ಗೃಹ ಸಾಲ
ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಶುಕ್ರವಾರ ರೆಪೊ ದರದಲ್ಲಿ 25 ಮೂಲಾಂಶವನ್ನು ಕಡಿತಗೊಳಿಸಿದೆ. ಹೀಗಾಗಿ ರೆಪೋದರ ಶೇ 5.25ಕ್ಕೆ ಇಳಿದಿದೆ. ಇದರಿಂದ ಬ್ಯಾಂಕ್‌ಗಳು ಬಡ್ಡಿದರ ಕಡಿಮೆ ಮಾಡುವ ನಿರೀಕ್ಷೆ ಇದೆ. ಬಡ್ಡಿ ದರ ಇಳಿಕೆಗೆ ಸಾಲದ ಮಾದರಿ, ಮಾನದಂಡ ಮುಂತಾದವುಗಳು ಪರಿಗಣನೆಗೆ ಬರುತ್ತದೆ.
ಸಾಮಾನ್ಯವಾಗಿ ರೆಪೊ ದರ ಇಳಿಕೆಯಾದಾಗ ಬ್ಯಾಂಕ್‌ಗಳು ಸಾಲದ ಬಡ್ಡಿ ದರವನ್ನು ಇಳಿಕೆ ಮಾಡುತ್ತವೆ. ರೆಪೊ ದರದ ಮೇಲೆ ಅವಲಂಬಿತವಾದ ಸಾಲ ಪಡೆದವರು (ಫ್ಲೋಟಿಂಗ್ ದರ) ಇದರ ಪ್ರಯೋಜನವನ್ನು ಮೊದಲು ಪಡೆಯುತ್ತಾರೆ. ಮುಂಬರುವ ಇಎಂಐ ಮೊತ್ತ ಕಡಿಮೆಯಾಗುತ್ತದೆ.
ಮೂಲ ಬಡ್ಡಿ ದರದಲ್ಲಿ ಸಾಲ ಪಡೆದವರಿಗೆ ಇದರ ಪ್ರಯೋಜನ ಸಿಗಲು ಸಮಯ ಬೇಕಾಗಬಹುದು. ಇದು ಬ್ಯಾಂಕ್‌ನ ಪರಿಷ್ಕಣೆಗೆ ಒಳಪಡುತ್ತದೆ. ಸ್ಥಿರ ಬಡ್ಡಿದರದ ಗೃಹ ಸಾಲ ಪಡೆದವರಿಗೆ ಇದರ ಲಾಭ ಸಿಗಬೇಕೆಂದಿಲ್ಲ.
ಒಂದು ಉದಾಹರಣೆ ಮೂಲಕ ಇದನ್ನು ತಿಳಿದುಕೊಳ್ಳಬಹುದು
ವಿಶಾಲ್ ಎಂಬವರು ₹50 ಲಕ್ಷದ ರೆಪೋ ದರಕ್ಕೆ ಸಂಬಂಧಿಸಿದ ಫ್ಲೋಟಿಂಗ್ ದರದಲ್ಲಿ ಗೃಹ ಸಾಲ ಪಡೆದುಕೊಂಡಿದ್ದಾರೆ, ಪ್ರಸ್ತುತ ಬಡ್ಡಿದರವು ಶೇ 9 ಆಗಿದ್ದು, 20 ವರ್ಷದ ಅವಧಿಗಾಗಿ ಅವರ ಇಎಂಐ ಸುಮಾರು ₹44,986 ಇದೆ ಎಂದು ಅಂದುಕೊಳ್ಳೋಣ.
ಈಗ ಆರ್‌ಬಿಐ ಬ್ಯಾಂಕ್ ರೆಪೋ ದರದಲ್ಲಿ 25 ಮೂಲಾಂಶ (ಶೇ 0.25) ಕಡಿತಗೊಳಿಸಿದ್ದರಿಂದ ಅವರ ಬ್ಯಾಂಕ್ ಕೂಡ ಸಾಲದ ಬಡ್ಡಿದರವನ್ನು ಶೇ 0.25 ಕಡಿಮೆ ಮಾಡುತ್ತದೆ. ಇದರಿಂದ ವಿಶಾಲ್ ಅವರ ಗೃಹಸಾಲದ ಬಡ್ಡಿದರವು ಶೇ 8.75 ಆಗುತ್ತದೆ.
ಸದ್ಯ ಇರುವ ಇಎಂಐ: ₹44,986
ಹೊಸ ಇಎಂಐ: ₹43,855 (ಸುಮಾರು)
ತಿಂಗಳ ಉಳಿತಾಯ: ಸುಮಾರು ₹1,130
ವಾರ್ಷಿಕ ಉಳಿತಾಯ: ಸುಮಾರು ₹13,500
ಇದರ ಜೊತೆಗೆ ಇನ್ನೊಂದು ಆಯ್ಕೆಯೂ ವಿಶಾಲ್ ಅವರ ಮುಂದಿದೆ. ಸದ್ಯ ಇರುವ ಇಎಂಐ ಮೊತ್ತವನ್ನು ಅಷ್ಟೇ ಉಳಿಸಿ ಸಾಲದ ಅವಧಿಯನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಪ್ರಕರಣದಲ್ಲಿ ಸಾಲ ಪಾವತಿಯ ತಿಂಗಳುಗಳು ಕಡಿಮೆಯಾಗುತ್ತವೆ. ದೀರ್ಘಾವಧಿಯಲ್ಲಿ ಬಡ್ಡಿಯ ಹೊರೆ ಕಡಿಮೆಯಾಗುತ್ತದೆ.
– ಇದು ಮಾಹಿತಿಗಾಗಿ ಮಾತ್ರ. ಹೆಚ್ಚಿನ ಮಾಹಿತಿಗೆ ನಿಮ್ಮ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.