ಜೊಮ್ಯಾಟೊ, ಎಟೆರ್ನಲ್
ನವದೆಹಲಿ: ಸಂಸ್ಥೆಯ ಹೆಸರನ್ನು ‘ಎಟರ್ನಲ್’ ಎಂದು ಬದಲಾಯಿಸುವ ವಿಶೇಷ ನಿರ್ಣಯಕ್ಕೆ ಕಂಪನಿಯ ಷೇರುದಾರರು ಒಪ್ಪಿಗೆ ಸೂಚಿಸಿದ್ದಾರೆ ಎಂದು ಷೇರು ಮಾರುಕಟ್ಟೆಗೆ ನೀಡಿದ ಮಾಹಿತಿಯಲ್ಲಿ ಜೊಮ್ಯಾಟೊ ತಿಳಿಸಿದೆ.
ಆದರೆ ಕಂಪನಿಯ ಆಹಾರ ಡೆಲಿವರಿ ಉದ್ಯಮದ ಹೆಸರು, ಜೊಮ್ಯಾಟೊ ಎಂದೇ ಇರಲಿದೆ.
ಸದ್ಯ ಎಟರ್ನಲ್ ಕಂಪನಿಯಡಿ ಜೊಮ್ಯಾಟೊ, ಬ್ಲಿಂಕಿಟ್, ಡಿಸ್ಟ್ರಿಕ್ಟ್ ಹಾಗೂ ಹೈಪರ್‌ಕ್ಯೂರ್ ಎನ್ನುವ ಉದ್ಯಮಗಳಿವೆ.
ಸಂಸ್ಥೆಯ ಹೆಸರನ್ನು ಬದಲಾಯಿಸಲು, ಕಂಪನಿಯ ಸಂಘದ ಜ್ಞಾಪಕ ಪತ್ರ ಮತ್ತು ಸಂಘದ ವಿಧಿಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಲು ಷೇರುದಾರರು ವಿಶೇಷ ನಿರ್ಣಯ ಮಾಡಿದ್ದರು ಎಂದು ಕಂಪನಿ ಭಾನುವಾರ ಷೇರು ಮಾರುಕಟ್ಟೆಗೆ ಮಾಹಿತಿ ನೀಡಿದೆ.
ಕಂಪನಿಯ ಹೆಸರನ್ನು ಬದಲಿಸುವ ಬಗ್ಗೆ ಬೋರ್ಡ್‌ನಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ಮನವಿ ಮಾಡಿ, ಜೊಮ್ಯಾಟೊ ಸಂಸ್ಥಾಪಕ ಹಾಗೂ ಸಿಇಒ ದೀಪಿಂದರ್ ಸಿಂಗ್ ಷೇರುದಾರರಿಗೆ ಮನವಿ ಮಾಡಿದ್ದರು. ಒಪ್ಪಿಗೆ ಸಿಕ್ಕರೆ ನಮ್ಮ ಕಾರ್ಪೊರೇಟ್ ವೆಬ್‌ಸೈಟ್ zomato.comನಿಂದ eternal.comಗೆ ಬದಲಾಗಲಿದೆ. ಸ್ಟಾಕ್ ಟಿಕರ್ ಕೂಡ ಬದಲಾಗಲಿದೆ ಎಂದು ಅವರು ಹೇಳಿದ್ದರು.
ಬ್ಲಿಂಕಿಟ್ ನಮ್ಮ ಭವಿಷ್ಯದ ಚಾಲಕ ಶಕ್ತಿಯಾಗಿದ್ದು, ಅದನ್ನು ಸ್ವಾಧೀನಪಡಿಕೊಂಡ ಬಳಿಕ, ಬ್ರ್ಯಾಂಡ್ ಹಾಗೂ ಕಂಪನಿ ನಡುವೆ ವ್ಯತ್ಯಾಸ ಗುರುತಿಸಲು ಆಂತರಿಕವಾಗಿ ನಾವು ಜೊಮ್ಯಾಟೊ ಬದಲು ಎಟರ್ನಲ್ ಎಂದು ಬಳಕೆ ಮಾಡಲು ಪ್ರಾರಂಭಿಸಿದೆವು. ಈಗ ಸಾರ್ವಜನಿಕವಾಗಿ ಕಂಪನಿಯ ಹೆಸರನ್ನು ಬದಲಾಯಿಸಲು ನಿರ್ಧರಿಸಿದ್ದೇವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.