ADVERTISEMENT

ರೆಪೊ ಇಳಿಕೆ: ಸಾಲಗಾರರಿಗೆ ಸಿಹಿ, ಹೂಡಿಕೆದಾರರಿಗೆ?

ವಿಜಯ್ ಜೋಷಿ
Published 11 ಜೂನ್ 2025, 21:06 IST
Last Updated 11 ಜೂನ್ 2025, 21:06 IST
   

ರೆಪೊ ದರವನ್ನು ಇಳಿಸುವ ಮೂಲಕ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಾಲಗಾರರಿಗೆ ಸಿಹಿ ಸುದ್ದಿಯನ್ನೇನೋ ನೀಡಿದೆ. ನಗದು ಮೀಸಲು ಅನುಪಾತವನ್ನು (ಸಿಆರ್‌ಆರ್‌) ತಗ್ಗಿಸುವ ಮೂಲಕ ಸಾಲ ನೀಡಲು ಬ್ಯಾಂಕ್‌ಗಳ ಬಳಿ ಹೆಚ್ಚು ಹಣವಿರುವಂತೆಯೂ ನೋಡಿಕೊಂಡಿದೆ. ಆದರೆ, ರೆಪೊ ದರ ಇಳಿಕೆಯು ಠೇವಣಿದಾರರಿಗೆ ಒಳ್ಳೆಯ ಸುದ್ದಿಯಂತೂ ಅಲ್ಲವೇ ಅಲ್ಲ.

ರೆಪೊ ದರ ಇಳಿಕೆಯಾಗುತ್ತಿದ್ದಂತೆಯೇ ದೇಶದ ಕೆಲವು ಮುಂಚೂಣಿ ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಕಡಿಮೆ ಮಾಡುವ ಘೋಷಣೆ ಹೊರಡಿಸಿವೆ. ಠೇವಣಿಗಳ ಮೇಲಿನ ಬಡ್ಡಿ ದರ ಇಳಿಕೆಯಷ್ಟೇ ಅಲ್ಲದೆ, ಪಿಪಿಎಫ್‌, ಎನ್‌ಎಸ್‌ಸಿಯಂತಹ ಕೆಲವು ಜನಪ್ರಿಯ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಕೂಡ ಕಡಿಮೆ ಆಗುವ ಸಾಧ್ಯತೆ ಹೆಚ್ಚಾಗಿದೆ. ಹಾಗಾದರೆ ಇಂತಹ ಸಂದರ್ಭದಲ್ಲಿ ಸಣ್ಣ ಹೂಡಿಕೆದಾರರಿಗೆ ಹೆಚ್ಚಿನ ಲಾಭ ಪಡೆಯಲು ಇರುವ ಆಯ್ಕೆಗಳೇನು?

ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರ ಇಳಿಕೆ ಆಗುತ್ತದೆ ಎಂಬುದರಲ್ಲಿ ಯಾವ ಅನುಮಾನವೂ ಉಳಿದಿಲ್ಲ. ಆದರೆ ಸಣ್ಣ ಹೂಡಿಕೆದಾರರು ತಮ್ಮ ಹೂಡಿಕೆಗಳ ಮೇಲಿನ ಲಾಭವು ಗಣನೀಯವಾಗಿ ತಗ್ಗಬಾರದು ಎಂದಾದರೆ ಒಂದಿಷ್ಟು ಮರುಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಸೂಕ್ತ ಎಂದು ವೈಯಕ್ತಿಕ ಹಣಕಾಸು ತಜ್ಞರು ಹೇಳಿದ್ದಾರೆ. ಆದರೆ, ಹೆಚ್ಚಿನ ಬಡ್ಡಿ ಸಿಗುತ್ತದೆ ಎಂಬ ಒಂದೇ ಕಾರಣಕ್ಕೆ ಸುಭದ್ರವಲ್ಲದ ಹಣಕಾಸು ಸಂಸ್ಥೆಗಳ ಕಡೆ ಮುಖ ಮಾಡಬಾರದು, ಬಹಳ ಎಚ್ಚರಿಕೆಯಿಂದ ಪೋರ್ಟ್‌ಫೋಲಿಯೊ ಮರುಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದ್ದಾರೆ.

