ADVERTISEMENT

ಪ್ರಶ್ನೋತ್ತರ: ನಿವೃತ್ತಿಯ ನಂತರ ಜೀವನವನ್ನು ಸ್ವಾಭಿಮಾನದಿಂದ ಕಳೆಯುವುದು ಹೇಗೆ?

ಪ್ರಮೋದ ಶ್ರೀಕಾಂತ ದೈತೋಟ
Published 17 ಅಕ್ಟೋಬರ್ 2023, 20:38 IST
Last Updated 17 ಅಕ್ಟೋಬರ್ 2023, 20:38 IST
   

-ಶಂಭುಲಿಂಗ, ಜಗಳೂರು

ಪ್ರಶ್ನೆ: ನಾನು ಆಗಾಗ ಪ್ರಜಾವಾಣಿಯ ಪ್ರಶ್ನೋತ್ತರ ಅಂಕಣ ಓದುತ್ತಿರುತ್ತೇನೆ. ಅದರಿಂದ ಸ್ಪೂರ್ತಿ ಪಡೆದಿದ್ದೇನೆ. ಆದರೆ ಅನೇಕ ಕಾರಣಗಳಿಂದ ಸರಿಯಾಗಿ ಹೂಡಿಕೆ ಮಾಡಲಾಗುತ್ತಿಲ್ಲ. ನನ್ನ ವಯಸ್ಸು 59 ವರ್ಷ. ನಿವೃತ್ತಿಗೆ ಇನ್ನೂ 10 ತಿಂಗಳು ಬಾಕಿ ಇದೆ. ನನಗೆ ಕೈಗೆ ಬರುವ ಸಂಬಳ ₹ 55 ಸಾವಿರ. ₹ 30 ಸಾವಿರವನ್ನು ಮನೆಯ ಸಾಲದ ಕಂತು ಪಾವತಿಗೆ ಹೋಗುತ್ತದೆ. ಒಟ್ಟು ₹ 90 ಸಾವಿರ ಸಂಬಳ. ₹ 20 ಸಾವಿರ ವಿಪಿಎಫ್, ₹2 ಸಾವಿರ ಎಲ್‌ಐಸಿ ಮತ್ತು ನಿವೃತ್ತಿಗೆ ಮುಂಚಿತವಾಗಿ ಪಡೆದ ಭವಿಷ್ಯ ನಿಧಿ ಮೊತ್ತ ₹ 25 ಲಕ್ಷ ರೂಪಾಯಿಗಳು. ಈಗ ಹತ್ತು ದಿನಗಳಿಂದ ಅರ್ಧ ಹಣ ಕೈ ಸೇರಿ ಉಳಿತಾಯ ಖಾತೆಯಲ್ಲಿದೆ. ಪಿಂಚಣಿ, ಇಪಿಎಫ್ ಇತ್ಯಾದಿ ಸೌಲಭ್ಯ ಇದೆ. ಇದಲ್ಲದೆ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 900 ಅಡಿ ಖಾಲಿ ರೆವಿನ್ಯೂ ನಿವೇಶನ ಇದೆ. ವಿವಾಹಿತ ಮಗ ಹಾಗೂ ಸೊಸೆ ಇದ್ದು ಇವರು ಸಾಫ್ಟವೇರ್ ಕಂಪನಿ ಉದ್ಯೋಗಿಗಳು. ಒಬ್ಬಳು ಮೊಮ್ಮಗಳು ಇದ್ದಾಳೆ.  ಅವಿವಾಹಿತ ಮಗಳು ಸರ್ಕಾರಿ ಸಂಸ್ಥೆಯಲ್ಲಿ  ಉದ್ಯೋಗಿಯಾಗಿದ್ದು ಪರ್ಮನೆಂಟ್ ಆಗಿಲ್ಲ. ಈ ಸಂದರ್ಭದಲ್ಲಿ ನಿವೃತ್ತಿಯ ನಂತರ ಜೀವನವನ್ನು ಸ್ವಾಭಿಮಾನದಿಂದ ಕಳೆಯುವುದು ಹೇಗೆ ಎಂದು ಚಿಂತೆ ಆಗಿದೆ.

