
ಕೆಲವು ವರ್ಷಗಳ ಹಿಂದೆ ನೀವು ಆರೋಗ್ಯ ವಿಮೆ ಪಡೆದುಕೊಂಡಿರುತ್ತೀರಿ. ಆ ಸಂದರ್ಭಕ್ಕೆ ಅದು ನಿಮ್ಮ ಅಗತ್ಯಗಳನ್ನು ಪೂರೈಸುತ್ತ ಇರುತ್ತದೆ. ಆದರೆ ಈಗ ವೈದ್ಯಕೀಯ ವೆಚ್ಚವು ಏರಿಕೆಯಾಗಿದೆ. ಕವರೇಜ್ ಕಡಿಮೆ ಇದೆ, ಪಾಲಿಸಿಯಲ್ಲಿ ಮಿತಿಗಳು ಕೂಡ ಇವೆ. ಪ್ರತಿ ಕ್ಲೇಮ್ ಪಡೆದುಕೊಳ್ಳುವಾಗಲೂ ವಿಮಾ ಕಂಪನಿ ಸಬೂಬು ಹೇಳುತ್ತಿದ್ದು, ನಿಮಗೆ ಕಿರಿಕಿರಿಯಾಗುತ್ತಿದೆ. ಇಂತಹ ಸನ್ನಿವೇಶವು ಬೇರೊಂದು ಕಂಪನಿಯ ಉತ್ತಮ ಆರೋಗ್ಯ ವಿಮೆ ಪಡೆದುಕೊಳ್ಳುವುದು ಸರಿಯೇ ಎನ್ನುವ ಪ್ರಶ್ನೆಯನ್ನು ನಿಮ್ಮಲ್ಲಿ ಹುಟ್ಟುಹಾಕುತ್ತದೆ. ಒಂದೊಮ್ಮೆ ಇದೇ ಸ್ಥಿತಿಯಲ್ಲಿ ನೀವಿದ್ದರೆ ಬೇರೊಂದು ಕಂಪನಿಗೆ ಆರೋಗ್ಯ ವಿಮೆ ವರ್ಗಾವಣೆ ಮಾಡಿಕೊಳ್ಳುವುದು ನಿಮ್ಮ ನೆರವಿಗೆ ಬರುತ್ತದೆ. ಬೇರೊಂದು ಕಂಪನಿಗೆ ಆರೋಗ್ಯ ವಿಮೆ ವರ್ಗಾವಣೆ ಅಂದರೇನು? ಅದರ ಸಾಧಕ- ಬಾಧಕಗಳೇನು?
ಆರೋಗ್ಯ ವಿಮೆ ವರ್ಗಾವಣೆ: ನಾವು ದೂರಸಂಪರ್ಕ ಕಂಪನಿಯೊಂದರಿಂದ ಮೊಬೈಲ್ ಸೇವಾ ಸಂಪರ್ಕ ಪಡೆದಿರುತ್ತೇವೆ. ಆ ಕಂಪನಿಯ ಸೇವೆ ನಮಗೆ ಇಷ್ಟವಾಗದಿದ್ದಲ್ಲಿ ಈಗಿರುವ ಮೊಬೈಲ್ ನಂಬರ್ ಅನ್ನೇ ಮುಂದುವರಿಸಿಕೊಂಡು ಮತ್ತೊಂದು ದೂರಸಂಪರ್ಕ ಕಂಪನಿಯ ಸೇವೆ ಪಡೆಯಲು ಶುರು ಮಾಡುತ್ತೇವೆ. ಅಂದರೆ ಇಲ್ಲಿ ಮೊಬೈಲ್ ನಂಬರ್ ಅದೇ ಇರುತ್ತದೆ, ಆದರೆ ದೂರಸಂಪರ್ಕ ಸೇವೆ ಒದಗಿಸುವ ಕಂಪನಿ ಬದಲಾಗುತ್ತದೆ. ಇದೇ ಮಾದರಿಯಲ್ಲಿ ಆರೋಗ್ಯ ವಿಮಾ ಸೇವೆಗಳನ್ನು ಒಂದು ಕಂಪನಿಯಿಂದ ಮತ್ತೊಂದು ಕಂಪನಿಗೆ ವರ್ಗಾಯಿಸಿಕೊಳ್ಳಬಹುದು. ಹೀಗೆ ಬೇರೊಂದು ಕಂಪನಿಗೆ ಆರೋಗ್ಯ ವಿಮೆಯನ್ನು ವರ್ಗಾವಣೆ ಮಾಡಿದಾಗ ಈ ಹಿಂದಿನ ಕಂಪನಿ ಒದಗಿಸಿದ್ದ ಎಲ್ಲ ಅನುಕೂಲಗಳನ್ನು ಮುಂದಿನ ಕಂಪನಿ ಒದಗಿಸಬೇಕಾಗುತ್ತದೆ. ಅಂದರೆ ನೋ ಕ್ಲೇಮ್ ಬೋನಸ್ (ಯಾವುದೇ ಕ್ಲೇಮ್ ಪಡೆಯದಿದ್ದರೆ ಸಿಗುವ ಹೆಚ್ಚುವರಿ ಕವರೇಜ್), ವೇಟಿಂಗ್ ಪೀರಿಯಡ್ (ನಿರ್ದಿಷ್ಟ ಚಿಕಿತ್ಸೆಗಳಿಗಾಗಿ ಕಾಯುವಿಕೆ ಅವಧಿ) ಸೇರಿದಂತೆ ಈ ಹಿಂದಿನ ಪಾಲಿಸಿಯಲ್ಲಿನ ಎಲ್ಲ ಸವಲತ್ತುಗಳನ್ನು ಹೊಸ ಆರೋಗ್ಯ ವಿಮಾ ಕಂಪನಿ ಕೊಡಬೇಕಾಗುತ್ತದೆ. ಉದಾಹರಣೆಗೆ ‘ಎ’ ಎನ್ನುವ ಕಂಪನಿಯಿಂದ ನೀವು ಕೆಲವು ವರ್ಷಗಳ ಹಿಂದೆ ಆರೋಗ್ಯ ವಿಮೆ ಕವರೇಜ್ ಪಡೆದುಕೊಂಡಿರುತ್ತೀರಿ. ಈಗ ‘ಬಿ’ ಎನ್ನುವ ಮತ್ತೊಂದು ಕಂಪನಿಗೆ ನಿಮ್ಮ ಆರೋಗ್ಯ ವಿಮೆ ವರ್ಗಾಯಿಸಿಕೊಳ್ಳುತ್ತೀರಿ. ಈ ಸಂದರ್ಭದಲ್ಲಿ ನೀವು ‘ಎ’ ಕಂಪನಿಯಲ್ಲಿ ಪೂರೈಸಿದ್ದ ಕಾಯುವಿಕೆ ಅವಧಿ ಮತ್ತು ಪಡೆದಿದ್ದ ನೋ ಕ್ಲೇಮ್ ಬೋನಸ್ ಅನ್ನು ‘ಬಿ’ ಕಂಪನಿ ಗಣನೆಗೆ ತೆಗೆದುಕೊಳ್ಳುತ್ತದೆ.
* ಪಾಲಿಸಿ ನವೀಕರಣ ದಿನಾಂಕ ಪರಿಶೀಲಿಸಿ: ನಿಮ್ಮ ಆರೋಗ್ಯ ವಿಮೆಯ ನವೀಕರಣ ಹತ್ತಿರವಾಗಿರುವ ಸಮಯದಲ್ಲಿ ಮಾತ್ರ ಅದನ್ನು ವರ್ಗಾವಣೆ ಮಾಡಬಹುದು. ಪಾಲಿಸಿ ಪಡೆದು 6 ತಿಂಗಳ ನಂತರ ಅಥವಾ ಕಂತು ಪಾವತಿಗೆ ನೀಡುವ ಗ್ರೇಸ್ ಪೀರಿಯಡ್‌ನಲ್ಲಿ (ಹೆಚ್ಚುವರಿ ಅವಧಿ) ವರ್ಗಾವಣೆ ಸಾಧ್ಯವಿಲ್ಲ. ಆರೋಗ್ಯ ವಿಮೆ ವರ್ಗಾವಣೆ ಮಾಡಲು ನವೀಕರಣದ 45ರಿಂದ 60 ದಿನಗಳಿಗೂ ಮೊದಲು ಹೊಸ ಆರೋಗ್ಯ ವಿಮಾ ಸಂಸ್ಥೆಯನ್ನು ಸಂಪರ್ಕಿಸಬೇಕು.
