ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 26 ಏಪ್ರಿಲ್ 2022, 18:22 IST
Last Updated 26 ಏಪ್ರಿಲ್ 2022, 18:22 IST

ಚಂದ್ರಶೇಖರ ಬೆಳ್ಗಾಂವ್ಕರ್,ಬೆಳಗಾವಿ

l→ಪ್ರಶ್ನೆ: ಒಂದು ತಿಂಗಳ ಹಿಂದೆ ನಾನು ಕೆಲವು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಿದ್ದೆ. ಷೇರುಗಳು ಉತ್ತಮ ಕಂಪನಿಗಳದ್ದೇ ಆಗಿದ್ದವು. ಆದರೆ ಉಕ್ರೇನ್–ರಷ್ಯಾ ಯುದ್ಧದ ಪರಿಣಾಮವಾಗಿ ನಿಫ್ಟಿ ಸೂಚ್ಯಂಕ ಬಹಳ ಅಸ್ಥಿರವಾದುದನ್ನು ಕಂಡು ಸ್ನೇಹಿತರ ಸಲಹೆಯಂತೆ ಬಹಳ ನಷ್ಟದೊಂದಿಗೆ ಸ್ಟಾಪ್ ಲಾಸ್ ಥಿಯರಿಗೆ ಅನುಗುಣವಾಗಿ ಮಾರಾಟ ಮಾಡಿದೆ. ಸುಮಾರು ₹ 1 ಲಕ್ಷದಷ್ಟು ನಷ್ಟ ಕಂಡೆ. ಮುಂದೆ ಷೇರು ಮಾರುಕಟ್ಟೆ ಸಹವಾಸ ಬೇಡವೆನಿಸಿದೆ. ಸಂಭವಿಸಿದ ನಷ್ಟಕ್ಕೆ ಆದಾಯ ತೆರಿಗೆಯಲ್ಲಿ ನನ್ನ ವೇತನ ತೆರಿಗೆಯೊಡನೆ ಕಡಿತ ಸಿಗುತ್ತದೆಯೇ?

ಉತ್ತರ: ಷೇರು ಮಾರುಕಟ್ಟೆ ಒಂದು ಬಗೆಯಲ್ಲಿ ಕಂಡಾಗ ಹಾವು–ಏಣಿ ಆಟ ಇದ್ದಂತೆ. ಹಾಗಂತ ಇದು ಹೂಡಿಕೆದಾರನ ನಸೀಬು ಪರೀಕ್ಷಿಸುವ ವೇದಿಕೆ ಅಲ್ಲ. ಎಷ್ಟೇ ವಿಶ್ಲೇಷಣೆ ಮಾಡಿ ಹೂಡಿಕೆ ಮಾಡಿದರೂ ಲಾಭ ಬರಬೇಕೆಂಬುದೂ ಇಲ್ಲ. ಅದು ಸದಾ ಚಂಚಲ ಹಾಗೂ ವಿಭಿನ್ನ ಗತಿಯ, ವಿವಿಧ ದೃಷ್ಟಿಕೋನಗಳ, ವಿವಿಧ ಧೋರಣೆಗಳ ಹೂಡಿಕೆದಾರರ ಒಟ್ಟು ಮನಃಸ್ಥಿತಿಯ ಪ್ರತಿಬಿಂಬ. ಹಿಂದಿಯಲ್ಲಿ ಒಂದು ಮಾತಿದೆ ‘ಭಾವ್ ಭಗವಾನ್ ಹೈ’ ಎಂದು. ಅಂದಿನ ಕ್ಷಣಕ್ಕೆ ಆ ಬೆಲೆ ಸರಿ, ಆ ಬೆಲೆ ಇಂದೂ ಸಿಗಬೇಕೆಂದಿಲ್ಲ ಎಂಬುದೇ ಇದರ ಅರ್ಥ. ಸಮುದ್ರದಲ್ಲಿ ಅಲೆಗಳಲ್ಲಿ ಸೃಷ್ಟಿಸಲು, ಅಲೆಗಳನ್ನು ನಿಲ್ಲಿಸಲು ನಮ್ಮಿಂದ ಅಸಾಧ್ಯ. ಅಲೆಯ ಗತಿ ನೋಡಿ ನಾವು ಈಜಾಡಬೇಕಷ್ಟೇ.

