
ಹಣ
ಹಣ
ಸಾಕಷ್ಟು ಆದಾಯವಿಲ್ಲದ ಕಾರಣದಿಂದ ಹಣಕಾಸಿನ ಒತ್ತಡ ಉಂಟಾಗುತ್ತದೆ ಎಂದು ಬಹುತೇಕರು ಭಾವಿಸುತ್ತಾರೆ. ಆದರೆ ಅದು ಸತ್ಯವಾಗಿದ್ದರೆ ಹೆಚ್ಚು ಸಂಬಳ ಪಡೆಯುವ ಐ.ಟಿ ಉದ್ಯೋಗಿಗಳು, ವೈದ್ಯರು, ಉದ್ಯಮಗಳ ಮಾಲೀಕರು ದುಡ್ಡಿನ ಒತ್ತಡಕ್ಕೆ ಒಳಗಾಗುತ್ತಿರಲೇ ಇಲ್ಲ ಅಲ್ಲವೇ? ಭಾರತದಲ್ಲಿ ವಿವಿಧ ವೇತನ ವರ್ಗಗಳ ಜನರಲ್ಲಿ ಹಣಕಾಸಿನ ಒತ್ತಡ ವ್ಯಾಪಕವಾಗಿದೆ. ಈಗಷ್ಟೇ ಕಾಲೇಜಿನಿಂದ ಹೊರಬಂದು ಕೆಲಸಕ್ಕೆ ಸೇರಿ ₹25 ಸಾವಿರ ಸಂಬಳ ಪಡೆಯುವವರಿಂದ ಆರಂಭಿಸಿ ತಿಂಗಳಿಗೆ ₹3 ಲಕ್ಷದಿಂದ ₹4 ಲಕ್ಷ ಸಂಬಳ ಪಡೆಯುವವರಿಗೂ ದುಡ್ಡಿನ ತಲೆಬಿಸಿ ಇದ್ದೇ ಇದೆ. ಬಹುತೇಕ ಸಂದರ್ಭಗಳಲ್ಲಿ ಸರಿಯಾದ ಹಣಕಾಸು ಯೋಜನೆ ಇಲ್ಲದ ಕಾರಣ ಜನರು ದುಡ್ಡಿನ ಒತ್ತಡ ಅನುಭವಿಸುತ್ತಾರೆಯೇ ಹೊರತು ಆದಾಯದ ಕೊರತೆಯಿಂದ ಅಲ್ಲ.
ಒತ್ತಡ ಏಕೆ ಉಂಟಾಗುತ್ತದೆ?
ಮಾನಸಿಕ ಕಾರಣಗಳು: ಮನುಷ್ಯನ ಮನಸ್ಸು ಅನಿಶ್ಚಿತತೆಗೆ ತೀವ್ರವಾಗಿ ಪ್ರತಿಕ್ರಿಯಿಸುತ್ತದೆ. ಬರುವ ಆದಾಯ, ವೆಚ್ಚಗಳು, ಹೂಡಿಕೆಗಳು, ಭವಿಷ್ಯದ ಗುರಿಗಳ ಬಗ್ಗೆ ಸ್ಪಷ್ಟತೆ ಇಲ್ಲದಿದ್ದಾಗ ಮಿದುಳು ಅದನ್ನು ಅಪಾಯದ ಸ್ಥಿತಿ ಎಂದು ಭಾವಿಸುತ್ತದೆ. ವಾಸ್ತವದಲ್ಲಿ ತಕ್ಷಣದ ಹಣಕಾಸಿನ ತೊಡಕುಗಳು ಇಲ್ಲದಿದ್ದರೂ ಮನಸ್ಸು ಒತ್ತಡಕ್ಕೆ ಒಳಗಾಗುತ್ತದೆ.
