ADVERTISEMENT

ಪ್ರಶ್ನೋತ್ತರ: ಅಂ.ರಾ ಫಂಡ್, ವಿದೇಶಿ ಷೇರುಗಳಲ್ಲಿ ಹೂಡಿಕೆ ನಿಜಕ್ಕೂ ಲಾಭದಾಯಕವೇ?

ಪ್ರಮೋದ ಶ್ರೀಕಾಂತ ದೈತೋಟ
Published 18 ಡಿಸೆಂಬರ್ 2024, 20:55 IST
Last Updated 18 ಡಿಸೆಂಬರ್ 2024, 20:55 IST
<div class="paragraphs"><p>ಪ್ರಮೋದ ಶ್ರೀಕಾಂತ ದೈತೋಟ</p></div>

ಪ್ರಮೋದ ಶ್ರೀಕಾಂತ ದೈತೋಟ

   

–ಶ್ರೀನಾಥ್, ಬೆಳಗಾವಿ.‌

ನಾನು ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಕಟಿಸಿರುವ ಪ್ಯಾನ್ 2.0 ಯೋಜನೆ ಪ್ರಕಾರ ಕ್ಯೂಆರ್ ಕೋಡ್ ಇರುವ ಪ್ಯಾನ್ ಕಾರ್ಡ್ ಪಡೆಯಲು ಇಚ್ಛಿಸಿದ್ದೇನೆ. ಇದು ಕಡ್ಡಾಯ ಅಲ್ಲದಿದ್ದರೂ ಇದರಿಂದ ಯಾವುದಾದರು ಪ್ರಯೋಜನ ಇದೆಯೇ?

ADVERTISEMENT

ಕೆಲವು ವರ್ಷಗಳ ಹಿಂದೆ ಕಪ್ಪು–ಬಿಳುಪಿನ ಪ್ಯಾನ್ ಕಾರ್ಡ್ ನೀಡಲಾಗುತ್ತಿತ್ತು. ತದ ನಂತರ ಬಂದ ಫೋಟೊಸಹಿತ ಕಾರ್ಡ್‌ಗಳಲ್ಲೂ ಕ್ಯೂಆರ್ ಕೋಡ್ ಇಲ್ಲದ ಪ್ಯಾನ್ ನೀಡಲಾಗುತ್ತಿತ್ತು.

ಸರ್ಕಾರವೇ ಹೇಳುವ ಪ್ರಕಾರ ಮುಂದೆ ಈ ‘ಪ್ಯಾನ್ 2.0’ ಮಾದರಿಯ ಪ್ಯಾನ್ ಕಾರ್ಡ್‌ ಹೆಚ್ಚಿನ ತಾಂತ್ರಿಕ ಅಂಶಗಳನ್ನು ಹೊಂದಿವೆ. ಪ್ಯಾನ್ ಬಳಸಿ ಡಿಜಿಟಲ್ ವೇದಿಕೆಗಳ ಮೂಲಕ ನಡೆಯುವ ವಂಚನೆಯ ಅಪಾಯದಿಂದ ಸುರಕ್ಷತೆ ನೀಡುತ್ತದೆ ಎಂದು ಹೇಳಲಾಗಿದೆ. ಅಂದರೆ ಒಬ್ಬರ ಪ್ಯಾನ್ ಸಂಖ್ಯೆ, ಫೋಟೊ ಮಾದರಿ ಬಳಸಿ ಅದರಲ್ಲಿನ ಮಾಹಿತಿಯಿಂದ ನಡೆಸುವ ಅಕ್ರಮ ವ್ಯವಹಾರ ಹಾಗೂ ಖಾತೆ ತೆರೆಯುವಿಕೆಯನ್ನು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಪರಿಶೀಲಿಸಬಹುದಾಗಿದೆ ಎಂಬುದು ಇದರ ವೈಶಿಷ್ಟ್ಯ.

ಈಗಾಗಲೇ, ನಿಮ್ಮ ಪ್ಯಾನ್ ಕಾರ್ಡ್ ಈ ಗುಣಾಂಶಗಳನ್ನು ಹೊಂದಿರದಿದ್ದರೆ ನೀವು ಕೂಡ ನವೀಕೃತ ಪ್ಯಾನ್‌ಗೆ ಎನ್‌ಎಸ್‌‌ಡಿಎಲ್ ಅಥವಾ ಯುಟಿಐ ಟಿಎಸ್‌ಎಲ್ ಪೋರ್ಟಲ್ ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

– ಚೇತನ್ ಕುಮಾರ್, ಮಾಗಡಿ.

