ADVERTISEMENT

ಪ್ರಶ್ನೋತ್ತರ | ದ್ವಿಚಕ್ರ ವಾಹನ ಖರೀದಿಗೆ ಸಾಲ: ಇಲ್ಲಿದೆ ಸಲಹೆ...

ಪ್ರಮೋದ ಶ್ರೀಕಾಂತ ದೈತೋಟ
Published 15 ಫೆಬ್ರುವರಿ 2022, 20:15 IST
Last Updated 15 ಫೆಬ್ರುವರಿ 2022, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿ.ಎಂ. ವಿನಯ್, ಸಾಗರ

ಪ್ರಶ್ನೆ: ನಾನು ಡಿಸ್ಕೌಂಟ್ ಬ್ರೋಕರೇಜ್ ಕಂಪನಿಯೊಂದರ ಆ್ಯಪ್‌ ಬಳಸಿ ಷೇರು ಹೂಡಿಕೆ ಮಾಡುತ್ತಿದ್ದೇನೆ. ಕಳೆದ ಎರಡು ವರ್ಷಗಳಿಂದ ಇದನ್ನು ನಾನು ಮಾಡುತ್ತ ಬಂದಿದ್ದೇನೆ. ನನ್ನ ಆದಾಯಕ್ಕೆ ಹೋಲಿಸಿದರೆ ದೊಡ್ಡ ಮೊತ್ತವನ್ನು ಷೇರುಗಳಲ್ಲಿ ತೊಡಗಿಸಿದ್ದೇನೆ. ನನ್ನ ಪ್ರಶ್ನೆ ಏನೆಂದರೆ, ಒಂದು ವೇಳೆ ಈ ಡಿಸ್ಕೌಂಟ್ ಬ್ರೋಕರೇಜ್ ಕಂಪನಿ ಬಾಗಿಲು ಮುಚ್ಚಿದಲ್ಲಿ ನಾನು ಖರೀದಿಸಿರುವ ಷೇರುಗಳ ಕಥೆ ಏನಾಗುತ್ತದೆ? ನಾನು ನಷ್ಟ ಅನುಭವಿಸಬೇಕಾಗುತ್ತದೆಯೇ? ನನ್ನ ಅನುಮಾನ ಪರಿಹರಿಸಿ.

ಉತ್ತರ: ಭಾರತದಲ್ಲಿರುವ ಯಾವುದೇ ಬ್ರೋಕರೇಜ್ ಕಂಪನಿಗಳು, ಷೇರುಪೇಟೆಯಲ್ಲಿ ತಮ್ಮ ಗ್ರಾಹಕರ ಷೇರುಗಳಲ್ಲಿ ವ್ಯವಹರಿಸಬೇಕಾದರೆ, ಮೊದಲು ಸೆಂಟ್ರಲ್ ಡಿಪಾಸಿಟರಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ ಅಥವಾ ನ್ಯಾಷನಲ್ ಸೆಕ್ಯುರಿಟಿಸ್ ಡಿಪಾಸಿಟರಿ ಲಿಮಿಟೆಡ್ ಎಂಬ ಡಿಪಾಸಿಟರಿಗಳಲ್ಲಿ ತಮ್ಮ ದಾಖಲಾತಿ ಹೊಂದಿರಬೇಕಾಗುತ್ತದೆ. ಇವು ಹೂಡಿಕೆದಾರರ ಷೇರುಗಳ ಸಂರಕ್ಷಣೆಗಾಗಿರುವ ಸಂಸ್ಥೆಗಳು. ಷೇರುಪೇಟೆಯಲ್ಲಾಗುವ ಎಲ್ಲ ವ್ಯವಹಾರಗಳೂ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿ (ಸೆಬಿ) ನಿಯಮಾನುಸಾರವೇ ನಡೆಯಬೇಕು. ಎಲ್ಲ ಬ್ರೋಕರೇಜ್ ಕಂಪನಿಗಳು ಪ್ರತಿದಿನದ ವಹಿವಾಟು ಮುಗಿದ ತಕ್ಷಣ ಹೂಡಿಕೆದಾರರ ಷೇರುಗಳ ವರ್ಗಾವಣೆ ವ್ಯವಹಾರವನ್ನು ತಾಳೆಮಾಡಿ ಡಿಪಾಸಿಟರಿಗಳಿಗೆ ಮಾಹಿತಿ ನೀಡಬೇಕು. ಇಲ್ಲಿ ಬ್ರೋಕರೇಜ್ ಕಂಪನಿಗಳದ್ದು ‘ಮಧ್ಯವರ್ತಿ’ ರೀತಿಯ ಪಾತ್ರ. ನಿಜ ಅರ್ಥದಲ್ಲಿ, ನೀವು ಮಾಡಿರುವ ಷೇರು ಹೂಡಿಕೆ ಎಲೆಕ್ಟ್ರಾನಿಕ್ ರೂಪದಲ್ಲಿ ಡಿಪಾಸಿಟರಿಗಳ ಅಧೀನದಲ್ಲಿ ಇರುತ್ತದೆಯೇ ಹೊರತು ಬ್ರೋಕರೇಜ್ ಕಂಪನಿಗಳ ನಿಯಂತ್ರಣದಲ್ಲಿ ಅಲ್ಲ.

