
ಕಳೆದ ಕ್ಯಾಲೆಂಡರ್ ವರ್ಷದಲ್ಲಿ ಷೇರುಪೇಟೆ ನೀಡಿದ ಗಳಿಕೆಗಿಂತಲೂ ಚಿನ್ನ, ಬೆಳ್ಳಿಯು ಹೂಡಿಕೆದಾರರಿಗೆ ಹೆಚ್ಚಿನ ಲಾಭ ತಂದು ಕೊಟ್ಟವು. ಹೊಸ ವರ್ಷದ ಇದೀಗ ಆರಂಭವಾಗಿದೆ. ಈ ವರ್ಷದಲ್ಲಿ ಜಾಗತಿಕ ವಿದ್ಯಮಾನಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸುತ್ತಾ ಹೂಡಿಕೆದಾರರು ಎಚ್ಚರಿಕೆಯಿಂದ ಹೂಡಿಕೆಗೆ ಮುಂದಾಗಬೇಕಿದೆ..
2025ನೇ ಇಸವಿಯು ಹೂಡಿಕೆದಾರರಿಗೆ ಮಿಶ್ರಫಲಗಳ ವರ್ಷವಾಗಿತ್ತು. ಈಕ್ವಿಟಿ, ಸಾಲಪತ್ರ ಹಾಗೂ ಚಿನ್ನದ ಮೇಲಿನ ಹೂಡಿಕೆಗಳು ಬೇರೆ ಬೇರೆ ಪ್ರಮಾಣದಲ್ಲಿ ಲಾಭ ತಂದುಕೊಟ್ಟವು. ಬಡ್ಡಿಯನ್ನು ನೆಚ್ಚಿಕೊಂಡಿರುವ, ರಿಸ್ಕ್ ತೆಗೆದುಕೊಳ್ಳಲು ಬಯಸದ ಹೂಡಿಕೆದಾರರು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಬ್ಯಾಂಕುಗಳು ತಗ್ಗಿಸುವುದನ್ನು ಗಮನಿಸುತ್ತ ಕುಳಿತರು. ಈಕ್ವಿಟಿಗಳ ಮೇಲಿನ ಹೂಡಿಕೆದಾರರಿಗೆ 2025ನೆಯ ಇಸವಿಯು ಸಪ್ಪೆಯಾಗಿತ್ತು. ಆದರೆ 2026ರಲ್ಲಿ ಏನಾಗಬಹುದು? ಬೇರೆ ಬೇರೆ ಹೂಡಿಕೆ ಆಯ್ಕೆಗಳು ಹಾಗೂ ಅವುಗಳಿಂದ ಸಿಗಬಹುದಾದ ಲಾಭದ ಮೇಲೆ ಗಮನಹರಿಸೋಣ.
2025ರಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಶೇ 8.55ರಷ್ಟು ಗಳಿಕೆ ತಂದುಕೊಟ್ಟಿದೆ. ವರ್ಷದ ಆರಂಭದಲ್ಲಿ 78,507ರ ಮಟ್ಟದಲ್ಲಿ ಇದ್ದ ಸೆನ್ಸೆಕ್ಸ್ ವರ್ಷದ ಕೊನೆಯಲ್ಲಿ 85,220ಕ್ಕೆ ತಲುಪಿತು. ಎನ್‌ಎಸ್‌ಸಿ ನಿಫ್ಟಿ–50 ಸೂಚ್ಯಂಕವು ತುಸು ಉತ್ತಮ ಮಟ್ಟದ, ಅಂದರೆ ಶೇ 10.05ರಷ್ಟು ಗಳಿಕೆ ನೀಡಿದೆ. ಸ್ಮಾಲ್‌ಕ್ಯಾಪ್ ವರ್ಗದ ಷೇರುಗಳಲ್ಲಿ ಹೂಡಿಕೆ ಮಾಡಿದವರ ಅದೃಷ್ಟ ಚೆನ್ನಾಗಿರಲಿಲ್ಲ. ನಿಫ್ಟಿ ಸ್ಮಾಲ್‌ಕ್ಯಾಪ್ ಸೂಚ್ಯಂಕವು ಶೇ 8ರಷ್ಟು ಕುಸಿದಿದೆ. ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಆದ ಮೊತ್ತವು ವರ್ಷದ ಅವಧಿಯಲ್ಲಿ ₹67 ಲಕ್ಷ ಕೋಟಿಯಿಂದ ₹81 ಲಕ್ಷ ಕೋಟಿಗೆ ಏರಿಕೆ ಕಂಡಿದೆ, ಶೇ 21ರಷ್ಟು ಬೆಳವಣಿಗೆ ಸಾಧಿಸಿದೆ. ದೇಶದ ಕಾರ್ಪೊರೇಟ್ ಕಂಪನಿಗಳು ಐಪಿಒ ಮೂಲಕ ದಾಖಲೆಯ ₹1.75 ಲಕ್ಷ ಕೋಟಿ ಸಂಗ್ರಹಿಸಿವೆ.
