ADVERTISEMENT

ಹಣಕಾಸು ಸಾಕ್ಷರತೆ | ಸುಕನ್ಯಾ ಸಮೃದ್ಧಿ: ಸಪ್ತ ಸಂಗತಿಗಳು

ರಾಜೇಶ್ ಕುಮಾರ್ ಟಿ. ಆರ್.
Published 28 ಮೇ 2023, 21:12 IST
Last Updated 28 ಮೇ 2023, 21:12 IST
ಸುಕನ್ಯಾ ಸಮೃದ್ಧಿ ಯೋಜನೆ ಲಾಂಛನ
ಸುಕನ್ಯಾ ಸಮೃದ್ಧಿ ಯೋಜನೆ ಲಾಂಛನ   

ಹೆಣ್ಣು ಮಕ್ಕಳ ಆರ್ಥಿಕ ಹಿತಕ್ಕಾಗಿ ಕೇಂದ್ರ ಸರ್ಕಾರ ರೂಪಿಸಿರುವ ಸುಕನ್ಯಾ ಸಮೃದ್ಧಿ ಯೋಜನೆಯ ಪ್ರಯೋಜನವನ್ನು ಲಕ್ಷಾಂತರ ಮಂದಿ ಪೋಷಕರು ಪಡೆದುಕೊಂಡಿದ್ದಾರೆ. ಅಂಚೆ ಕಚೇರಿ ಮತ್ತು ಪ್ರಮುಖ ಬ್ಯಾಂಕುಗಳ ಮೂಲಕ ಜಾರಿಗೆ ಬಂದಿರುವ ಈ ಯೋಜನೆ ಜನಪ್ರಿಯವಾಗಿದ್ದರೂ ಕೆಲವು ಪ್ರಮುಖ ಅಂಶಗಳು, ನಿಯಮಗಳು ಹಲವರಿಗೆ ತಿಳಿದಿಲ್ಲ. ಅಂತಹ ಕೆಲವು ವೈಶಿಷ್ಟ್ಯಗಳ ಬಗ್ಗೆ ಗಮನ ಹರಿಸೋಣ.

1) ಹೆಚ್ಚು ಲಾಭ ಸಿಗಬೇಕಾದರೆ...: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ತಿಂಗಳ 5ನೇ ತಾರೀಕಿಗಿಂತ ಮೊದಲು ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗುತ್ತದೆ. ಪ್ರತಿ ತಿಂಗಳ ಒಂದನೇ ತಾರೀಕಿನ ನಂತರ ಹಾಗೂ 5ನೇ ತಾರೀಕಿನ ಒಳಗೆ ಹಣ ಹೂಡಿಕೆ ಮಾಡಿದರೆ ಆ ತಿಂಗಳಿನ ಬಡ್ಡಿ ಲೆಕ್ಕಹಾಕುವಾಗ ಈ ಮೊತ್ತವನ್ನು ಪರಿಗಣಿಸಲಾಗುತ್ತದೆ. ಐದನೇ ತಾರೀಕಿನ ಬಳಿಕ ಹೂಡಿಕೆ ಮಾಡುವ ಮೊತ್ತವನ್ನು ಮುಂದಿನ ತಿಂಗಳಿನಲ್ಲಿ ಬಡ್ಡಿ ಲೆಕ್ಕಾಚಾರ ಮಾಡುವಾಗ ಪರಿಗಣಿಸಲಾಗುತ್ತದೆ. ಹಾಗಾಗಿ ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಹೂಡಿಕೆಯನ್ನು ಸಾಧ್ಯವಾದಷ್ಟುಮಟ್ಟಿಗೆ ತಿಂಗಳ 5ನೇ ತಾರೀಕಿನ ಮೊದಲು ಮಾಡಿ.

2. ಎರಡಕ್ಕಿಂತ ಹೆಚ್ಚು ಖಾತೆ ತೆರೆಯಲು ಅವಕಾಶ: ನಿಯಮದ ಪ್ರಕಾರ ಸುಕನ್ಯಾ ಸಮೃದ್ಧಿ ಯೋಜನೆಯ ಅಡಿಯಲ್ಲಿ ಗರಿಷ್ಠ ಎರಡು ಖಾತೆ ಆರಂಭಿಸಬಹುದು. ಆದರೆ ನಿಮಗೆ ಅವಳಿ ಅಥವಾ ತ್ರಿವಳಿ ಮಕ್ಕಳಿದ್ದರೆ ಎರಡಕ್ಕಿಂತ ಹೆಚ್ಚಿನ ಖಾತೆಗಳನ್ನು ತೆರೆಯಲು ಕಾನೂನಿನಲ್ಲಿ ಅವಕಾಶ ಒದಗಿಸಲಾಗಿದೆ.

