ADVERTISEMENT

ಹಣಕಾಸು ಸಾಕ್ಷರತೆ| ಸರಿಯಾದ ಹೂಡಿಕೆಗೆ ಮೂರು ಅಂಶಗಳು

ಪ್ರಮೋದ್
Published 24 ಜನವರಿ 2021, 19:31 IST
Last Updated 24 ಜನವರಿ 2021, 19:31 IST
ಪ್ರಮೋದ್ ಬಿ.ಪಿ.
ಪ್ರಮೋದ್ ಬಿ.ಪಿ.   

‘ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ? ಈ ಹೂಡಿಕೆಯಲ್ಲಿ ರಿಸ್ಕ್ ಇದೆಯಾ? ಅಸಲಿನ ಮೊತ್ತ ನಷ್ಟ ಆಗೋದಿಲ್ಲಾ ಅಲ್ವಾ?’ ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ನನಗೆ ಬಹಳಷ್ಟು ಮಂದಿ ಕೇಳುತ್ತಾರೆ. ಇದರ ಪ್ರಸ್ತಾಪ ಇಲ್ಲಿ ಮಾಡುತ್ತಿರುವುದಕ್ಕೆ ಕಾರಣವಿದೆ. ಹೂಡಿಕೆ ಮಾಡುವ ಮುನ್ನ ಪ್ರತಿಯೊಬ್ಬರೂ ಈ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕಂಡುಕೊಳ್ಳುವುದು ಬಹಳ ಮುಖ್ಯ. ಯಾವುದೇ ಹೂಡಿಕೆಯಲ್ಲಿ ಸುರಕ್ಷತೆ (Safety), ನಗದೀಕರಣ (Liquidity) ಮತ್ತು ಲಾಭಾಂಶ (Returns) ಬಹಳ ಮುಖ್ಯ ಅಂಶಗಳು. ಆದರೆ ಈ ಅಂಶಗಳೆಲ್ಲವೂ ಒಂದರಲ್ಲೇ ಇರುವ ಹೂಡಿಕೆ ಆಯ್ಕೆ ಇಲ್ಲ ಎನ್ನುವುದು ಅಷ್ಟೇ ಸತ್ಯ.

ಹೂಡಿಕೆ ಮಾಡುವಾಗ ನಮ್ಮ ಹಣಕಾಸಿನ ಸ್ಥಿತಿಗತಿ, ಕುಟುಂಬದ ಆರ್ಥಿಕ ಸ್ಥಿತಿ, ಹೂಡಿಕೆ ಹಣ ಯಾವಾಗ ಬೇಕಾಗುತ್ತದೆ ಎಂಬಿತ್ಯಾದಿ ಅಂಶಗಳನ್ನು ಗಮನಿಸಿ ಹೂಡಿಕೆ ಮಾದರಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಬ್ಯಾಂಕ್‌ ಎಫ್.ಡಿ.ಯಲ್ಲಿ (ನಿಶ್ಚಿತ ಠೇವಣಿ) ಸುರಕ್ಷತೆ ಇದೆ, ನಗದೀಕರಣದ ಅವಕಾಶವಿದೆ, ಆದರೆ ಹೆಚ್ಚು ಲಾಭ ಇಲ್ಲ. ಬ್ಯಾಂಕ್‌ಗಳು ಆರ್‌ಬಿಐ ನಿಯಂತ್ರಣಕ್ಕೆ ಒಳಪಡುವುದರಿಂದ ಮತ್ತು ₹ 5 ಲಕ್ಷದವರೆಗಿನ ಹೂಡಿಕೆಗೆ ಡೆಪಾಸಿಟ್ ಇನ್ಶೂರೆನ್ಸ್ ಸ್ಕೀಂ ಅನ್ವಯವಾಗುವುದರಿಂದ ನಮ್ಮ ಹೂಡಿಕೆ ಮೊತ್ತದ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳಬೇಕಿಲ್ಲ. ಅದರಲ್ಲೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿ ಇರಿಸಿದರೆ ಚಿಂತೆ ಮಾಡುವ ಅಗತ್ಯವಿಲ್ಲ.

ಇನ್ನು ನಗದೀಕರಣದ ವಿಚಾರಕ್ಕೆ ಬಂದರೆ, ನಿಶ್ಚಿತ ಠೇವಣಿಯಲ್ಲಿನ ಹಣ ತುರ್ತಾಗಿ ಬೇಕು ಎಂದರೆ ಅದನ್ನು ಪಡೆಯಲು ಸಾಧ್ಯವಿದೆ. ಅದಕ್ಕೆ ಸಣ್ಣ ಪ್ರಮಾಣದ ಶುಲ್ಕ ನೀಡಬೇಕಾಗುತ್ತದೆ, ಅಷ್ಟೆ. ಹೀಗಿದ್ದರೂ ನಿಶ್ಚಿತ ಠೇವಣಿಯಲ್ಲಿ ಸಿಗುವ ಗರಿಷ್ಠ ಲಾಭ ಶೇಕಡ 5ರಿಂದ ಶೇ 7ರಷ್ಟು ಮಾತ್ರ. ಮ್ಯೂಚುವಲ್ ಫಂಡ್ ಮತ್ತು ಷೇರು ಮಾರುಕಟ್ಟೆ ಹೂಡಿಕೆಯಿಂದ ಬರುವ ಲಾಭದ ಪ್ರಮಾಣಕ್ಕೆ ಹೋಲಿಕೆ ಮಾಡಿ ನೋಡಿದಾಗ ಇದರಿಂದ ಸಿಗುವ ಲಾಭಾಂಶ ತೀರಾ ಕಡಿಮೆ ಅನಿಸುತ್ತದೆ.