ADVERTISEMENT

ಯಾವುದೇ ಹೂಡಿಕೆಗೆ ಮೊದಲು ನಾವು ಆ ಕ್ಷಣ ಆ ಮೌಲ್ಯ ಕೊಟ್ಟುಏತಕ್ಕೆ ಕೊಳ್ಳಬೇಕು, ಹೂಡಿಕೆಗೆ ಅದು ಸರಿಯಾದ ಮಟ್ಟದಲ್ಲಿದೆಯೇ, ನಷ್ಟವಾದ ಸಂದರ್ಭದಲ್ಲಿ ಅದು ಯಾವ ಮಟ್ಟಕ್ಕೆ ಇಳಿಯಬಹುದು, ಮೇಲ್ಮುಖವಾಗಿ ಸಾಗಿದರೆ ಯಾವ ಹಂತದಲ್ಲಿ ಲಾಭದೊಂದಿಗೆ ಹೊರಬರಬಹುದು ಇತ್ಯಾದಿ ಮಾಹಿತಿಯೊಂದಿಗೆ ಹೂಡಿಕೆ ಮಾಡಿದರೆ ಈ ವಿಚಾರದಲ್ಲಾಗುವ ಅಚಾತುರ್ಯಗಳನ್ನು ಬಹಳಷ್ಟು ನಿವಾರಿಸಬಹುದು. ದೀರ್ಘಾವಧಿ ಹೂಡಿಕೆದಾರರು ತಮ್ಮ ಎಲ್ಲ ಹಣವನ್ನು ಒಂದೇ ಬಾರಿ ಮಾರುಕಟ್ಟೆಯಲ್ಲಿ ತೊಡಗಿಸುವುದು ಎಲ್ಲ ಕಾಲಕ್ಕೂ ಸರಿಯೆನಿಸಲಿಕ್ಕಿಲ್ಲ. ಆಯ್ದ ಕಂಪನಿಗಳ ಷೇರುಗಳು ಉತ್ತಮವಾಗಿವೆ ಎಂಬ ಕಾರಣಕ್ಕೆ ಅವುಗಳ ಬೆಲೆ ಸಮರ್ಪಕವಾಗಿರುತ್ತದೆ ಎಂದೇನೂ ಅಲ್ಲ.

ಯಾವತ್ತೂ ಹೂಡಿಕೆಗೆ ಮುನ್ನ, ಯಾವ ಕಂಪನಿಯ ಷೇರುಗಳಲ್ಲಿ ಯಾವ ಕಾರಣಕ್ಕೆ ಹೂಡಿಕೆ ಮಾಡುತ್ತಿರುವುದು ಎಂಬುದು ಸ್ಪಷ್ಟವಾಗಿರಲಿ. ಅದರ ಸಾಧಕ–ಬಾಧಕಗಳನ್ನೂ ತುಲನೆ ಮಾಡಿ. ನಿಮ್ಮ ಗುರಿಯೊಳಗೆ ಬೆಲೆ ಬಂದಾಗಲಷ್ಟೇ ಖರೀದಿಸಿ, ಮಾರಾಟ ಮಾಡಿ. ಗುಣಮಟ್ಟದ ಉತ್ಪನ್ನಗಳನ್ನು ಮಾರಾಟ ಮಾಡುವ ವ್ಯಾಪಾರಿ ಅವುಗಳನ್ನು ಒಂದು ರೂಪಾಯಿ ಕಡಿಮೆ ಬೆಲೆಗೆ ಮಾರಾಟ ಮಾಡುವುದನ್ನು ಕಂಡಿದ್ದೀರಾ? ಷೇರು ಮಾರುಕಟ್ಟೆ ಒಂದೇ ದಿನದಲ್ಲಿ ಗಗನಕ್ಕೇರುವುದೂ ಇಲ್ಲ, ಪತನವಾಗುವುದೂ ಇಲ್ಲ. ನಿಮಗಾದ ಅಲ್ಪಾವಧಿ ಬಂಡವಾಳ ನಷ್ಟವನ್ನು ನಿಮ್ಮ ಸಂಬಳದ ಆದಾಯದೊಡನೆ ವಜಾ ಮಾಡಲು ಆದಾಯ ತೆರಿಗೆ ನಿಯಮದ ಅಡಿ ಅವಕಾಶವಿಲ್ಲ. ಬಂಡವಾಳ ನಷ್ಟವನ್ನು ಅದೇ ಆದಾಯದೊಡನೆ ಮುಂದಿನ ಎಂಟು ವರ್ಷಗಳಲ್ಲಿ ಆಗಬಹುದಾದ ಲಾಭದೊಡನೆ ವಜಾ ಮಾಡುವ ಅವಕಾಶವಿದೆ.

ಮಧುಸೂದನ,ಊರುಬೇಡ

l→ಪ್ರಶ್ನೆ: ಪಿತ್ರಾರ್ಜಿತವಾಗಿ ನನಗೆ ಬಂದಿರುವ ಕೃಷಿ ಜಮೀನನ್ನು ಮಾರಾಟ ಮಾಡಿ ಪೇಟೆಯಲ್ಲಿ ನಿವೇಶನ ಕೊಂಡು ಮನೆ ಕಟ್ಟಿಸಬೇಕು ಎಂದಿದ್ದೇನೆ. ನನಗೆ ಯಾವುದಾದರೂ ತೆರಿಗೆ ಅನ್ವಯ ಆಗುತ್ತದೆಯೇ? ಜಮೀನು ಮಾರಿದರೆ ಅಂದಾಜು ₹ 60 ಲಕ್ಷ ಬರಬಹುದು.

