ADVERTISEMENT

ಹಣಕಾಸು ಸಾಕ್ಷರತೆ | ಎಸ್ಐಎಫ್‌ ಹೂಡಿಕೆ ಹೇಗೆ?

ರಾಜೇಶ್‌ ಕುಮಾರ್‌ ಟಿ.ಆರ್‌
Published 5 ಜನವರಿ 2025, 23:30 IST
Last Updated 5 ಜನವರಿ 2025, 23:30 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಷೇರು ಮಾರುಕಟ್ಟೆ ಆಧರಿತ ಹೂಡಿಕೆಗಳಲ್ಲಿ ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧ, ಆದರೆ ಗಳಿಕೆ ಸಾಧ್ಯತೆಯೂ ಹೆಚ್ಚಿಗೆ ಇರಬೇಕು ಎನ್ನುವವರಿಗೆ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯು (ಸೆಬಿ) ಹೊಸ ಆಯ್ಕೆಯೊಂದನ್ನು ನೀಡಿದೆ. ಹೌದು, ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್ ಎನ್ನುವ ಹೂಡಿಕೆಯನ್ನು ಪರಿಚಯಿಸಿದೆ.

ಏನಿದು ಫಂಡ್? ಇದು ಹೇಗೆ ಕೆಲಸ ಮಾಡುತ್ತದೆ? ಯಾರಿಗೆ ಇದು ಸೂಕ್ತ ಹೂಡಿಕೆ? ಹೀಗೆ ಫಂಡ್ ಸುತ್ತ ಇರುವ ಎಲ್ಲ ಪ್ರಶ್ನೆಗಳಿಗೂ ಉತ್ತರ ಕಂಡುಕೊಳ್ಳೋಣ ಬನ್ನಿ.

ADVERTISEMENT

ಏನಿದು ಫಂಡ್?:

ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್ (ಎಸ್ಐಎಫ್) ಒಂದು ಹೊಸ ಮಾದರಿಯ ಹೂಡಿಕೆಯಾಗಿದೆ. ಮ್ಯೂಚುವಲ್ ಫಂಡ್ ಮತ್ತು ಪೋರ್ಟ್ ಫೋಲಿಯೊ ಮ್ಯಾನೇಜ್‌ಮೆಂಟ್ ಸರ್ವಿಸಸ್ (ಪಿಎಂಎಸ್) ನಡುವೆ ಇದ್ದ ಹೂಡಿಕೆ ಆಯ್ಕೆಗಳ ಕೊರತೆಯನ್ನು ಇದು ನೀಗಿಸಲಿದೆ.

ಸದ್ಯ ಕಡಿಮೆ ಮೊತ್ತವನ್ನು ಹೂಡಿಕೆ ಮಾಡುತ್ತಾ ಹೋಗುವವರಿಗೆ ಮ್ಯೂಚುವಲ್ ಫಂಡ್ ಆಯ್ಕೆ ಮಾತ್ರ ಇತ್ತು. ದೊಡ್ಡ ಮೊತ್ತ ಹೂಡಿಕೆ ಮಾಡುವ ಹೈನೆಟ್ ವರ್ತ್ ವ್ಯಕ್ತಿಗಳು ಪೋರ್ಟ್ ಫೋಲಿಯೊ ಮ್ಯಾನೇಜ್‌ಮೆಂಟ್ ಸರ್ವಿಸಸ್ ಮೊರೆ ಹೋಗುತ್ತಿದ್ದರು. ಇವೆರಡರ ನಡುವೆ ಮಧ್ಯಮ ಗಾತ್ರದ ಹೂಡಿಕೆ ಮಾಡುವವರಿಗೆ ವೃತ್ತಿಪರ ಹೂಡಿಕೆ ಸೇವೆಯ ಕೊರತೆ ಇತ್ತು. ಅದನ್ನು ತಪ್ಪಿಸಲು ಸೆಬಿ ಇತ್ತೀಚೆಗಷ್ಟೇ ಎಸ್‌ಐಎಫ್ ಪರಿಚಯಿಸಿದೆ.

ಇದು ಯಾರಿಗೆ ಸೂಕ್ತ?:

ಎಸ್ಐಎಫ್‌ಗಳನ್ನು ಷೇರು ಮಾರುಕಟ್ಟೆ ಬಗ್ಗೆ ಹೆಚ್ಚು ತಿಳಿವಳಿಕೆ ಹೊಂದಿರುವ, ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ಸಿದ್ಧವಿರುವ ಹೂಡಿಕೆದಾರರಿಗಾಗಿ ತರಲಾಗಿದೆ. ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳಲ್ಲಿ ಕನಿಷ್ಠ ಹೂಡಿಕೆ ₹10 ಲಕ್ಷ ಆಗಿದೆ.

