ADVERTISEMENT

ದೇವನಹಳ್ಳಿ: ಝೆಟ್‌ವರ್ಕ್‌-ಸ್ಮೈಲ್‌ ನೂತನ ಘಟಕ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2024, 17:32 IST
Last Updated 6 ಆಗಸ್ಟ್ 2024, 17:32 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ದೇವನಹಳ್ಳಿ: ಝೆಟ್‌ವರ್ಕ್‌ ಮ್ಯಾನುಫ್ಯಾಕ್ಚರಿಂಗ್‌ ಬ್ಯುಸಿನೆಸ್‌ ಸಂಸ್ಥೆಯು ಭಾರತದಲ್ಲಿ ತನ್ನ ಐ.ಟಿ ಹಾರ್ಡ್‌ವೇರ್‌ ಉತ್ಪಾದನಾ ಘಟಕ ಸ್ಥಾಪಿಸಲು ಎಲೆಕ್ಟ್ರಾನಿಕ್ಸ್‌ ಮ್ಯಾನುಫ್ಯಾಕ್ಚರಿಂಗ್‌ ಸರ್ವಿಸಸ್‌ (ಇಎಂಎಸ್‌) ಕಂಪನಿಯಾದ ಸ್ಮೈಲ್‌ ಎಲೆಕ್ಟ್ರಾನಿಕ್ಸ್‌ ಜೊತೆ ತಾಂತ್ರಿಕ ಒಪ್ಪಂದ ಮಾಡಿಕೊಂಡಿದೆ.

ಈ ಒಪ್ಪಂದದ ಪ್ರಕಾರ ಭಾರತದಲ್ಲಿ ಮೂರು ಸುಧಾರಿತ ಹಾರ್ಡ್‌ವೇರ್‌ ಘಟಕಗಳನ್ನು ಸ್ಥಾಪಿಸಲು ನಿರ್ಧರಿಸಿದೆ. ಒಪ್ಪಂದದ ಭಾಗವಾಗಿ ದೇವನಹಳ್ಳಿಯಲ್ಲಿ ಇತ್ತೀಚೆಗೆ ನೂತನ ಘಟಕವನ್ನು ಉದ್ಘಾಟಿಸಲಾಯಿತು.

ಈ ಒಪ್ಪಂದವು ಕಂಪನಿಯ ಎಲೆಕ್ಟ್ರಾನಿಕ್ಸ್‌ ವ್ಯವಹಾರಕ್ಕೆ ಭಾರತದಾದ್ಯಂತ ಅಸ್ತಿತ್ವ ಒದಗಿಸಲಿದೆ. ಭಾರತದಲ್ಲಿ ಇಎಸ್‌ಡಿಎಂ ಸಾಮರ್ಥ್ಯಗಳನ್ನು ನಿರ್ಮಿಸಲು ₹1,000 ಕೋಟಿ ಹೂಡಿಕೆ ಮಾಡಲಾಗುವುದು ಎಂದು ಝೆಟ್‌ವರ್ಕ್‌ ಹೇಳಿದೆ.

ADVERTISEMENT

ಘಟಕದ ವಿಶೇಷತೆ ಏನು?: ಬೆಂಗಳೂರಿಗೆ ಸಮೀಪದಲ್ಲೇ ಸ್ಥಾಪನೆಯಾಗಿರುವ ದೇವನಹಳ್ಳಿ ಘಟಕವು ಡೆಸ್ಕ್‌ಟಾಪ್‌ಗಳು, ಲ್ಯಾಪ್‌ಟಾಪ್‌ಗಳು, ವಿದ್ಯುತ್‌ ಮೀಟರ್‌ಗಳು ಹಾಗೂ ರಿಮೋಟ್‌ ಕಂಟ್ರೋಲ್‌ಗಳ ಜೋಡಣೆ, ಟೆಸ್ಟಿಂಗ್‌ ಮತ್ತು ಪ್ಯಾಕಿಂಗ್‌ಗೆ ಸಂಬಂಧಿಸಿದಂತೆ ಸಂಪೂರ್ಣ ಸ್ವಯಂ ಚಾಲಿತವಾಗಿರುವ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಇದರೊಂದಿಗೆ ಆಟೊಮೇಟೆಡ್‌ ಸ್ಕ್ರೀನ್‌ ಪ್ರಿಂಟಿಂಗ್‌, ಪ್ಲೇಸ್ಮೆಂಟ್‌ ಮತ್ತು ರಿಫ್ಲೋ ಯಂತ್ರಗಳ ರೀತಿಯ ಕಟಿಂಗ್‌ ಎಡ್ಜ್‌ ತಂತ್ರಜ್ಞಾನವು, ಉತ್ಕೃಷ್ಟ ಗುಣಮಟ್ಟದ ಉತ್ಪಾದನೆಯನ್ನು ಖಾತರಿಪಡಿಸುವ ಜೊತೆಗೆ ಪ್ರತಿ ಗಂಟೆಗೆ 7.5 ಲಕ್ಷ ಬಿಡಿ ಭಾಗಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.