ADVERTISEMENT

3. ಹೂಡಿಕೆ ಅವಧಿಗೆ ಮಿತಿ ಇದೆ: ಸುಕನ್ಯಾ ಸಮೃದ್ಧಿ ಯೋಜನೆ ಅಡಿಯಲ್ಲಿ ಗರಿಷ್ಠ 15 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಲು ಅವಕಾಶವಿದೆ. ಖಾತೆಯಲ್ಲಿ ಹೂಡಿಕೆ ಆರಂಭಿಸಿ 15 ವರ್ಷ ಪೂರೈಸಿದ ಬಳಿಕ ತಂದೆ-ತಾಯಿ ಅಥವಾ ಪೋಷಕರು ಯಾವುದೇ ಕಾರಣಕ್ಕೂ ಹಣ ತೊಡಗಿಸಲು ಅವಕಾಶ ಸಿಗುವುದಿಲ್ಲ.

4. ಎರಡು ಹಂತಗಳ ಮೆಚ್ಯುರಿಟಿ: ಸುಕನ್ಯಾ ಸಮೃದ್ಧಿ ಖಾತೆಯಲ್ಲಿ ಹೂಡಿಕೆ ಮಾಡಿರುವ ಮೊತ್ತವನ್ನು ಹಿಂಪಡೆಯಬೇಕಾದರೆ ಖಾತೆ ಹೊಂದಿರುವ ಹೆಣ್ಣು ಮಗಳಿಗೆ 21 ವರ್ಷ ತುಂಬಿರಬೇಕು. ಒಂದೊಮ್ಮೆ ಹೆಣ್ಣು ಮಗಳು 18 ತುಂಬಿದ ಕೂಡಲೇ ವಿವಾಹವಾಗುವಂತಹ ಸಂದರ್ಭವಿದ್ದರೆ ಆಗಲೂ ಹಣ ಹಿಂದಕ್ಕೆ ಪಡೆಯಲು ಅವಕಾಶವಿದೆ.

5. ಹಣ ಭಾಗಶಃ ಹಿಂಪಡೆಯಲು ಅವಕಾಶ: ಹೆಣ್ಣು ಮಗುವಿಗೆ 18 ವರ್ಷ ತುಂಬಿದಾಗ ಸುಕನ್ಯಾ ಸಮೃದ್ಧಿ ಖಾತೆಯಲ್ಲಿನ ಹೂಡಿಕೆಯ ಶೇ 50ರಷ್ಟು ಮೊತ್ತ ಹಿಂಪಡೆಯಲು ಅವಕಾಶವಿದೆ. ಹೆಣ್ಣು ಮಗು 10ನೇ ತರಗತಿ ಪಾಸಾದ ಬಳಿಕವೂ ಶೇ 50ರಷ್ಟು ಹಣ ತೆಗೆದುಕೊಳ್ಳುವ ಅನುಕೂಲ ಕಲ್ಪಿಸಲಾಗಿದೆ.

6. ಸುಕನ್ಯಾ ಸಮೃದ್ಧಿ ಖಾತೆ ಸ್ಥಗಿತಗೊಳ್ಳಬಹುದು: ಸುಕನ್ಯಾ ಸಮೃದ್ಧಿ ಖಾತೆ ಹೊಂದಿರುವವರು ಪ್ರತಿ ಹಣಕಾಸು ವರ್ಷದಲ್ಲೂ ಹೂಡಿಕೆ ಮಾಡಬೇಕು. ಹೂಡಿಕೆ ಮಾಡದಿದ್ದರೆ ಅದು ಚಾಲ್ತಿಯಲ್ಲಿ ಇಲ್ಲದ ಖಾತೆಯಾಗಿ ಮಾರ್ಪಾಡಾಗುತ್ತದೆ. 15 ವರ್ಷಗಳ ಒಳಗೆ ಖಾತೆ ಮಧ್ಯಂತರ ಸ್ಥಗಿತಗೊಂಡರೆ ಅದನ್ನು ಸರಿಪಡಿಸಿಕೊಳ್ಳಲು ಸಾಧ್ಯವಿದೆ.