* ಯಾವ ಸಂಸ್ಥೆಯ ಪಾಲಿಸಿ ಪಡೆಯಬೇಕು ತೀರ್ಮಾನಿಸಿ: ಆರೋಗ್ಯ ವಿಮೆಯನ್ನು ವರ್ಗಾವಣೆ ಮಾಡಬೇಕು ಎಂದು ತೀರ್ಮಾನಿಸಿದಾಗ ಹೊಸದಾಗಿ ಬೇರೆ ಯಾವ ಕಂಪನಿಯ ಪಾಲಿಸಿ ಪಡೆದುಕೊಳ್ಳಬೇಕು ಎನ್ನುವುದನ್ನು ಖಚಿತಪಡಿಸಿಕೊಳ್ಳಬೇಕು. ಹಳೆಯ ಪಾಲಿಸಿಯೊಂದಿಗೆ ಹೊಸದನ್ನು ಹೋಲಿಕೆ ಮಾಡಿ ನೋಡಿ. ಕವರೇಜ್ ಎಷ್ಟಿದೆ, ಅನುಕೂಲಗಳೇನು, ಕಾಯುವಿಕೆ ಅವಧಿ ಹೇಗಿದೆ, ಯಾವುದಕ್ಕೆ ಚಿಕಿತ್ಸೆ ಸಿಗುತ್ತದೆ ಮತ್ತು ಯಾವುದಕ್ಕೆ ಸಿಗುವುದಿಲ್ಲ, ಯಾವೆಲ್ಲಾ ಆಸ್ಪತ್ರೆಗಳೊಂದಿಗೆ ವಿಮಾ ಕಂಪನಿ ಒಡಂಬಡಿಕೆ ಮಾಡಿಕೊಂಡಿದೆ, ಕ್ಲೇಮ್ ರೇಷಿಯೋ ಹೇಗಿದೆ ಎಂಬುದನ್ನು ತುಲನೆ ಮಾಡಿ ನೋಡಬೇಕು.
* ಹೊಸ ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿ: ಪ್ರಸ್ತುತ ಇರುವ ಆರೋಗ್ಯ ವಿಮೆಯನ್ನು ವರ್ಗಾವಣೆ ಮಾಡಬೇಕು ಎಂದು ಹೊಸ ವಿಮಾ ಕಂಪನಿಗೆ ತಿಳಿಸಿ. ಅದಕ್ಕಾಗಿ ಪ್ರಸ್ತಾವನೆ ಅರ್ಜಿ, ವರ್ಗಾವಣೆ ಅರ್ಜಿ ಮತ್ತು ಈಗಿರುವ ಪಾಲಿಸಿಯ ಕೆಲ ವಿವರಗಳನ್ನು ಒದಗಿಸಬೇಕು
* ಅಗತ್ಯ ದಾಖಲೆಗಳನ್ನು ಸಲ್ಲಿಸಿ: ಹೊಸ ವಿಮಾ ಸಂಸ್ಥೆ ನಿಮ್ಮ ಅರ್ಜಿಯನ್ನು ಪರಿಶೀಲಿಸಲು ಪೂರಕ ದಾಖಲೆಗಳನ್ನು ಕೇಳುತ್ತದೆ. ನಿಮ್ಮ ವಯಸ್ಸು, ಕವರೇಜ್ ಮೊತ್ತ ಮತ್ತು ಆರೋಗ್ಯದ ಹಿನ್ನೆಲೆ ಆಧರಿಸಿ ವೈದ್ಯಕೀಯ ಪರೀಕ್ಷೆ ಮಾಡಲಾಗುತ್ತದೆ. (ಅಗತ್ಯ ದಾಖಲೆಗಳ ಬಗ್ಗೆ ಪ್ರತ್ಯೇಕ ಮಾಹಿತಿ ಇದೆ
ಗಮನಿಸಿಕೊಳ್ಳಿ)
* ಅರ್ಜಿ ಪರಿಶೀಲನೆ ಮತ್ತು ಮಾಹಿತಿ ಹಂಚಿಕೆ: ನೀವು ಅರ್ಜಿ ಸಲ್ಲಿಸಿದ ಮೇಲೆ ಹಳೆಯ ವಿಮಾ ಕಂಪನಿ ನಿಮ್ಮ ಪಾಲಿಸಿಯ ವಿವರ ಮತ್ತು ಕ್ಲೇಮ್ ಇತಿಹಾಸವನ್ನು ಹೊಸ ಕಂಪನಿಯೊಂದಿಗೆ ಹಂಚಿಕೊಳ್ಳುತ್ತದೆ. ಈ ಮಾಹಿತಿ ಆಧರಿಸಿ ಹೊಸ ವಿಮಾ ಕಂಪನಿ ನಿಮ್ಮ ವರ್ಗಾವಣೆ ಅರ್ಜಿಯನ್ನು ಒಪ್ಪಿಕೊಳ್ಳಬಹುದು, ಒಂದಷ್ಟು ನಿಬಂಧನೆಗಳೊಂದಿಗೆ ಒಪ್ಪಿಗೆ ಕೊಡಬಹುದು, ಕ್ಲೇಮ್ ವೇಳೆ ಚಿಕಿತ್ಸೆಗೆ ಸಹಪಾವತಿಗೆ ಹೇಳಬಹುದು ಅಥವಾ ಅರ್ಜಿಯನ್ನೇ ತಿರಸ್ಕರಿಸಬಹುದು.
