ADVERTISEMENT

ಪ್ರಶ್ನೋತ್ತರ ಅಂಕಣ: ಗೃಹ ಸಾಲ ಹೇಗೆ ತೀರಿಸಲಿ?

ಪ್ರಮೋದ ಶ್ರೀಕಾಂತ ದೈತೋಟ
Published 14 ಜನವರಿ 2026, 1:26 IST
Last Updated 14 ಜನವರಿ 2026, 1:26 IST
<div class="paragraphs"><p>ಗೃಹ ಸಾಲ</p></div>

ಗೃಹ ಸಾಲ

   

ಗುರು, ಊರು ತಿಳಿಸಿಲ್ಲ

ನನಗೆ 25 ವರ್ಷ ವಯಸ್ಸು. ನಾವು 2024ರಲ್ಲಿ ಸ್ವಂತ ಮನೆ ನಿರ್ಮಿಸಿ ಅಲ್ಲಿಗೆ ಸ್ಥಳಾಂತರಗೊಂಡಿದ್ದೇವೆ. ಈ ಮನೆ ನಿರ್ಮಾಣಕ್ಕಾಗಿ ‘ಕ್ಯಾನ್ಫಿನ್ ಹೋಮ್ಸ್’ನಿಂದ ವಾರ್ಷಿಕ ಶೇ 10.1ರ ಬಡ್ಡಿ ದರದಲ್ಲಿ ಗೃಹಸಾಲ ಪಡೆದಿದ್ದೇವೆ. ಒಟ್ಟು ₹57 ಲಕ್ಷ ಮೊತ್ತದ ಸಾಲವನ್ನು 25 ವರ್ಷಗಳ ಅವಧಿಗೆ ತೆಗೆದುಕೊಂಡಿದ್ದು, ಪ್ರಸ್ತುತ ತಿಂಗಳಿಗೆ ₹51,946 ಇಎಂಐ ಪಾವತಿಸುತ್ತಿದ್ದೇನೆ. ಈ ಸಾಲವನ್ನು ಎರಡು ಹಂತಗಳಲ್ಲಿ, ಅಂದರೆ ₹45 ಲಕ್ಷ ಮತ್ತು ₹12 ಲಕ್ಷದ ಕಂತುಗಳಲ್ಲಿ ಪಡೆದುಕೊಳ್ಳಲಾಗಿದೆ.

ADVERTISEMENT

ಈ ಹೊಸ ಆಸ್ತಿ ಅಲ್ಲದೆ, ನಮ್ಮ ಬಳಿ ಬೆಂಗಳೂರಿನಲ್ಲಿ ಸುಮಾರು ₹42 ಲಕ್ಷ ಮೌಲ್ಯದ ಮತ್ತೊಂದು ಆಸ್ತಿ ಇದೆ. ಆ ಆಸ್ತಿಯನ್ನು ಮಾರಾಟ ಮಾಡಿ, ನಮ್ಮ ಪ್ರಸ್ತುತ ನಿವಾಸದ ಸಮೀಪದಲ್ಲೇ ಮತ್ತೊಂದು ಆಸ್ತಿಯನ್ನು ಖರೀದಿಸುವ ಚಿಂತನೆ ನಡೆಸುತ್ತಿದ್ದೇವೆ. ಆಸ್ತಿ ಮಾರಾಟ ಮಾಡಿ ಹೊಸ ಆಸ್ತಿ ಖರೀದಿಸುವುದು ಆರ್ಥಿಕವಾಗಿ ಸೂಕ್ತವೇ ಅಥವಾ ಮಾರಾಟದಿಂದ ಬಂದ ಮೊತ್ತವನ್ನು ಬಳಸಿ ನಮ್ಮ ಗೃಹ ಸಾಲವನ್ನು ಭಾಗಶಃ ಅಥವಾ ಪೂರ್ಣವಾಗಿ ತೀರಿಸುವುದು ಉತ್ತಮವೇ? ಈ ಕುರಿತು ಮಾರ್ಗದರ್ಶನ ಅಗತ್ಯವಿದೆ.