ಮನೋವಿಜ್ಞಾನದ ಪ್ರಕಾರ ಹಣಕಾಸು ನಿರ್ವಹಣೆಗೆ ಸಂಬಂಧಿಸಿದಂತೆ ಮೂರು ರೀತಿಯ ಒತ್ತಡಗಳಿಗೆ ಜನರು ಒಳಗಾಗುತ್ತಾರೆ;
1. ಸ್ಪಷ್ಟತೆಯ ಭಯ: ಹಣಕಾಸು ನಿರ್ವಹಣೆ ಮಾಡುವಾಗ ಯಾವುದರ ಬಗ್ಗೆ ಸ್ಪಷ್ಟತೆ ಇರುವುದಿಲ್ಲವೋ ಅದರ ಬಗ್ಗೆ ಜನರು ಹೆಚ್ಚು ಆತಂಕಪಡುತ್ತಾರೆ
2. ನಷ್ಟದ ಭಯ: ಹೂಡಿಕೆ ಮಾಡುವಾಗ ‘ಏನಾದರೂ ತಪ್ಪಾದರೆ?’ ಎಂಬ ಭಯ ಮನಸ್ಸಿನಲ್ಲಿ ಆಳವಾಗಿ ಬೇರೂರಿ ಆಂತಕ ಹೆಚ್ಚಿಸುತ್ತದೆ
3. ವಿಳಂಬ ಮತ್ತು ಮಾನಸಿಕ ಒತ್ತಡ: ಹಣಕಾಸಿನ ನಿರ್ಣಯಗಳು ಜಟಿಲವಾಗಿದ್ದರೆ, ಜನರು ಅವನ್ನು ಮುಂದೂಡುತ್ತಾರೆ. ಇದರ ಪರಿಣಾಮವಾಗಿ ಅನಿಶ್ಚಿತತೆ ಹೆಚ್ಚುತ್ತದೆ ಮತ್ತು ಹಣಕಾಸಿನ ಒತ್ತಡ ಜಾಸ್ತಿಯಾಗುತ್ತದೆ. ಅಂದರೆ, ಪೂರ್ವ ಯೋಜಿತವಲ್ಲದ ಹಣಕಾಸು ನಿರ್ವಹಣೆ ಮಾನಸಿಕ ಒತ್ತಡವನ್ನು ಉಂಟು ಮಾಡುತ್ತದೆ
ಒಂದೇ ಆದಾಯ, ಆದರೆ ಒತ್ತಡ ಬೇರೆ: ಒಂದೇ ರೀತಿಯ ಸಂಬಳ ಪಡೆಯುವ ಇಬ್ಬರು ವ್ಯಕ್ತಿಗಳು ಒಂದೊಂದು ರೀತಿಯ ಒತ್ತಡ ಎದುರಿಸುತ್ತಿರಬಹುದು. ಬಂದ ಆದಾಯದಲ್ಲಿ ಸರಿಯಾದ ಯೋಜನೆಯೊಂದಿಗೆ ಖರ್ಚು-ವೆಚ್ಚಗಳನ್ನು ಯಾರು ನಿರ್ವಹಿಸುವರೋ ಅವರು ಕಡಿಮೆ ಒತ್ತಡದಲ್ಲಿರುತ್ತಾರೆ ಮತ್ತು ಯಾರು ದುಡ್ಡಿನ ನಿರ್ವಹಣೆಯಲ್ಲಿ ಶಿಸ್ತು ಪಾಲಿಸುವುದಿಲ್ಲವೋ ಅವರು ಮೇಲಿಂದ ಮೇಲೆ ಒತ್ತಡಕ್ಕೆ ಒಳಗಾಗುತ್ತಾರೆ.
