ಷೇರುಪೇಟೆಯಲ್ಲಿ ಏರಿಳಿತ ಸರ್ವೇ ಸಾಮಾನ್ಯ. ಮಾರುಕಟ್ಟೆಯು ಯಾವಾಗ ಎಷ್ಟು ಏರಿಕೆ ಕಾಣುತ್ತದೆ; ಯಾವಾಗ ಎಷ್ಟು ಕುಸಿತ ದಾಖಲಿಸುತ್ತದೆ ಎಂದು ಅಂದಾಜಿಸುವುದು ಮಾರುಕಟ್ಟೆ ತಜ್ಞರಿಗೂ ಸಾಧ್ಯವಿಲ್ಲ.
ಷೇರುಪೇಟೆ ಪ್ರವೇಶದ ವೇಳೆ ಬಹುಪಾಲು ಮಂದಿ ದೀರ್ಘಾವಧಿಗೆ ಹೂಡಿಕೆ ಮಾಡುತ್ತೇವೆ ಎಂದುಕೊಂಡು ಬರುತ್ತಾರೆ. ಆದರೆ, ಮಾರುಕಟ್ಟೆಯ ತ್ವರಿತ ಮತ್ತು ಹರಿತವಾದ ಏರಿಳಿತಗಳು ಭಯ ಹುಟ್ಟಿಸುವ ಕಾರಣ, ಅನೇಕರು ಹೂಡಿಕೆಯ ಪಯಣವನ್ನೇ ಮೊಟಕುಗೊಳಿಸಿ ಹೂಡಿಕೆ ಮಾಡುವ ಆಸೆಗೆ ಪೂರ್ಣ ವಿರಾಮ ಹಾಕುತ್ತಾರೆ. ನಿಮಗೆ ಗೊತ್ತಿರಲಿ, ಯಾರು ಮಾರುಕಟ್ಟೆಯ ಒಳಮರ್ಮ ಅರಿತು ಶಿಸ್ತುಬದ್ಧವಾಗಿ ದೀರ್ಘಾವಧಿಗೆ ಹೂಡಿಕೆ ಮುಂದುವರಿಸುತ್ತಾರೋ ಅವರು ಖಂಡಿತವಾಗಿಯೂ ಸಂಪತ್ತು ಗಳಿಸುತ್ತಾರೆ.
ಏರಿಳಿತ ಸಾಮಾನ್ಯ:
ಷೇರು ಮಾರುಕಟ್ಟೆಯಲ್ಲಿ ಏರಿಳಿತಗಳು ಇದ್ದದ್ದೇ ಎನ್ನುವುದನ್ನು ಈಗಾಗಲೇ ನಾವು ಹೇಳಿದ್ದೇವೆ. ಆದರೆ, ಪ್ರತಿ ಬಾರಿ ಮಾರುಕಟ್ಟೆ ಕುಸಿದ ನಂತರದಲ್ಲಿ ಜಿಗಿತ ದಾಖಲಿಸಿದೆ ಎನ್ನುವುದು ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶ.
2000-2001ರ ಡಾಟ್ ಕಾಂ ಬಬಲ್, 2008-2009ರ ಜಾಗತಿಕ ಆರ್ಥಿಕ ಕುಸಿತ, 2020ರ ಕೋವಿಡ್ –ಹೀಗೆ ಅನೇಕ ಸಂದರ್ಭಗಳಲ್ಲಿ ಮಾರುಕಟ್ಟೆಯು ಗಣನೀಯವಾಗಿ ಕುಸಿತ ಕಂಡಿದೆ. ಆದರೆ, ಕುಸಿತದ ಬಳಿಕ ಒಂದು ಗಳಿಕೆಯ ಓಟ ಇದ್ದೇ ಇರುತ್ತದೆ.
ಯಾವ ಹೂಡಿಕೆದಾರರು ಷೇರುಪೇಟೆ ಕುಸಿತದ ಸಂದರ್ಭದಲ್ಲಿ ತಾಳ್ಮೆಯಿಂದ ಕ್ರಮಬದ್ಧವಾಗಿ ಅರಿತು ಹೂಡಿಕೆ ಮಾಡಿರುತ್ತಾರೋ ಅವರೆಲ್ಲಾ ಉತ್ತಮ ಗಳಿಕೆ ಪಡೆದಿದ್ದಾರೆ. 2020ರ ಮಾರ್ಚ್‌ನಲ್ಲಿ(ಕೋವಿಡ್ ವೇಳೆ) ಸೆನ್ಸೆಕ್ಸ್ 40,000 ಅಂಶಗಳಿಂದ 23,000 ಅಂಶಗಳಿಗೆ ಕುಸಿತ ಕಂಡಿತ್ತು. ಆದರೆ, ಈಗ 79,000 ಅಂಶಗಳ ಆಸುಪಾಸಿನಲ್ಲಿದೆ.