* ಅನುಮೋದನೆ ಮತ್ತು ಪಾಲಿಸಿ ವಿತರಣೆ: ನಿಮಗೆ ಪಾಲಿಸಿ ಕೊಡಬಹುದು ಎನ್ನುವ ವಿಶ್ವಾಸ ಹೊಸ ವಿಮಾ ಕಂಪನಿಗೆ ಮೂಡಿದಾಗ ಹಳೆಯ ಪಾಲಿಸಿಯ ನವೀಕರಣದ ದಿನಾಂಕಕ್ಕೆ ಹೊಸ ಆರೋಗ್ಯ ವಿಮಾ ಪಾಲಿಸಿಯನ್ನು ನೀಡಲಾಗುತ್ತದೆ. ಹಳೆಯ ಪಾಲಿಸಿಯಲ್ಲಿದ್ದ ನೋ ಕ್ಲೇಮ್ ಬೋನಸ್, ಕಾಯುವಿಕೆ ಅವಧಿ ಪೂರೈಕೆ ಸೇರಿದಂತೆ ಎಲ್ಲ ಅನುಕೂಲಗಳನ್ನು ಹೊಸ ಪಾಲಿಸಿಯಲ್ಲಿ ನೀಡಲಾಗುತ್ತದೆ. ಒಂದೊಮ್ಮೆ ಹೊಸ ವಿಮಾ ಕಂಪನಿ ನಿಮಗೆ ಪಾಲಿಸಿ ನಿರಾಕರಿಸಿದರೆ ಹಳೆಯ ವಿಮಾ ಕಂಪನಿಯಿಂದ ನೀವು ಪಾಲಿಸಿ ನವೀಕರಿಸಿಕೊಳ್ಳಲು ಸಾಧ್ಯವಿದೆ.
● ಪ್ರಸ್ತುತ ಆರೋಗ್ಯ ವಿಮೆಯ ದಾಖಲೆ
● ಕಳೆದ ಎರಡರಿಂದ ಮೂರು ವರ್ಷಗಳ ವಿಮಾ ದಾಖಲೆ
● ನಿಮ್ಮ ಹಳೆಯ ಪಾಲಿಸಿಯಲ್ಲಿ ಕವರೇಜ್ ಹೆಚ್ಚಳ ಮಾಡಿದ್ದರೆ, ಹೊಸ ಸದಸ್ಯರನ್ನು ಸೇರಿಸಿದ್ದರೆ ಅದರ ವಿವರ
● ಈ ಹಿಂದೆ ಪಡೆದಿರುವ ಕ್ಲೇಮ್‌ಗಳ ವಿವರ (ಕ್ಲೇಮ್ ಪಡೆದಿದ್ದಲ್ಲಿ)
● ಇತ್ತೀಚಿನ ವೈದ್ಯಕೀಯ ವರದಿಗಳು
● ಗುರುತಿನ ಚೀಟಿ ಮತ್ತು ವಿಳಾಸ ಖಾತರಿ – ಆಧಾರ್ ಮತ್ತು ಪಾನ್‌ಕಾರ್ಡ್
● ವರ್ಗಾವಣೆಗಾಗಿ ಹೊಸ ವಿಮಾ ಕಂಪನಿಗೆ ಸಲ್ಲಿಸಬೇಕಿರುವ ಅರ್ಜಿ
● ಕೆಲ ಕಂಪನಿಗಳು ಸಾಂದರ್ಭಿಕವಾಗಿ ಇನ್ನೂ ಹೆಚ್ಚಿನ ದಾಖಲೆಗಳನ್ನು ಕೇಳಬಹುದು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.