ADVERTISEMENT

ಬ್ರೋಕರೇಜ್ ಕಂಪನಿಗಳು ಡಿಪಾಸಿಟರಿಯ ಏಜೆಂಟ್ ಆಗಿ ಕೆಲಸ ನಿರ್ವಹಿಸುವ ಸಂಸ್ಥೆಗಳು. ಇವು ಹೂಡಿಕೆದಾರ ಹಾಗೂ ಡಿಪಾಸಿಟರಿಯ ನಡುವೆ ದಲ್ಲಾಳಿ ಕೆಲಸವನ್ನಷ್ಟೇ ಮಾಡುತ್ತವೆ. ನೀವು ಡಿಮ್ಯಾಟ್ ಖಾತೆ ಹೊಂದಿರುವುದು ಡಿಪಾಸಿಟರಿಗಳಲ್ಲೇ ಹೊರತು ಬ್ರೋಕರೇಜ್ ಕಂಪನಿಗಳಲ್ಲಿ ಅಲ್ಲ. ನಿಮ್ಮ ಪ್ರಶ್ನೆಯಂತೆ, ಬ್ರೋಕರೇಜ್ ಸಂಸ್ಥೆಯು ದಿವಾಳಿಯಾದರೆ, ಹೂಡಿಕೆದಾರರ ಖಾತೆಯಲ್ಲಿನ ಷೇರುಗಳನ್ನು ಅವರ ಆಯ್ಕೆಯಂತೆ ಇತರ ಯಾವುದೇ ಬ್ರೋಕರೇಜ್ ಸಂಸ್ಥೆಗಳಿಗೆ ವರ್ಗಾಯಿಸಲಾಗುತ್ತದೆ. ಹೊಂದಿದ ಷೇರುಗಳು ನಷ್ಟವಾಗುವ ಯಾವುದೇ ಆತಂಕ ಬೇಡ.

ನಿಮ್ಮ ಸಮಸ್ಯೆಯನ್ನು ಇನ್ನೂ ಒಂದು ಹಂತ ಮುಂದುವರಿಸಿ ಯೋಚಿಸೋಣ. ನಿಮ್ಮ ಷೇರು ವ್ಯವಹಾರದ ಖಾತೆಯಲ್ಲಿರುವ (ಟ್ರೇಡಿಂಗ್ ಖಾತೆ) ಹಣ ಬ್ರೋಕರೇಜ್ ಸಂಸ್ಥೆ ದಿವಾಳಿಯಾದ ಸಂದರ್ಭದಲ್ಲಿ ಏನಾಗುತ್ತದೆ ಎಂಬುದು ಗಂಭೀರವಾದುದು. ಇಂತಹ ಸಂದರ್ಭದಲ್ಲಿ ಸೆಬಿ ತನ್ನ ‘ಹೂಡಿಕೆದಾರರ ಸಂರಕ್ಷಣಾ ನಿಧಿ’ಯಿಂದ ಹೂಡಿಕೆದಾರರಿಗೆ ಪರಿಹಾರ ಕಲ್ಪಿಸಿಕೊಡುತ್ತದೆ. ಇದಕ್ಕಾಗಿ ಹೂಡಿಕೆದಾರರು, ಬ್ರೋಕರೇಜ್ ಸಂಸ್ಥೆ ದಿವಾಳಿಯಾದೊಡನೆ ಅಥವಾ ಗರಿಷ್ಠ ಮೂರು ವರ್ಷದೊಳಗೆ ಪರಿಹಾರಕ್ಕಾಗಿ ಸೆಬಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ.