ADVERTISEMENT

ರೆಪೊ ದರ ಇಳಿಕೆಯ ಪರಿಣಾಮವನ್ನು ಬ್ಯಾಂಕ್‌ಗಳು ಗ್ರಾಹಕರಿಗೆ ವರ್ಗಾಯಿಸಲು ಆರಂಭಿಸಿವೆ. ‘ಆದರೆ ಕೆಲವು ಬ್ಯಾಂಕ್‌ಗಳು ಠೇವಣಿಗಳ ಮೇಲಿನ ಬಡ್ಡಿ ದರವನ್ನು ಇನ್ನೂ ತಗ್ಗಿಸಿಲ್ಲ. ಅವು ಆ ಕೆಲಸ ಮಾಡುವ ಮೊದಲು ಈಗಿರುವ ಹೆಚ್ಚಿನ ಬಡ್ಡಿ ದರದ ಪ್ರಯೋಜನ ಪಡೆದುಕೊಳ್ಳಬೇಕು, ದೀರ್ಘ ಅವಧಿಗೆ ನಿಶ್ಚಿತ ಠೇವಣಿಯಲ್ಲಿ ಹಣ ತೊಡಗಿಸಬೇಕು. ಆಗ ಈಗಿರುವ ಹೆಚ್ಚಿನ ಬಡ್ಡಿ ದರದ ಪ್ರಯೋಜನ ದಕ್ಕುತ್ತದೆ’ ಎಂದು ಬ್ಯಾಂಕಿಂಗ್ ತಜ್ಞ ವಸಂತ ಜಿ. ಹೆಗಡೆ ಸಲಹೆ ನೀಡಿದರು.

ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು ಕೇಂದ್ರ ಸರ್ಕಾರವು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಜೂನ್‌ 30ಕ್ಕೆ ಪರಿಷ್ಕರಣೆ ನಡೆಯಲಿದೆ. ರೆಪೊ ದರ ಇಳಿಕೆ ಹಾಗೂ ಹಣದುಬ್ಬರ ತಗ್ಗಿರುವುದರ ಪರಿಣಾಮವಾಗಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರವು ಕಡಿಮೆ ಆಗುವ ಸಾಧ್ಯತೆ ಇದೆ.

‘ಸಣ್ಣ ಹೂಡಿಕೆದಾರರು ಆರ್‌ಬಿಐನ ಫ್ಲೋಟಿಂಗ್ ರೇಟ್ ಸೇವಿಂಗ್ಸ್‌ ಬಾಂಡ್‌ಗಳಲ್ಲಿಯೂ ಹಣ ತೊಡಗಿಸಬಹುದು. ಈ ಬಾಂಡ್‌ಗಳಲ್ಲಿ ತೊಡಗಿಸುವ ಹಣವನ್ನು ಏಳು ವರ್ಷ ಹಿಂದಕ್ಕೆ ಪಡೆಯಲಾಗದು. ಆದರೆ ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಎನ್‌ಎಸ್‌ಸಿಗೆ ನೀಡುವ ಬಡ್ಡಿ ದರದ ಮೇಲೆ ಹೆಚ್ಚುವರಿಯಾಗಿ ಶೇ 0.35ರಷ್ಟು ಬಡ್ಡಿ ಸಿಗುತ್ತದೆ. ಇದಕ್ಕೆ ಸರ್ಕಾರದ ಖಾತರಿ ಇರುವ ಕಾರಣಕ್ಕೆ ತೊಡಗಿಸಿದ ಹಣ ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ’ ಎಂದು ಅವರು ತಿಳಿಸಿದರು.