ಅನಿಶ್ಚಿತತೆ ಮತ್ತು ಅವಕಾಶಗಳ ಮಿಶ್ರಣ:
ಷೇರುಪೇಟೆಯಲ್ಲಿ ಅನಿಶ್ಚಿತತೆ ಎನ್ನುವುದು ಎರಡು ಅಲಗಿನ ಕತ್ತಿ ಇದ್ದಂತೆ. ಏಕೆಂದರೆ ಮಾರುಕಟ್ಟೆಯಲ್ಲಿನ ತ್ವರಿತ ಮತ್ತು ಹರಿತವಾದ ಏರಿಳಿತಗಳು ರಿಸ್ಕ್ ಜೊತೆ ಜೊತೆಗೆ ಅವಕಾಶವನ್ನೂ ತಂದುಕೊಡುತ್ತವೆ.
ದೀರ್ಘಾವಧಿಗೆ ಷೇರು, ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವವರಿಗೆ ಮಾರುಕಟ್ಟೆ ಕುಸಿತ ಅವಕಾಶಗಳನ್ನು ಸೃಷ್ಟಿ ಮಾಡುತ್ತದೆ. ಮಾರುಕಟ್ಟೆ ಇಳಿಕೆಯ ಸಂದರ್ಭದಲ್ಲಿ ಕಡಿಮೆ ಬೆಲೆಗೆ ಉತ್ತಮ ಕಂಪನಿಗಳ ಷೇರು, ಮ್ಯೂಚುವಲ್ ಫಂಡ್‌ಗಳನ್ನು ಕೊಳ್ಳುವ ಅವಕಾಶ ಒದಗಿಬರುತ್ತದೆ. ಆದರೆ, ಮಾರುಕಟ್ಟೆ ಕುಸಿತ ಕಾಣುತ್ತಿದೆ ಎಂದು ಆತಂಕಪಟ್ಟು ಎಲ್ಲ ಹೂಡಿಕೆಗಳನ್ನು ಮಾರಾಟ ಮಾಡಿದರೆ ನಷ್ಟದ ಬಾಬ್ತು ನಿಮ್ಮದಾಗುತ್ತದೆ. ಹಾಗಾಗಿ, ದೀರ್ಘಾವಧಿಗೆ ಹೂಡಿಕೆ ಮಾಡುವಾಗ ಸರಿಯಾಗಿ ಅರಿತು ಶಿಸ್ತುಬದ್ಧವಾಗಿ ಹೂಡಿಕೆ ಮಾಡುವುದು ಬಹಳ ಮುಖ್ಯ.
ಏರಿಳಿತ ನಿಭಾಯಿಸುವುದು ಹೇಗೆ?:
ಯಾವುದೇ ಹೂಡಿಕೆದಾರ ಒಂದೇ ರೀತಿಯ ಹೂಡಿಕೆಯನ್ನು ಗಣನೆಗೆ ತೆಗೆದುಕೊಂಡು ಹೂಡಿಕೆ ಮಾಡಬಾರದು. ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಬೇಕು. ಈಕ್ವಿಟಿ ಮಾರುಕಟ್ಟೆ, ಮ್ಯೂಚುವಲ್ ಫಂಡ್‌ನಂತಹ ಹೆಚ್ಚು ರಿಸ್ಕ್ ಇರುವ ಹೂಡಿಕೆಗಳ ಜೊತೆ ಜೊತೆಗೆ ಫಿಕ್ಸೆಡ್ ಡೆಪಾಸಿಟ್, ಬಾಂಡ್, ಚಿನ್ನ, ಅಂಚೆ ಕಚೇರಿ ಹೂಡಿಕೆಗಳಲ್ಲೂ ಒಂದಿಷ್ಟು ಮೊತ್ತ ತೊಡಗಿಸಬೇಕು. ಆಗ ಮಾರುಕಟ್ಟೆಯ ಕುಸಿತವನ್ನು ನಿಭಾಯಿಸುವುದು ಸುಲಭ.
