ADVERTISEMENT

ಹಣಕಾಸು ವಿಚಾರ: ಉಳಿತಾಯ, ತೆರಿಗೆ ಕುರಿತ ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 5 ಮಾರ್ಚ್ 2021, 12:16 IST
Last Updated 5 ಮಾರ್ಚ್ 2021, 12:16 IST
ಪುರಾಣಿಕ್
ಪುರಾಣಿಕ್   

- ಶೇಷಾದ್ರಿ, ಚಿತ್ರದುರ್ಗ

* ಪ್ರಶ್ನೆ: ನಾನು ಸರ್ಕಾರಿ ನೌಕರ. ₹ 40 ಸಾವಿರವನ್ನು ಷೇರು ಮಾರುಕಟ್ಟೆಯಲ್ಲಿ ತೊಡಗಿಸಬೇಕೆಂದಿದ್ದೇನೆ. ಸರ್ಕಾರಿ ನೌಕರನಾದ್ದರಿಂದ ನನಗೆ ತೊಂದರೆ ಇದೆಯೇ? ಒಂದು ಕಂಪನಿ ಷೇರಿನಲ್ಲಿ ಹಣ ತೊಡಗಿಸಲು ಕನಿಷ್ಠ–ಗರಿಷ್ಠ ಮಿತಿ ಇದೆಯೇ? ಕೊಂಡ ಮೇಲೆ ಷೇರಿನ ಬೆಲೆ ಕಡಿಮೆಯಾದಲ್ಲಿ ನಾನು ತಕ್ಷಣ ಬ್ರೋಕರ್‌ಗೆ ಹಣ ಕಳಿಸಬೇಕಾಗುತ್ತದೆಯೇ? ಕೊಂಡ ಷೇರನ್ನು ಎಷ್ಟು ಸಮಯ ಇಟ್ಟುಕೊಳ್ಳಬಹುದು? ಬಂದ ಲಾಭಕ್ಕೆ ಆದಾಯ ತೆರಿಗೆ ಇದೆಯೇ? ಲಾಭ–ನಷ್ಟ ತಿಳಿಯುವ ಬಗೆ ಹೇಗೆ? ಡಿಮ್ಯಾಟ್‌ ಅಕೌಂಟ್ ಎಂದರೇನು? ಎಲ್ಲವನ್ನೂ ವಿಸ್ತಾರವಾಗಿ ತಿಳಿಸಿ.

ಉತ್ತರ: ಹೂಡಿಕೆಗೆ ಇರುವ ಹಲವು ದಾರಿಗಳಲ್ಲಿ ಷೇರು ಮಾರುಕಟ್ಟೆಯೂ ಒಂದು. ಈ ವ್ಯವಹಾರವನ್ನು ಸರ್ಕಾರಿ ನೌಕರರು ಮಾಡಬಾರದೆಂಬ ನಿರ್ಬಂಧ ಇಲ್ಲ. ಆದರೆ, ಡಿರೈವೆಟಿವ್‌ ಮಾರುಕಟ್ಟೆಯಲ್ಲಿ, ಆನ್‌ಲೈನ್‌ ವ್ಯವಹಾರ ಕ್ಷಣ ಕ್ಷಣಕ್ಕೆ ನಡೆಯುತ್ತಿರುತ್ತದೆ, ನೌಕರ ತನ್ನ ಕಚೇರಿ ಸಮಯದಲ್ಲಿ ಈ ವ್ಯವಹಾರ ಮಾಡುವಂತಿಲ್ಲ. ನೀವು ಬ್ರೋಕರ್‌ ಮುಖಾಂತರ ಡಿಮ್ಯಾಟ್‌ ಖಾತೆ ತೆರೆದು, ಹಣ ತೊಡಗಿಸಬಹುದು. ಹೂಡಿಕೆದಾರ ತಾನು ಬಯಸಿದ ಕಂಪನಿಯ ಷೇರಿನಲ್ಲಿ ಎಷ್ಟು ಬೇಕಾದರೂ ಹಣ ತೊಡಗಿಸಬಹುದು. ಇಲ್ಲಿ ಕನಿಷ್ಠ ಒಂದು ಷೇರು ಕೊಳ್ಳಬಹುದು, ಮಾರಾಟ ಮಾಡಬಹುದು. ಗರಿಷ್ಠ ಮಿತಿ ಇಲ್ಲ.