ಇದುವರೆಗೆ ‘ಹೊಂದಾಣಿಕೆ’ಯ ಹಣಕಾಸು ನೀತಿ ಅನುಸರಿಸುತ್ತಿದ್ದ ಆರ್‌ಬಿಐ ಈಗ ಅದನ್ನು ಬದಲಾಯಿಸಿದೆ. ಹಣಕಾಸು ನೀತಿಯು ‘ತಟಸ್ಥ’ವಾಗಿ ಇರಲಿದೆ ಎಂದು ಹೇಳಿದೆ. ಅಂದರೆ, ರೆಪೊ ದರವು ಮುಂದಿನ ದಿನಗಳಲ್ಲಿ ಇನ್ನಷ್ಟು ಇಳಿಕೆ ಆಗುವ ಸಾಧ್ಯತೆ ಇಲ್ಲ.

ಕೆಲವು ಸಣ್ಣ ಬ್ಯಾಂಕ್‌ಗಳು ಹೆಚ್ಚಿನ ಠೇವಣಿ ಸಂಗ್ರಹಿಸುವ ಗುರಿಯೊಂದಿಗೆ ದೊಡ್ಡ ಬ್ಯಾಂಕ್‌ಗಳು ನೀಡುವುದಕ್ಕಿಂತ ತುಸು ಹೆಚ್ಚಿನ ಬಡ್ಡಿಯನ್ನು ಕೊಡುತ್ತವೆ. ‘ಅಂತಹ ಬ್ಯಾಂಕ್‌ಗಳಲ್ಲಿ ₹5 ಲಕ್ಷಕ್ಕೆ ಮೀರದಂತೆ ಹೆಚ್ಚಿನ ಬಡ್ಡಿಗೆ ನಿಶ್ಚಿತ ಠೇವಣಿಯಲ್ಲಿ ಹಣ ತೊಡಗಿಸಬಹುದು. ದುರದೃಷ್ಟವಶಾತ್‌ ಬ್ಯಾಂಕ್‌ಗೆ ತೊಂದರೆ ಆದರೂ ₹5 ಲಕ್ಷದವರೆಗಿನ ಠೇವಣಿಗಳಿಗೆ ವಿಮೆಯ ರಕ್ಷೆ ಇರುತ್ತದೆ’ ಎಂದು ಚಾರ್ಟರ್ಡ್‌ ಅಕೌಂಟೆಂಟ್ ಕುಮಾರ್ ಪ್ರಸಾದ್ ಸಲಹೆ ನೀಡಿದರು.

ರೆಪೊ ದರ ಇಳಿಕೆಯು ಆರ್ಥಿಕ ಚಟುವಟಿಕೆಗಳಿಗೆ ಇಂಬು ಕೊಡುವ ನಿರೀಕ್ಷೆ ಇದೆ. ಸಾಮಾನ್ಯವಾಗಿ ರೆಪೊ ದರ ಇಳಿಕೆ ಕಂಡಾಗ, ಈಕ್ವಿಟಿ ಮಾರುಕಟ್ಟೆಯು ಜಿಗಿಯುತ್ತದೆ. ಐದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಗೆ ಹಣ ತೊಡಗಿಸುವ ಶಕ್ತಿ ಇರುವವರು ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ ಹಣ ತೊಡಗಿಸಬಹುದು. ಡೆಟ್ ಫಂಡ್‌ ಅಥವಾ ಲಿಕ್ವಿಡ್‌ ಫಂಡ್‌ಗಳಲ್ಲಿಯೂ ಹೂಡಿಕೆ ಮಾಡಬಹುದು ಎಂದು ಪ್ರಸಾದ್ ಹೇಳಿದರು.

