ADVERTISEMENT

ಮಕ್ಕಳ ಶಿಕ್ಷಣ ವೆಚ್ಚಕ್ಕೆ ಷೇರು ಮೀಸಲಿಟ್ಟ ಜೊಮ್ಯಾಟೊ ಸಂಸ್ಥಾಪಕ

ಪಿಟಿಐ
Published 6 ಮೇ 2022, 11:15 IST
Last Updated 6 ಮೇ 2022, 11:15 IST
   

ನವದೆಹಲಿ (ಪಿಟಿಐ): ಜೊಮ್ಯಾಟೊ ಕಂಪನಿಯ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಗೋಯಲ್ ಅವರು ಸರಿಸುಮಾರು ₹ 700 ಕೋಟಿ ಮೌಲ್ಯದ ಷೇರುಗಳನ್ನು ಜೊಮ್ಯಾಟೊ ಫ್ಯೂಚರ್ ಪ್ರತಿಷ್ಠಾನಕ್ಕೆ ನೀಡಲಿದ್ದಾರೆ. ಮನೆ ಬಾಗಿಲಿಗೆ ಆಹಾರ ವಸ್ತುಗಳನ್ನು ತಲುಪಿಸುವ ಕಂಪನಿಯ ವಿತರಕರ ಮಕ್ಕಳ ವಿದ್ಯಾ‌ಭ್ಯಾಸಕ್ಕೆ ನೆರವಾಗಲು ಇದನ್ನು ಬಳಸಿಕೊಳ್ಳಲಾಗುತ್ತದೆ.

ಜೊಮ್ಯಾಟೊ ಕಂಪನಿಯು ಷೇರುಪೇಟೆಯಲ್ಲಿ ನೋಂದಾಯಿತ ಆಗುವ ಮೊದಲು ಗೋಯಲ್ ಅವರಿಗೆ ಹೂಡಿಕೆದಾರರು ಮತ್ತು ಆಡಳಿತ ಮಂಡಳಿಯ ಕಡೆಯಿಂದ ಷೇರುಗಳು ‘ನೌಕರರ ಷೇರು ಮಾಲೀಕತ್ವ ಯೋಜನೆ’ಯ (ಇಎಸ್‌ಒಪಿ) ಅಡಿಯಲ್ಲಿ ದೊರೆತಿತ್ತು.

ಈ ಷೇರುಗಳನ್ನು ಜೊಮ್ಯಾಟೊ ಫ್ಯೂಚರ್ ಪ್ರತಿಷ್ಠಾನಕ್ಕೆ ನೀಡಲಾಗುತ್ತದೆ. ಪ್ರತಿಷ್ಠಾನವು ಈ ಹಣವನ್ನು ವಿತರಕರ ಇಬ್ಬರು ಮಕ್ಕಳ ವಾರ್ಷಿಕ ಗರಿಷ್ಠ ₹ 50 ಸಾವಿರದವರೆಗಿನ ಶಿಕ್ಷಣ ವೆಚ್ಚಕ್ಕೆ ನೆರವಾಗಲು ಬಳಸಲಾಗುತ್ತದೆ. ಕಂಪನಿಯ ಜೊತೆ ಐದು ವರ್ಷಗಳಿಗಿಂತ ಹೆಚ್ಚಿನ ಅವಧಿಯಿಂದ ಕೆಲಸ ಮಾಡುತ್ತಿರುವ ವಿತರಕರ ಮಕ್ಕಳಿಗೆ ಈ ಪ್ರಯೋಜನ ಸಿಗಲಿದೆ.

10 ವರ್ಷ ಜೊಮ್ಯಾಟೊ ಕಂಪನಿಯಲ್ಲಿ ಕೆಲಸ ಮಾಡಿದರೆ ಅವರ ಮಕ್ಕಳ ವಾರ್ಷಿಕ ₹ 1 ಲಕ್ಷದವರೆಗಿನ ಶಿಕ್ಷಣದ ವೆಚ್ಚಕ್ಕೆ ನೆರವು ನೀಡಲಾಗುತ್ತದೆ ಎಂದು ಗೋಯಲ್ ಹೇಳಿದ್ದಾರೆ. ಮಹಿಳಾ ವಿತರಕರಿಗೆ 5–10 ವರ್ಷಗಳ ಮಾನದಂಡ ಇರುವುದಿಲ್ಲ, ಅವರು ಕಡಿಮೆ ಅವಧಿಯಿಂದ ಕರ್ತವ್ಯದಲ್ಲಿದ್ದರೂ ಪ್ರಯೋಜನ ಸಿಗಲಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಜೊಮ್ಯಾಟೊ ವಕ್ತಾರರು ನಿರಾಕರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.