ADVERTISEMENT

‘ಎಂಎಫ್‌’ ಹೂಡಿಕೆಗೆ ಸಕಾಲವೇ?

ಪ್ರಜಾವಾಣಿ ವಿಶೇಷ
Published 14 ಏಪ್ರಿಲ್ 2019, 20:15 IST
Last Updated 14 ಏಪ್ರಿಲ್ 2019, 20:15 IST
bse
bse   

ಮ್ಯೂಚುವಲ್ ಫಂಡ್‌ನಲ್ಲಿ (ಎಂಎಫ್‌) ಹೂಡಿಕೆ ಮೂಡಿಕೆ ಮಾಡಲು ಬಳಿಯಲ್ಲಿ ಸಾಕಷ್ಟು ಹಣವಿರಬೇಕೇ. ಷೇರು ಮಾರುಕಟ್ಟೆ ಹೂಡಿಕೆಗೆ ಇದು ಸಕಾಲವೇ. ಚುನಾವಣೆ ಆದ ನಂತರ ಹೂಡಿಕೆ ಆರಂಭಿಸಿದರೆ ಒಳಿತಲ್ಲವೇ. ಮ್ಯೂಚುವಲ್ ಫಂಡ್‌ನಲ್ಲಿ ಹಣ ಹಾಕಲು ಆಲೋಚಿಸುವವರ ತಲೆಯಲ್ಲಿ ಇಂತಹ ಪ್ರಶ್ನೆಗಳು ತೂರಿಬರುತ್ತವೆ. ಆದರೆ, ವಾಸ್ತವದಲ್ಲಿ ಇವೆಲ್ಲಾ ವ್ಯಾಪಕವಾಗಿ ನಂಬಿರುವ ಕಟ್ಟು ಕಥೆಗಳು!

ಹೌದು, ಮ್ಯೂಚುವಲ್ ಫಂಡ್ ಹೂಡಿಕೆಗೆ ಶುಭ ಮುಹೂರ್ತ ಎಂಬುದಿಲ್ಲ. ಹೂಡಿಕೆಗೆ ಕೇವಲ ₹ 500 ರಿಂದ ₹ 1000 ಇದ್ದರೆ ಸಾಕು, ಈ ಗಳಿಗೆಯಲ್ಲೇ ಮ್ಯೂಚುವಲ್ ಫಂಡ್ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್ಐಪಿ–ಸಿಪ್‌) ಆರಂಭಿಸಬಹುದು.

ಬೇಗ ಹೂಡಿದ್ರೆ ಹೆಚ್ಚು ಲಾಭ: ಮ್ಯೂಚುವಲ್ ಫಂಡ್ ಅಷ್ಟೇ ಅಲ್ಲ, ಯಾವುದೇ ಮಾದರಿಯ ಹೂಡಿಕೆಯನ್ನು ಕೂಡ ಎಷ್ಟು ಬೇಗ ಆರಂಭಿಸುತ್ತೆವೋ ಅಷ್ಟು ನಮಗೆ ಲಾಭ ಹೆಚ್ಚು. ಉದಾಹರಣೆಗೆ 25 ವರ್ಷದ ವ್ಯಕ್ತಿ ಮುಂದಿನ 30 ವರ್ಷಗಳ ಅವಧಿಗೆ ಪ್ರತಿ ವರ್ಷ ₹ 50 ಸಾವಿರದಂತೆ ಹೂಡಿಕೆ ಮಾಡಿದರೆ, ಶೇ 12 ರಷ್ಟು ಲಾಭಾಂಶ ಸಿಕ್ಕರೂ 55 ವರ್ಷಗಳಾಗುವಷ್ಟರಲ್ಲಿ ಆತನ ಕೈಯಲ್ಲಿ ₹ 1.35 ಕೋಟಿ ಹಣವಿರುತ್ತದೆ.