ಉದಾಹರಣೆಗೆ ಬೆಂಗಳೂರಿನಲ್ಲಿ ರಮೇಶ್ ಮತ್ತು ರವಿ (ಕಾಲ್ಪನಿಕ ವ್ಯಕ್ತಿಗಳು) ಒಂದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಮಾಸಿಕ ಸಂಬಳ ₹1 ಲಕ್ಷ ಎಂದು ಭಾವಿಸೋಣ. ರಮೇಶ್ ಮನೆ ಖರೀದಿಗಾಗಿ ಗೃಹ ಸಾಲ ಮಾಡಿದ್ದಾರೆ. ತಿಂಗಳ ಖರ್ಚುಗಳ ಲೆಕ್ಕ ಮಾಡುತ್ತಾರೆ, ಮಕ್ಕಳ ಶಿಕ್ಷಣಕ್ಕಾಗಿ ಮತ್ತು ನಿವೃತ್ತಿ ಜೀವನಕ್ಕಾಗಿ ಹೂಡಿಕೆ ಮಾಡುತ್ತಿದ್ದಾರೆ, ಆರೋಗ್ಯ ಮತ್ತು ಜೀವ ವಿಮೆ ಮಾಡಿಸಿದ್ದಾರೆ ಮತ್ತು 6 ತಿಂಗಳ ತುರ್ತುನಿಧಿ ಕಾಪಾಡಿಕೊಂಡಿದ್ದಾರೆ.
ಆದರೆ, ರವಿ ₹1 ಲಕ್ಷ ಸಂಬಳ ಇದ್ದರೂ ಸರಿಯಾಗಿ ಹಣಕಾಸು ನಿರ್ವಹಣೆ ಮಾಡುತ್ತಿಲ್ಲ. ಪ್ರತಿ ತಿಂಗಳ ಖರ್ಚು – ವೆಚ್ಚಗಳನ್ನು ಅವರು ಪರಿಶೀಲಿಸುತ್ತಿಲ್ಲ, ಸ್ನೇಹಿತರು ಹೇಳುವ ಎಸ್ಐಪಿಗಳ ಮೇಲೆ ಅವರು ಹೂಡಿಕೆ ಮಾಡುತ್ತಾರೆ, ನಿವೃತ್ತಿಗಾಗಿ ಮತ್ತು ಭವಿಷ್ಯದ ಗುರಿಗಳಿಗಾಗಿ ಅವರು ಹೂಡಿಕೆ ಮಾಡುತ್ತಿಲ್ಲ, ತುರ್ತು ನಿಧಿಯೂ ಇಲ್ಲ, ಒಳ್ಳೆಯ ಜೀವ ವಿಮೆ ಕೂಡ ಪಡೆದಿಲ್ಲ.
ಒಂದೇ ಕಂಪನಿಯಲ್ಲಿ ಒಂದೇ ಬಗೆಯ ಸಂಬಳ ಪಡೆದರೂ ಹಣಕಾಸಿನ ನಿರ್ವಹಣೆಯ ದಿಕ್ಕು ಸರಿ ಇಲ್ಲದಿದ್ದಾಗ ಹಣಕಾಸಿನ ಒತ್ತಡ ಹೇಗೆ ಭಿನ್ನವಾಗುತ್ತದೆ ಎನ್ನುವುದಕ್ಕೆ ಇದು ನಿದರ್ಶನ.