ADVERTISEMENT

ನೀವು ಷೇರು ಕೊಂಡ ಷೇರಿನ ಬೆಲೆ ಕಡಿಮೆಯಾದಲ್ಲಿ ಬ್ರೋಕರ್‌ಗೆ ತಕ್ಷಣ ಹಣ ಕಳಿಸುವ ಅಗತ್ಯವಿಲ್ಲ. ಕೊಳ್ಳುವಾಗ ಮಾರುಕಟ್ಟೆಯ ಬೆಲೆಗೆ ಕೊಳ್ಳುವುದರಿಂದ ಹಣ ತುಂಬುವ ಪ್ರಮೇಯವಿರುವುದಿಲ್ಲ. ಎಷ್ಟು ಸಮಯ ಬೇಕಿದ್ದರೂ ಷೇರನ್ನು ನಿಮ್ಮ ಡಿಮ್ಯಾಟ್‌ ಖಾತೆಯಲ್ಲಿ ಇರಿಸಿಕೊಳ್ಳಬಹುದು. ಈ ವ್ಯವಹಾರದಿಂದ ಬರುವ ಲಾಭಕ್ಕೆ ಬಂಡವಾಳ ವೃದ್ಧಿ ತೆರಿಗೆ (capital gain tax) ಇದೆ. ಒಂದು ವರ್ಷದ ನಂತರ ಮಾರಾಟ ಮಾಡುವ ಷೇರುಗಳಿಂದ ಬರುವ ಲಾಭವು ₹ 1 ಲಕ್ಷಕ್ಕಿಂತ ಹೆಚ್ಚಿಗೆ ಇದ್ದರೆ ಅದಕ್ಕೆ ಶೇ 10ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಷೇರು ಖರೀದಿಯ ದಿನದಿಂದ ವರ್ಷದ ಒಳಗಾಗಿ ಮಾರಾಟ ಮಾಡಿ ಬರುವ ಲಾಭಕ್ಕೆ ಶೇ 15ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಇನ್ನು ಲಾಭ ನಷ್ಟದ ವಿಚಾರ: ಈ ವ್ಯವಹಾರದಲ್ಲಿ ನಿಶ್ಚಿತ ಲಾಭ–ನಷ್ಟ ಯಾರಿಂದಲೂ ಹೇಳಲು ಅಸಾಧ್ಯ. ಉತ್ತಮ ಕಂಪನಿಗಳ (A Group-Blue chip) ಷೇರುಗಳನ್ನು ಮಾರುಕಟ್ಟೆ ಕುಸಿದಾಗ ಕೊಳ್ಳಿರಿ. ಸ್ವಲ್ಪ ಸಮಯ ಕಾದು, ಮಾರುಕಟ್ಟೆ ಮೇಲೆದ್ದಾಗ ಮಾರಾಟ ಮಾಡಿ ಲಾಭ ಪಡೆಯಿರಿ. ಡಿಮ್ಯಾಟ್‌ ಎಂದರೆ ನೀವು ಖರೀದಿಸಿದ ಷೇರುಗಳು ಜಮಾ ಆಗಿರುವ ಖಾತೆ. ಹಿಂದೆ ಷೇರು ಸರ್ಟಿಫಿಕೇಟ್‌ ಕೊಡುತ್ತಿದ್ದರು. ಈಗ ನಿಮ್ಮ ಹೆಸರಿನಲ್ಲಿ ಕೊಂಡ ಷೇರನ್ನು ಡಿಮ್ಯಾಟ್‌ನಲ್ಲಿ ಇರಿಸುತ್ತಾರೆ.

***

- ಚಂದ್ರಕಲಾ, ಬೆಂಗಳೂರು

* ಪ್ರಶ್ನೆ: ವಯಸ್ಸು 52 ವರ್ಷ. ಮನೆ ಬಾಡಿಗೆ ಮೂಲಕ ತಿಂಗಳಿಗೆ ₹ 43 ಸಾವಿರ ಬರುತ್ತಿದೆ. ₹ 4 ಲಕ್ಷ ಉಳಿತಾಯ ಖಾತೆಯಲ್ಲಿದೆ. ಈ ಹಣ ಅವಧಿ ಠೇವಣಿಯಲ್ಲಿ ಇರಿಸಿದರೆ ಹಾಗೂ ಬಾಡಿಗೆಯಿಂದ ಬರುವ ಮೊತ್ತ ಸೇರಿ ನನಗೆ ಆದಾಯ ತೆರಿಗೆ ಬರುತ್ತದೆಯೇ ? ಐ.ಟಿ. ರಿಟರ್ನ್ಸ್‌ ಸಲ್ಲಿಸಬೇಕೆ?

