ಸಾಲ (ಸಾಂದರ್ಭಿಕ ಚಿತ್ರ)
–ಗೆಟ್ಟಿ ಚಿತ್ರ
ತುರ್ತು ಹಣಕಾಸಿನ ಅವಶ್ಯಕತೆ ಇದ್ದಾಗ ಸುಲಭವಾಗಿ ವೈಯಕ್ತಿಕ ಸಾಲ ಸಿಗುತ್ತದೆ. ಮಾಸಿಕ ವೇತನ ಪಡೆಯುವವರಾಗಿದ್ದರೆ ಈ ಸಾಲ ಪಡೆಯುವುದು ಇನ್ನಷ್ಟು ಸುಲಭ. ಕಡಿಮೆ ದಾಖಲೆಗಳನ್ನು ನೀಡಬೇಕಾಗಿರುವುದರಿಂದ ಹಾಗೂ ಬೇಗನೇ ಸಾಲ ಸಿಗುವುದರಿಂದ ಹೆಚ್ಚಿನವರು ವೈಯಕ್ತಿಕ ಸಾಲವನ್ನು ಪಡೆದುಕೊಳ್ಳುತ್ತಾರೆ.
ಆದರೆ ವೈಯಕ್ತಿಕ ಸಾಲ ತೆಗೆದುಕೊಳ್ಳುವವರು ಈ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಪರ್ಸನಲ್ ಲೋನ್ ಪಡೆದುಕೊಂಡು ಅದನ್ನು ತೀರಾ ಅಗತ್ಯವಾದ ಅವಶ್ಯಕತೆಗಳಿಗೆ ವಿವೇಚನೆಯಿಂದ ಬಳಸುವುದು ಬುದ್ಧಿವಂತಿಕೆ. ಹಲವರು ಈ ಸಾಲವನ್ನು ಶಾಪಿಂಗ್, ಹೊರಗಡೆ ಊಟ ಸೇರಿ ಅನಗತ್ಯ ಖರ್ಚಿಗೆ ಬಳಸುತ್ತಾರೆ. ಈ ಸಾಲಕ್ಕೆ ಹೆಚ್ಚಿನ ಬಡ್ಡಿ ದರದ ಜೊತೆಗೆ ಇತರ ಶುಲ್ಕಗಳೂ ಇರುತ್ತದೆ. ಇದು ಸಾಲದ ಮೊತ್ತವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎನ್ನುವುದು ತಲೆಯಲ್ಲಿರಬೇಕು. ಹೀಗಾಗಿ ಅನಗತ್ಯ ಖರ್ಚು ಮಾಡುವುದರಿಂದ ಸಾಲದ ಹೊರೆ ಇನ್ನಷ್ಟು ಏರಿಕೆಯಾಗುತ್ತದೆ.
ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುವುದು ಜನರು ಮಾಡುವ ಮತ್ತೊಂದು ತಪ್ಪು. ತಮಗೆ ಎಷ್ಟು ಸಾಲ ಬೇಕೆನ್ನುವುದನ್ನು ಲೆಕ್ಕ ಹಾಕದೇ, ಅಪ್ರೂವ್ ಆಗುವ ಅಷ್ಟೂ ಮೊತ್ತವನ್ನು ಪಡೆದು, ಬಳಿಕ ಮರುಪಾವತಿ ಮಾಡಲಾಗದೆ ಪರಿತಪಿಸುವುದು ಇದೆ. ಅಗತ್ಯಕ್ಕಿಂತ ಹೆಚ್ಚು ಸಾಲ ಪಡೆಯುವುದು ಎಂದರೆ, ನಿಮಗೆ ಬೇಡದ ಹಣದ ಮೇಲೆ ವೃಥಾ ಬಡ್ಡಿ ಪಾವತಿ ಮಾಡುವುದು ಎಂದರ್ಥ. ನಿಮಗೆ ಎಷ್ಟು ಅಗತ್ಯವೋ ಅಷ್ಟೇ ಸಾಲ ಪಡೆಯಿರಿ. ಸಾಲ ಪಡೆಯುವುದಕ್ಕೂ ಮುನ್ನ ಎಲ್ಲಾ ಲೆಕ್ಕಾಚಾರ ಮಾಡಿ. ಬಡ್ಡಿದರ, ಇಎಂಐ ಲೆಕ್ಕ ಹಾಕಲು, ಆನ್‌ಲೈನ್‌ನಲ್ಲಿ ಲಭ್ಯ ಇರುವ ಕ್ಯಾಲ್ಕುಲೇಟರ್‌ಗಳನ್ನು ಬಳಸಿ.