‘ಜಾಗತಿಕ ಮಟ್ಟದ ಝೆಟ್‌ವರ್ಕ್‌ ಜೊತೆ ಸಹಭಾಗಿತ್ವದಿಂದ ನಾವು ಉತ್ಸುಕರಾಗಿದ್ದೇವೆ. ಭಾರತದ ಅತ್ಯುನ್ನತ ಇಎಸ್‌ಡಿಎಂ ಮಾರಾಟ ಮಾಡುವ ಕಂಪನಿಯಾಗಿ ಹೊರಹೊಮ್ಮಲು ಸ್ಮೈಲ್‌ ಕಾರ್ಯೋನ್ಮುಖವಾಗಲಿದೆ. ಪ್ರಗತಿ ಪಥದಲ್ಲಿ ಸಾಗುತ್ತಿರುವ ಐ.ಟಿ ಹಾರ್ಡ್‌ವೇರ್‌ ಉದ್ಯಮದಲ್ಲಿ ಝೆಟ್‌ವರ್ಕ್‌ ಪರಿಣತಿ ಪಡೆಯಲಿದೆ’ ಎಂದು ಸ್ಮೈಲ್‌ ಕಂಪನಿಯ ಮುಖೇಶ್‌ ಗುಪ್ತಾ ಹೇಳಿದ್ದಾರೆ.

‘ಈ ಒಪ್ಪಂದದಿಂದ ಎಲೆಕ್ಟ್ರಾನಿಕ್ಸ್‌ ವಲಯದಲ್ಲಿ ನಮ್ಮ ಪ್ರಗತಿಯ ವೇಗದ ಜೊತೆಗೆ ಉದ್ಯೋಗಾವಕಾಶಗಳು ಹೆಚ್ಚಲಿವೆ. ಜಾಗತಿಕ ಮಟ್ಟದಲ್ಲಿ ಉತ್ಪಾದನಾ ಪವರ್‌ಹೌಸ್‌ ಆಗಿ ಹೊರಹೊಮ್ಮುವ ನಿಟ್ಟಿನಲ್ಲಿ ಭಾರತದ ಪ್ರಯಾಣಕ್ಕೆ ಮಹತ್ವದ ಕೊಡುಗೆ ನೀಡುವ ಗುರಿ ಹೊಂದಿದ್ದೇವೆ’ ಎಂದು ಝೆಟ್‌ವರ್ಕ್‌ನ ಸಹ ಸಂಸ್ಥಾಪಕ ರಾಹುಲ್ ಶರ್ಮಾ ತಿಳಿಸಿದ್ದಾರೆ.

ಘಟಕವನ್ನು ಉದ್ಘಾಟಿಸಿ ಮಾತನಾಡಿದ ಏಸರ್‌ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಹರೀಶ್‌ ಕೊಹ್ಲಿ, ‘ಭಾರತದಿಂದ ಅತ್ಯುನ್ನತ ಗುಣಮಟ್ಟದ ಜಾಗತಿಕ ಐ.ಟಿ ಹಾರ್ಡ್‌ವೇರ್‌ ಉತ್ಪನ್ನಗಳನ್ನು ಒದಗಿಸುವ ಸ್ಮೈಲ್‌ ಸಂಸ್ಥೆಯ ಸಾಮರ್ಥ್ಯದ ಬಗ್ಗೆ ವಿಶ್ವಾಸ ಹೊಂದಿದ್ದೇನೆ. ಸ್ಮೈಲ್‌ ಮತ್ತು ಝೆಟ್‌ವರ್ಕ್‌ ನಡುವಿನ ಈ ತಾಂತ್ರಿಕ ಒಪ್ಪಂದವು ಐ.ಟಿ ಹಾರ್ಡ್‌ವೇರ್‌ ವಲಯದಲ್ಲಿ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ನೆರವಾಗಲಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.