ಉತ್ತರ: ಬಾಡಿಗೆಯಿಂದ ನೀವು ಪಡೆಯುವ ವಾರ್ಷಿಕ ಆದಾಯ ₹ 5.16 ಲಕ್ಷ. ಈ ಆದಾಯಕ್ಕೆ ಸೆಕ್ಷನ್‌ 24(ಎ) ಆಧಾರದ ಮೇಲೆ ಶೇಕಡ 30ರಷ್ಟು ವಿನಾಯಿತಿ ಪಡೆಯಬಹುದು. ಹೀಗೆ ವಿನಾಯಿತಿ ಪಡೆದಾಗ ಬಾಡಿಗೆ ಆದಾಯ ₹ 3,61,200 ಆಗುತ್ತದೆ. ಉಳಿತಾಯ ಖಾತೆಯಲ್ಲಿರುವ ₹ 4 ಲಕ್ಷವನ್ನು ಅವಧಿ ಠೇವಣಿ ಮಾಡಿದರೆ ಅದರಿಂದ ವರ್ಷಕ್ಕೆಗರಿಷ್ಠ ₹ 22 ಸಾವಿರ ಬರಬಹುದು. ಬಾಡಿಗೆ, ಠೇವಣಿ ಮೇಲಿನ ಬಡ್ಡಿ ಸೇರಿಸಿ ನಿಮ್ಮ ವಾರ್ಷಿಕ ಆದಾಯ ₹ 3,83,200 ಆಗಲಿದೆ. ಉಳಿತಾಯ ಖಾತೆಯಲ್ಲಿ ಬಹಳ ಕಡಿಮೆ ಬಡ್ಡಿ ಬರುವುದರಿಂದ ತಕ್ಷಣ ಕನಿಷ್ಠ ಒಂದು ವರ್ಷಕ್ಕೆ ಅವಧಿ ಠೇವಣಿ ಮಾಡಿ. ಹೀಗೆ ಮಾಡುವಾಗ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿ, ಚಕ್ರಬಡ್ಡಿಯಲ್ಲಿ ಹಣ ಪಡೆಯಿರಿ. ನೀವು ₹ 43 ಸಾವಿರ ತಿಂಗಳಿಗೆ ಬಾಡಿಗೆ ಪಡೆಯುತ್ತಿದ್ದು, ನಿಮ್ಮ ಮನೆ ಖರ್ಚು ಕಳೆದು ಉಳಿತಾಯ ಮಾಡಬಹುದಾದ ಹಣವನ್ನು ಐದು ವರ್ಷಗಳ ಆರ್‌.ಡಿ. ಮಾಡಿ. ಉಳಿಸಿದ ಹಣ ಗಳಿಸಿದ ಹಣಕ್ಕೆ ಸಮ. ಮುಂದೆ ಮಕ್ಕಳ ವಿದ್ಯಾಭ್ಯಾಸ, ಮದುವೆ ಸಮಯದಲ್ಲಿ ಅನುಕೂಲವಾಗುತ್ತದೆ. ವಾರ್ಷಿಕ ಬಡ್ಡಿ ಹಾಗೂ ಬಾಡಿಗೆಯಿಂದ ₹ 5 ಲಕ್ಷ ಬರುವ ತನಕ ನಿಮಗೆ ಆದಾಯ ತೆರಿಗೆ ಇಲ್ಲ. ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷ ದಾಟುವುದರಿಂದ ಐ.ಟಿ. ರಿಟರ್ನ್ಸ್‌ ತುಂಬಬೇಕಾಗುತ್ತದೆ.