ಫಂಡ್ ಮ್ಯಾನೇಜರ್‌ಗಳಿಗೆ ಇಲ್ಲಿ ಹೂಡಿಕೆ ತೀರ್ಮಾನ ತೆಗೆದುಕೊಳ್ಳಲು ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ. ಮ್ಯೂಚುವಲ್ ಫಂಡ್‌ಗಳನ್ನು ನಿರ್ವಹಿಸುವ ಫಂಡ್ ಮ್ಯಾನೇಜರ್‌ಗಳಿಗೆ ಸಾಕಷ್ಟು ನಿಬಂಧನೆಗಳಿವೆ. ಆದರೆ, ಎಸ್‌ಐಎಫ್ ಹೂಡಿಕೆ ನಿರ್ವಹಿಸುವ ಫಂಡ್ ಮ್ಯಾನೇಜರ್‌ಗಳಿಗೆ ನಿಬಂಧನೆಗಳನ್ನು ಸಡಿಲಿಸಿ, ಹೂಡಿಕೆದಾರರ ಮೊತ್ತ ತೊಡಗಿಸುವಾಗ ಹೆಚ್ಚಿನ ರಿಸ್ಕ್ ತೆಗೆದುಕೊಳ್ಳಲು ಸ್ವಾತಂತ್ರ್ಯ ನೀಡಲಾಗಿದೆ.

ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳು ಹೆಚ್ಚು ರಿಸ್ಕ್ ಇರುವ ಷೇರು ಮಾರುಕಟ್ಟೆ ಆಧರಿತ ಈಕ್ವಿಟಿ ಹೂಡಿಕೆಗಳು ಮತ್ತು ಕಡಿಮೆ ರಿಸ್ಕ್ ಇರುವ ಡೆಟ್ ಹೂಡಿಕೆಗಳ ನಡುವೆ ಬರುವ ಎಲ್ಲ ಮಾದರಿಯ ಆಯ್ಕೆಗಳನ್ನು ಪರಿಗಣಸಬಹುದಾಗಿದೆ. ಹಾಗೆಂದ ಮಾತ್ರಕ್ಕೆ ಇಲ್ಲಿ ಎಲ್ಲವನ್ನೂ ಫಂಡ್ ಮ್ಯಾನೇಜರ್ ವಿವೇಚನೆಗೆ ಬಿಟ್ಟಿದ್ದಾರೆ ಅಂತಲ್ಲ. ಇಲ್ಲೂ ಕೂಡ ನೀತಿ– ನಿಬಂಧನೆಗಳಿವೆ. ಹೂಡಿಕೆದಾರರ ಮೊತ್ತ ಕರಗದಂತೆ ನೋಡಿಕೊಳ್ಳಲು ಸೆಬಿ ಒಂದಷ್ಟು ಚೌಕಟ್ಟನ್ನು ಫಂಡ್ ಮ್ಯಾನೇಜರ್‌ಗಳಿಗೆ ಹಾಕಿದೆ.

ಇದು ಮ್ಯೂಚುವಲ್ ಫಂಡ್‌ಗಿಂತ ಹೇಗೆ ಭಿನ್ನ?:

ಮ್ಯೂಚುವಲ್ ಫಂಡ್‌ನಲ್ಲಿ ಕಡಿಮೆ ಮೊತ್ತದ ಹೂಡಿಕೆಯೂ ಸಾಧ್ಯ. ಇಲ್ಲಿ ರಿಸ್ಕ್ ತೀರಾ ಜಾಸ್ತಿ ಇರುವುದಿಲ್ಲ. ಆದರೆ, ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ನಲ್ಲಿ ಹೂಡಿಕೆಗೆ ₹10 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಅಗತ್ಯ. ಅಲ್ಲದೆ, ಇಲ್ಲಿ ಮ್ಯೂಚುವಲ್ ಫಂಡ್‌ಗಿಂತ ಅತಿಹೆಚ್ಚಿನ ರಿಸ್ಕ್ ಇರುತ್ತದೆ. ಎಸ್‌ಐಎಫ್ ಹೂಡಿಕೆಗಳಲ್ಲಿ ಗಳಿಕೆಯ ಸಾಧ್ಯತೆಯೂ ಹೆಚ್ಚಿರುತ್ತದೆ. ಎಸ್‌ಐಎಫ್‌ಗಳು ಒಂದೇ ಕಂಪನಿಯ ಷೇರಿನ ಮೇಲೆ ಶೇ 15ರಷ್ಟು ಮೊತ್ತ ಹೂಡಿಕೆ ಮಾಡಬಹುದು.