ಉತ್ತರ: ನಿವೃತ್ತಿಯ ನಂತರ ಹಿರಿಯ ನಾಗರಿಕರು ತಮ್ಮ ಹಣಕಾಸಿಗೆ ಸಂಬಂಧಿಸಿದ ವಿಚಾರಗಳನ್ನು ಜಾಗರೂಕತೆಯಿಂದ ನಿಭಾಯಿಸಬೇಕಾಗುತ್ತದೆ. ನಿವೃತ್ತಿಗೂ ಮೊದಲು ಯಾವುದೇ ಯೋಜನೆಯನ್ನು ಮಾಡಿರದಿದ್ದರೂ, ನಿವೃತ್ತಿಯ ಸಂದರ್ಭದಲ್ಲಿ ಬರುವ ಒಂದೇ ಕಂತಿನ ಅನೇಕ ಮೂಲಗಳ ಗಳಿಕೆಯ ಸಮರ್ಪಕ ಹೂಡಿಕೆ ಮಾಡುವುದರಿಂದ ಒಂದಷ್ಟು ಆರ್ಥಿಕ ಬಲ ತುಂಬುವಲ್ಲಿ ನೆರವಾದೀತು. ಹೀಗಾಗಿ ನಿಮ್ಮ ನಿವೃತ್ತಿಯ ಸಂದರ್ಭದಲ್ಲಿ ನಿಮಗೆ ಆರ್ಥಿಕ ಭದ್ರತೆ ಒದಗಿಸಲು ನೆರವಾಗುವ ಕೆಲವು ಪ್ರಮುಖ ಮಾರ್ಗಗಳು ಇಲ್ಲಿವೆ.

ADVERTISEMENT

1. ಹಿರಿಯ ನಾಗರಿಕರ ಉಳಿತಾಯ ಯೋಜನೆ (ಎಸ್‌ಸಿಎಸ್‌ಎಸ್): ಹಿರಿಯ ನಾಗರಿಕರ ಉಳಿತಾಯ ಯೋಜನೆ ಕೇಂದ್ರ ಸರ್ಕಾರದ ಬೆಂಬಲಿತ ಉಳಿತಾಯ ಯೋಜನೆ. ಇದು ಶೂನ್ಯ ಅಪಾಯಗಳನ್ನು ಹೊಂದಿರುವ ಹೂಡಿಕೆಯಾಗಿದೆ. 60 ವರ್ಷಕ್ಕಿಂತ ಮೇಲ್ಪಟ್ಟವರು ಇದರಲ್ಲಿ ಹೂಡಿಕೆ ಮಾಡಬಹುದು. ಈ ಹೂಡಿಕೆಯ ಸಂಪೂರ್ಣ ಅವಧಿಯಲ್ಲಿ ಖಚಿತವಾದ ಬಡ್ಡಿ ಆದಾಯದ ಭದ್ರತೆ ಇರುತ್ತದೆ. ಇದರಲ್ಲಿ ಗರಿಷ್ಠ ಹೂಡಿಕೆ ಮೊತ್ತ ₹30 ಲಕ್ಷ, ಮತ್ತು ಕನಿಷ್ಠ ₹1,000  ಹೂಡಿಕೆ ಮಾಡಿ ಖಾತೆ ತೆರೆಯಬಹುದು. ಖಾತೆಯನ್ನು ವೈಯಕ್ತಿಕವಾಗಿ ಅಥವಾ ಜಂಟಿಯಾಗಿ ತೆರೆಯಬಹುದು. ಇದರ ಮೇಲೆ  ಸುಮಾರು ಶೇ 8.2 ರ ಬಡ್ಡಿ ಸಿಗುತ್ತದೆ. ಇದನ್ನು ಪ್ರತಿ ಏಪ್ರಿಲ್, ಜುಲೈ, ಅಕ್ಟೋಬರ್ ಮತ್ತು ಜನವರಿಯ ತಿಂಗಳಲ್ಲಿ ಪಾವತಿಸಲಾಗುತ್ತದೆ. ಈ ಯೋಜನೆ ಹಿರಿಯ ನಾಗರಿಕರಿಗೆ ನಿಯಮಿತ ಬಡ್ಡಿ ಆದಾಯವನ್ನು ಒದಗಿಸುವಲ್ಲಿ ನೆರವಾಗುತ್ತದೆ. ಇದರ ಒಟ್ಟು ಅವಧಿ 5 ವರ್ಷ. ನೀವು ಅದನ್ನು ಇನ್ನೂ 3 ವರ್ಷಗಳವರೆಗೂ ವಿಸ್ತರಿಸಬಹುದು.

