2023ರ ಜನವರಿಯಿಂದ 2025ರ ಜೂನ್ ನಡುವೆ ಬೆಳ್ಳಿಯ ಹೂಡಿಕೆದಾರರಿಗೆ ಶೇಕಡ 47.5ರಷ್ಟು ಲಾಭ ಸಿಕ್ಕಿದೆ. ಎರಡೂವರೆ ವರ್ಷದಲ್ಲಿ ಬೆಳ್ಳಿಯ ಬೆಲೆ ₹74,600ಯಿಂದ ₹1.10 ಲಕ್ಷಕ್ಕೆ ಏರಿಕೆಯಾಗಿದೆ. ಅಂದರೆ ಈ ಅವಧಿಯಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ ಸುಮಾರು ₹36 ಸಾವಿರದಷ್ಟು ಹೆಚ್ಚಳವಾಗಿದೆ. ಚಿನ್ನದ ಬೆಲೆ ಏರಿಕೆಗೆ ಪೈಪೋಟಿ ಕೊಡುವಷ್ಟರ ಮಟ್ಟಿಗೆ ರಜತದ ಬೆಲೆ ಜಿಗಿಯುತ್ತಿದೆ. ಪರಿಸ್ಥಿತಿ ಹೀಗಿರುವಾಗ ಬೆಳ್ಳಿಯ ಮೇಲೆ ಹೂಡಿಕೆಗೆ ಇದು ಸೂಕ್ತ ಸಮಯವೇ? ಅದರ ಬೆಲೆ ಮತ್ತಷ್ಟು ಏರಿಕೆ ಕಾಣುವುದೇ? ಈಗಾಗಲೇ ಹೂಡಿಕೆ ಮಾಡಿ ಲಾಭ ಪಡೆದಿರುವವರು ಅದನ್ನು ನಗದೀಕರಣ ಮಾಡಿಕೊಳ್ಳಬೇಕೇ?
ಬೆಳ್ಳಿ ಬೆಲೆಯ ಇತಿಹಾಸ ನೋಡಿದಾಗ ಅಲ್ಲಿ ಸದಾ ಏರಿಳಿತ ಕಾಣಿಸುತ್ತದೆ. 1981ರಲ್ಲಿ ಒಂದು ಕೆ.ಜಿ ಬೆಳ್ಳಿಯ ಬೆಲೆ ₹2,715 ಇತ್ತು. 1989ರಲ್ಲಿ ಅದು ₹6,755ಕ್ಕೆ ಜಿಗಿಯಿತು. 1992ರ ಹೊತ್ತಿಗೆ ಬೆಳ್ಳಿಯ ಬೆಲೆ ₹8,040 ದಾಟಿತು. ಆದರೆ ಮತ್ತೊಂದು ವರ್ಷದಲ್ಲಿ (1993ರಲ್ಲಿ) ಬೆಳ್ಳಿಯ ಬೆಲೆ ₹5,489ಕ್ಕೆ ಇಳಿಯಿತು. ನಂತರ ಕೊಂಚ ಚೇತರಿಸಿಕೊಂಡ ಬೆಳ್ಳಿ, 2003ರವರೆಗೂ ಏಳೆಂಟು ಸಾವಿರದ ಆಸುಪಾಸಿನಲ್ಲೇ ಇತ್ತು. ಅಂದರೆ, 10 ವರ್ಷ ಬೆಳ್ಳಿಯ ಬೆಲೆ ಹೆಚ್ಚು ಏರಿಕೆ ಕಾಣಲಿಲ್ಲ. ಆದರೆ 2011ರಲ್ಲಿ ಬೆಳ್ಳಿಯ ಬೆಲೆ ಗಣನೀಯ ಏರಿಕೆ ಕಂಡು ಕೆ.ಜಿಗೆ ₹56,900 ದಾಟಿತು. ಮುಂದಿನ ಹತ್ತು ವರ್ಷ ಅಂದರೆ 2021ರವರೆಗೂ ಬೆಳ್ಳಿಯ ಬೆಲೆ ₹37 ಸಾವಿರದಿಂದ ₹62,572 ನಡುವೆ ಏರಿಳಿತ ಕಾಣುತ್ತಿತ್ತು. 2023ರಿಂದ ರಜತದ ಬೆಲೆ ಮಿಂಚಿನ ಓಟ ಮುಂದುವರಿಸಿದೆ. ಬೆಳ್ಳಿಯ ಬೆಲೆ 2023ರಲ್ಲಿ ₹78,600, 2024ರಲ್ಲಿ ₹95,700 ಮತ್ತು 2025ರಲ್ಲಿ ₹1.10 ಲಕ್ಷದ ಆಸುಪಾಸಿನಲ್ಲಿದೆ. (ಪಟ್ಟಿ ಗಮನಿಸಿ)