***

- ವಸಂತ, ತುಮಕೂರು

* ಪ್ರಶ್ನೆ: ನಾನು ಪಿಪಿಎಫ್‌ ಖಾತೆ ತೆರೆದಿದ್ದೇನೆ. 15 ವರ್ಷ ದಾಟಿದ ನಂತರ ಪುನಃ ಮತ್ತೊಂದು ಪಿಪಿಎಫ್‌ ಖಾತೆ ತೆರೆಯಬಹುದೇ? ಪ್ರತಿ ತಿಂಗಳು 5ನೆಯ ದಿನಾಂಕದೊಳಗೆ ಹಣ ತುಂಬಬೇಕೆಂದು ತಿಳಿಸಿದ್ದಾರೆ. 1ರಿಂದ 5ನೆಯ ದಿನಾಂಕದವರೆಗೆ ರಜಾ ಇದ್ದರೆ ಏನು ಮಾಡಬೇಕು?

ಉತ್ತರ: ಪಿಪಿಎಫ್‌ ಖಾತೆ ಪ್ರಾರಂಭಿಸಿ 15 ವರ್ಷ ಮುಗಿಯುತ್ತಲೇ ಅರ್ಜಿ ಸಲ್ಲಿಸಿ. ಮುಂದೆ 5 ವರ್ಷಗಳಿಗೆ ಅದೇ ಖಾತೆಯನ್ನು ಮುಂದುವರಿಸಿಕೊಳ್ಳುವ ಸವಲತ್ತು ಇದೆ. ಹೀಗೆ ಎಷ್ಟು ಬಾರಿ ಕೂಡಾ ಮುಂದುವರಿಸಬಹುದು. ಒಬ್ಬನೇ ವ್ಯಕ್ತಿ ಎರಡು ಪಿಪಿಎಫ್‌ ಖಾತೆ ಹೊಂದಬಾರದು. ಇದೇ ವೇಳೆ ನೀವು ತಿಳಿಸಿದಂತೆ 15 ವರ್ಷ ಮುಗಿಸಿ ಖಾತೆ ವಜಾ ಮಾಡಿ, ಸ್ವಲ್ಪ ಸಮಯದ ನಂತರ ನೀವು ಇಚ್ಛಿಸಿದರೆ ಮತ್ತೆ ಪಿಪಿಎಫ್‌ ಖಾತೆ ಹೊಂದಬಹುದು. ಆದಾಯ ತೆರಿಗೆ ಕೊಡುವ ವ್ಯಕ್ತಿಗಳಿಗೊಂದು ಕಿವಿಮಾತು. ಈ ಖಾತೆಯಲ್ಲಿ ಬರುವ ಬಡ್ಡಿ ಸೆಕ್ಷನ್‌ 10 (II) ಆಧಾರದ ಮೇಲೆ ಸಂಪೂರ್ಣ ವಿನಾಯಿತಿ ಹೊಂದಿರುವುದರಿಂದ ಇಲ್ಲಿ ವಾರ್ಷಿಕ ಗರಿಷ್ಠ ₹ 1.50 ಲಕ್ಷ ತುಂಬುವುದರಿಂದ ಬಹಳಷ್ಟು ತೆರಿಗೆ ಉಳಿಸಬಹುದು. ಇಲ್ಲಿ ಹೂಡಿದ ಹಣ ಸೆಕ್ಷನ್‌ 80ಸಿಗೆ ಕೂಡಾ ಅನ್ವಯವಾಗುತ್ತದೆ. ಒಟ್ಟಿನಲ್ಲಿ ಸೆಕ್ಷನ್‌ 10 (II) ಹಾಗೂ ಸೆಕ್ಷನ್‌ 80ಸಿ ಎರಡರ ಲಾಭ ಒಂದೇ ಖಾತೆಯಿಂದ ಪಡೆದಂತಾಗುತ್ತದೆ. ನೌಕರಿಯಲ್ಲಿದ್ದವರಿಗೆ ಹಾಗೂ ಪಿಎಫ್‌ ಯೋಜನೆ ಇಲ್ಲದವರಿಗೆ ಪಿಪಿಎಫ್‌ ದೊಡ್ಡವರದಾನ. ಆದಾಯ ತೆರಿಗೆಗೆ ಒಳಗಾಗಲಿ ಅಥವಾ ಆಗದಿರಲಿ, ಪಿಪಿಎಫ್‌ ಖಾತೆ ಹೊಂದುವುದು ಸೂಕ್ತ. 1ರಿಂದ 5ನೆಯ ದಿನಾಂಕದವರೆಗೆ ಎಡೆಬಿಡದೇ ರಜೆ ಬರುವ ಸಾಧ್ಯತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.