ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸುವವರು ಸಾಮಾನ್ಯವಾಗಿ ಬೇರೆ ಬೇರೆ ಫಂಡ್‌ಗಳಲ್ಲಿ ಹೂಡಿಕೆ ಮಾಡಿರುತ್ತಾರೆ. ಬೇರೆ ಬೇರೆ ಆಸ್ತಿ ನಿರ್ವಹಣಾ ಕಂಪನಿಗಳು ನಡೆಸುವ ಫಂಡ್‌ಗಳಲ್ಲಿ ಅವರು ಹಣ ತೊಡಗಿಸುವುದಿದೆ.
ಪ್ರತಿ ಆಸ್ತಿ ನಿರ್ವಹಣಾ ಕಂಪನಿಯೂ ಹೂಡಿಕೆದಾರರಿಗೆ ಅವರು ಹೂಡಿಕೆ ಮಾಡಿದ ಮೊತ್ತ ಎಷ್ಟು, ಆ ಹೂಡಿಕೆ ಎಷ್ಟಾಗಿದೆ ಎಂಬ ಬಗ್ಗೆ ಕಾಲಕಾಲಕ್ಕೆ ಮಾಹಿತಿ ಒದಗಿಸುತ್ತ ಇರುತ್ತದೆ. ಹಾಗಾದರೆ, ಹೂಡಿಕೆದಾರರು ಬೇರೆ ಬೇರೆ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿರುವ ಹಣದ ಒಟ್ಟು ಮೊತ್ತ ಎಷ್ಟು?
ಬೇರೆ ಬೇರೆ ಆಸ್ತಿ ನಿರ್ವಹಣಾ ಕಂಪನಿಗಳಿಂದ ಬರುವ ಮಾಹಿತಿಯನ್ನು ಹೂಡಿಕೆದಾರರು ಒಗ್ಗೂಡಿಸಿ, ಹೂಡಿಕೆಗಳ ಒಟ್ಟು ಮೊತ್ತವನ್ನು ತಾವೇ ಲೆಕ್ಕ ಹಾಕಿದರೆ ಈ ಪ್ರಶ್ನೆಗೆ ಉತ್ತರ ಸಿಗುತ್ತದೆ. ಆದರೆ, ಇಷ್ಟೆಲ್ಲ ಕೆಲಸ ಮಾಡುವ ಬದಲು ಉಚಿತವಾಗಿ ಸಿಗುವ ಕೆಲವು ಸೇವೆಗಳನ್ನು ಬಳಸಿಕೊಳ್ಳಬಹುದಲ್ಲವೇ? ಪೇಟಿಎಂನಂತಹ ಆ್ಯಪ್‌ಗಳು, ವಿವಿಧ ಮ್ಯೂಚುವಲ್ ಫಂಡ್‌ಗಳಲ್ಲಿ ತೊಡಗಿಸಿರುವ ಒಟ್ಟು ಮೊತ್ತ ಎಷ್ಟು ಎಂಬುದನ್ನು ಹೂಡಿಕೆದಾರರಿಗೆ ತಾವೇ ಲೆಕ್ಕ ಹಾಕಿ ತೋರಿಸುತ್ತವೆ.
‘ಪೇಟಿಎಂ’ನಲ್ಲಿ ‘ಟ್ರ್ಯಾಕ್ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೊ’ ಎಂಬ ಆಯ್ಕೆಯೊಂದು ಇದೆ. ಅದರ ಮೇಲೆ ಬೆರಳು ಇರಿಸಿದರೆ, ಹೂಡಿಕೆದಾರರಿಗೆ ತಮ್ಮ ಎಲ್ಲ ಮ್ಯೂಚುವಲ್ ಫಂಡ್ ಹೂಡಿಕೆಗಳ ಒಟ್ಟು ಮೊತ್ತ ಎಷ್ಟಾಗಿದೆ ಎಂಬುದನ್ನು ಕಂಡುಕೊಳ್ಳುವ ಅವಕಾಶ ಸಿಗುತ್ತದೆ.
ಇಷ್ಟೇ ಅಲ್ಲ, ತಾವು ಬೇರೆ ಬೇರೆ ಫಂಡ್‌ಗಳ ಮೂಲಕ ಮಾಡಿರುವ ಹೂಡಿಕೆಗಳನ್ನು ಬಳಸಿ ಯಾವೆಲ್ಲ ಕಂಪನಿಗಳ ಷೇರುಗಳನ್ನು ಖರೀದಿಸಲಾಗಿದೆ ಎಂಬ ವಿವರವನ್ನೂ ಇಲ್ಲಿಯೇ ಪಡೆದುಕೊಳ್ಳಬಹುದು. ಒಟ್ಟು ಹೂಡಿಕೆಯಲ್ಲಿ ಶೇಕಡಾವಾರು ಎಷ್ಟು ಪ್ರಮಾಣವು ಯಾವ ಕಂಪನಿಯ ಷೇರುಗಳಲ್ಲಿ ವಿನಿಯೋಗ ಆಗಿದೆ ಎಂಬುದು ಕೂಡ ಗೊತ್ತಾಗುತ್ತದೆ.
ಅಲ್ಲದೆ, ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್, ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿ ಎಷ್ಟು ಹಣ ತೊಡಗಿಸಿದ್ದಾರೆ ಎಂಬುದರ ವಿವರ ಪಡೆಯಬಹುದು. ಆದರೆ, ಈ ಸೌಲಭ್ಯದ ಮೂಲಕ ಹಣವನ್ನು ಹಿಂಪಡೆಯಲು ಅವಕಾಶ ಇಲ್ಲ. ಹಣ ಹಿಂಪಡೆಯಬೇಕಿದ್ದರೆ ಆಯಾ ಆಸ್ತಿ ನಿರ್ವಹಣಾ ಕಂಪನಿಯ ಆ್ಯಪ್ ಮೂಲಕವೇ ಮನವಿ ಸಲ್ಲಿಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.