ADVERTISEMENT

ಪ್ರಶ್ನೋತ್ತರ: ಹಣಕಾಸು ಕುರಿತ ನಿಮ್ಮ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಮೋದ ಶ್ರೀಕಾಂತ ದೈತೋಟ
Published 30 ಜನವರಿ 2024, 23:30 IST
Last Updated 30 ಜನವರಿ 2024, 23:30 IST
<div class="paragraphs"><p>–ಸಾಂದರ್ಭಿಕ ಚಿತ್ರ</p></div>

–ಸಾಂದರ್ಭಿಕ ಚಿತ್ರ

   

ಪ್ರಶ್ನೆ: ನಾನು ಮತ್ತು ನನ್ನ ಪತ್ನಿ ಬೆಂಗಳೂರಿನಲ್ಲಿ ವಾಸವಿದ್ದು, ಸ್ವಂತ ಮನೆ ಹೊಂದಿದ್ದೇವೆ. ಮನೆಯ ಒಡೆತನದ ದಾಖಲೆಗಳು ಆಕೆಯ ಹೆಸರಲ್ಲಿದ್ದು, ಈ ಮನೆಯು ಅವರ ತಂದೆಯಿಂದ ವಿಲ್ ರೂಪದಲ್ಲಿ ಬಂದಿರುತ್ತದೆ. ವೃತ್ತಿಯಲ್ಲಿ ನನ್ನ ಪತ್ನಿ ಶಿಕ್ಷಕಿ. ನಾನು ಖಾಸಗಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ವೇತನದಲ್ಲಿ ₹25 ಸಾವಿರ ಮನೆ ಬಾಡಿಗೆ ಭತ್ಯೆಯೂ ಸಿಗುತ್ತಿದೆ. ಆದರೆ, ಸ್ವಂತ ಮನೆ ಎಂಬ ಕಾರಣಕ್ಕೆ ನಾನು ಮನೆ ಬಾಡಿಗೆಗೆ ಸಂಬಂಧಿಸಿದ ಯಾವುದೇ ವಿನಾಯಿತಿ ಪಡೆಯುತ್ತಿರಲಿಲ್ಲ ಹಾಗೂ ನಮ್ಮ ಕಂಪನಿಗೂ ಅದೇ ರೀತಿ ಮಾಹಿತಿ ನೀಡಿದ್ದೆ. ಆದರೆ, ತೆರಿಗೆ ಕಾನೂನಿನ ದೃಷ್ಟಿಯಲ್ಲಿ ನಾವಿಬ್ಬರೂ ಒಂದೇ ಮನೆಯಲ್ಲಿದ್ದಾಗ ಬಾಡಿಗೆ ಭತ್ಯೆಗೆ ಸಂಬಂಧಿಸಿದಂತೆ ವಿನಾಯಿತಿ ಪಡೆಯಬಾರದು ಎಂಬ ನಿಯಮ ಇದೆಯೇ? ಒಂದು ವೇಳೆ ತೆರಿಗೆ ರಿಯಾಯಿತಿ ಪಡೆಯುವುದು ಸಾಧ್ಯ ಎನ್ನುವುದಾದರೆ ಅದಕ್ಕೇನು ಮಾಡಬೇಕು. ಎಷ್ಟು ವಿನಾಯಿತಿ ಸಿಗಬಹುದು. ಈ ಬಗ್ಗೆ ಮಾಹಿತಿ ನೀಡಿ.

-ಕೃಷ್ಣಪ್ರಸಾದ ಪ್ರಭು, ಬೆಂಗಳೂರು.

ADVERTISEMENT

ಉತ್ತರ: ಯಾವುದೇ ತೆರಿಗೆದಾರ ಮನೆ ಬಾಡಿಗೆ ಭತ್ಯೆಗೆ ಸಂಬಂಧಿಸಿ ತೆರಿಗೆ ವಿನಾಯಿತಿ ಪಡೆಯಲು ಆದಾಯ ತೆರಿಗೆಯ ಸೆಕ್ಷನ್ 10(13ಎ) ಹಾಗೂ ತತ್ಸಂಬಂಧ ಕೆಲವು ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು. ಬಾಡಿಗೆ ಭತ್ಯೆಗೆ ಸಂಬಂಧಿಸಿದಂತೆ ವಿನಾಯಿತಿ ಪಡೆಯಲು ಮೊದಲಾಗಿ ತೆರಿಗೆದಾರ ವೇತನ ಆದಾಯ ಪಡೆಯುವವನಾಗಿದ್ದು ಅದರ ಭಾಗವಾಗಿ ಮನೆ ಬಾಡಿಗೆ ಖರ್ಚನ್ನು ಪಾವತಿಸಲು ಭತ್ಯೆ ಪಡೆಯುತ್ತಿರಬೇಕು ಹಾಗೂ ಬಾಡಿಗೆ ಪಾವತಿಸುತ್ತಿರಬೇಕು. ಇದಲ್ಲದೆ, ಉದ್ಯೋಗಿ ಮನೆಯ ಮಾಲೀಕತ್ವ ಹೊಂದಿರಬಾರದು ಎಂಬುದು ಮೂಲ ನಿಯಮ.