ಕೊರತೆಯ ಸೂಚನೆಗಳು: ಹಣಕಾಸಿನ ಒತ್ತಡ ಅನುಭವಿಸುವ ಬಹುತೇಕರಿಗೆ ಆದಾಯದ ಕೊರತೆ ಇರುವುದಿಲ್ಲ. ಬದಲಿಗೆ, ಅವರಿಗೆ ಸ್ಪಷ್ಟತೆಯ ಕೊರತೆ ಇರುತ್ತದೆ. ಮಾಸಿಕ ಉಳಿತಾಯದ ಮೇಲೆ ಹೆಚ್ಚಿನ ಗಮನ ನೀಡದೆ ಇರುವುದು, ಖರ್ಚುಗಳನ್ನು ದಾಖಲಿಸದೆ ಮನಸ್ಸಿನಲ್ಲೇ ಅಂದಾಜು ಮಾಡುವುದು, ಹೂಡಿಕೆಗಳನ್ನು ಮಾರುಕಟ್ಟೆ ಕುಸಿತದ ಸಮಯದಲ್ಲಿ ಮಾತ್ರ ಪರಿಶೀಲಿಸುವುದು, ವಿಮಾ ಪಾಲಿಸಿಗಳನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು, ಸಾಲದ ಮಾಸಿಕ ಕಂತುಗಳನ್ನು ಸರಿಯಾದ ಸಮಯಕ್ಕೆ ಪಾವತಿಸದಿರುವುದು, ನಿರ್ದಿಷ್ಟ ಗುರಿ ಇಲ್ಲದೆ ಮ್ಯೂಚುವಲ್ ಫಂಡ್ ಎಸ್ಐಪಿ ಆರಂಭಿಸುವುದು ಮತ್ತು ನಿವೃತ್ತಿ ಜೀವನಕ್ಕಾಗಿ ಹೂಡಿಕೆ ವಿಳಂಬ ಮಾಡುವುದನ್ನು ಹಣಕಾಸು ನಿರ್ವಹಣೆಯಲ್ಲಿನ ಕೊರತೆಯ ಸೂಚನೆ ಎಂದು ಹೇಳಬಹುದು.
ಇಲ್ಲಿದೆ ದಾರಿ: ಹಣಕಾಸಿನ ಸರಿಯಾದ ನಿರ್ವಹಣೆಯು ಒತ್ತಡವನ್ನು ಕಡಿಮೆ ಮಾಡುವ ಜೊತೆಗೆ ಜೀವನ ಸುಗಮಗೊಳಿಸುತ್ತದೆ. ಉಳಿತಾಯಕ್ಕೆ ಸರಿಯಾದ ಯೋಜನೆ, ಸ್ವಯಂಚಾಲಿತ ಹೂಡಿಕೆ ವ್ಯವಸ್ಥೆ, 6 ತಿಂಗಳ ಖರ್ಚಿಗೆ ಬೇಕಾಗುವ ತುರ್ತು ನಿಧಿ, ಸರಿಯಾದ ಆರೋಗ್ಯ ಮತ್ತು ಜೀವ ವಿಮೆ, ಗುರಿ ಆಧಾರಿತ ಹೂಡಿಕೆ ಆಯ್ಕೆ, ಲೆಕ್ಕಾಚಾರ ಮಾಡಿ ಸಾಲ ಮಾಡುವುದು ಮತ್ತು ಕಾಲಕಾಲಕ್ಕೆ ಹಣಕಾಸಿನ ಪರಿಸ್ಥಿತಿ ಪರಾಮರ್ಶಿಸುವುದನ್ನು ಮಾಡಿದಾಗ ಹಣಕಾಸಿನ ಬಗ್ಗೆ ಇರುವ ಅನಿಶ್ಚಿತತೆ ಕಡಿಮೆಯಾಗಿ ಕುಟುಂಬದ ಆರ್ಥಿಕ ಪರಿಸ್ಥಿತಿ ಹತೋಟಿಗೆ ಬರುತ್ತದೆ.