ಜಾಗತಿಕ ಮಟ್ಟದಲ್ಲಿ ವ್ಯಾಪಾರ, ವಾಣಿಜ್ಯ ಚಟುವಟಿಕೆಗಳ ಮೇಲೆ ಒಂದಿಷ್ಟು ಅಸ್ಥಿರತೆಯ ಕಾರ್ಮೋಡಗಳು ಇರುವ ಈಗಿನ ಸಂದರ್ಭದಲ್ಲಿ ಮ್ಯೂಚುವಲ್‌ ಫಂಡ್‌ಗಳ ಮೂಲಕ ಒಂದೇ ಬಾರಿಗೆ ಹಣ ತೊಡಗಿಸುವುದಕ್ಕಿಂತಲೂ, ವ್ಯವಸ್ಥಿತವಾಗಿ ಅವುಗಳಲ್ಲಿ ಹಣ ಹೂಡಿಕೆ ಮಾಡುವುದು ಸೂಕ್ತ ಎಂಬುದು ತಜ್ಞರ ಅನಿಸಿಕೆ.

‘ಈಗಿನ ಸಂದರ್ಭಕ್ಕೆ ಬ್ಯಾಲೆನ್ಸ್‌ ಅಡ್ವಾಂಟೇಜ್‌ ಫಂಡ್‌ಗಳು ಒಳ್ಳೆಯವು. ಅವು ಹಣವನ್ನು ಷೇರುಗಳಲ್ಲಿ ಹಾಗೂ ಸಾಲಪತ್ರಗಳಲ್ಲಿ ಹಂಚಿ ಮಾಡಿ, ಸರಾಸರಿ ಲಾಭವು ಚೆನ್ನಾಗಿ ಇರುವಂತೆ ಮಾಡಲು ಪ್ರಯತ್ನಿಸುತ್ತವೆ. ಹೂಡಿಕೆದಾರರು ಫ್ಲೆಕ್ಸಿ ಕ್ಯಾಪ್‌ ಫಂಡ್‌ಗಳಲ್ಲಿಯೂ ಹಣ ತೊಡಗಿಸಬಹುದು’ ಎಂದು ಪ್ರಸಾದ್ ಸಲಹೆ ನೀಡಿದರು.

ಸಾಲದ ಮೇಲಿನ ಬಡ್ಡಿ ಕಡಿಮೆ ಆಗುವುದರಿಂದ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕಂಪನಿಗಳಿಗೆ ಸಾಲದ ಹೊರೆಯು ತುಸು ತಗ್ಗಬಹುದು, ಅವುಗಳ ಲಾಭ ಗಳಿಕೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯು ಕೆಲವರಲ್ಲಿ ಇದೆ. ಹೀಗಿರುವಾಗ, ಸ್ಮಾಲ್‌ ಕ್ಯಾಪ್‌ ಮತ್ತು ಮಿಡ್‌ ಕ್ಯಾಪ್‌ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದಕ್ಕೆ ಇದು ಸರಿಯಾದ ಸಮಯವೇ ಎಂಬ ಪ್ರಶ್ನೆಯನ್ನು ವೈಯಕ್ತಿಕ ಹಣಕಾಸು ತಜ್ಞ ಪ್ರಮೋದ ಶ್ರೀಕಾಂತ ದೈತೋಟ ಅವರು ಮುಂದೆ ಇರಿಸಿದಾಗ, ‘ಸಾಲದ ಮೂಲಕವೇ ವಿಸ್ತರಣಾ ಚಟುವಟಿಕೆಗಳನ್ನು ಕೈಗೊಳ್ಳುವ ಕಂಪನಿಗಳು ಹೆಚ್ಚು ಬೆಳವಣಿಗೆ ಕಾಣಬಹುದು. ಆದರೆ ಸಾಲವನ್ನು ನೆಚ್ಚಿಕೊಳ್ಳದ ಕಂಪನಿಗಳು ರೆಪೊ ದರದ ಇಳಿಕೆಯ ಕಾರಣದಿಂದಾಗಿ ದೊಡ್ಡ ಪ್ರಯೋಜನ ಪಡೆಯುವ ಸಾಧ್ಯತೆ ಕಡಿಮೆ’ ಎಂದು ಉತ್ತರಿಸಿದರು.