ಇನ್ನು ಮ್ಯೂಚುವಲ್ ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುವಾಗ ವ್ಯವಸ್ಥಿತ ಹೂಡಿಕೆ ಯೋಜನೆಯನ್ನು (ಎಸ್ಐಪಿ) ಅನುಸರಿಸುವುದು ಮುಖ್ಯ. ಎಸ್ಐಪಿ ಮಾದರಿಯಲ್ಲಿ ಹೂಡಿಕೆ ಮಾಡಿದಾಗ ಮಾರುಕಟ್ಟೆ ಏರಿಳಿತದ ಅನುಕೂಲ ಸಿಗುತ್ತದೆ. ಮಾರುಕಟ್ಟೆ ಕುಸಿದಾಗ ಕಡಿಮೆ ಬೆಲೆಗೆ ಹೂಡಿಕೆಗಳನ್ನು ಕೊಳ್ಳಲು ಸಾಧ್ಯವಾಗಿ ಒಟ್ಟಾರೆ ಹೂಡಿಕೆಗಳ ಖರೀದಿ ಸರಾಸರಿ ತಗ್ಗಿಸಿಕೊಳ್ಳಲು ಸಾಧ್ಯವಾಗುತ್ತದೆ.
ಇನ್ನು ಮಾರುಕಟ್ಟೆ ಕುಸಿತ ಕಂಡಾಗ ನಾನು ಹೂಡಿಕೆ ಮಾಡುತ್ತೇನೆ ಎನ್ನುವ ಆಲೋಚನೆಯನ್ನು ಬಿಡಿ. ಶಿಸ್ತುಬದ್ಧವಾಗಿ ಹೂಡಿಕೆ ಮಾಡುವುದನ್ನು ಮುಂದುವರಿಸಿ. ಮಾರುಕಟ್ಟೆಯ ಕುಸಿತವನ್ನು ನಿಖರವಾಗಿ ಹೇಳಲೂ ಯಾರಿಗೂ ಸಾಧ್ಯವಿಲ್ಲ ಎನ್ನುವುದು ನಿಮಗೆ ತಿಳಿದಿರಲಿ. ಷೇರು ಮಾರುಕಟ್ಟೆ, ಮ್ಯೂಚುವಲ್ ಫಂಡ್ ಅಥವಾ ಇನ್ಯಾವುದೇ ರೀತಿಯ ಹೂಡಿಕೆ ಮಾಡುವ ಮೊದಲು ನಿಮ್ಮ 6 ತಿಂಗಳ ಖರ್ಚಿಗಾಗುವಷ್ಟು ಮೊತ್ತವನ್ನು ಬ್ಯಾಂಕ್‌ನ ಉಳಿತಾಯ ಖಾತೆ, ಫಿಕ್ಸೆಡ್ ಡೆಪಾಸಿಟ್ ಮತ್ತು ಲಿಕ್ವಿಡ್ ಫಂಡ್‌ನಂತಹ ಹೂಡಿಕೆಗಳಲ್ಲಿ ಇಟ್ಟುಕೊಳ್ಳಿ. ತುರ್ತು ಖರ್ಚುಗಳಿಗೆ ಆ ಮೊತ್ತ ನೆರವಿಗೆ ಬರುವುದರಿಂದ ಸಂಕಷ್ಟ ಕಾಲದಲ್ಲಿ ಹೂಡಿಕೆಗಳನ್ನು ಬಿಡಿಸಿಕೊಳ್ಳುವ ಪರಿಸ್ಥಿತಿ ಬರುವುದಿಲ್ಲ.