ಬೆಳ್ಳಿಯ ಮೇಲಿನ ಹೂಡಿಕೆಗೆ ಇದು ಸಕಾಲವೇ?: ಬೆಳ್ಳಿಯ ಬೆಲೆ ಎತ್ತ ಸಾಗಲಿದೆ ಎನ್ನುವುದನ್ನು ಅಂದಾಜು ಮಾಡಲು ಕೆಲವು ವಿಷಯಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕಾಗುತ್ತದೆ. ಬೆಳ್ಳಿಯ ಬೇಡಿಕೆ ಮತ್ತು ಪೂರೈಕೆ, ಆರ್ಥಿಕ ಚಟುವಟಿಕೆ, ಬಡ್ಡಿದರ, ಡಾಲರ್ ಮೌಲ್ಯ, ಜಾಗತಿಕ ವಿದ್ಯಮಾನಗಳು, ಚಿನ್ನ ಮತ್ತು ಬೆಳ್ಳಿಯ ಅನುಪಾತ, ತಾಮ್ರ ಮತ್ತು ಬೆಳ್ಳಿಯ ಅನುಪಾತ ಹೀಗೆ ಹಲವು ಅಂಶಗಳು ಬೆಳ್ಳಿಯ ಬೆಲೆಯನ್ನು ನಿರ್ಧರಿಸುತ್ತವೆ. ಕೆಲ ಆಯ್ದ ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸೋಣ.
ಬೇಡಿಕೆ ಮತ್ತು ಪೂರೈಕೆ: ಚಿನ್ನದ ಬೆಲೆ ಏರಿಕೆ ಹೇಗೆ ಬೇಡಿಕೆ ಮತ್ತು ಪೂರೈಕೆಯ ಮೇಲೆ ನಿರ್ಧಾರವಾಗುವುದೋ ಅದೇ ರೀತಿ ಬೆಳ್ಳಿಯ ಬೆಲೆ ಏರಿಕೆ ಸಹ ಬೇಡಿಕೆ ಮತ್ತು ಪೂರೈಕೆಯ ತಳಹದಿಯ ಮೇಲೆ ನಿಂತಿದೆ. ಅಮೆರಿಕದ ಸಿಲ್ವರ್ ಇನ್‌ಸ್ಟಿಟ್ಯೂಟ್ 2025ರಲ್ಲಿ ನಡೆಸಿರುವ ಸಮೀಕ್ಷೆಯು ಬೆಳ್ಳಿಯ ಬೇಡಿಕೆ ಮತ್ತು ಪೂರೈಕೆಯ ವಿಷಯವಾಗಿ ಬೆಳಕು ಚೆಲ್ಲುತ್ತದೆ. ಸಾಮಾನ್ಯವಾಗಿ ಗಣಿಗಾರಿಕೆ ಮತ್ತು ಮರುಬಳಕೆಯ ವಿಧಾನದಲ್ಲಿ ಬೆಳ್ಳಿಯ ಉತ್ಪಾದನೆ ಆಗುತ್ತದೆ. ಕೈಗಾರಿಕಾ ಬಳಕೆ, ಫೋಟೋಗ್ರಫಿ, ಆಭರಣ ತಯಾರಿಕೆ, ನಾಣ್ಯ ತಯಾರಿಕೆ ಮತ್ತು ಬೆಳ್ಳಿಯ ಬಿಸ್ಕತ್‌ಗಳಿಗೆ ಬೇಡಿಕೆ ಇರುತ್ತದೆ. ಬೆಳ್ಳಿಗೆ ಇರುವ ಬೇಡಿಕೆಯಲ್ಲಿ ಶೇ 50ಕ್ಕೂ ಹೆಚ್ಚು ಪಾಲು ಎಲೆಕ್ಟ್ರಾನಿಕ್ಸ್, ಸೋಲಾರ್ ಫಲಕ ಮತ್ತು ವಿದ್ಯುತ್‌ಚಾಲಿತ ವಾಹನಗಳ ತಯಾರಿಕಾ ವಲಯದಿಂದ ಬರುತ್ತಿದೆ. 2020ರವರೆಗೂ ಬೆಳ್ಳಿಯ ಬೇಡಿಕೆಗೆ ತಕ್ಕಂತೆ ಪೂರೈಕೆ ಇತ್ತು. ಆದರೆ 2021ರಿಂದ ಲಭ್ಯತೆಗಿಂತ ಬೇಡಿಕೆ ಜಾಸ್ತಿಯಾಗುತ್ತಿದೆ. ಸಿಲ್ವರ್ ಇನ್‌ಸ್ಟಿಟ್ಯೂಟ್ ಪ್ರಕಾರ 2025ರಲ್ಲಿ ಕೈಗಾರಿಕಾ ವಲಯದಲ್ಲಿ ಬೆಳ್ಳಿಗೆ ಇರುವ ಬೇಡಿಕೆ ಸುಮಾರು 700 ಮಿಲಿಯನ್ ಔನ್ಸ್. ಸದ್ಯದ ಪರಿಸ್ಥಿತಿಯಲ್ಲಿ ಪೂರೈಕೆ ಪ್ರಮಾಣಕ್ಕಿಂತ ಬೇಡಿಕೆ ಜಾಸ್ತಿ ಇದೆ. ಆ ಕಾರಣದಿಂದಾಗಿ ಬೆಳ್ಳಿಯ ಬೆಲೆ ಏರುತ್ತಿದೆ. ಆದರೆ ಬೇಡಿಕೆ ಪ್ರಮಾಣ ತಗ್ಗಿದರೆ ಒಂದೆರಡು ವರ್ಷಗಳಲ್ಲಿ ಬೆಳ್ಳಿಯ ಬೆಲೆ ಇಳಿಕೆ ಕಾಣಬಹುದು.