೨. ಹೈಬ್ರಿಡ್ ಮ್ಯೂಚುಯಲ್ ಫಂಡ್‌ಗಳು: ನಿವೃತ್ತಿಯ ನಂತರ, ತುಂಬಾ ಆದಾಯ ನೀಡುವ ಹಾಗೂ ಹೆಚ್ಚು ಆರ್ಥಿಕ ಅಪಾಯ ಹೊಂದಿದ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸಮಂಜಸವಲ್ಲ. ಹೀಗಾಗಿ ಬಂಡವಾಳದ ಸುರಕ್ಷತೆಯ ದೃಷ್ಟಿಯಲ್ಲಿ ಹೈಬ್ರಿಡ್ ಮ್ಯೂಚುಯಲ್ ಫಂಡ್‌ಗಳಲ್ಲಿ ಒಂದಷ್ಟು ಹೂಡಿಕೆ ಮಾಡಬಹುದು.  ಇವು 3-5 ವರ್ಷದ ಅವಧಿಯಲ್ಲಿ ಆಯ್ಕೆ ಮಾಡಿದ ಉತ್ಪನ್ನಕ್ಕೆ ಅನುಸಾರವಾಗಿ ಬ್ಯಾಂಕ್ ಬಡ್ಡಿಗಿಂತ ಅಧಿಕ ಆದಾಯ ನೀಡವಲ್ಲದು. ಇಲ್ಲಿನ ಹೂಡಿಕೆಗೆ ಕಾಲ ಮಿತಿ ಇಲ್ಲದಿದ್ದರೂ ಈ ಮೊತ್ತವನ್ನು ನಿಮ್ಮ ತುರ್ತು ಅಗತ್ಯಕ್ಕೆ ತಕ್ಕಂತೆ ಹಿಂಪಡೆಯಬಹುದು. ಹೂಡಿಕೆಯನ್ನು ಹಂತ ಹಂತಗಳಲ್ಲೂ ಮುಂದುವರಿಸಬಹುದು.

3. ಸಾಲದ ಪೂರ್ವ ಪಾವತಿ: ನೀವು ಪ್ರಶ್ನೆಯಲ್ಲಿ ತಿಳಿಸಿದಂತೆ ಪ್ರತಿ ತಿಂಗಳೂ ₹ 30 ಸಾವಿರವನ್ನು ಮನೆಯ ಸಾಲದ ಕಂತಿಗೆ ಪಾವತಿ ಮಾಡುತ್ತಿದ್ದೀರಿ. ಉಳಿದಿರುವ ಸಾಲದ ಒಂದಷ್ಟು ಪ್ರಮಾಣವನ್ನು ಬಂದಿರುವ ಹಣದಲ್ಲಿ ನೀವು ಪೂರ್ವ ಪಾವತಿಸಿ. ಸಾಲದ ಬಾಕಿ ಮೊತ್ತ ತಗ್ಗಿದಂತೆ ನಿಮ್ಮ ಬಡ್ಡಿ ಮೊತ್ತ ಕಡಿಮೆಯಾಗುತ್ತದೆ. ಇಎಂಐ ಅವಧಿಯೂ ಕಡಿಮೆಯಾಗುತ್ತದೆ. ಇದರಿಂದ ನಿಮಗೆ ಮಾಸಿಕ ಉಳಿಕೆಯಲ್ಲಿ ಹೆಚ್ಚಿನ ಮೊತ್ತ ಲಭಿಸುತ್ತದೆ.            

4. ಅಂಚೆ ಕಛೇರಿಯ ಮಾಸಿಕ ಆದಾಯ ಠೇವಣಿ: ಇದರಲ್ಲಿ ₹ 9 ಲಕ್ಷದ ತನಕ ನೀವು ಹಣವನ್ನು ಹೂಡಿಕೆ ಮಾಡಬಹುದು. ಶೇ 7.4 ರ ವಾರ್ಷಿಕ ಬಡ್ಡಿ ಆದಾಯ ಇದರಲ್ಲಿ ಲಭಿಸುತ್ತದೆ. ಇದೂ ಕೂಡಾ 5 ವರ್ಷದ ಅವಧಿಯ ಹೂಡಿಕೆಯಾಗಿದೆ.