ಈ ತಪ್ಪು ಮಾಡಬೇಡಿ:
ಮಾರುಕಟ್ಟೆ ಕುಸಿದಾಗ ಹೂಡಿಕೆಗಳು ಇಳಿಕೆ ಕಾಣುವುದು ಸಾಮಾನ್ಯ. ಹಾಗಾಗಿ, ಕುಸಿತದ ವೇಳೆ ಯಾವುದೇ ಕಾರಣಕ್ಕೂ ಭಾವನಾತ್ಮಕ ನಿರ್ಧಾರಕ್ಕೆ ಮುಂದಾಗಿ ಉತ್ತಮ ಹೂಡಿಕೆಗಳನ್ನು ಮಾರಾಟ ಮಾಡಲು ಹೋಗಬೇಡಿ. ಹೀಗೆ ಮಾಡಿದರೆ ದೀರ್ಘಾವಧಿಯ ಗಳಿಕೆಯ ಅವಕಾಶ ಕೈ ತಪ್ಪುತ್ತದೆ. ಮಾರುಕಟ್ಟೆ ಕುಸಿತ ಕಂಡಾಗ ಮ್ಯೂಚುವಲ್ ಫಂಡ್ ಮತ್ತು ಈಕ್ವಿಟಿ ಮಾರುಕಟ್ಟೆಯ ಎಸ್ಐಪಿ ನಿಲ್ಲಿಸಬೇಡಿ. ಎಸ್ಐಪಿ ನಿಲ್ಲಿಸಿದರೆ ದೀರ್ಘಾವಧಿಯಲ್ಲಿ ದೊಡ್ಡ ಮೊತ್ತದ ಗಳಿಕೆ ಸಾಧ್ಯವಾಗುವುದಿಲ್ಲ.
(ಲೇಖಕ: ಚಾರ್ಟರ್ಡ್ ಅಕೌಂಟೆಂಟ್)
ಗಳಿಕೆ ನಡುವೆ ಮಂಕಾದ ಸೂಚ್ಯಂಕಗಳು
ಏಪ್ರಿಲ್ 25ಕ್ಕೆ ಕೊನೆಗೊಂಡ ವಾರದಲ್ಲಿ ಷೇರು ಸೂಚ್ಯಂಕಗಳು ಅಲ್ಪ ಗಳಿಕೆ ದಾಖಲಿಸಿವೆ. 79212 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.84ರಷ್ಟು ಗಳಿಸಿಕೊಂಡಿದೆ.
24039 ಅಂಶಗಳಲ್ಲಿ ವಹಿವಾಟು ಮುಗಿಸಿದ ನಿಫ್ಟಿ ಶೇ 0.79ರಷ್ಟು ಜಿಗಿದಿದೆ. ನಿಫ್ಟಿ ಮಿಡ್‌ಕ್ಯಾಪ್ ಸೂಚ್ಯಂಕ ಶೇ 1.73ರಷ್ಟು ಹೆಚ್ಚಳ ಕಂಡಿದ್ದರೆ ಸ್ಮಾಲ್‌ಕ್ಯಾಪ್ ಸೂಚ್ಯಂಕ ಶೇ 0.83ರಷ್ಟು ಗಳಿಕೆ ದಾಖಲಿಸಿದೆ.
ವಾರದ ಮೊದಲ ಮೂರು ದಿನಗಳಲ್ಲಿ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡುಕೊಂಡವು. ಆದರೆ ನಂತರದ ಎರಡು ದಿನಗಳಲ್ಲಿ ಭಾರತ ಮತ್ತು ಪಾಕಿಸ್ತಾನ ಸಂಘರ್ಷದ ಪರಿಣಾಮ ಸೂಚ್ಯಂಕಗಳು ಕುಸಿತ ದಾಖಲಿಸಿದವು. ಇನ್ನು ಲಾಭಕ್ಕಾಗಿ ಷೇರುಗಳ ಮಾರಾಟ ಪ್ರಕ್ರಿಯೆ ಕೂಡ ಷೇರುಪೇಟೆಯ ಮೇಲೆ ಪರಿಣಾಮ ಬೀರಿದೆ.
ವಾರದ ಅಂದಾಜು ನೋಡಿದಾಗ ವಲಯವಾರು ಪ್ರಗತಿಯಲ್ಲಿ ಮಾಧ್ಯಮ ಶೇ 2.11 ನಿಫ್ಟಿ ಎಫ್‌ಎಂಸಿಜಿ ಶೇ 0.25 ಮತ್ತು ಫೈನಾನ್ಸ್ ಶೇ 0.14ರಷ್ಟು ಕುಸಿದಿವೆ. ಆಟೊ ಶೇ 2.91 ರಿಯಲ್ ಎಸ್ಟೇಟ್ ಶೇ 1.69 ಫಾರ್ಮಾ ಶೇ 1.68 ಲೋಹ ಶೇ 1.1 ನಿಫ್ಟಿ ಬ್ಯಾಂಕ್ ಶೇ 0.69 ಎನರ್ಜಿ ಶೇ 0.47 ಸೇವಾ ವಲಯ ಶೇ 0.48 ಮತ್ತು ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 0.2ರಷ್ಟು ಗಳಿಸಿಕೊಂಡಿವೆ.