ಆದರೆ, ಸಾಂಪ್ರದಾಯಿಕ ಮ್ಯೂಚುವಲ್ ಫಂಡ್‌ಗಳಲ್ಲಿ ಒಂದೇ ಕಂಪನಿಯ ಷೇರಿನ ಮೇಲೆ ಶೇ 10ಕ್ಕಿಂತ ಹೆಚ್ಚಿನ ಮೊತ್ತ ತೊಡಗಿಸುವಂತಿಲ್ಲ. ಎಸ್‌ಐಎಫ್‌ಗಳು ನಿರ್ದಿಷ್ಟ ಆದಾಯ ಕೊಡುವ ಬಾಂಡ್, ಸಾಲ ಪತ್ರಗಳು ಇತ್ಯಾದಿ ಡೆಟ್ ಹೂಡಿಕೆಗಳಲ್ಲಿ ತೊಡಗಿಸಲು ಅವಕಾಶವಿದೆ. ಡೆಟ್ ಹೂಡಿಕೆಗಳಲ್ಲಿ ಒಂದೇ ಕಂಪನಿಯ ಮೇಲೆ (ಸಿಂಗಲ್ ಇಶ್ಯೂವರ್) ಶೇ 20ರಷ್ಟು ಹೂಡಿಕೆ ಮಾಡಬಹುದಾಗಿದೆ. ಬೋರ್ಡ್ ಮತ್ತು ಟ್ರಸ್ಟಿಗಳಿಂದ ಅನುಮೋದನೆ ಪಡೆದರೆ ಈ ಹೂಡಿಕೆ ಮೊತ್ತವನ್ನು ಶೇ 25ರಷ್ಟು ಮಾಡಬಹುದಾಗಿದೆ.

ಇನ್ನು ರಿಯಲ್ ಎಸ್ಟೇಟ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್ ಮತ್ತು ಇನ್ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಟ್ರಸ್ಟ್‌ಗಳ ಮೇಲೆ ಎಸ್ಐಎಫ್‌ಗಳು ತಮ್ಮ ಶೇ 20ರಷ್ಟು ಹೂಡಿಕೆಯನ್ನು ತೊಡಗಿಸಲು ಅವಕಾಶ ಕಲ್ಪಿಸಲಾಗಿದೆ.

ಫಂಡ್ ಶುಲ್ಕ ಹೇಗೆ?:

ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳಲ್ಲಿ ಶುಲ್ಕ ಮ್ಯೂಚುವಲ್ ಫಂಡ್‌ಗಳ ಮಾದರಿಯಲ್ಲೇ ಇರುತ್ತದೆ. ಎಕ್ಸ್‌ಪೆನ್ಸ್ ರೇಷಿಯೊವನ್ನು (ನಿರ್ವಹಣಾ ಕಮಿಷನ್/ಶುಲ್ಕ) ಮ್ಯೂಚುವಲ್ ಫಂಡ್‌ಗಳು ತೆಗೆದುಕೊಳ್ಳುವ ಹಾಗೆ ಈ ಫಂಡ್‌ಗಳು ತೆಗೆದುಕೊಳ್ಳುತ್ತವೆ. ಉದಾಹರಣೆಗೆ ಮ್ಯೂಚುವಲ್ ಫಂಡ್‌ಗಳಲ್ಲಿ ಎಕ್ಸ್‌ಪೆನ್ಸ್ ರೇಷಿಯೊ ಶೇ 1ರಿಂದ ಶೇ 2ರ ವರೆಗೆ ಇರುತ್ತದೆ. ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳು ಎಷ್ಟು ಎಕ್ಸ್ಪೆನ್ಸ್ ರೇಷಿಯೊ ಹಾಕುತ್ತವೆ ಎನ್ನುವುದನ್ನು ಇನ್ನಷ್ಟೇ ತಿಳಿಯಬೇಕಿದೆ.

ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಅನುಕೂಲಗಳೇನು:

ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ಗಳಿಸಬೇಕು ಎನ್ನುವವರಿಗೆ ಒಂದು ಉತ್ತಮ ಹೂಡಿಕೆ ಆಯ್ಕೆಯಾಗಿದೆ. ಮ್ಯೂಚುವಲ್ ಫಂಡ್‌ಗಿಂತ ಹೆಚ್ಚಿನ ಗಳಿಕೆ ತಂದುಕೊಡುವ ಸಾಮರ್ಥ್ಯ ಸ್ಪೆಷಲೈಸ್ಡ್ ಇನ್ವೆಸ್ಟ್ಮೆಂಟ್ ಫಂಡ್‌ಗಳಿಗೆ ಇದೆ. ಈ ಫಂಡ್ ಹೂಡಿಕೆಗಳಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ಈ ಫಂಡ್‌ಗಳನ್ನು ನಿರ್ದಿಷ್ಟ ವಲಯದಲ್ಲಿ ಅನುಭವ ಹೊಂದಿರುವ ವೃತ್ತಿಪರರು ನಿರ್ವಹಿಸುತ್ತಾರೆ.