ADVERTISEMENT

ಆದರೆ ಇದೇ ವ್ಯಕ್ತಿ 35 ಅಥವಾ 40 ವರ್ಷದ ನಂತರ ಹೂಡಿಕೆ ಆರಂಭಿಸಿದರೆ ಹಣ ಕ್ರೋಡೀಕರಿಸಲು ಪ್ರಯಾಸ ಪಡಬೇಕಾಗುತ್ತದೆ. ವಯಸ್ಸಾದಂತೆ ಜವಾಬ್ದಾರಿ ಹೆಚ್ಚಾಗಿ ಖರ್ಚು ಹೆಚ್ಚುವುದರಿಂದ ತಡವಾಗಿ ಹೂಡಿಕೆ ಆರಂಭಿಸಿ ದೊಡ್ಡ ಮೊತ್ತ ಪೇರಿಸುವುದು ಕಷ್ಟವಾಗುತ್ತದೆ.

ಮಾರುಕಟ್ಟೆಯಲ್ಲಿ ಕಾಲಾಯತಸ್ಮೈ ನಮಃ: ಬಹಳಷ್ಟು ಯುವಕರು ಈಗೇಕೆ ಹೂಡಿಕೆ ಮಾಡುವುದು. ಸಾಕಷ್ಟು ಸಮಯವಿದೆಯಲ್ಲ ಎಂದು ಸುಮ್ಮನಿರುತ್ತಾರೆ. ಆದರೆ, ಮಾರುಕಟ್ಟೆಯಲ್ಲಿ ಹೂಡಿಕೆಯ ವೇಗ ಮತ್ತು ಅವಧಿ ಬಹಳ ಮುಖ್ಯ. ಮಾರುಕಟ್ಟೆಯಲ್ಲಿ ದೀರ್ಘಾವಧಿಯಲ್ಲಿ ಹೂಡಿಕೆ ಮಾಡಿದಾಗ ಹೆಚ್ಚು ಲಾಭ ದಕ್ಕಿರುವುದನ್ನು ಅಂಕಿ-ಅಂಶಗಳು ಹೇಳುತ್ತವೆ.

ಷೇರುಪೇಟೆ ಸೂಚ್ಯಂಕ ನಿಫ್ಟಿಯು ಕಳೆದ 22 ವರ್ಷಗಳಲ್ಲಿ 16 ವರ್ಷ ವರ್ಷಗಳ ಕಾಲ ಸಕಾರಾತ್ಮಕ ಫಲಿತಾಂಶ ನೀಡಿದ್ದರೆ, 7 ವರ್ಷಗಳ ಕಾಲ ನಕಾರಾತ್ಮಕ ಫಲಿತಾಂಶ ಕೊಟ್ಟಿದೆ. ಇದನ್ನು ನೋಡಿದಾಗ ಮಾರುಕಟ್ಟೆಯಲ್ಲಿನ ಹೂಡಿಕೆ ಹಣದುಬ್ಬರವನ್ನು ಮೀರಿ ಹೂಡಿಕೆದಾರರಿಗೆ ಲಾಭ ನೀಡಿರುವುದು ಸ್ಪಷ್ಟವಾಗುತ್ತದೆ.

ದುಡ್ಡಿಲ್ಲ ಅದಕ್ಕೆ ಹೂಡಿಕೆ ಮಾಡಿಲ್ಲ!: ಯಾಕೆ ಹೂಡಿಕೆ ಮಾಡಿಲ್ಲ ಎನ್ನುವ ಪ್ರಶ್ನೆಗೆ ಬಹುತೇಕರು ನೀಡುವ ಸರಳ ಉತ್ತರ ನಮ್ಮ ಬಳಿ ಹಣವಿಲ್ಲ. ಅದಕ್ಕೆ ಮ್ಯೂಚುವಲ್ ಫಂಡ್ ಹೂಡಿಕೆ ಆರಂಭಿಸಿಲ್ಲ ಎಂದು. ಆದರೆ ಮರು ಪ್ರಶ್ನೆ ಹಾಕಿ ನಿಮ್ಮಲ್ಲಿ ಒಂದೆರಡು ಸಾವಿರ ಉಳಿಸಲು ಸಾಧ್ಯವಿಲ್ಲವೇ ಎಂದು ಕೇಳಿದರೆ, ಖಂಡಿತ ಸಾಧ್ಯವಿದೆ ಎನ್ನುತ್ತಾರೆ. ಅಂದರೆ ಇದರ ಅರ್ಥ ಭಾರತೀಯರಲ್ಲಿ ಹಣ ಉಳಿಸುವ ಕ್ರಮ ರೂಢಿಯಲ್ಲಿದೆ. ಆದರೆ ಉಳಿಸಿರುವ ಹಣವನ್ನು ಹೂಡಿಕೆಯಾಗಿ ಪರಿವರ್ತಿಸುವಲ್ಲಿ ಅವರು ಜಾಣ್ಮೆ ತೋರಬೇಕಾಗಿದೆ.