ಮರುಪಾವತಿ ತಪ್ಪಿಸುವುದು ಭವಿಷ್ಯದ ಅಪಾಯವನ್ನು ನಿಮ್ಮ ಮೇಲೆ ಎಳೆದುಕೊಂಡಂತೆ. ಇದು ನಿಮ್ಮ ಕ್ರೆಡಿಟ್ ಸ್ಕೋರ್ ಮೇಲೆ ಪರಿಣಾಮ ಬೀರುತ್ತದೆ. ಆಸ್ತಿ ಜಪ್ತಿ ಹಾಗೂ ಕಾನೂನು ಕ್ರಮವೂ ಉಂಟಾಗಬಹುದು. ಭವಿಷ್ಯದಲ್ಲಿ ಇವುಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸಿ. ಅದಕ್ಕಾಗಿ ಮಾಸಿಕ ಕಂತು ಪಾವತಿ ಮಾಡಲು ಸಾಮರ್ಥ್ಯವಿರುವಷ್ಟೇ ಸಾಲ ಪಡೆಯಿರಿ. ಸರಿಯಾದ ಸಮಯಕ್ಕೆ ಪಾವತಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಆಟೊ ಡೆಬಿಟ್ ಆಯ್ಕೆ ಮಾಡಿಕೊಳ್ಳಿ ಅಥವಾ ರಿಮೈಂಡರ್ ಇಟ್ಟುಕೊಳ್ಳಿ. ಇಎಂಐ ಪಾವತಿಗೆ ಸಮಸ್ಯೆಯಾದರೆ ಸಾಲದಾತರಲ್ಲಿ ಮಾತುಕತೆ ನಡೆಸಿ ಪರಿಹಾರ ಕಂಡುಕೊಳ್ಳಿ.
ಹೆಚ್ಚು ಬಡ್ಡಿದರ ಇರುವ ಲೋನ್ ಮರುಪಾವತಿ ಮಾಡಲು ವೈಯಕ್ತಿಕ ಸಾಲ ಪಡೆಯುವುದು ಉತ್ತಮ ನಡೆ ಸರಿ. ಇದು ಇಎಂಐ ಹೊರೆಯನ್ನು ಕಡಿಮೆ ಮಾಡುತ್ತದೆ. ಆದರೆ ಹೊಸ ಸಾಲದ ಅವಧಿ ಧೀರ್ಘವಾಗುತ್ತದೆ. ಹೀಗಾಗಿ ಹೊಸ ಸಾಲ ಪಡೆಯುವಾಗ ಭವಿಷ್ಯದ ಲೆಕ್ಕಾಚಾರ ಮಾಡಿ. ಮರುಪಾವತಿಗೆ ಸರಿಯಾದ ಯೋಜನೆ ಮಾಡಿ. ಪಾವತಿ ಅವಧಿ ದೀರ್ಘಿಸುವುದೂ ನಷ್ಟವೇ.
ಸಹಜವಾಗಿ ಕಡಿಮೆ ಬಡ್ಡಿ ಇರುವ ಪರ್ಸನಲ್ ಲೋನ್ ಅನ್ನು ಜನರು ಆಯ್ಕೆ ಮಾಡುತ್ತಾರೆ. ಕಡಿಮೆ ಬಡ್ಡಿ ದರ ಇದೆ ಎಂದ ಮಾತ್ರಕ್ಕೆ ಇತರ ಶುಲ್ಕಗಳು ಕಡಿಮೆ ಇರಬೇಕೆಂದಿಲ್ಲ. ಅಥವಾ ಸರಳ ಪಾವತಿ ವಿಧಾನ ಇರಬೇಕೆಂದಿಲ್ಲ. ಇವೆಲ್ಲವುಗಳನ್ನು ಪರಿಶೀಲಿಸಿಯೇ ವೈಯಕ್ತಿಕ ಲೋನ್ ಪಡೆಯುವುದರ ಬಗ್ಗೆ ನಿರ್ಧರಿಸಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.