ಆದರೆ ಹಲವು ಐಪಿಒ ಪ್ರಕ್ರಿಯೆಗಳು, ಪ್ರವರ್ತಕರು ತಮ್ಮ ಹೂಡಿಕೆ ಹಣವನ್ನು ಕಂಪನಿಯಿಂದ ಹಿಂದಕ್ಕೆ ಪಡೆಯಲು ಬಳಕೆ ಆಗಿದ್ದುದು ಕಳವಳಕಾರಿ ಸಂಗತಿಯಾಗಿತ್ತು. ಕೆಲವು ಐಪಿಒ ಪ್ರಕ್ರಿಯೆಗಳ ಮೂಲಕ ಮಾತ್ರ ಪ್ರವರ್ತಕರು ತಮ್ಮ ಉದ್ಯಮದ ವಿಸ್ತರಣೆಗಾಗಿ ಹೊಸದಾಗಿ ಬಂಡವಾಳ ಸಂಗ್ರಹಿಸಿದರು. ಐಪಿಒ ಸಂದರ್ಭದಲ್ಲಿ ಹೂಡಿಕೆ ಮಾಡುವ ಮೊದಲು ಸಣ್ಣ ಹೂಡಿಕೆದಾರರು ಸಾಕಷ್ಟು ಅಧ್ಯಯನ ನಡೆಸಬೇಕು ಎಂಬುದನ್ನು ಇದು ಹೇಳುತ್ತದೆ. ಹಣಕಾಸಿನ ಗುರಿಯನ್ನು ತಲುಪುವ ಉದ್ದೇಶದಿಂದ ಹೂಡಿಕೆ ಮಾಡುವವರು ತಮ್ಮ ಹೂಡಿಕೆಗಳನ್ನು ಎಸ್‌ಐಪಿ ವಿಧಾನದಲ್ಲಿ ಮುಂದುವರಿಸಬೇಕು. ಅವರು ಮ್ಯೂಚುವಲ್ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹೂಡಿಕೆಯನ್ನು ನಿಲ್ಲಿಸಬಾರದು.