ನಿಂತ ಓಟ, ಇನ್ನು ಅಸ್ಥಿರತೆಯ ಆಟ!

2019 ರ ಆರಂಭದಿಂದ ವಾರದ ಗಳಿಕೆಯಲ್ಲಿ ನಿರಂತರ ಸುಧಾರಣೆ ಕಂಡುಕೊಂಡು ಮುನ್ನಡೆದಿದ್ದ ಷೇರುಪೇಟೆಯ ಓಟಕ್ಕೆ ಕಳೆದ ವಾರದ ಬೆಳವಣಿಗೆ ತಡೆ ಹಾಕಿದೆ. ವಾರದ ಅವಧಿಯಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸುಮಾರು 0.2 ರಷ್ಟು ಹಿನ್ನಡೆ ಅನುಭವಿಸಿ ಕ್ರಮವಾಗಿ 38,767 ಹಾಗೂ 11,643 ರಲ್ಲಿ ವಹಿವಾಟು ಪೂರ್ಣಗೊಳಿಸಿವೆ.

ಮಾರ್ಚ್ ತಿಂಗಳಲ್ಲಿ ಷೇರುಪೇಟೆ ಹೆಚ್ಚು ಸ್ಥಿರವಾಗಿರುವಂತೆ ಕಂಡುಬಂತು. ತ್ರೈಮಾಸಿಕ ಫಲಿತಾಂಶಗಳು ಉತ್ತಮವಾಗಿರಲಿವೆ ಮತ್ತು ಹಾಲಿ ಸರ್ಕಾರವೇ ಮತ್ತೆ ಅಧಿಕಾರಕ್ಕೆ ಬರಲಿದೆ ಎನ್ನುವ ನಿರೀಕ್ಷೆಯ ಮೇಲೆ ಹೂಡಿಕೆದಾರರು ಉತ್ಸುಕರಾಗಿದ್ದರು. ಆದರೆ, ಇದೀಗ ಟಿಸಿಎಸ್ ಮತ್ತು ಇನ್ಫೊಸಿಸ್‌ನ ತ್ರೈಮಾಸಿಕ ಫಲಿತಾಂಶಗಳು ಉತ್ತಮ ಮುನ್ನೋಟ ನೀಡಿದ್ದರೂ, ಮೇ 23 ರಂದು ಚುನಾವಣೆಯ ಫಲಿತಾಂಶ ಹೊರಬೀಳುವ ತನಕ ಮುಂದಿನ ಹಾದಿ ಏನು ಎನ್ನುವ ಬಗ್ಗೆ ಹೂಡಿಕೆದಾರರಲ್ಲಿ ಗೊಂದಲವಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ತಿಂಗಳ ಮಟ್ಟಿಗೆ ಕಾದು ನೋಡುವ ತಂತ್ರ ಮುಂದುವರಿಯಲಿದೆ.