*****

ಹೆಸರು ಬೇಡ, ಊರು ಬೇಡ

ಪ್ರಶ್ನೆ: ನಾನು ದ್ವಿಚಕ್ರ ವಾಹನ ಖರೀದಿಗೆ ಸಾಲ ಮಾಡಬೇಕು ಎಂದು ತೀರ್ಮಾನಿಸಿದ್ದೇನೆ. ಅಂದಾಜು
₹ 60 ಸಾವಿರ ಸಾಲ ಮಾಡಬೇಕಾಗಿ ಬರಬಹುದು.
ನನ್ನ ಪ್ರಶ್ನೆ ಹೀಗಿದೆ: ಸಾಲವನ್ನು ರಾಷ್ಟ್ರೀಕೃತ ಬ್ಯಾಂಕ್‌ ಅಥವಾ ಖಾಸಗಿ ಬ್ಯಾಂಕ್‌ಗಳಿಂದ ಮಾಡಿದರೆ ಒಳ್ಳೆಯದೋ? ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದು ಒಳ್ಳೆಯದೋ? ಆ್ಯಪ್‌ ಮೂಲಕ ಸಿಗುವ ಸಾಲವನ್ನು ಪಡೆದರೆ ಒಳಿತೋ? ಆ್ಯಪ್‌ ಮೂಲಕ ಸಾಲ ಪಡೆಯುವಾಗ ಹುಷಾರಾಗಿ ವ್ಯವಹಾರ ನಡೆಸಬೇಕು ಎಂದು ಹಲವು ಕಡೆ ಓದಿದ್ದೇನೆ.
ನನ್ನ ಅನುಮಾನ ಬಗೆಹರಿಸಿ.

ಉತ್ತರ: ಬ್ಯಾಂಕಿಂಗ್ ಸಂಸ್ಥೆಗಳಾಗಲಿ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಾಗಿರಲಿ, ಅವುಗಳು ನಡೆಸುವ ಹಣಕಾಸು ವ್ಯವಹಾರಗಳೆಲ್ಲವೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿಯಮಾವಳಿ ಅಥವಾ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ ಅಡಿ ನಡೆಯಬೇಕು. ರಾಷ್ಟ್ರೀಕೃತ ಬ್ಯಾಂಕ್‌, ಖಾಸಗಿ ಬ್ಯಾಂಕ್‌ ಅಥವಾ ಯಾವುದೇ ಬ್ಯಾಂಕೇತರ ಹಣಕಾಸು ಸಂಸ್ಥೆಯ ವ್ಯವಹಾರಗಳು ಆರ್‌ಬಿಐ ನಿಯಮಾವಳಿ ಪ್ರಕಾರವೇ ನಡೆಯಬೇಕು. ಹೀಗಾಗಿ ನೀವು ಎಲ್ಲಿ ಸಾಲ ಪಡೆದರೂ ಅನ್ವಯವಾಗುವ ಕಾನೂನಿನ ಚೌಕಟ್ಟು ಒಂದೇ.