ನಾನು ಕಳೆದ ಐದು ವರ್ಷಗಳಿಂದ ಟೆಕ್ ಕಂಪನಿಗಳಲ್ಲಿ ಹೂಡಿಕೆ ಆರಂಭಿಸಿದ್ದೇನೆ. ಇದರಲ್ಲಿ ಷೇರು ಹಾಗೂ ಮ್ಯೂಚುವಲ್ ಫಂಡ್ ಎರಡೂ ವಿಭಾಗದ ಹೂಡಿಕೆ ಇದೆ. ಸಾಮಾನ್ಯವಾಗಿ ದೀರ್ಘಾವಧಿ ಹೂಡಿಕೆಗಳು ಅಧಿಕ ಲಾಭ ತರುವ ಹೂಡಿಕೆಗಳಾಗಿವೆ ಎಂಬುದು ಎಲ್ಲರ ಅಭಿಪ್ರಾಯ. ನಾನು ಎಸ್‌ಐಪಿಗಳನ್ನೂ ಹೊಂದಿದ್ದೇನೆ.  ಏಕ ಕಂತಿನ ಹೂಡಿಕೆ ಸಹ ಮಾಡುತ್ತಿದ್ದೇನೆ. ನಿಧಾನವಾಗಿ ಪ್ರತಿ ತಿಂಗಳು ₹50 ಸಾವಿರ ಉಳಿತಾಯವನ್ನು ಹೂಡಿಕೆಗೆ ಬಳಸುವ ಗುರಿ ಹೊಂದಿದ್ದೇನೆ.

ಈ ರೀತಿ ಹೂಡಿಕೆ ಮಾಡುವಾಗ ನಾವು ಹೆಚ್ಚಾಗಿ ನಮ್ಮ ದೇಶೀಯ ಮಾರುಕಟ್ಟೆಯ ಹೂಡಿಕೆ ಉತ್ಪನ್ನಗಳನ್ನು ಮಾತ್ರ ಆಯ್ಕೆ ಮಾಡುತ್ತೇವೆ. ಇಂದಿನ ದಿನಗಳಲ್ಲಿ ಮಾಹಿತಿ ಲಭ್ಯತೆಯಿಂದ ಅಂತರರಾಷ್ಟ್ರೀಯ ಫಂಡ್, ಗೋಲ್ಡ್ ಫಂಡ್, ಕಮೋಡಿಟಿ ಫಂಡ್ ಹಾಗೂ ವಿದೇಶಿ ಷೇರುಗಳಲ್ಲೂ ಹೂಡಿಕೆ ಮಾಡಲು ಸಾಕಷ್ಟು ಅವಕಾಶ ಇದೆ ಎಂದು ಕೇಳಿದ್ದೇನೆ.

ನಾವು ಇದಕ್ಕೆ ಯಾವ ರೀತಿ ಪ್ರಯತ್ನಿಸಬಹುದು. ಇದು ನಿಜಕ್ಕೂ ಲಾಭದಾಯಕವೇ? ಒಂದು ವೇಳೆ ಅಂತಹ ಹೂಡಿಕೆ ಸಾಧ್ಯವಾದರೆ ಯಾವ ರೀತಿ ಮುಂದುವರಿಯಬಹುದು. ಈ ಬಗ್ಗೆ ಮಾಹಿತಿ ನೀಡಿ.