ಏರಿಕೆ: ಸೆನ್ಸೆಕ್ಸ್ (ಬಿಎಸ್ಇ 500) ನಲ್ಲಿ ಪ್ರಮುಖ ಕಂಪನಿಗಳು ಶೇ 15 ಕ್ಕಿಂತ ಹೆಚ್ಚು ಲಾಭಾಂಶ ಗಳಿಸಿವೆ. ರೇನ್ ಇಂಡಸ್ಟ್ರೀಸ್ (ಶೇ 30.85), ಪಿಸಿ ಜ್ಯುವೆಲರ್‌ ( ಶೇ 28.68) , ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್ (ಶೇ 22.92), ಶಂಕರ ಬಿಲ್ಡಿಂಗ್ ಪ್ರಾಡಕ್ಟ್ಸ್ (ಶೇ 16.66), ಜೈ ಕಾರ್ಪ್ (ಶೇ15.20) ಏರಿಕೆ ಕಂಡಿವೆ.

ಇಳಿಕೆ: ಸೆನ್ಸೆಕ್ಸ್ (ಬಿಎಸ್ಇ 500) ನಲ್ಲಿ ಸೆಂಚುರಿ ಪ್ರೈ ಬೋರ್ಡ್ಸ್ (ಶೇ 11.53 ರಷ್ಟು ಕುಸಿತ), ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ( ಶೇ 11.86 ರಷ್ಟುಕುಸಿತ), ಮತ್ತು ರಿಲಯನ್ಸ್ ಕಮ್ಯೂನಿಕೇಷನ್ ( ಶೇ 22 ರಷ್ಟು) ಕುಸಿತ ದಾಖಲಿಸಿವೆ.

ಮುನ್ನೋಟ: ಏಪ್ರಿಲ್ 15 ರಂದು ಸಗಟು ದರ ಸೂಚ್ಯಂಕದ ವಾರ್ಷಿಕ ದತ್ತಾಂಶ ಮತ್ತು ಮಾರ್ಚ್ ತಿಂಗಳ ವಿದೇಶಿ ವಿನಿಮಯ ಅಂಕಿ-ಅಂಶಗಳು ಹೊರಬೀಳಲಿವೆ. ಈ ವಾರ ಎಚ್‌ಡಿಎಫ್‌ಸಿ, ಟಾಟಾ ಸ್ಟೀಲ್, ವಿಪ್ರೊ , ರಿಲಯನ್ಸ್ ಇಂಡಸ್ಟ್ರೀಸ್ ಸೇರಿ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಹೊರಬೀಳಲಿವೆ.

ಇನ್ನು, ಜಾಗತಿಕ ಮಟ್ಟದಲ್ಲಿ ಚೀನಾದ ಜಿಡಿಪಿ ದರದ ದತ್ತಾಂಶ ಹೊರಬೀಳಲಿದ್ದು ತೈಲ ಪೂರೈಕೆ ರಾಷ್ಟ್ರಗಳ ಒಕ್ಕೂಟದ (ಒಪೆಕ್) ಸಭೆ ಕೂಡ ನಡೆಯಲಿದೆ. ಮಹಾವೀರ ಜಯಂತಿ ಮತ್ತು ಗುಡ್ ಫ್ರೈಡೇ ಪ್ರಯುಕ್ತ ಏಪ್ರಿಲ್ 17 ಮತ್ತು 19 ರಂದು ಷೇರುಪೇಟೆಗೆ ರಜೆ.

ತ್ರೈಮಾಸಿಕ ಅವಧಿಯಲ್ಲಿ ಉತ್ತಮ ಲಾಭಾಂಶ ಘೋಷಿಸುವ ಕಂಪನಿಗಳತ್ತ ಹೂಡಿಕೆದಾರರು ದೃಷ್ಟಿಹರಿಸಬೇಕಾಗಿದೆ. ಕಚ್ಚಾ ತೈಲ ಬೆಲೆಯಲ್ಲಿ ನಿರಂತರ ಏರಿಕೆ ಕೂಡ ಮಾರುಕಟ್ಟೆಯ ಸೂಚ್ಯಂಕಗಳ ಮೇಲೆ ಪ್ರಭಾವ ಬೀರಲಿದೆ.

(ಲೇಖಕ: ಸುವಿಷನ್‌ ಹೋಲ್ಡಿಂಗ್ಸ್‌ ಪ್ರೈವೇಟ್‌ ಲಿಮಿಟೆಡ್‌ನ ಉಪಾಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.