ನಾನು ಮತ್ತು ನನ್ನ ತಾಯಿ ಉದ್ಯೋಗದಲ್ಲಿದ್ದೇವೆ, ಒಟ್ಟಾರೆ ತಿಂಗಳಿಗೆ ಸುಮಾರು ₹90,000 ಆದಾಯವಿದೆ. ಮುಂದಿನ ಯೋಜನೆಯಾಗಿ, ₹45 ಲಕ್ಷದ ಸಾಲವನ್ನು ತೀರಿಸಿದ ನಂತರ ಚಿನ್ನದಲ್ಲಿ ಅಥವಾ ಮ್ಯೂಚುವಲ್ ಫಂಡ್‌ಗಳಲ್ಲಿ ಉಳಿತಾಯ ಮತ್ತು ಹೂಡಿಕೆ ಮಾಡುವ ಉದ್ದೇಶವಿದೆ. ನಂತರ, ನನ್ನ ವಯಸ್ಸು 30 ವರ್ಷ ಮೀರಿದಾಗ ಮತ್ತೊಂದು ಆಸ್ತಿ ಖರೀದಿಸುವುದನ್ನು ಪರಿಗಣಿಸುತ್ತಿದ್ದೇನೆ.

ಇನ್ನೊಂದು ಮಹತ್ವದ ಅಂಶವೆಂದರೆ, ನನ್ನ ತಂದೆಯವರಿಗೆ ಇನ್ನು ಎರಡು ವರ್ಷಗಳಲ್ಲಿ 60 ವರ್ಷ ವಯಸ್ಸಾಗಲಿದ್ದು, ಅವರಿಗೆ ಯಾವುದೇ ನಿಯಮಿತ ಆದಾಯ ಅಥವಾ ಪಿಂಚಣಿ  ಇಲ್ಲ. ಆದ್ದರಿಂದ, ಮುಂದಿನ ದಿನಗಳಲ್ಲಿ ಅವರ ಆರ್ಥಿಕ ಜವಾಬ್ದಾರಿಯನ್ನು ನಾನು ವಹಿಸಿಕೊಳ್ಳಬೇಕಾಗಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ನಮ್ಮ ಕುಟುಂಬದ ಆರ್ಥಿಕ ಭದ್ರತೆ ಮತ್ತು ದೀರ್ಘಕಾಲೀನ ಲಾಭದ ದೃಷ್ಟಿಯಿಂದ ಯಾವ ನಿರ್ಧಾರ ಸೂಕ್ತ ಎಂಬ ಬಗ್ಗೆ ಮಾಹಿತಿ ನೀಡಿ.

ನಿಮ್ಮ ವಯಸ್ಸು, ಕುಟುಂಬದ ಆದಾಯ, ಹೊಣೆಗಾರಿಕೆ ಮತ್ತು ಈಗಾಗಲೇ ತೆಗೆದುಕೊಂಡಿರುವ ಗೃಹಸಾಲದ ಹಿನ್ನೆಲೆ ಗಮನಿಸಿದರೆ, ಈ ವಿಚಾರವನ್ನು ಕೇವಲ ‘ಆಸ್ತಿ ಮಾರಾಟ ಮಾಡಲೇಬೇಕೆ ಅಥವಾ ಸಾಲ ತೀರಿಸಲೇಬೇಕೆ’ ಎಂಬ ಎರಡು ಆಯ್ಕೆಗಳಿಗೆ ಸೀಮಿತ ಮಾಡಿ ನೋಡದೇ, ಒಟ್ಟು ಹಣಕಾಸು ವೆಚ್ಚ, ಆಸ್ತಿಯ ಮಾರಾಟದಿಂದ ಬರುವ ಲಾಭ, ತೆರಿಗೆ ಇತ್ಯಾದಿ ದೃಷ್ಟಿಯಿಂದಲೂ ಪರಿಶೀಲಿಸುವುದು ಅಗತ್ಯ. ನೀವು ‘ಕ್ಯಾನ್ಫಿನ್’ ಮೂಲಕ ₹57 ಲಕ್ಷ ಗೃಹಸಾಲವನ್ನು ಶೇ 10.1ರ ಬಡ್ಡಿದರದಲ್ಲಿ 25 ವರ್ಷಗಳಿಗೆ ಪಡೆದಿದ್ದು, ತಿಂಗಳಿಗೆ ಸುಮಾರು ₹51,946 ಇಎಂಐ ಪಾವತಿಸುತ್ತಿದ್ದೀರಿ. ದೀರ್ಘಾವಧಿಯಲ್ಲಿ ಈ ಸಾಲದ ಮೇಲೆ ನೀವು ಪಾವತಿಸುವ ಒಟ್ಟು ಬಡ್ಡಿ ಮೊತ್ತವು ಸಾಲದ ಮೂಲ ಮೊತ್ತಕ್ಕಿಂತ ಬಹಳ ಹೆಚ್ಚಾಗುತ್ತದೆ. ಹೀಗಾಗಿ, ಬಡ್ಡಿ ಹೊರೆ ಕಡಿಮೆ ಮಾಡಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು.