ನೀವು ಪ್ರಶ್ನೆಯಲ್ಲಿ ತಿಳಿಸಿರುವಂತೆ ಮನೆಯ ಮಾಲೀಕತ್ವ ನಿಮ್ಮ ಪತ್ನಿಯ ಹೆಸರಲ್ಲಿದೆ. ಹೀಗಾಗಿ ಬಾಡಿಗೆ ಮನೆ ಭತ್ಯೆಗೆ ಸಂಬಂಧಿಸಿ ವಿನಾಯಿತಿ ಪಡೆಯಲು ಸಾಧ್ಯವಿದೆ. ಇದಕ್ಕೆ ನೀವು ಅವರಿಗೆ ನಿರ್ದಿಷ್ಟ ಮೊತ್ತವನ್ನು ಪ್ರತಿ ತಿಂಗಳೂ ಬ್ಯಾಂಕ್ ಮೂಲಕ ವರ್ಗಾಯಿಸಿ ದಾಖಲೆ ಇಟ್ಟುಕೊಳ್ಳಿ. ಮನೆ ಬಾಡಿಗೆಗೆ ಸಂಬಂಧಿಸಿ ಕರಾರು ಮಾಡಿಕೊಂಡು ಪಾವತಿಸುವ ಮೊತ್ತನ್ನು ದಾಖಲಿಸಿಕೊಳ್ಳಿ. ಇಷ್ಟೇ ಅಲ್ಲದೆ ಅವರ ತೆರಿಗೆ ರಿಟರ್ನ್ಸ್ ಭರಿಸುವಾಗ ನೀವು ಪಾವತಿಸುವ ಬಾಡಿಗೆಯನ್ನು ಆದಾಯವೆಂದು ಘೋಷಿಸುವುದು ಅನಿವಾರ್ಯ. ಅವರು ಈಗಾಗಲೇ ಶೈಕ್ಷಣಿಕ ವೃತ್ತಿ ಮಾಡುತ್ತಿರುವ ಬಗ್ಗೆ ನೀವು ಉಲ್ಲೇಖಿಸಿದ್ದೀರಿ. ಹಾಗಾಗಿ ಬಾಡಿಗೆ ಆದಾಯವನ್ನೂ ಅದರೊಡನೆ ಸೇರಿಸಿ ಅನ್ವಯವಾಗುವ ತೆರಿಗೆ ಪಾವತಿಸಿ. ಒಟ್ಟಾರೆ ಅವರು ಈ ಕಾರಣದಿಂದ ನೀವು ಉಳಿಸುವ ತೆರಿಗೆಗಿಂತ ಅಧಿಕ ತೆರಿಗೆ ಪಾವತಿಸಬೇಕಾಗಿ ಬಂದರೆ, ಈ ಯೋಜನೆ ಬಿಟ್ಟುಬಿಡುವುದು ಒಳಿತು.

ಇದಕ್ಕಾಗಿ ಇಬ್ಬರ ಆದಾಯವನ್ನೂ ಪ್ರಸ್ತುತ ಸನ್ನಿವೇಶದಲ್ಲಿ ಹಾಗೂ ಬಾಡಿಗೆ ಸಹಿತ ಎಷ್ಟು ಬರಬಹುದೆಂಬುದನ್ನು ಸಮೀಪದ ತೆರಿಗೆ ಸಲಹೆಗಾರರಿಂದ ಮಾಹಿತಿ ಪಡೆದುಕೊಳ್ಳಿ. ಸಿಗುವ ವಿನಾಯಿತಿಯನ್ನು ಲೆಕ್ಕ ಹಾಕಲು ನಿಮ್ಮ ಮೂಲ ವೇತನದ ಮಾಹಿತಿಯನ್ನೂ ಅವರಿಗೆ ಒದಗಿಸಿ. ನಿಮಗೆ ಹೊಸ ತೆರಿಗೆ ಪದ್ಧತಿಯ ಆಯ್ಕೆ ಲಾಭದಾಯಕವಾಗಿದ್ದರೆ, ಈ ಯಾವುದೇ ವಿನಾಯಿತಿ ಸಿಗುವುದಿಲ್ಲ ಎಂಬುದು ಗಮನದಲ್ಲಿ ಇರಲಿ.  