ನಿಮ್ಮ ಬದುಕಿನ ಆದ್ಯ ಹಂತದಲ್ಲಿ ನೀವು ಹೂಡಿಕೆ ಬಗ್ಗೆ ಬಹಳ ಆಸಕ್ತಿ ಹೊಂದಿರುವುದು ಶ್ಲಾಘನೀಯ. ಪ್ರತಿ ತಿಂಗಳು ₹50 ಸಾವಿರದಂತೆ ಹೂಡಿಕೆ ಮಾಡುವ ನಿಮ್ಮ ಉದ್ದೇಶವು ವಾರ್ಷಿಕವಾಗಿ ₹6 ಲಕ್ಷ ಮೊತ್ತವು ನಿಮ್ಮ ಉಳಿತಾಯದ ಭಾಗವಾಗಿ ಪ್ರತಿವರ್ಷ ಸಂಚಯಿಸಲಿದೆ. ಸಾಮಾನ್ಯವಾಗಿ ಈ ಮೊತ್ತವನ್ನು ಬ್ಯಾಂಕಿನ ಉಳಿತಾಯ ಖಾತೆ ಅಥವಾ ನಿಶ್ಚಿತ ಠೇವಣಿ ಖಾತೆಯಲ್ಲಿ ಇಟ್ಟಾಗ ಶೇ 4ರಿಂದ ಶೇ 8ರಷ್ಟು ಬಡ್ಡಿ ಸಿಗುತ್ತದೆ.

ನೀವು ಈ ನಿಖರ ಆದಾಯಕ್ಕಿಂತ ಅಧಿಕ ಆದಾಯ ಬೇಕೆಂದು ನಿರೀಕ್ಷಿಸಿದಾಗ ಸಹಜವಾಗಿ ಅದಕ್ಕೆ ಅದರದ್ದೇ ಆದ ಆರ್ಥಿಕ ಅಪಾಯದ ಜೊತೆ ಸಿಗುವ ಲಾಭದ ಮೇಲೆ ಒಂದಷ್ಟು ಅನಿಶ್ಚಿತತೆ ಸಮಸ್ಯೆಯೂ ಇರುತ್ತದೆ. ಇದನ್ನು ನಾವು ಎಷ್ಟು ಸಮರ್ಥವಾಗಿ ಹಾಗೂ ಮಾಹಿತಿಯುಕ್ತವಾಗಿ ನಿರ್ವಹಿಸುತ್ತೇವೋ ಅಷ್ಟು ನಮ್ಮ ಲಾಭ, ಸಾಮಾನ್ಯ  ಹೂಡಿಕೆಗಿಂತ ಹೆಚ್ಚಿರುತ್ತದೆ. ದೀರ್ಘಾವಧಿಯಲ್ಲಿ ಮತ್ತು ನಿರಂತರ ಹೂಡಿಕೆಯಲ್ಲಿ ಈ ಸಣ್ಣ ಪ್ರತಿಶತದ (ಶೇ 1ರಿಂದ ಶೇ 2ರಷ್ಟು) ಹೆಚ್ಚುವರಿ ಲಾಭವು ಅನೇಕ ಪಟ್ಟು ನಮ್ಮ ಗಳಿಕೆಯನ್ನು ಹೆಚ್ಚಿಸುತ್ತದೆ.

ನೀವು ಉಲ್ಲೇಖಿಸಿದಂತೆ ಮಾರುಕಟ್ಟೆಯಲ್ಲಿ ಅನೇಕ ಹೂಡಿಕೆ ಉತ್ಪನ್ನಗಳಿವೆ. ಹಲವು ಆಯ್ಕೆಗಳು ಇವೆ. ಅಂತರ ರಾಷ್ಟ್ರೀಯ ಫಂಡ್, ಗೋಲ್ಡ್ ಫಂಡ್, ಕಮೋಡಿಟಿ ಫಂಡ್ ಹಾಗೂ ವಿದೇಶಿ ಷೇರುಗಳಲ್ಲೂ ಹೂಡಿಕೆ ಮಾಡಲು ಸಾಕಷ್ಟು ಅವಕಾಶ ಇದೆ. ಈ ಎಲ್ಲ ಹೂಡಿಕೆಗಳು ವಿಭಿನ್ನ ರೀತಿಯ ಮಾರುಕಟ್ಟೆ ಅಪಾಯ ಹೊಂದಿವೆ ಅಥವಾ ನಮ್ಮ ಆಳವಾದ ಮಾಹಿತಿಯ ತಿಳಿವನ್ನು ನಿರೀಕ್ಷಿಸುತ್ತವೆ.