ಆರ್ಥಿಕ ಚಟುವಟಿಕೆ: ಬೆಳ್ಳಿಗೆ ಸೃಷ್ಟಿಯಾಗಿರುವ ಬಹುಪಾಲು ಬೇಡಿಕೆ ಕೈಗಾರಿಕಾ ವಲಯದಿಂದ ಬರುತ್ತಿದೆ. ದೇಶದಲ್ಲಿ ಆರ್ಥಿಕ ಪ್ರಗತಿಯಾದರೆ ಕೈಗಾರಿಕೆ ಮತ್ತು ಉತ್ಪಾದನಾ ವಲಯಗಳು ವೇಗ ಪಡೆದುಕೊಂಡು ಚಟುವಟಿಕೆ ಹೆಚ್ಚಿಸುವುದರಿಂದ ಬೆಳ್ಳಿಗೆ ಬೇಡಿಕೆ ಬರುತ್ತದೆ. ವಿಶ್ವ ಬ್ಯಾಂಕ್‌ನ ದತ್ತಾಂಶದ ಪ್ರಕಾರ 2024ರ ಒಟ್ಟು ಜಾಗತಿಕ ಜಿಡಿಪಿ ಬೆಳವಣಿಗೆ ಶೇ 3.2ರಷ್ಟಿದ್ದರೆ 2023ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 2.8ರಷ್ಟಿತ್ತು. ಅಂದರೆ, 2024ರ ಜಿಡಿಪಿ ಹೆಚ್ಚಳ ಬೆಳ್ಳಿಯ ಬೆಲೆ ಏರಿಕೆಗೆ ಪರೋಕ್ಷವಾಗಿ ಅನುಕೂಲಕರ ವಾತಾವರಣ ಸೃಷ್ಟಿಸಿರಬಹುದು. ಆದರೆ 2025ರ ಜಾಗತಿಕ ಜಿಡಿಪಿ ಬೆಳವಣಿಗೆ ದರದ ಅಂದಾಜು ಅಷ್ಟು ಉತ್ತಮವಾಗಿಲ್ಲ. 2025ರಲ್ಲಿ ಜಿಡಿಪಿ ಬೆಳವಣಿಗೆ ದರ ಶೇ 2.7ರಷ್ಟು ಇರಬಹುದು ಎಂದು ವಿಶ್ವ ಬ್ಯಾಂಕ್ ಹೇಳಿದೆ. ಒಟ್ಟಾರೆಯಾಗಿ ನೋಡಿದಾಗ 2025ರಲ್ಲಿ ಆರ್ಥಿಕ ಪ್ರಗತಿ ಕುಂಠಿತವಾಗುವ ಸಂಭವವಿದೆ ಎಂದು ಬಹುತೇಕ ವಿಶ್ಲೇಷಣೆಗಳು ಹೇಳುತ್ತಿವೆ. ಈ ದೃಷ್ಟಿಯಲ್ಲಿ ನೋಡಿದಾಗ 2025 ಬೆಳ್ಳಿಗೆ ಅಷ್ಟು ಆಶಾದಾಯಕವಲ್ಲ.