ಒಂದು ವರ್ಷ ನಿಮ್ಮ ಖಾತೆ ಚಾಲ್ತಿಯಲ್ಲಿ ಇರದಿದ್ದರೆ ₹50ರಂತೆ ದಂಡ ಪಾವತಿಸಿ ಖಾತೆ ಚಾಲ್ತಿಗೆ ತಂದುಕೊಳ್ಳಬಹುದು.

7. ಪ್ರತಿ 3 ತಿಂಗಳಿಗೊಮ್ಮೆ ಬಡ್ಡಿ ದರ ಬದಲು: ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಬಡ್ಡಿ ದರ ಬದಲಾಗುತ್ತದೆ. 2015ರಲ್ಲಿ ಸುಕನ್ಯಾ ಸಮೃದ್ಧಿ ಯೋಜನೆಯ ಬಡ್ಡಿ ದರ ಶೇ 9.2ರಷ್ಟಿತ್ತು. ಈಗ ಪ್ರಸ್ತುತ ಬಡ್ಡಿ ದರ ಶೇ 7.6ರಷ್ಟಿದೆ. ಬಡ್ಡಿ ದರ ಎಷ್ಟು ಸಿಗುತ್ತದೆ ಎನ್ನುವುದರ ಆಧಾರದಲ್ಲಿ ನಿಮ್ಮ ಲಾಭಾಂಶದ ಅಂತಿಮ ಮೊತ್ತ ನಿರ್ಧಾರವಾಗುತ್ತದೆ.