ಉದಾಹರಣೆಗೆ  ಕಮೋಡಿಟಿ ಹಾಗೂ ಚಿನ್ನದಲ್ಲಿ ಹೂಡಿಕೆ ಮಾಡುವ ಮ್ಯೂಚುವಲ್ ಫಂಡ್‌ಗಳು ಕಮೋಡಿಟಿ ಹಾಗೂ ಚಿನ್ನದ ಅಂತರರಾಷ್ಟ್ರೀಯ ಬೆಲೆ ಹಾಗೂ ಜಾಗತಿಕ ವಿದ್ಯಮಾನ, ವಿದೇಶಿ ವಿನಿಮಯ ದರ ಇತ್ಯಾದಿಯನ್ನು ಹೆಚ್ಚಾಗಿ ಪರಿಗಣಿಸಿದರೆ, ವಿದೇಶಿ ಷೇರುಗಳು ಆಯಾ ದೇಶದ ಆಂತರಿಕ ಹಾಗೂ ಕಂಪನಿಯ ಕಾರ್ಯ ಕ್ಷೇತ್ರ - ಉದ್ದಿಮೆಯ ಒಟ್ಟಾರೆ ವೃದ್ಧಿ ಇತ್ಯಾದಿ ವಿಚಾರವನ್ನು ಅವಲಂಬಿಸಿವೆ.

ಹೀಗಾಗಿ ಹೂಡಿಕೆ ನಿರ್ಣಯದ ಹಿಂದೆ ಈ ವಿಚಾರಗಳು ನಮ್ಮ ಹೂಡಿಕೆ ಮೇಲೆ ಯಾವ ರೀತಿ ಪರಿಣಾಮ ಬೀರುತ್ತವೆ ಎನ್ನುವ ಮಾಹಿತಿಯನ್ನು ಕಲೆ ಹಾಕುವ ಹಾಗೂ ಅದನ್ನು ವಾಸ್ತವ ಸ್ಥಿತಿಗೆ ಹೊಸೆದು ನೋಡುವ ಸಾಮರ್ಥ್ಯ ನಮ್ಮಲ್ಲಿದ್ದರೆ ಹೂಡಿಕೆ ಮಾಡುವುದು ಸುಲಭ. ಈ ಬಗ್ಗೆ ಅರಿತು ವ್ಯವಹರಿಸು ವುದು ಯಾವತ್ತೂ ಅಪಾಯರಹಿತ ಹೂಡಿಕೆಗೆ ಸೋಪಾನ. ಈ ಮೇಲಿನ ಉತ್ಪನ್ನಗಳನ್ನು ದೇಶೀಯ ಮ್ಯೂಚುವಲ್ ಫಂಡ್‌ಗಳೇ ಹೂಡಿಕೆದಾರರಿಗೆ ಖರೀದಿ-ಮಾರಾಟ ಮಾಡುವ ಸೇವೆ ನೀಡುತ್ತವೆ. ಇದನ್ನು ನಿಮ್ಮ ಈಗಿನ ಫೋಲಿಯೊ ಖಾತೆ ಮೂಲಕ ವ್ಯವಹರಿಸಬಹುದು.  

ಇನ್ನು ವಿದೇಶಿ ಷೇರುಗಳ ಬಗ್ಗೆ ಹೇಳುವುದಾದರೆ ಇವು ಕೂಡ ಬಹುತೇಕ ಆಯಾ ದೇಶೀಯ ಆಡಳಿತ ನೀತಿ, ಅಂತರ ರಾಷ್ಟ್ರೀಯ ವ್ಯವಹಾರ, ಆಯಾ ಕಂಪನಿಯ ಲಾಭ, ನಷ್ಟ, ಅವುಗಳ ನಿರ್ವಹಣಾ ಮಂಡಳಿಯ ಗುಣಮಟ್ಟ ಇತ್ಯಾದಿ ಅನೇಕ ಮಾಹಿತಿಯ ಆಧಾರದಲ್ಲಿ ನಡೆಯುತ್ತವೆ. ಹೀಗಾಗಿ, ಸಮರ್ಪಕ ಹೂಡಿಕೆಗೆ ನಮ್ಮ ಸಮಯ ಹಾಗೂ ಉತ್ತಮ ನಿರ್ಧಾರವನ್ನು ನಿರೀಕ್ಷಿಸುತ್ತದೆ. ಈ ವಿಚಾರದಲ್ಲಿ ಯೋಚಿಸುವ ಮುನ್ನ ದೇಶೀಯ ಮಾರುಕಟ್ಟೆ ಬಗ್ಗೆ ಹೆಚ್ಚಿನ ಮಾಹಿತಿ, ಗೆಲುವಿನ ಅನುಭವ ಎರಡೂ ಇರುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.