ಸಾಲಪತ್ರ ಆಧಾರಿತ ಮ್ಯೂಚುವಲ್ ಫಂಡ್‌ಗಳಿಗೆ 2025 ಸಾಧಾರಣ ವರ್ಷವಾಗಿತ್ತು. ಸಾಲಪತ್ರ ಆಧಾರಿತ ಮ್ಯೂಚುವಲ್ ಫಂಡ್‌ಗಳ ಪೈಕಿ ಹೆಚ್ಚಿನವು ಬ್ಯಾಂಕ್ ಎಫ್.ಡಿ.ಗಳಿಗಿಂತ ಹೆಚ್ಚು ಉತ್ತಮವಾದ ಗಳಿಕೆ ನೀಡಿದವು. ಬ್ಯಾಂಕ್ ಬಡ್ಡಿ ದರ ಕೂಡ ಇದೇ ಅವಧಿಯಲ್ಲಿ ಇಳಿಕೆ ಆಯಿತು ಎಂಬುದು ಇಲ್ಲಿ ಉಲ್ಲೇಖಾರ್ಹ. ಬಡ್ಡಿ ದರ ಹಾಗೂ ಸಾಲಪತ್ರದ ಬೆಲೆ ನಡುವೆ ಸಂಬಂಧವಿದೆ. ಬಡ್ಡಿ ದರ ಇಳಿಕೆಯಾದಾಗ, ಸಾಲಪತ್ರಗಳ ಬೆಲೆ ಹೆಚ್ಚುತ್ತದೆ. ಆದರೆ 2025ರಲ್ಲಿ ರೆಪೊ ದರವನ್ನು ಆರ್‌ಬಿಐ ಶೇ 1.25ರಷ್ಟು ಇಳಿಸಿದರೂ, 10 ವರ್ಷ ಅವಧಿಯ ಸರ್ಕಾರಿ ಸಾಲಪತ್ರದ (ಜಿ–ಸೆಕ್) ಗಳಿಕೆಯು ಶೇ 0.20ರಷ್ಟು ಮಾತ್ರ ಇಳಿದಿದ್ದು ಆಶ್ಚರ್ಯದ ಸಂಗತಿಯಾಗಿತ್ತು. 10 ವರ್ಷಗಳ ಅವಧಿಯ ಸರ್ಕಾರಿ ಸಾಲಪತ್ರದ ಗಳಿಕೆ (yield) ವರ್ಷದುದ್ದಕ್ಕೂ ಶೇ 6.50ರ ಮಟ್ಟದಲ್ಲಿತ್ತು.
ಬಡ್ಡಿ ದರ ಹಾಗೂ ಸಾಲಪತ್ರಗಳ ಬೆಲೆಯ ನಡುವಿನ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಕಷ್ಟ ಎನ್ನುವ ಹೂಡಿಕೆದಾರರು ಡೈನಾಮಿಕ್ ಬಾಂಡ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಒಳಿತು. ಹಾಗೆ ಮಾಡಿದಾಗ ಆ ಫಂಡ್ ನಿರ್ವಾಹಕ, ಹಣವನ್ನು ಪರಿಣಾಮಕಾರಿಯಾಗಿ ವಿನಿಯೋಗಿಸುವ ಬಗ್ಗೆ ತೀರ್ಮಾನ ತೆಗೆದುಕೊಳ್ಳುತ್ತಾನೆ.
ಆರ್‌ಬಿಐ ರೆಪೊ ದರವನ್ನು ಹಂತ ಹಂತವಾಗಿ ತಗ್ಗಿಸಿತು. ಇದರ ಪರಿಣಾಮವಾಗಿ ಹಲವು ಠೇವಣಿಗಳ ಮೇಲಿನ ಬಡ್ಡಿ ದರವು ಇಳಿಯಿತು. ಹೀಗಿದ್ದರೂ ಕೇಂದ್ರ ಸರ್ಕಾರವು ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಇಳಿಕೆ ಮಾಡದೆ, ಯಥಾಸ್ಥಿತಿಯಲ್ಲಿ ಅವುಗಳನ್ನು ಮುಂದುವರಿಸಿಕೊಂಡು ಬಂದಿರುವುದು ಬಡ್ಡಿ ಆದಾಯವನ್ನು ನೆಚ್ಚಿಕೊಂಡಿರುವ ಸಾಂಪ್ರದಾಯಿಕ ಹೂಡಿಕೆದಾರರಿಗೆ ಬಹಳ ಸಮಾಧಾನ ತಂದ ಸಂಗತಿ.