ಬೆಂಗಳೂರಿನಲ್ಲಿರುವ ₹42 ಲಕ್ಷ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡುವ ಮೊದಲು, ಸಂಭಾವ್ಯ ಆದಾಯ ತೆರಿಗೆ ಪರಿಣಾಮವನ್ನು ಲೆಕ್ಕಹಾಕಿ. ಜೊತೆಗೆ, ಈಗಾಗಲೇ ಹೊಂದಿರುವ ಗೃಹಸಾಲದ ಒಪ್ಪಂದದಲ್ಲಿ ಹೇಳಲಾದ  ಷರತ್ತುಗಳನ್ನು ಗಮನಿಸಿ. ಸಾಮಾನ್ಯವಾಗಿ ಸಾಲ ವರ್ಗಾವಣೆ ಆಗಿರದ ಅಥವಾ ಸ್ವಂತ ಹಣವನ್ನು ಗೃಹ ಸಾಲ ಮರುಪಾವತಿಗೆ ಉಪಯೋಗಿಸಿದ ಸಂದರ್ಭದಲ್ಲಿ ಮರುಪಾವತಿ ಮೇಲೆ ಯಾವುದೇ ಪೂರ್ವ ಪಾವತಿ ಶುಲ್ಕ ಇರುವುದಿಲ್ಲ. ಹೀಗಾಗಿ, ನಿಮ್ಮ ಆದ್ಯತೆ  ಪ್ರಸ್ತುತ ಇರುವ ಸಾಲ ಮರುಪಾವತಿಗೆ ಇರಲಿ.