ಪ್ರಶ್ನೆ: ನಾನು ಒಬ್ಬ ದರ್ಜಿಯಾಗಿದ್ದು ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ದುಡಿಮೆ ಇದೆ. ಇದರಲ್ಲಿ ವರ್ಷಕ್ಕೆ ಸುಮಾರು ₹1 ಲಕ್ಷದಂತೆ ಉಳಿತಾಯ ಮಾಡಲು ಪ್ರಯತ್ನಿಸಿ ಈಗ ₹5 ಲಕ್ಷಕ್ಕೂ ಅಧಿಕ ಮೊತ್ತ ಉಳಿತಾಯವಾಗಿದೆ. ಇದನ್ನು ಬ್ಯಾಂಕಿನಲ್ಲಿ ಹೂಡಿಕೆ ಮಾಡಿ ಬಡ್ಡಿ ಆದಾಯ ಪಡೆಯೋಣ ಎಂದು ಯೋಚಿಸಿದ್ದೇನೆ. ಅದು ಕೋ-ಆಪರೇಟಿವ್ ಬ್ಯಾಂಕ್ ಆಗಿದ್ದು ಕೆಲವು ವಿಶೇಷ ಸಂದರ್ಭದಲ್ಲಿ ಠೇವಣಿ ಇಟ್ಟರೆ ಶೇ 9.5ರಷ್ಟು ಬಡ್ಡಿ ಸಿಗುತ್ತದೆ. ಇದಕ್ಕೆ ಪ್ಯಾನ್ ಸಂಖ್ಯೆ ಅತ್ಯಗತ್ಯ ಎಂದು ಸೂಚಿಸಿದ್ದಾರೆ. ಮುಂದೆ ತೆರಿಗೆಯನ್ನು ಶೇ 20ರಷ್ಟು ದರದಲ್ಲಿ ಕಡಿತ ಮಾಡಲಾಗುತ್ತದೆ ಎಂಬುದಾಗಿಯೂ ಸೂಚಿಸಿದ್ದಾರೆ.

ಹೀಗಾಗಿ, ನನಗೆ ಸಿಗುವ ಬಡ್ಡಿದರ ಶೇ 7.6ರಷ್ಟು ಆಗಲಿದೆ. ಪ್ಯಾನ್ ಸಂಖ್ಯೆ ಇಲ್ಲದೆ ಠೇವಣಿ ಮಾಡುವುದು ಅಸಾಧ್ಯವೇ? ಇದನ್ನು ಪಡೆದರೆ ಆದಾಯ ತೆರಿಗೆ ಬರುವುದೇ? ನನ್ನ ಮಕ್ಕಳ ಹೆಸರಲ್ಲಿ ಹಣ ಹೂಡಿಕೆ ಮಾಡಬಹುದೇ. ಹಾಗಿದ್ದಲ್ಲಿ ಅವರಿಗೂ ಪ್ಯಾನ್ ಬೇಕಾಗುತ್ತದೆಯೇ?  

-ಸೋಮಶೇಖರ, ಶಹಾಪುರ.

ಉತ್ತರ: ಪ್ಯಾನ್ ಕಾರ್ಡ್ ಹೊಂದಿದ ಮಾತ್ರಕ್ಕೆ ಆದಾಯ ತೆರಿಗೆ ಅನ್ವಯವಾಗುತ್ತದೆ ಎನ್ನುವ ಆತಂಕ ಬೇಡ. ಅದಕ್ಕೂ ತೆರಿಗೆಗೂ ಸಂಬಂಧವಿಲ್ಲ. ಆಯಾ ಆರ್ಥಿಕ ವರ್ಷದಲ್ಲಿ ತೆರಿಗೆಗೊಳಪಡುವ ಆದಾಯ ಇದ್ದಾಗ ಮಾತ್ರ ತೆರಿಗೆ ಅನ್ವಯವಾಗುತ್ತದೆಯೇ ವಿನಾ ಪ್ಯಾನ್ ಇರುವ ಕಾರಣಕ್ಕಲ್ಲ.