ಹಿರಿಯ ನಾಗರಿಕರು ₹30 ಲಕ್ಷದವರೆಗೆ ‘ಹಿರಿಯ ನಾಗರಿಕರ ಉಳಿತಾಯ ಯೋಜನೆ’ಗಳಲ್ಲಿ ಹೂಡಿಕೆ ಮಾಡಬಹುದು. ಇಲ್ಲಿ ಅವರಿಗೆ ಐದು ವರ್ಷಗಳ ಅವಧಿಗೆ ವಾರ್ಷಿಕ ಶೇ 8.2ರಷ್ಟು ಬಡ್ಡಿ ಸಿಗುತ್ತದೆ. ಇದು ಅತಿಹೆಚ್ಚಿನ ಮಟ್ಟದ ಬಡ್ಡಿ ದರಗಳಲ್ಲಿ ಒಂದು. ಬೇಕೆಂದಾಗಲೆಲ್ಲ ಹಣ ಹಿಂಪಡೆಯುವ ಸೌಲಭ್ಯ ಇರಬೇಕಾಗಿಲ್ಲ, ಹೂಡಿಕೆ ಮಾಡಿದ ಹಣಕ್ಕೆ ಸುರಕ್ಷತೆ ಇರಬೇಕು ಎಂದು ಹೇಳುವವರು ಏಳು ವರ್ಷಗಳ ಅವಧಿಯ ಆರ್‌ಬಿಐ ಫ್ಲೋಟಿಂಗ್ ರೇಟ್ ಬಾಂಡ್‌ಗಳಲ್ಲಿ ಹಣ ತೊಡಗಿಸಬಹುದು. ಇಲ್ಲಿ ವಾರ್ಷಿಕ ಶೇ 8.05ರಷ್ಟು ಬಡ್ಡಿ ಸಿಗುತ್ತಿದೆ. ಅಲ್ಲದೆ, ಹೂಡಿಕೆಗೆ ಇಲ್ಲಿ ಗರಿಷ್ಠ ಮಿತಿ ಇಲ್ಲ. ಇದರಲ್ಲಿ ತೊಡಗಿಸುವ ಹಣಕ್ಕೆ ಎನ್‌ಎಸ್‌ಸಿಯಲ್ಲಿ ಸಿಗುವ ಬಡ್ಡಿಗಿಂತ ಹೆಚ್ಚುವರಿಯಾಗಿ ಶೇ 0.35ರಷ್ಟು ಬಡ್ಡಿ ಸಿಗುತ್ತದೆ.
ಇತರರು ಪಿಪಿಎಫ್ ಮತ್ತು ಎನ್‌ಎಸ್‌ಸಿಯಲ್ಲಿ ಹೂಡಿಕೆ ಮಾಡುವುದು ಹೆಚ್ಚು ಸೂಕ್ತವಾಗಬಹುದು. ಪಿಪಿಎಫ್ ಹೂಡಿಕೆಗಳಿಗೆ ಈಗ ಶೇ 7.1ರಷ್ಟು ಬಡ್ಡಿ ಇದೆ. ಎನ್‌ಎಸ್‌ಸಿ ಹೂಡಿಕೆಗಳಿಗೆ ಶೇ 7.7ರಷ್ಟು ಬಡ್ಡಿ ಇದೆ.
ಹೂಡಿಕೆದಾರರು ತಮ್ಮ ಒಟ್ಟು ಹೂಡಿಕೆ ಮೊತ್ತದಲ್ಲಿ ಶೇ 10ರಷ್ಟನ್ನು ಅಥವಾ ಗರಿಷ್ಠ ಶೇ 15ರಷ್ಟನ್ನು ಮಾತ್ರ ಚಿನ್ನ ಹಾಗೂ ಬೆಳ್ಳಿಯಲ್ಲಿ ತೊಡಗಿಸಬೇಕು ಎಂಬುದು ತಜ್ಞರು ಹಿಂದಿನಿಂದಲೂ ನೀಡುತ್ತಿರುವ ಸಲಹೆ. ಆದರೆ 2025ರಲ್ಲಿ ಮಾರುಕಟ್ಟೆಯು ಈ ಸಲಹೆಗೆ ಸವಾಲು ಎಸೆಯಿತು. ಈ ಎರಡೂ ಅಮೂಲ್ಯ ಲೋಹಗಳ ಬೆಲೆಯು ಭಾರಿ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬೆಂಗಳೂರಿನಲ್ಲಿ 2025ರ ಜನವರಿ 1ರಂದು ₹80,440 ಇದ್ದ ಚಿನ್ನದ (24 ಕ್ಯಾರಟ್ ಪರಿಶುದ್ಧತೆಯ 10 ಗ್ರಾಂ ಚಿನ್ನ) ಬೆಲೆಯು ಡಿಸೆಂಬರ್ 31ರ ಹೊತ್ತಿಗೆ ₹1,39,950ಕ್ಕೆ ತಲುಪಿ ಶೇ 73.98ರಷ್ಟು ಜಿಗಿತ ಕಂಡಿತು. ಜಗತ್ತಿನ ಎಲ್ಲೆಡೆ ಕೇಂದ್ರೀಯ ಬ್ಯಾಂಕ್‌ಗಳು ಚಿನ್ನವನ್ನು ಖರೀದಿಸುತ್ತಿದ್ದವು. ವರ್ಷದುದ್ದಕ್ಕೂ ಅವುಗಳ ಖರೀದಿ ಉತ್ಸಾಹ ಕಡಿಮೆ ಆದಂತೆ ಕಾಣಲಿಲ್ಲ.