ADVERTISEMENT

ಷೇರುಗಳಲ್ಲಿನ ಹೂಡಿಕೆಯಿಂದ ಹೆಚ್ಚು ಲಾಭ ಇದೆ, ತ್ವರಿತ ನಗದೀಕರಣದ ಅವಕಾಶವಿದೆ. ಆದರೆ ರಿಸ್ಕ್ ಜಾಸ್ತಿ. ಷೇರು ಮಾರುಕಟ್ಟೆಯಲ್ಲಿ ಮಾಡಿದ ಹೂಡಿಕೆಯ ವಿಚಾರದಲ್ಲಿ ಅಸಲಿನ ಮೊತ್ತಕ್ಕೂ ಭದ್ರತೆ ಇಲ್ಲ! ಸುರಕ್ಷತೆಯ ಮಾನದಂಡ ಇಲ್ಲಿ ಅನ್ವಯವಾಗುವುದೇ ಇಲ್ಲ. ಇನ್ನು ನಗದೀಕರಣದ ವಿಚಾರ; ಷೇರುಗಳನ್ನು ಮಾರಾಟ ಮಾಡಿದ ಎರಡು ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಬರುತ್ತದೆ. ಎಷ್ಟು ಲಾಭ ಮಾಡುತ್ತೀರಿ ಎನ್ನುವುದು ನೀವು ಯಾವ ಕಂಪನಿಯಲ್ಲಿ ಹೂಡಿಕೆ ಮಾಡಿದ್ದೀರಿ, ಷೇರು ಮಾರುಕಟ್ಟೆಯ ಸ್ಥಿತಿಗತಿ ಏನಿದೆ ಎಂಬುದರ ಮೇಲೆ ಅವಲಂಬಿತ. ಅತಿಯಾದ ಲಾಭ, ಅತಿಯಾದ ನಷ್ಟ ಎರಡೂ ಸಾಧ್ಯತೆಗಳನ್ನು ಷೇರು ಮಾರುಕಟ್ಟೆ ಒಳಗೊಂಡಿದೆ.

ಹೆಚ್ಚು ರಿಸ್ಕ್ - ಹೆಚ್ಚು ಲಾಭ, ಕಡಿಮೆ ರಿಸ್ಕ್ – ಕಡಿಮೆ ಲಾಭ: ಹೂಡಿಕೆಯಲ್ಲಿ ಹೆಚ್ಚು ಸುರಕ್ಷತೆ ಬೇಕು ಎಂದಾದಲ್ಲಿ ಲಾಭ ಕಡಿಮೆ ಇರುತ್ತದೆ. ಹೂಡಿಕೆ ಮಾಡಿದ ಹಣದ ಸುರಕ್ಷತೆ ಬಗ್ಗೆ ಚಿಂತೆ ಇಲ್ಲ, ಲಾಭವಷ್ಟೇ ಮುಖ್ಯ ಎಂದಾದಲ್ಲಿ ಹೆಚ್ಚು ಲಾಭ ಗಳಿಸಲು ಸಾಧ್ಯವಾಗುತ್ತದೆ. ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಸರಿಯಾಗಿ ಅರಿತು ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಲಾಭಗಳಿಸುವ ಸಾಧ್ಯತೆ ಹೆಚ್ಚಿದೆ.

ನಿಮ್ಮ ತೀರ್ಮಾನ ನೀವೇ ಮಾಡಿ: ಮೇಲಿನ ಅಂಶಗಳನ್ನು ಆಧರಿಸಿ ಯಾವ ಮಾದರಿ ಹೂಡಿಕೆಯಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವುದನ್ನು ನೀವೇ ತೀರ್ಮಾನಿಸಿ. ಯಾರದ್ದೋ ಮಾತು ಕೇಳಿ ಹೂಡಿಕೆ ನಿರ್ಧಾರಗಳನ್ನು ಕೈಗೊಳ್ಳಬೇಡಿ. ನಿಮ್ಮ ಆರ್ಥಿಕ ಶಕ್ತಿಗೆ ಅನುಗುಣವಾಗಿ ಹೂಡಿಕೆ ರಿಸ್ಕ್‌ಗಳನ್ನು ತೆಗೆದುಕೊಳ್ಳಿ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.