ಕೆಲವೊಮ್ಮೆ ಒಟ್ಟಾರೆ ಆದಾಯಕ್ಕೆ ತೆರಿಗೆ ಅನ್ವಯಿಸದಿದ್ದರೂ, ತೆರಿಗೆ ಕಟಾಯಿಸಿರುವ ಸಾಧ್ಯತೆಗಳಿರುತ್ತವೆ. ಉದಾಹರಣೆಗೆ ಠೇವಣಿ ಮೇಲೆ ಪಾವತಿಸುವ ಬಡ್ಡಿ ₹40,000 ದಾಟಿದಾಗ ಆದಾಯ ತೆರಿಗೆ ಕಟಾಯಿಸುತ್ತಾರೆ. ಇಂತಹ ಮೊತ್ತವನ್ನು ಹಿಂಪಡೆಯಲು ಆದಾಯ ತೆರಿಗೆ ರಿಟರ್ನ್ಸ್ ಭರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಪ್ಯಾನ್ ಸಂಖ್ಯೆ ಹೊಂದದೆ ರಿಫಂಡ್ ಪಡೆಯುವುದು ಅಸಾಧ್ಯ.

ಹೀಗಾಗಿ, ಪ್ಯಾನ್ ಹೊಂದುವುದು ನಮ್ಮ ಸುಲಲಿತ ಆರ್ಥಿಕ ವ್ಯವಹಾರಕ್ಕೆ ಎಂಬುದನ್ನು ಮನದಟ್ಟುಮಾಡಿಕೊಳ್ಳಿ ಹಾಗೂ ಈ ಬಗ್ಗೆ ಮುಂದಿನ ಕ್ರಮ ಕೈಗೊಳ್ಳಿ. ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ‘ಫಾರ್ಮ್- 49ಎ’ ಭರ್ತಿ ಮಾಡಿ ಪ್ಯಾನ್ ಪಡೆಯಿರಿ. ಇದು ಒಂದೆರಡು ವಾರಗಳಲ್ಲಿ ಲಭ್ಯವಾಗುತ್ತದೆ.

ಆದರೆ, ಕೆಲವು ಆರ್ಥಿಕ ವ್ಯವಹಾರ ಕೈಗೊಳ್ಳುವ ಸಂದರ್ಭಗಳಲ್ಲಿ ಪ್ಯಾನ್ ಸಂಖ್ಯೆ ದಾಖಲಿಸುವುದು ಅನಿವಾರ್ಯವಾಗಿರುತ್ತದೆ. ₹50,000ಕ್ಕೂ ಅಧಿಕ ಮೊತ್ತದ ಠೇವಣಿ ಅಥವಾ ಒಂದೇ ಆರ್ಥಿಕ ವರ್ಷದಲ್ಲಿ ಒಟ್ಟಾರೆ ₹5 ಲಕ್ಷಕ್ಕೂ ಅಧಿಕ ಮೊತ್ತದ ಠೇವಣಿ ಹೊಂದಿದಾಗ ಪ್ಯಾನ್ ನಮೂದಿಸಬೇಕು.

ಆದರೆ, ಇದಕ್ಕೆ ಪರ್ಯಾಯವಾಗಿ ‘ಫಾರಂ ಸಂಖ್ಯೆ 60’ ಅನ್ನು ತುಂಬಿ ಬ್ಯಾಂಕಿಗೆ ಕೊಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಆದರೆ, ವಾರ್ಷಿಕ ಬಡ್ಡಿ ಆದಾಯ ₹40,000 (ಹಿರಿಯ ನಾಗರಿಕರಿಗೆ ₹50,000) ದಾಟಿದಾಗ ಪ್ಯಾನ್ ಹೊಂದಿರದಿದ್ದ ಖಾತೆಗಳಿಗೆ ಶೇ 20ರಷ್ಟು ತೆರಿಗೆ ಕಡಿತ ಮಾಡಲಾಗುತ್ತದೆ. ಈ ಕಾರಣಕ್ಕೆ ಪ್ಯಾನ್ ಹೊಂದುವುದು ಸೂಕ್ತ ಹಾಗೂ ಆ ಸಂಖ್ಯೆಯನ್ನು ಬ್ಯಾಂಕಿಗೂ ಅಗತ್ಯವಾಗಿ ನೀಡಿ.

ನಿಮ್ಮ ಮಕ್ಕಳು ಅಪ್ರಾಪ್ತ ವಯಸ್ಸಿನವರಾಗಿದ್ದರೆ, ಅವರ ಆದಾಯಕ್ಕೆ ಹೆತ್ತವರೇ ಬಾಧ್ಯಸ್ಥರು. ಅವರು ವಯಸ್ಕರಾಗಿದ್ದರೆ, ಸಹಜವಾಗಿ ನಿಮಗೆ ಅನ್ವಯವಾಗುವ ಎಲ್ಲಾ ನಿಯಮಗಳು ಅವರಿಗೂ ಅನ್ವಯವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.