-ಸತೀಶ್ ಶಂಕರ್

ಪ್ರಶ್ನೆ: ನನ್ನ ಹೆಸರಲ್ಲಿ ಒಂದು ಮನೆ ಇದ್ದು ಇದು ಉಯಿಲಿನ ರೂಪದಲ್ಲಿ ನನಗೆ ಬಂದಿದೆ. ನಾನು ಇದನ್ನು ₹ 2 ಕೋಟಿಗೆ ಮಾರಾಟ ಮಾಡಬೇಕೆಂದಿದ್ದೇನೆ. ಇದು ದೀರ್ಘಾವಧಿ ಬಂಡವಾಳ ಹೂಡಿಕೆಯಾಗಿದ್ದು ಇದರ ಸರ್ಕಾರಿ ನಿಗದಿತ ಮೌಲ್ಯ ₹30 ಲಕ್ಷ. ನನ್ನ ಪ್ರಶ್ನೆ ಏನೆಂದರೆ, ಈ ಆಸ್ತಿ ನನ್ನ ಹೆಸರಲ್ಲಿ ಮೊದಲ ಹಂತದಲ್ಲಿ ಖರೀದಿಸದ ಕಾರಣ ಸಂಪೂರ್ಣ ₹ 2 ಕೋಟಿ ಮೌಲ್ಯವೂ ತೆರಿಗೆಗೊಳಪಡುತ್ತದೆಯೆ? ಈ ಬಗ್ಗೆ ತೆರಿಗೆ ವಿನಾಯಿತಿ ಪಡೆಯುವುದು ಹೇಗೆ ?
ಇದಲ್ಲದೆ, ನನ್ನ ಹೆಸರಲ್ಲಿ ಕೆಲವು ಷೇರುಗಳಿವೆ. ನಾನು ಇವನ್ನು ನನ್ನ ಸಹೋದರರಿಗೆ ವರ್ಗಾಯಿಸುವ ಯೋಚನೆ ಮಾಡಿದ್ದೇನೆ. ಈ ವರ್ಗಾವಣೆಗೆ ತೆರಿಗೆ ಇರುತ್ತದೆಯೆ?