ಚಿನ್ನಕ್ಕೆ ಹೋಲಿಕೆ ಮಾಡಿದರೆ ಬೆಳ್ಳಿಯ ಬೆಲೆಯು ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಜಾಸ್ತಿ ಆಯಿತು. 2025ರ ಆರಂಭದಲ್ಲಿ ಬೆಂಗಳೂರಿನಲ್ಲಿ ₹91,000 ಇದ್ದ ಬೆಳ್ಳಿಯ (1 ಕೆ.ಜಿ. ಬೆಳ್ಳಿ) ಬೆಲೆಯು ವರ್ಷದ ಅಂತ್ಯದ ಹೊತ್ತಿಗೆ ₹2,46,200ಕ್ಕೆ ತಲುಪಿ ಶೇ 170.54ರಷ್ಟು ಲಾಭ ತಂದುಕೊಟ್ಟಿದೆ. ಕೈಗಾರಿಕೆಗಳಿಂದ ಬೆಳ್ಳಿಗೆ ಭಾರಿ ಬೇಡಿಕೆ ಬಂದಿರುವುದು, ಸೌರವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳ, ವಿದ್ಯುತ್ ಚಾಲಿತ ವಾಹನಗಳಲ್ಲಿ ಮತ್ತು ದತ್ತಾಂಶ ಕೇಂದ್ರಗಳಲ್ಲಿ ಬೆಳ್ಳಿಯ ಬಳಕೆ ಜಾಸ್ತಿ ಆಗಿರುವುದು ಬೆಲೆ ಇಷ್ಟು ಹೆಚ್ಚಳ ಆಗಲು ಕಾರಣಗಳಾಗಿವೆ.
ಬಡ್ಡಿ ದರ ಇಳಿಕೆಯ ನಿರೀಕ್ಷೆ, ಜಾಗತಿಕ ಮಟ್ಟದಲ್ಲಿ ಬಿಕ್ಕಟ್ಟುಗಳು ಹೆಚ್ಚಾಗುತ್ತಿರುವುದರ ಹಿನ್ನೆಲೆಯಲ್ಲಿ ಹೊಸ ವರ್ಷದಲ್ಲಿ ಕೂಡ ಈ ಎರಡೂ ಲೋಹಗಳ ಬೆಲೆಯು ಹೆಚ್ಚಳವಾಗುವ ಸಾಧ್ಯತೆ ಇದೆ. ಆದರೆ 2025ರಲ್ಲಿ ನೀಡಿದ್ದಂತಹ ಲಾಭದ ಪ್ರಮಾಣವನ್ನು ಇವು 2026ರಲ್ಲಿಯೂ ನೀಡುತ್ತವೆ ಎಂಬ ಖಾತರಿ ಇಲ್ಲ. ಹೀಗಾಗಿ ಹೂಡಿಕೆದಾರರು ತಮ್ಮ ಪೋರ್ಟ್‌ಫೋಲಿಯೊದಲ್ಲಿ ಪೂರ್ಣ ಬದಲಾವಣೆ ತಂದು, ಈ ಲೋಹಗಳಿಗೆ ಹೆಚ್ಚಿನ ಹಣ ಹಂಚಿಕೆ ಮಾಡುವುದಕ್ಕಿಂತಲೂ ಹಣವನ್ನು ವಿವಿಧ ಆಸ್ತಿ ವರ್ಗಗಳಲ್ಲಿ, ವಿವಿಧ ಹಣಕಾಸಿನ ಉತ್ಪನ್ನಗಳಲ್ಲಿ ಯಥೋಚಿತವಾಗಿ ಹಂಚಿಕೆ ಮಾಡುವುದನ್ನು ಮುಂದುವರಿಸಬೇಕು.