ಬಡ್ಡಿ ದರ ನೀತಿ: ಬಡ್ಡಿ ದರ ಏರಿಕೆ ಅಥವಾ ಇಳಿಕೆಯು ಬೆಳ್ಳಿಯ ಬೆಲೆ ಏರಿಕೆ ಮೇಲೆ ಪರಿಣಾಮ ಬೀರುತ್ತದೆ. ಬಡ್ಡಿ ದರ ಜಾಸ್ತಿ ಇದ್ದಾಗ ಹೂಡಿಕೆದಾರರು ಬಾಂಡ್, ನಿಶ್ಚಿತ ಹೂಡಿಕೆಗಳು ಸೇರಿದಂತೆ ನಿಶ್ಚಿತ ಆದಾಯ ಕೊಡುವ ಹೂಡಿಕೆಗಳತ್ತ ವಾಲುತ್ತಾರೆ. ಆದರೆ ಬಡ್ಡಿ ದರ ಇಳಿಕೆಯ ಸಂದರ್ಭದಲ್ಲಿ ನಗದು ಹರಿವು ಹೆಚ್ಚಾಗುವ ಕಾರಣ ಬೆಳ್ಳಿ, ಚಿನ್ನದಂತಹ ಹೂಡಿಕೆಗಳ ಮೇಲೆ ಹೂಡಿಕೆದಾರರು ಚಿತ್ತ ಹರಿಸುತ್ತಾರೆ. ಸದ್ಯ ಅಮೆರಿಕದ ಫೆಡರಲ್ ಬ್ಯಾಂಕ್‌ನ ಬಡ್ಡಿ ದರ ಶೇ 4.25ರಿಂದ ಶೇ 4.5ರ ನಡುವೆ ಇದೆ. ಅಮೆರಿಕದಲ್ಲಿ ಬೆಲೆ ಏರಿಕೆ ನಿಯಂತ್ರಣಕ್ಕೆ ಬಂದಿರುವ ಕಾರಣ ಈ ವರ್ಷ ಮತ್ತೆ ಎರಡು ಬಾರಿ ಬಡ್ಡಿ ದರ ಇಳಿಕೆ ಮಾಡುವ ಸಾಧ್ಯತೆಯನ್ನು ಅಮೆರಿಕ ಫೆಡರಲ್ ಬ್ಯಾಂಕ್ ಹೇಳಿದೆ. ಜಗತ್ತಿನ ಇತರ ಪ್ರಮುಖ ರಾಷ್ಟ್ರಗಳೂ ಬಡ್ಡಿ ಇಳಿಕೆಯ ಹಾದಿಯಲ್ಲಿವೆ. ಹೀಗಿರುವಾಗ ಬೆಳ್ಳಿಯ ಓಟಕ್ಕೆ ಮತ್ತಷ್ಟು ಅನುಕೂಲಕರ ವಾತಾವರಣ ಸೃಷ್ಟಿಯಾಗುವ ಸಂಭವವಿದೆ.
ಜಾಗತಿಕ ವಿದ್ಯಮಾನಗಳು: ಜಾಗತಿಕ ತಲ್ಲಣ, ಯುದ್ಧದ ಸಂದರ್ಭ, ಆರ್ಥಿಕ ಅನಿಶ್ಚಿತತೆ ಹೀಗೆ ಅನೇಕ ಸಂಕಷ್ಟಗಳಿಂದ ಪಾರಾಗಲು ಪ್ರತಿ ದೇಶವೂ ಸುರಕ್ಷತೆಯ ದೃಷ್ಟಿಯಿಂದ ಚಿನ್ನ ಮತ್ತು ಬೆಳ್ಳಿಯ ಮೇಲೆ ಹೂಡಿಕೆ ಮಾಡುತ್ತದೆ. ಸಾಮಾನ್ಯವಾಗಿ ಜಾಗತಿಕ ಅನಿಶ್ಚಿತ ಸಂದರ್ಭಗಳು ಬಂದಾಗ ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆ ಕಾಣುತ್ತದೆ. ಸದ್ಯದ ಸಂದರ್ಭ ನೋಡಿದಾಗ ಇಸ್ರೇಲ್–ಇರಾನ್, ರಷ್ಯಾ–ಉಕ್ರೇನ್ ಯುದ್ಧ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಂಕ ಸಮರ ಸೇರಿದಂತೆ ಹಲವು ಅಂಶಗಳು ಬೆಳ್ಳಿಯ ಬೆಲೆ ಏರಿಕೆ ಕಾಣಲು ಪೂರಕವಾಗಿವೆ.
(ಗಮನಿಸಿ: ಇದು ಬೆಳ್ಳಿಯ ಮೇಲೆ ಹೂಡಿಕೆಗೆ ನೀಡುತ್ತಿರುವ ಸಲಹೆ ಅಲ್ಲ. ಹೂಡಿಕೆಗೆ ಮುನ್ನ ನಿಮ್ಮ ಹಣಕಾಸು ಸಲಹೆಗಾರರನ್ನು ಸಂಪರ್ಕಿಸಿ)
(ಲೇಖಕ ಚಾರ್ಟರ್ಡ್ ಅಕೌಂಟೆಂಟ್)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.