ಉತ್ತರ: ನೀವು ಉಲ್ಲೇಖಿಸುತ್ತಿರುವ ಆಸ್ತಿಯ ಪ್ರಸ್ತುತ ಮಾಲೀಕತ್ವ ಈಗ ನಿಮ್ಮ ಕೈಯಲ್ಲಿದೆ. ಯಾವುದೇ ಆಸ್ತಿಯನ್ನು ಉಡುಗೊರೆಯಾಗಿ, ಉಯಿಲಿನ ರೂಪದಲ್ಲಿ ಅಥವಾ ಪಿತ್ರಾರ್ಜಿತವಾಗಿ ಹಸ್ತಾಂತರಗೊಂಡಾಗ ಅದರ ಮೂಲ ವಾರಾಸುದಾರರು ಕೊಂಡುಕೊಂಡ ಸಂದರ್ಭದಿಂದಲೇ ಪ್ರಸ್ತುತ ಮಾಲೀಕರಾದವರ ಖರೀದಿ ದಿನಾಂಕ ಪರಿಗಣಿತವಾಗುತ್ತದೆ. ಹೀಗಾಗಿ ನಿಮ್ಮ ಭೂಮಿಯ ವಿಚಾರದಲ್ಲೂ, ನೀವು ನಿಜವಾಗಿ ಆ ಭೂಮಿಗೆ ಯಾವುದೇ ಮೌಲ್ಯ ತೆರದಿದ್ದರೂ, ಆದಾಯ ತೆರಿಗೆಯ ಸೆಕ್ಷನ್ 49(1) ರ ಪ್ರಕಾರ ಅದನ್ನು ಕೊಳ್ಳುವ ಸಲುವಾಗಿ ನಿಮ್ಮ ಹಿಂದಿನ ಭೂಮಾಲೀಕರು ಅದಕ್ಕೆ ಪಾವತಿಸಿದ ಮೌಲ್ಯವನ್ನೇ ನಿಮ್ಮ ಅಸಲು ಮೊತ್ತವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಇಲ್ಲಿ ನೀವು ಉಯಿಲಿನ ರೂಪದಲ್ಲಿ ಉಚಿತವಾಗಿ ಪಡೆದಿದ್ದರೂ, ಅದರ ನಿಜವಾದ ಮೌಲ್ಯವನ್ನು ಶೂನ್ಯವೆಂದು ಪರಿಗಣಿಸಿ ಗಳಿಸಿದ ಸಂಪೂರ್ಣ ಮೊತ್ತಕ್ಕೆ ತೆರಿಗೆ ಕಟ್ಟುವ ಪ್ರಮೇಯ ಬರುವುದಿಲ್ಲ. ನಿಮ್ಮ ಹಿಂದಿನ ಮಾಲೀಕರ ದಾಖಲೆಗಳ ಅನ್ವಯ ಇರುವ ಮೊತ್ತ ಹಾಗೂ ಅದಕ್ಕೆ ಅನ್ವಯಿಸುವ ಹಣದುಬ್ಬರ ಮೌಲ್ಯ ಪರಿಗಣಿಸಿ ಆಸ್ತಿಯ ಪ್ರಸ್ತುತ ಅಂದಾಜು ಅಸಲು ಮೊತ್ತ ಲೆಕ್ಕ ಹಾಕಬೇಕು. ಉಳಿದ ಲಾಭದ ಮೊತ್ತಕ್ಕಷ್ಟೇ ತೆರಿಗೆ ಇರುತ್ತದೆ. ಈ ವಿಚಾರವಾಗಿ ನೀವು ಸಂಪೂರ್ಣ ದಾಖಲೆಗಳೊಂದಿಗೆ ಹೆಚ್ಚಿನ ಸಲಹೆ ಪಡೆಯುವುದು ಸೂಕ್ತ.  

ಇನ್ನು ನೀವು ಷೇರುಗಳನ್ನು ನಿಮ್ಮ ತಮ್ಮನಿಗೆ ವರ್ಗಾಯಿಸುವ ಬಗ್ಗೆ ಅನ್ವಯವಾಗುವ ತೆರಿಗೆಯ ಬಗ್ಗೆ ವಿಚಾರಿಸಿದ್ದೀರಿ. ಸಮೀಪದ ಬಂಧುಗಳ ನಡುವೆ ಏರ್ಪಡುವ ಉಡುಗೊರೆ (ಗಿಫ್ಟ್) ಇತ್ಯಾದಿಗಳಿಗೆ ಆದಾಯ ತೆರಿಗೆ ಕಾಯ್ದೆಯ ಪ್ರಕಾರ ತೆರಿಗೆ ಇರುವುದಿಲ್ಲ. ಅದಕ್ಕೆ ಅಗತ್ಯವಿರುವ ದಾಖಲಾತಿಗಳನ್ನು ಬರೆಯಿಸಿ ಇಟ್ಟುಕೊಳ್ಳಿ. ಅದರ ಅಸಲು ಮೌಲ್ಯ ನೀವು ಪಾವತಿಸಿದ ಮೊತ್ತವಾಗಿರುತ್ತದೆ. ಅವರು ಮುಂದೆ ಅವರ ಖಾತೆಯಿಂದ ಅನ್ಯರಿಗೆ ಮಾರಾಟ ಮಾಡಿದಾಗ ತೆರಿಗೆ ಅನ್ವಯವಾಗುತ್ತದೆ.

ಪ್ರಮೋದ ಶ್ರೀಕಾಂತ ದೈತೋಟ

ಹಣಕಾಸು ತೆರಿಗೆ ಸಮಸ್ಯೆಗೆ ಪರಿಹಾರ ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ ವಾಣಿಜ್ಯ ವಿಭಾಗ ಪ್ರಜಾವಾಣಿ ನಂ.75 ಮಹಾತ್ಮ ಗಾಂಧಿ ರಸ್ತೆ ಬೆಂಗಳೂರು–560001. ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.