ರೆಪೊ ದರದ ಇಳಿಕೆ ಹಾಗೂ ಸಿಆರ್‌ಆರ್‌ ಕಡಿತವನ್ನು ಒಟ್ಟಾಗಿ ಗ್ರಹಿಸಿದಾಗ, ಹಣಕಾಸು ಸೇವಾ ವಲಯಗಳಿಗೆ ಸಂಬಂಧಿಸಿದ ಮ್ಯೂಚುವಲ್‌ ಫಂಡ್‌ಗಳಲ್ಲಿ ಹಣ ತೊಡಗಿಸುವುದು ಸೂಕ್ತವಾಗಬಹುದು ಎಂದು ದೈತೋಟ ಅಭಿಪ್ರಾಯ ವ್ಯಕ್ತಪಡಿಸಿದರು. ಇವುಗಳ ಜೊತೆಯಲ್ಲೇ, ಹೈಬ್ರಿಡ್‌ ಮ್ಯೂಚುವಲ್‌ ಫಂಡ್‌ಗಳ ಕಡೆ ಹೂಡಿಕೆದಾರರು ಗಮನಹರಿಸಬಹುದು. ಅವು ಒಂದಿಷ್ಟು ಹಣವನ್ನು ಬಾಂಡ್‌ಗಳಲ್ಲಿ ತೊಡಗಿಸುತ್ತವೆ, ರೆಪೊ ಇಳಿಕೆಯಾದಾಗ ಇವುಗಳಲ್ಲಿ ತುಸು ಹೆಚ್ಚು ಲಾಭ ಸಿಗಬಹುದು ಎಂದರು. ಈ ಸಲಹೆಗಳು ತುಸು ರಿಸ್ಕ್‌ ತೆಗೆದುಕೊಂಡು, ಹೆಚ್ಚಿನ ಲಾಭವನ್ನು ನಿರೀಕ್ಷಿಸುವ ವ್ಯಕ್ತಿಗಳಿಗೆ ಎಂದು ಸ್ಪಷ್ಟಪಡಿಸಿದರು.

New Indian Currency with Piggy Bank - 3D Rendered Image Indian currency piggy bank
Piggy Bank With Automatic Deposit Auto Withdrawal. This little piggy has stacks and stacks of cash from saving him money. Piggy Bank With Automatic Deposit Auto Withdrawal. This little piggy has stacks and stacks of cash from saving him money.

ತಜ್ಞರ ಸಲಹೆಗಳು

* ಚಿನ್ನವು ಈಚಿನ ದಿನಗಳಲ್ಲಿ ಬಹಳ ಒಳ್ಳೆಯ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ. ಹೀಗಾಗಿ ತಕ್ಷಣಕ್ಕೆ ಇನ್ನಷ್ಟು ಹೆಚ್ಚು ಲಾಭ ಸಿಗಲಿಕ್ಕಿಲ್ಲ. ಆದರೆ ದೀರ್ಘಾವಧಿಗೆ ಇದು ಒಳ್ಳೆಯ ಹೂಡಿಕೆ ಎಂಬುದರಲ್ಲಿ ಅನುಮಾನವಿಲ್ಲ

* ಸುರಕ್ಷತೆಯನ್ನು ಖಾತರಿಪಡಿಸಿಕೊಂಡು ಸಣ್ಣ ಬ್ಯಾಂಕ್‌ಗಳಲ್ಲಿ ಹೆಚ್ಚಿನ ಬಡ್ಡಿ ದರಕ್ಕೆ ₹5 ಲಕ್ಷದವರೆಗೆ ಹಣ ತೊಡಗಿಸಬಹುದು

* ಮ್ಯೂಚುವಲ್‌ ಫಂಡ್‌ಗಳ ಮೂಲಕ ಷೇರುಗಳಲ್ಲಿ ವ್ಯವಸ್ಥಿತವಾಗಿ ಹೂಡಿಕೆ ಹೆಚ್ಚು ಮಾಡಬಹುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.