ಮ್ಯೂಚುವಲ್ ಫಂಡ್‌ಗಳಲ್ಲಿ ಹಣ ತೊಡಗಿಸುವುದಕ್ಕೆ ಡಿಮ್ಯಾಟ್ ಖಾತೆಯನ್ನು ಹೊಂದಿರುವ ಅಗತ್ಯ ಇಲ್ಲ. ಸಾಂಪ್ರದಾಯಿಕ ಬಗೆಯಲ್ಲಿ, ಬ್ಯಾಂಕ್ ಖಾತೆಯಿಂದ ಹಣ ಕಡಿತ ಮಾಡಿಸಿ, ಆಸ್ತಿ ನಿರ್ವಹಣಾ ಕಂಪನಿಯ (ಎಎಂಸಿ) ಮೂಲಕ ಅದು ನಿರ್ವಹಿಸುವ ಮ್ಯೂಚುವಲ್ ಫಂಡ್‌ನಲ್ಲಿ ಹಣ ತೊಡಗಿಸಲು ಯಾವ ಅಡ್ಡಿಯೂ ಇಲ್ಲ. ಆದರೆ ಮ್ಯೂಚುವಲ್ ಫಂಡ್ ಯೂನಿಟ್‌ಗಳನ್ನು ಡಿಮ್ಯಾಟ್ ರೂಪದಲ್ಲಿಯೂ ಇರಿಸಿಕೊಳ್ಳಬಹುದು.
ಈ ರೀತಿ ಇರಿಸಿಕೊಳ್ಳುವಲ್ಲಿ ಒಂದಿಷ್ಟು ಅನುಕೂಲಗಳು ಕೂಡ ಇವೆ ಎಂದು ವಿವಿಧ ಆಸ್ತಿ ನಿರ್ವಹಣಾ ಕಂಪನಿಗಳು ಹೇಳುತ್ತವೆ. ಬ್ರೋಕರೇಜ್ ಕಂಪನಿಗಳು ಡಿಮ್ಯಾಟ್ ಖಾತೆ ತೆರೆಯುವ ಸೇವೆಯನ್ನು ಆನ್‌ಲೈನ್ ಮೂಲಕ ಒದಗಿಸುತ್ತಿರುವ ಈ ಕಾಲಘಟ್ಟದಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿಯೂ ನೇರವಾಗಿ ಷೇರುಗಳಲ್ಲಿಯೂ ಹೂಡಿಕೆ ಮಾಡುವವರು ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಇಂಥವರಿಗೆ ತಮ್ಮ ಎಂ.ಎಫ್ ಹಾಗೂ ಷೇರು ಹೂಡಿಕೆಗಳ ವಿವರವು ಒಂದೇ ಕಡೆ ಸಿಗುವುದಿಲ್ಲ. ಅವರು ಎಂ.ಎಫ್ ಯೂನಿಟ್‌ಗಳನ್ನು ಡಿಮ್ಯಾಟ್ ರೂಪದಲ್ಲಿ ಹೊಂದಿದ್ದರೆ, ಅಷ್ಟೂ ಹೂಡಿಕೆಗಳ ವಿವರವು ಒಂದೇ ಕಡೆ ಲಭ್ಯವಾಗುತ್ತದೆ.
ಇಷ್ಟೇ ಅಲ್ಲ, ಮ್ಯೂಚುವಲ್ ಫಂಡ್‌ಗಳನ್ನು ಡಿಮ್ಯಾಟ್ ರೂಪದಲ್ಲಿ ಇರಿಸಿಕೊಂಡಾಗ ಅವುಗಳನ್ನು ನಾಮನಿರ್ದೇಶನ ಮಾಡಿರುವ ವ್ಯಕ್ತಿಗೆ ವರ್ಗಾವಣೆ ಮಾಡುವುದು ಸುಲಭ ಎಂದು ಹೂಡಿಕೆ ಸೇವೆಗಳನ್ನು ಒದಗಿಸುವ ಕಂಪನಿಗಳು ಹೇಳುತ್ತವೆ. ಸಾಂಪ್ರದಾಯಿಕ ಬಗೆಯಲ್ಲಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಿದವರು ಅದನ್ನು ಡಿಮ್ಯಾಟ್ ರೂಪಕ್ಕೆ ಪರಿವರ್ತಿಸಲು ಅವಕಾಶ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.