ಹಣಕಾಸಿನ ದೃಷ್ಟಿಯಿಂದ ನೋಡಿದರೆ, ನಿಮಗೆ ಗೃಹ ಸಾಲದ ಹೊರತಾಗಿ ಯಾವುದೇ ಇತರ ಆರ್ಥಿಕ ಬಾಧ್ಯತೆಗಳಿಲ್ಲದಿದ್ದರೆ, ಸಾಲ ಮರುಪಾವತಿಸಿ. ನಿಮ್ಮ ಪ್ರಸ್ತುತ ಆದಾಯದಲ್ಲಿ ನಿಮ್ಮ ತಂದೆ - ತಾಯಿ ಹಾಗೂ ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿ ಒಂದಷ್ಟು ತುರ್ತು ನಿಧಿ ಕೂಡಿಡಿ. ಉಳಿದ ಹಣವನ್ನು ಬಳಸಿಕೊಳ್ಳಿ. ಈಗಾಗಲೇ ನೀವು ಹೊಸ ಮನೆ ಹೊಂದಿರುವುದರಿಂದ, ಯಾವುದೇ  ಸಂದರ್ಭದಲ್ಲಿ ಹೆಚ್ಚುವರಿ ಹಣ ಇದ್ದಾಗ ಸಾಲದ ಪ್ರಮುಖ ಭಾಗವನ್ನು ಮುಂಚಿತವಾಗಿ ತೀರಿಸುವುದು, ಹೊಸ ಆಸ್ತಿ ಖರೀದಿಗಿಂತ ಹೆಚ್ಚು ಲಾಭಕರವಾಗಬಹುದು. ಇದರಿಂದ ಸಾಲದ ಅವಧಿ ಕಡಿಮೆಗೊಂಡು ಮುಂದಿನ ವರ್ಷಗಳಲ್ಲಿ ಲಕ್ಷಾಂತರ ರೂಪಾಯಿ ಬಡ್ಡಿ ಉಳಿತಾಯ ಸಾಧ್ಯ. ಈ ಉಳಿತಾಯ ಪರೋಕ್ಷವಾಗಿ ನಿಮ್ಮಲ್ಲೇ ಇರುತ್ತದೆ. ಪ್ರಸ್ತುತ ಕುಟುಂಬದ ಆದಾಯದ ಶೇ 50ರಿಂದ 60ರಷ್ಟು ಮೊತ್ತವನ್ನು ನೀವು ಸಾಲ ಮರುಪಾವತಿಗೆ ಬಳಸುತ್ತಿದ್ದೀರಿ. ಸಾಲದ ಅವಧಿಪೂರ್ವ ಪಾವತಿಯಿಂದ ನಗದು ಹರಿವು ಸುಧಾರಣೆಯಾಗಿ ಕುಟುಂಬದ ಭದ್ರತೆ ಹೆಚ್ಚಾಗುತ್ತದೆ.

ಸಾಲದ ಹೊರೆ ಕಡಿಮೆಯಾದ ನಂತರ, ಉಳಿದ ಆದಾಯವನ್ನು ಮ್ಯೂಚುವಲ್ ಫಂಡ್‌ಗಳಂತಹ ದೀರ್ಘಾವಧಿ ಹೂಡಿಕೆಗಳಲ್ಲಿ ಅಥವಾ ಅಗತ್ಯವಿದ್ದರೆ ಚಿನ್ನದಲ್ಲಿ ಹಂತ ಹಂತವಾಗಿ ಹೂಡಿಕೆ ಮಾಡಬಹುದು. ಇವೆಲ್ಲ ದ್ರವ್ಯ ಹೂಡಿಕೆಗಳಾಗಿರುವುದರಿಂದ ಮುಂದೆ ನಿಮ್ಮ ಅಪೇಕ್ಷೆಯಂತೆ ಐದು ವರ್ಷಗಳ ನಂತರ ಮತ್ತೊಂದು ಆಸ್ತಿ ಖರೀದಿಸುವ ನಿರ್ಧಾರವನ್ನು ಆ ಸಮಯದ ಆದಾಯ ಮತ್ತು ಈ ಹೂಡಿಕೆಗಳ ಮಾರುಕಟ್ಟೆ ಮೌಲ್ಯ ಪರಿಗಣಿಸಿ ತೆಗೆದುಕೊಳ್ಳುವುದು ಹೆಚ್ಚು ಸುರಕ್ಷಿತ. ಹಾಗೂ ಲಾಭದಾಯಕವಾಗಿರುತ್ತದೆ. ಈ ಲಾಭದ ಮರುಹೂಡಿಕೆಯನ್ನು ಮುಂದೆ ನಿಮ್ಮ ನಿರೀಕ್ಷೆಯಂತೆ ಇನ್ನೊಂದು ಮನೆಯಲ್ಲಿ ಮಾಡಿ ತೆರಿಗೆ ಲಾಭ ಪಡೆಯಬಹುದು. ನಿಮ್ಮ ಆಸ್ತಿ ಮಾರಾಟಕ್ಕೆ ಸಂಬಂಧಿಸಿ ತೆರಿಗೆ ಅನ್ವಯಿಸಬಹುದು. ಅದಕ್ಕಾಗಿ ಅಗತ್ಯ ಮಾರ್ಗದರ್ಶನ ಪಡೆದುಕೊಳ್ಳಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.