ಅನನುಕೂಲ ಏನು?: 

ಈ ಫಂಡ್‌ಗಳಲ್ಲಿ ಮ್ಯೂಚುವಲ್ ಫಂಡ್ ಹೂಡಿಕೆಗಳಿಗಿಂತ ಹೆಚ್ಚಿನ ರಿಸ್ಕ್ ಇರುತ್ತದೆ. ಈ ಫಂಡ್‌ಗಳನ್ನು ತಕ್ಷಣಕ್ಕೆ ನಗದೀಕರಣ ಮಾಡಿಕೊಳ್ಳಲು ಕಷ್ಟವಾಗುತ್ತದೆ. ಅಲ್ಲದೆ, ಮ್ಯೂಚುವಲ್ ಫಂಡ್‌ಗಳಿಗಿಂತ ಹೆಚ್ಚಿನ ಎಕ್ಸ್‌ಪೆನ್ಸ್ ರೇಷಿಯೊ (ನಿರ್ವಹಣಾ ಶುಲ್ಕ) ವಿಧಿಸಬಹುದು.

ಕಿವಿಮಾತು:

ಸ್ಪೆಷಲೈಸ್ಡ್ ಇನ್ವೆಸ್ಟ್‌ಮೆಂಟ್ ಫಂಡ್‌ಗಳನ್ನು ಸೆಬಿ ಪರಿಚಯಿಸಿರುವುದು ಸ್ವಾಗತಾರ್ಹ ಬೆಳವಣಿಗೆ. ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚು ಗಳಿಸಬೇಕು ಎನ್ನುವವರಿಗೆ ಇದೊಂದು ಪರ್ಯಾಯ ಆಯ್ಕೆ. ಆದರೆ, ಇದು ಹೊಸ ಮಾದರಿಯ ಹೂಡಿಕೆ ಉತ್ಪನ್ನವಾಗಿದೆ. ಇದರಿಂದ ಹಣ ತೊಡಗಿಸುವ ಮುನ್ನ ಸರಿಯಾಗಿ ಅರಿತು ಮುನ್ನಡೆಯುವುದು ಬಹಳ ಮುಖ್ಯ.

(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)

ರಾಜೇಶ್‌ ಕುಮಾರ್ ಟಿ.ಆರ್.

ಅನಿಶ್ಚಿತತೆ ನಡುವೆ ಜಿಗಿದ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ಎರಡನೇ ವಾರ ಗಳಿಕೆ ದಾಖಲಿಸಿವೆ. ಜನವರಿ 3ಕ್ಕೆ ಕೊನೆಗೊಂಡ ವಾರದಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಗಳಿಕೆ ಕಂಡಿವೆ. 79233 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.67ರಷ್ಟು ಗಳಿಸಿಕೊಂಡಿದೆ. 24004 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 0.8ರಷ್ಚು ಹೆಚ್ಚಳವಾಗಿದೆ.