ಉತ್ತರ: ಯಾವುದೇ ಆಸ್ತಿಯ ಬಂಡವಾಳ ಲಾಭದ (ಕ್ಯಾಪಿಟಲ್ ಗೇನ್ಸ್) ಮೇಲೆ ತೆರಿಗೆ ಅನ್ವಯವಾಗಲು ಅಂತಹ ಆಸ್ತಿ ‘ಬಂಡವಾಳ ಆಸ್ತಿ’ಯಾಗಿರಬೇಕು. ಆದಾಯ ತೆರಿಗೆ ನಿಯಮ 2(14)ರ ಪ್ರಕಾರ, ಗ್ರಾಮೀಣ ಕೃಷಿ ಭೂಮಿ ಮಾರಾಟ ಮಾಡಿದ ಸಂದರ್ಭದಲ್ಲಿ ಅದು ಮೇಲೆ ಉಲ್ಲೇಖಿಸಿದ ಬಂಡವಾಳ ಆಸ್ತಿಯ ವ್ಯಾಪ್ತಿಯಲ್ಲಿ ಬರುವುದಿಲ್ಲ. ಅಂತಹ ಕೃಷಿ ಭೂಮಿಯ ಮಾರಾಟದ ಮೇಲೆ ಕ್ಯಾಪಿಟಲ್ ಗೇನ್ಸ್ ತೆರಿಗೆ ವಿಧಿಸಲಾಗುವುದಿಲ್ಲ. ವಹಿವಾಟಿನ ಮೌಲ್ಯ ಎಷ್ಟೇ ಆದರೂ ಈ ವಿನಾಯಿತಿ ಅನ್ವಯ. ಅದೇ ಕೃಷಿ ಭೂಮಿ ಆಯಾ ಪಟ್ಟಣದ ಮುನಿಸಿಪಲ್ ವ್ಯಾಪ್ತಿಯಿಂದ 8 ಕಿ.ಮೀ ಒಳಗಿದ್ದರೆ, ಅಂತಹ ಆಸ್ತಿಯನ್ನು ಇತರ ಆಸ್ತಿ ಮಾರಾಟದಂತೆಯೇ ಪರಿಗಣಿಸಲಾಗುತ್ತದೆ ಹಾಗೂ ಕೃಷಿ ಭೂಮಿಯಾಗಿದ್ದರೂ ಮಾರಾಟದ ಮೇಲೆ ಬಂಡವಾಳ ಲಾಭದ ತೆರಿಗೆ ಅನ್ವಯಿಸುತ್ತದೆ.

ಬಂಡವಾಳ ಆಸ್ತಿಯ ವರ್ಗಾವಣೆಯ ಮೇಲೆ ಉಂಟಾಗುವ ಬಂಡವಾಳ ಲಾಭಗಳಿಗೆ ಸಂಬಂಧಿಸಿದಂತೆ ಸೆಕ್ಷನ್ 54(ಎಫ್) ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ಈ ಪ್ರಯೋಜನವು ಒಬ್ಬ ವ್ಯಕ್ತಿ ಅಥವಾ ಹಿಂದೂ ಅವಿಭಕ್ತ ಕುಟುಂಬಕ್ಕೆ ಮಾತ್ರ ಲಭ್ಯವಿರುತ್ತದೆ. ಈ ಸೆಕ್ಷನ್ ಅಡಿ ತೆರಿಗೆ ವಿನಾಯಿತಿ ಪಡೆಯಲು ಆಸ್ತಿ ಮಾರಾಟ ಮಾಡಿ ನೀವು ಮೂರು ವರ್ಷದೊಳಗೆ ಮನೆ ಕಟ್ಟಿಸಬೇಕು ಹಾಗೂ ಮಾರಾಟವಾದ ಆರು ತಿಂಗಳೊಳಗೆ ಬಂದ ನಿವ್ವಳ ಮಾರಾಟ ಮೊತ್ತವನ್ನು ಬಂಡವಾಳ ಲಾಭ ಉಳಿತಾಯ ಖಾತೆಯಲ್ಲಿ ಮೂರು ವರ್ಷದ ತನಕ ತೆರಿಗೆ ಪಾವತಿ ಮುಂದೂಡುವ ಉದ್ದೇಶದಿಂದ ಹೂಡಿಕೆಗೆ ಅವಕಾಶವಿದೆ. ಸಂಪೂರ್ಣ ಮೊತ್ತ ಹೊಸ ಮನೆಗೆ ಬಳಸಿಕೊಂಡರೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ತೆರಿಗೆ ಅನ್ವಯವಾಗುವ ಬಗ್ಗೆ ನಿರ್ಧರಿಸಲು ನಿಮ್ಮ ಕೃಷಿ ಭೂಮಿ ಇರುವ ಸ್ಥಳದ ನಿಖರಮಾಹಿತಿ ಅಗತ್ಯ.

ಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.
ಇ–ಮೇಲ್‌:

businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.