ಆದಾಯ ಹೆಚ್ಚಳದಿಂದ ತಗ್ಗದು...: ಆದಾಯ ಹೆಚ್ಚಳವಾದ ಮಾತ್ರಕ್ಕೆ ಹಣಕಾಸಿನ ಒತ್ತಡಗಳು ಕಡಿಮೆಯಾಗುತ್ತವೆ ಎಂದು ಭಾವಿಸಲಾಗದು. ಆದಾಯ ಹೆಚ್ಚಳಕ್ಕೆ ತಕ್ಕಂತೆ ಖರ್ಚುಗಳು ಹೆಚ್ಚುತ್ತವೆ, ನಮ್ಮ ಹಣಕಾಸಿನ ಗುರಿಗಳು ದೊಡ್ಡದಾಗುತ್ತವೆ, ಹೆಚ್ಚು ರಿಸ್ಕ್ ಇರುವ ಹೂಡಿಕೆಗಳನ್ನು ನಾವು ಪರಿಗಣಿಸಲು ಶುರು ಮಾಡುತ್ತೇವೆ, ಹೂಡಿಕೆಗಳಲ್ಲಿ ವೈವಿಧ್ಯ ಕಾಪಾಡಿಕೊಳ್ಳಲು ಬೇರೆ ಬೇರೆ ಕಡೆ ಹೂಡಿಕೆ ಮಾಡುತ್ತೇವೆ, ಜವಾಬ್ದಾರಿಗಳು ಹೆಚ್ಚಳವಾಗಿ ಆಸ್ತಿ ಖರೀದಿಗಾಗಿ ಸಾಲ ಪಡೆದುಕೊಳ್ಳುವ ಸಂದರ್ಭ ಬರುತ್ತದೆ. ಇಷ್ಟೆಲ್ಲಾ ಬದಲಾವಣೆಗಳನ್ನು ನಾವು ಆರ್ಥಿಕವಾಗಿ ಕಾಣುವಾಗ ಒತ್ತಡಕ್ಕೆ ಒಳಗಾಗದೆ ಹಣಕಾಸು ನಿರ್ವಹಣೆ ಮಾಡಬೇಕಾದರೆ ಅದಕ್ಕೊಂದು ಸರಿಯಾದ ಯೋಜನೆ ಬೇಕೇಬೇಕು.
ಹಣಕಾಸು ನಿರ್ವಹಣೆಗೆ 7 ಹಂತದ ಪ್ರಾಯೋಗಿಕ ಚೌಕಟ್ಟು
1. ನಿಮ್ಮ ಮಾಸಿಕ ಆದಾಯದ ಎಲ್ಲ ಮೂಲಗಳನ್ನು ಕೇಂದ್ರೀಕರಿಸಿ ಲೆಕ್ಕಾಚಾರ ಮಾಡಿ
2. ನಿಮ್ಮ ಪ್ರತಿ ಖರ್ಚುಗಳನ್ನು ನಿಖರವಾಗಿ ಲೆಕ್ಕ ಮಾಡಿ ಅಂದಾಜಿನ ಲೆಕ್ಕಾಚಾರ ಬಿಡಿ
3. ನಿಮ್ಮ ಉಳಿತಾಯ ಮತ್ತು ಹೂಡಿಕೆಗಳನ್ನು ಸ್ವಯಂ ಚಾಲಿತ ವ್ಯವಸ್ಥೆಗೆ ತನ್ನಿ
4. ಅನಿಶ್ಚಿತ ಸಂದರ್ಭಗಳಿಗೆ ಕನಿಷ್ಠ 6 ತಿಂಗಳ ಖರ್ಚಿನ ಮೊತ್ತ ತುರ್ತು ನಿಧಿಯಲ್ಲಿಟ್ಟುಕೊಳ್ಳಿ
5. ಆರೋಗ್ಯ ಮತ್ತು ಜೀವ ವಿಮೆಗಳಿಗೆ ಆದ್ಯತೆ ಕೊಡುವುದನ್ನು ಮರೆಯದಿರಿ
6. ಮಕ್ಕಳ ವಿದ್ಯಾಭ್ಯಾಸಕ್ಕೆ ಮನೆ ಖರೀದಿಗೆ ನಿವೃತ್ತಿಗೆ ಹೀಗೆ ನಿರ್ದಿಷ್ಟ ಗುರಿಯೊಂದಿಗೆ ಹೂಡಿಕೆ ಮಾಡಿ
7. ಪ್ರತಿ ತಿಂಗಳಿಗೊಮ್ಮೆ ನಿಮ್ಮ ಹೂಡಿಕೆಗಳನ್ನು ಪರಾಮರ್ಶಿಸಿ ನೋಡಿ ಏನಾದರೂ ದಿಕ್ಕುತಪ್ಪುತ್ತಿದ್ದರೆ ಸರಿಪಡಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.