2025ರಲ್ಲಿ ಬಿಟ್‌ಕಾಯಿನ್ ಹೂಡಿಕೆದಾರರಿಗೆ ಹೆಚ್ಚು ಲಾಭ ಸಿಗಲಿಲ್ಲ. ಜನವರಿಯಲ್ಲಿ 92 ಸಾವಿರ ಡಾಲರ್ ಇದ್ದ ಬಿಟ್‌ಕಾಯಿನ್ ಬೆಲೆಯು 1.21 ಲಕ್ಷ ಡಾಲರ್‌ವರೆಗೆ ಏರಿಕೆ ಆಗಿತ್ತು. ನಂತರದಲ್ಲಿ ಅದು ಕುಸಿಯಿತು. ಈಗ ಅದರ ಬೆಲೆಯು 89 ಸಾವಿರ ಡಾಲರ್ ಮಟ್ಟದಲ್ಲಿದೆ. ಈಚಿನ ದಿನಗಳಲ್ಲಿ ಕೆಲವು ಸಾಂಸ್ಥಿಕ ಹೂಡಿಕೆದಾರರು ದೊಡ್ಡ ಮಟ್ಟದಲ್ಲಿ ಬಿಟ್‌ಕಾಯಿನ್‌ನಲ್ಲಿ ಹೂಡಿಕೆ ಮಾಡುತ್ತಿರುವ ಕಾರಣದಿಂದಾಗಿ ಇದರಲ್ಲಿ ಮತ್ತೆ ಕೆಲವರು ಆಸಕ್ತಿ ತಾಳುತ್ತಿದ್ದಾರೆ. ಬಿಟ್‌ಕಾಯಿನ್ ಮೇಲಿನ ಹೂಡಿಕೆಯು 2026ರಲ್ಲಿ ಉತ್ತಮ ಲಾಭ ತಂದುಕೊಡಬಹುದು. ಆದರೆ ಇಲ್ಲಿ ಒಂದು ಎಚ್ಚರಿಕೆಯ ಮಾತನ್ನು ಹೇಳಬೇಕು. ಷೇರುಗಳ ನಿಜವಾದ ಮೌಲ್ಯವನ್ನು ಕಂಪನಿಯ ಹಣಕಾಸಿನ ಸ್ಥಿತಿ, ಬೇರೆ ಬೇರೆ ಮಾನದಂಡಗಳನ್ನು ಆಧರಿಸಿ ಲೆಕ್ಕಹಾಕಬಹುದು. ಆದರೆ ಬಿಟ್‌ಕಾಯಿನ್‌ಗಳ ನಿಜವಾದ ಮೌಲ್ಯವನ್ನು ಲೆಕ್ಕಹಾಕುವುದು ಬಹಳ ಕಷ್ಟ. ಈಗಿನ ಹಂತದಲ್ಲಿ ಬಿಟ್‌ಕಾಯಿನ್‌ಗಳು ದುಬಾರಿಯೇ ಅಥವಾ ಅವು ನಿಜವಾದ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿವೆಯೇ ಎಂಬುದನ್ನು ಅರಿಯುವುದು ಆಗದ ಕೆಲಸ.
ಲೇಖಕ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಷನ್‌ನಲ್ಲಿ ಪ್ರಾಧ್ಯಾಪಕ ಹಾಗೂ ಪ್ರಮಾಣೀಕೃತ ಹಣಕಾಸು ಸಲಹೆಗಾರ (ಸಿಎಫ್‌ಎ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.