ವಾರದ ಲೆಕ್ಕಾಚಾರದಲ್ಲಿ ಗಳಿಕೆ ಕಂಡುಬಂದಿದ್ದರೂ ಮಾರುಕಟ್ಟೆಯಲ್ಲಿ ಅಷ್ಟು ಸಕಾರಾತ್ಮಕ ವಾತಾವರಣವಿಲ್ಲ. ಆರ್ಥಿಕ ಪ್ರಗತಿ ಕುಂಠಿತ ವಿದೇಶಿ ಹೂಡಿಕೆದಾರರಿಂದ ಷೇರುಗಳ ಮಾರಾಟದ ಒತ್ತಡ ಡೊನಾಲ್ಡ್ ಟ್ರಂಪ್ ಅಧ್ಯಕ್ಷಗಾದಿಗೇರಿದ ಮೇಲೆ ಅಮೆರಿಕದ ವ್ಯಾಪಾರ ನೀತಿಗಳ ಬಗ್ಗೆ ತಲೆದೋರುವ ಅನಿಶ್ಚಿತತೆ ಸೇರಿ ಹಲವು ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಶೇ 2.45 ಬ್ಯಾಂಕ್ 0.63 ಫೈನಾನ್ಸ್ ಶೇ 0.22ರಷ್ಟು ಕುಸಿದಿವೆ. ನಿಫ್ಟಿ ಆಟೊ ಶೇ 3.93 ಅನಿಲ ಮತ್ತು ತೈಲ ಶೇ 3.4 ಎನರ್ಜಿ ಶೇ 2.44 ಎಫ್‌ಎಂಸಿಜಿ ಶೇ 2.43 ಫಾರ್ಮಾ ಶೇ 1.11 ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.73 ಮಾಧ್ಯಮ ಶೇ 0.43 ಲೋಹ ಶೇ 0.11 ಮತ್ತು ನಿಫ್ಟಿ ಐ.ಟಿ ಶೇ 0.01ರಷ್ಟು ಗಳಿಸಿಕೊಂಡಿವೆ. ಇಳಿಕೆ–ಗಳಿಕೆ: ನಿಫ್ಟಿಯಲ್ಲಿ ವಿಪ್ರೋ ಶೇ 4.74 ಹಿಂಡಾಲ್ಕೋ ಇಂಡಸ್ಟ್ರೀಸ್ ಶೇ 4.35 ಐಸಿಐಸಿಐ ಬ್ಯಾಂಕ್ ಶೇ 3.19 ಡಾ.ರೆಡ್ಡೀಸ್ ಶೇ 2.77 ಅದಾನಿ ಪೋರ್ಟ್ಸ್ ಶೇ 2.74 ಎಚ್‌ಡಿಎಫ್‌ಸಿ ಬ್ಯಾಂಕ್ ಶೇ  2.7 ಟೆಕ್ ಮಹೀಂದ್ರ ಶೇ 1.33 ಟಿಸಿಎಸ್ ಶೇ 1.27 ಎಸ್‌ಬಿಐ ಶೇ 0.76 ಸನ್ ಫಾರ್ಮಾ ಶೇ 0.71 ಟಾಟಾ ಸ್ಟೀಲ್ ಶೇ 0.47 ಮತ್ತು ಏರ್‌ಟೆಲ್ ಶೇ 0.31ರಷ್ಟು ಕುಸಿದಿವೆ.

ಒಎನ್‌ಜಿಸಿ ಶೇ 9.25 ಐಷರ್ ಮೋಟರ್ಸ್ ಶೇ 8.86 ಮಾರುತಿ ಸುಜುಕಿ ಶೇ 8.81 ಬಜಾಜ್ ಫಿನ್‌ಸರ್ವ್ ಶೇ 7.38 ಬಜಾಜ್ ಫೈನಾನ್ಸ್ ಶೇ 7.26 ಅದಾನಿ ಎಂಟರ್‌ಪ್ರೈಸಸ್ ಶೇ 6.45 ಟಾಟಾ ಮೋಟರ್ಸ್ ಶೇ 5.31 ಇಂಡಸ್ ಇಂಡ್ ಬ್ಯಾಂಕ್ ಶೇ 4.67 ಕೋಟಕ್ ಮಹೀಂದ್ರ ಬ್ಯಾಂಕ್ ಶೇ 4.6 ಮಹಿಂದ್ರ ಆ್ಯಂಡ್‌ ಮಹೀಂದ್ರ ಶೇ 4.5 ಶ್ರೀರಾಮ್ ಫೈನಾನ್ಸ್ ಶೇ 4.42 ಟೈಟನ್ ಶೇ 4.36ರಷ್ಟು ಗಳಿಸಿಕೊಂಡಿವೆ. ಮುನ್ನೋಟ: ಈ ವಾರದಿಂದ ಕಂಪನಿಗಳ 3ನೇ ತ್ರೈಮಾಸಿಕ ಫಲಿತಾಂಶ ಹೊರಬೀಳಲಿದೆ. ಟಿಸಿಎಸ್ ಟಾಟಾ ಎಲೆಕ್ಸಿ ಯಶ್ ಹೈ ವೋಲ್ಟೇಜ್ ಜಿಎಂ ಬ್ರಿವರಿಸ್ ಕೃಷ್ಣ ವೆಂಚರ್ಸ್ ಎಮರಾಲ್ಡ್ ಫೈನಾನ್ಸ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಉಳಿದಂತೆ ಜಾಗತಿಕ ವಿದ್ಯಮಾನಗಳು ಹಾಗೂ ದೇಶೀಯ ಬೆಳವಣಿಗೆಗಳು ಷೇರುಪೇಟೆಯ ಮೇಲೆ ಪರಿಣಾಮ ಬೀರಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.