ಇಳಿಕೆ–ಗಳಿಕೆ:
ನಿಫ್ಟಿಯಲ್ಲಿ ಅದಾನಿ ಪೋರ್ಟ್ಸ್ ಶೇ 5.5 ಶ್ರೀರಾಮ್ ಫೈನಾನ್ಸ್ ಶೇ 5.2 ಏರ್‌ಟೆಲ್ ಶೇ 3.97 ಅದಾನಿ ಎಂಟರ್ ಪ್ರೈಸಸ್ ಶೇ 2.92 ಎಚ್‌ಡಿಎಫ್‌ಸಿ ಲೈಫ್ ಶೇ 2.51 ಐಷರ್ ಮೋಟರ್ಸ್ ಶೇ 2.16 ಎನ್‌ಟಿಪಿಸಿ ಶೇ 2.14 ಎಕ್ಸಿಸ್ ಬ್ಯಾಂಕ್ ಶೇ 2.13 ಅಪೋಲೊ ಹಾಸ್ಪಿಟಲ್ಸ್ ಶೇ 1.86 ಎಚ್‌ಯುಎಲ್ ಶೇ 1.81 ಏಷ್ಯನ್ ಪೇಂಟ್ಸ್ ಶೇ 1.6 ಮತ್ತು ಕೋಲ್ ಇಂಡಿಯಾ ಶೇ 1.52ರಷ್ಟು ಕುಸಿದಿವೆ.
ಟೆಕ್ ಮಹೀಂದ್ರ ಶೇ 11.92 ಎಚ್‌ಸಿಎಲ್ ಟೆಕ್ನಾಲಜೀಸ್ ಶೇ 9.82 ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 6.82 ಎಸ್‌ಬಿಐ ಲೈಫ್ ಇನ್ಶೂರೆನ್ಸ್ ಶೇ 5.65 ಟಾಟಾ ಮೋಟರ್ಸ್ ಶೇ 5.37 ಟಿಸಿಎಸ್ ಶೇ 4.5 ಇನ್ಫೊಸಿಸ್ ಶೇ 4.22 ಇಂಡಸ್ ಇಂಡ್ ಬ್ಯಾಂಕ್ ಶೇ 3.51 ಹೀರೊ ಮೋಟೊಕಾರ್ಪ್ ಶೇ 3.05 ಟಾಟಾ ಕನ್ಸ್ಯೂಮರ್ ಶೇ 2.89 ಜಿಯೊ ಫೈನಾನ್ಶಿಯಲ್ ಶೇ 2.66 ಅಲ್ಟ್ರಾಟೆಕ್ ಸಿಮೆಂಟ್ ಶೇ 2.64ರಷ್ಟು ಗಳಿಸಿಕೊಂಡಿವೆ.
ಮುನ್ನೋಟ: ಈ ವಾರ ಐಆರ್‌ಎಫ್‌ಸಿ ಅಲ್ಟ್ರಾಟೆಕ್ ಸಿಮೆಂಟ್ ಟಿವಿಎಸ್ ಮೋಟಾರ್ ಕಂಪನಿ ಅದಾನಿ ಗ್ರೀನ್ ಎನರ್ಜಿ ಐಡಿಬಿಐ ಬ್ಯಾಂಕ್ ಬಜಾಜ್ ಫೈನಾನ್ಸ್ ಬಜಾಜ್ ಫಿನ್‌ಸರ್ವ್ ಇಂಡಿಯನ್ ಆಯಿಲ್ ಎಸ್‌ಬಿಐ ಬ್ಯಾಂಕ್ ಕೋಟಕ್ ಮಹೀಂದ್ರ ಬ್ಯಾಂಕ್ ಸಿಡಿಎಸ್ಎಲ್ ಸಿಟಿ ಯೂನಿಯನ್ ಬ್ಯಾಂಕ್ ಅವೆನ್ಯೂ ಸೂಪರ್ ಮಾರ್ಕೆಟ್ಸ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಭಾರತ–ಪಾಕಿಸ್ತಾನ ನಡುವಿನ ಸಂಘರ್ಷ ಜಾಗತಿಕ ವಿದ್ಯಮಾನಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.