5 ತಿಂಗಳ ಗರಿಷ್ಠ ಮಟ್ಟಕ್ಕೆ ಷೇರುಪೇಟೆ
ಮೇ 26ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಉತ್ತಮ ಗಳಿಕೆ ದಾಖಲಿಸಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಐದು ತಿಂಗಳ ಗರಿಷ್ಠ ಮಟ್ಟ ತಲುಪಿವೆ. 62,501 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸಕ್ಸ್ ವಾರದ ಅವಧಿಯಲ್ಲಿ ಶೇ 1.25ರಷ್ಟು ಗಳಿಸಿಕೊಂಡಿದೆ. 18,499 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 1.62ರಷ್ಟು ಹೆಚ್ಚಳವಾಗಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ಕಂಡುಬಂದರೂ ವಾಡಿಕೆಯ ಮುಂಗಾರು ನಿರೀಕ್ಷೆ, ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಉತ್ತಮ ಗಳಿಕೆ, ಸಾಂಸ್ಥಿಕ ಹೂಡಿಕೆದಾರರಿಂದ ಸಿಕ್ಕ ಬಲ ಸೇರಿದಂತೆ ಇನ್ನಿತರ ಕೆಲವು ಅಂಶಗಳು ಸೂಚ್ಯಂಕಗಳ ಚೇತರಿಕೆಗೆ ದಾರಿ ಮಾಡಿಕೊಟ್ಟಿವೆ. ವಲಯವಾರು ನೋಡಿದಾಗ ಎಲ್ಲ ಸೂಚ್ಯಂಕಗಳು ಸಕಾರಾತ್ಮಕವಾಗಿ ಕಂಡುಬಂದಿವೆ. ನಿಫ್ಟಿ ಲೋಹ ಸೂಚ್ಯಂಕ ಶೇ 5.6ರಷ್ಟು, ಫಾರ್ಮಾ ಸೂಚ್ಯಂಕ ಶೇ 4ರಷ್ಟು, ಮಾಧ್ಯಮ ಸೂಚ್ಯಂಕ ಶೇ 3.8ರಷ್ಟು, ಆರೋಗ್ಯ ವಲಯದ ಸೂಚ್ಯಂಕ ಶೇ 3.8ರಷ್ಟು ಮತ್ತು ನಿಫ್ಟಿ ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 3.7ರಷ್ಟು ಹೆಚ್ಚಳ ದಾಖಲಿಸಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ₹3,230.49 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹3,482.21 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ. ಬಿಎಸ್ಇ ಲಾರ್ಜ್ ಕ್ಯಾಪ್‌ನಲ್ಲಿ ಅದಾನಿ ಎಂಟರ್‌ಪ್ರೈಸಸ್, ಡಿವೀಸ್ ಲ್ಯಾಬೊರೇಟರಿಸ್, ಅದಾನಿ ವಿಲ್ಮಾರ್ ಮತ್ತು ಅದಾನಿ ಟೋಟಲ್ ಗ್ಯಾಸ್ ಶೇ 10ರಿಂದ ಶೇ 30ರಷ್ಟು ಗಳಿಸಿಕೊಂಡಿವೆ. ಬಿಎಸ್ಇ ಮಿಡ್ ಕ್ಯಾಪ್‌ನಲ್ಲಿ ಬಾಲಕೃಷ್ಣ ಇಂಡಸ್ಟ್ರೀಸ್, ಸಿಜಿ ಪವರ್ ಆ್ಯಂಡ್ ಇಂಡಸ್ಟ್ರಿಯಲ್ ಸಲ್ಯೂಷನ್ಸ್, ಬಜಾಜ್ ಹೋಲ್ಡಿಂಗ್ಸ್ ಆ್ಯಂಡ್ ಇನ್ವೆಸ್ಟ್‌ಮೆಂಟ್, ಅದಾನಿ ಪವರ್, ಲಾರಸ್ ಲ್ಯಾಬ್ಸ್, ಕಂಟೇನರ್ ಕಾರ್ಪೊರೇಷನ್ ಆಫ್ ಇಂಡಿಯಾ ಮತ್ತು ಮುತ್ತೂಟ್ ಫೈನಾನ್ಸ್ ಜಿಗಿದಿವೆ. ಗ್ಲ್ಯಾಂಡ್ ಫಾರ್ಮಾ, ಪೇಜ್ ಇಂಡಸ್ಟ್ರೀಸ್ ಕ್ರಮವಾಗಿ ಶೇ 13 ಮತ್ತು ಶೇ 10ರಷ್ಟು ಕುಸಿದಿವೆ. ಬಿಎಸ್ಇ ಸ್ಮಾಲ್ ಕ್ಯಾಪ್‌ನಲ್ಲಿ ನ್ಯೂಕ್ಲಿಯಸ್ ಸಾಫ್ಟ್‌ವೇರ್ ಎಕ್ಸ್‌ಪೋರ್ಟ್ಸ್, ಶಿಂಡ್ಲರ್ ಇಲೆಕ್ಟ್ರಿಕ್ ಇನ್ಫ್ರಾಸ್ಟ್ರಕ್ಚರ್, ಇಂಡಿಯಾ ಬುಲ್ಸ್ ರಿಯಲ್ ಎಸ್ಟೇಟ್, ಹಿಂಡ್‌ವೇರ್ ಹೋಮ್ ಇನ್ನೊವೇಷನ್, ಡಿಕ್ಸಾನ್ ಟೆಕ್ನಾಲಜೀಸ್, ಆನ್ ವರ್ಡ್ ಟೆಕ್ನಾಲಜೀಸ್ ಮತ್ತು ಶ್ರೇಯಸ್ ಶಿಪ್ಪಿಂಗ್ ಗಳಿಸಿಕೊಂಡಿವೆ. ಮುನ್ನೋಟ: ಈ ವಾರ ಅಪೋಲೊ, ಕ್ಯಾಂಪಸ್, ಎಂಪವರ್, ಎಫಿಕ್, ಫ್ಯಾಮಿಲ್ ಕೇರ್, ಫಿಷರ್, ಫೋರ್ಸ್ ಮೋಟರ್ಸ್ ಲಿ., ಫ್ರಂಟ್ ಕ್ಯಾಪ್, ಗೋಕುಲ್, ಗೋಲ್ಡ್ ಟೆಕ್, ಶ್ರೀ ಹನುಮಾನ್ ಶುಗರ್ ಇಂಡಸ್ಟ್ರೀಸ್, ಹೈಪರ್ ಸಾಫ್ಟ್ ಟೆಕ್ನಾಲಜೀಸ್, ಐಟಿಐ ಲಿ. ಸೇರಿ ಕೆಲವು ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜೂನ್ 6ರಿಂದ 8ರ ತನಕ ಆರ್‌ಬಿಐ ಹಣಕಾಸು ಸಮಿತಿ ಸಭೆ ನಡೆಯಲಿದೆ. ಆರ್‌ಬಿಐ ಬಡ್ಡಿ ದರ ಹೆಚ್ಚಳ ಮಾಡಲು ಮುಂದಾದರೆ ಅದರ ಪರಿಣಾಮ ಷೇರುಪೇಟೆ ಮೇಲೆ ಆಗಲಿದೆ. ಜಾಗತಿಕ ವಿದ್ಯಮಾನಗಳು ಹಾಗೂ ದೇಶಿ ಬೆಳವಣಿಗೆಗಳು ಸೂಚ್ಯಂಕಗಳ ಏರಿಳಿತ ನಿರ್ಧರಿಸಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.