದ ಬ್ಯಾಂಕ್‌ ಮತ್ತು ಸಹಕಾರಿ ಬ್ಯಾಂಕ್‌ಗಳಲ್ಲಿ ಠೇವಣಿ ಸಂಗ್ರಹವು ನಿಧಾನಗೊಳ್ಳಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.