ಬ್ಯಾಂಕಿಂಗ್ ಸಂಸ್ಥೆಗಳು ಪರಸ್ಪರ ಪೈಪೋಟಿ ನೀಡುತ್ತಿದ್ದು, ಗ್ರಾಹಕರನ್ನು ಆಕರ್ಷಿಸಲು ಅನೇಕ ಸೇವೆಗಳನ್ನು ನೀಡುತ್ತಿವೆ. ಆದರೂ ಸಾಲ ಮಂಜೂರಾತಿಯ ಮೂಲ ನಿಯಮಗಳು ಒಂದೇ ಆಗಿರುತ್ತವೆ. ಗ್ರಾಹಕರ ಸೇವೆಗಳ ವಿಚಾರದಲ್ಲಿ ದಸ್ತಾವೇಜು ಪ್ರಕ್ರಿಯೆ, ಸಾಲದ ಮೇಲಣ ಶುಲ್ಕ, ಬಡ್ಡಿ ದರ, ಮುಂಪಾವತಿ ಶುಲ್ಕ, ಗ್ರಾಹಕರಿಗೆ ಸಮಾಲೋಚನಾ ಸೇವೆ ಹಾಗೂ ಸ್ಪಂದಿಸುವ ಸಮಯಾವಕಾಶ ಇಂಥವುಗಳಲ್ಲಿ ಬೇರೆ ಬೇರೆ ಸಂಸ್ಥೆಗಳ ನಡುವೆ ಭಿನ್ನತೆ ಇರಬಹುದು. ಹೀಗಾಗಿ ಇಷ್ಟೂ ಅಂಶಗಳನ್ನು ಪರಿಗಣಿಸಿ, ನಿಮ್ಮ ಅಗತ್ಯಕ್ಕೆ ಹೊಂದಿಕೆಯಾಗುವ ಸಂಸ್ಥೆಯಿಂದ ಸಾಲ ಪಡೆಯಿರಿ. ನಿಮಗೆ ಆರ್ಥಿಕವಾಗಿ ಅಗ್ಗವಾಗುವ ಹಾಗೂ ಸರಳ ರೀತಿಯಲ್ಲಿ ಸಾಲ ಒದಗಿಸಿಕೊಡುವ ಸಂಸ್ಥೆಯನ್ನು ಆಯ್ಕೆ ಮಾಡಿ. ಇದರ ಮೊದಲು ಎರಡೋ ಮೂರೋ ಸಂಸ್ಥೆಗಳಿಂದ ಅವರು ವಿಧಿಸುವ ಬಡ್ಡಿ ದರ, ಮಾಸಿಕ ಕಂತು, ಷರತ್ತುಗಳ ಸಮಗ್ರ ಮಾಹಿತಿಯನ್ನು ಕಲೆಹಾಕಿ ತುಲನೆ ಮಾಡಿ ನಿರ್ಧಾರ ಕೈಗೊಳ್ಳಿ. ನಿಮ್ಮ ಕ್ರೆಡಿಟ್ ರೇಟಿಂಗ್ ಚೆನ್ನಾಗಿದ್ದರೆ, ಖಾಸಗಿ ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಲ್ಲಿ ತುಸು ಕಡಿಮೆ ಬಡ್ಡಿ ದರಕ್ಕೆ ಸಾಲ ಕೋರುವ ಅವಕಾಶವಿರುತ್ತದೆ.

ಆ್ಯಪ್‌ ಮೂಲಕ ಸಾಲ ಪಡೆಯುವ ವಿಚಾರವಾಗಿ ಎರಡು ಮಾತು. ಅನಧಿಕೃತವಾಗಿ ಸಾಲ ನೀಡುವ ಡಿಜಿಟಲ್ ವೇದಿಕೆಗಳಿಂದ ಸಾಲ ತೆಗೆದುಕೊಳ್ಳದಂತೆ ಆರ್‌ಬಿಐ ಎಚ್ಚರಿಕೆ ನೀಡುತ್ತ ಬರುತ್ತಿದೆ. ಅಂತಹ ವೇದಿಕೆಗಳು ಸರಿಯಾದ ವೆಬ್‌ಸೈಟ್ ಹೊಂದಿವೆಯೇ, ಆರ್‌ಬಿಐ ನೀಡುವ ನೋಂದಣಿ ಪ್ರಮಾಣಪತ್ರ ಹೊಂದಿವೆಯೇ, ಗ್ರಾಹಕರ ಅಹವಾಲುಗಳನ್ನು ಪರಿಹರಿಸುವ ಗ್ರಾಹಕ ಸೇವಾ ದೂರವಾಣಿ ಅಥವಾ ಇ–ಮೇಲ್ ಹೊಂದಿವೆಯೇ ಎಂಬುದನ್ನು ಪರಿಶೀಲಿಸಿ. ಅಕ್ರಮವಾಗಿ ಸಾಲ ನೀಡುವ ಆ್ಯಪ್‌ಗಳ ಸಂಖ್ಯೆ ವೃದ್ದಿಯಾಗುತ್ತಿದೆ, ವೈಯಕ್ತಿಕ ಮಾಹಿತಿ ಸೋರಿಕೆಯಾದ ವರದಿಗಳೂ ಇವೆ. ಆದ್ದರಿಂದ ಸಾಲ ಪಡೆಯುವ ವಿಚಾರದಲ್ಲಿ ಯೋಚಿಸಿ ಹಣಕಾಸು ಸಂಸ್ಥೆಗಳನ್ನು ಆರಿಸುವುದು ಸೂಕ್ತ. ಈ ದೃಷ್ಟಿಯಲ್ಲಿ ಹೇಳುವುದಾದರೆ, ಬ್ಯಾಂಕ್ ಅಥವಾ ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ ಸಾಲ ಪಡೆಯುವುದೇ ಒಳಿತು.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.