
ಪ್ರಶ್ನೆ: ‘ನನ್ನಲ್ಲಿ ಸುಮಾರು ₹50 ಲಕ್ಷ ಹೂಡಿಕೆಗೆ ಹಣವಿದೆ. ನಾನು ನಿವೃತ್ತನಾಗಿದ್ದು, ಈ ಮೊತ್ತ ನನ್ನ ನಿವೃತ್ತಿಯ ಸಮಯದಲ್ಲಿ ಸಿಕ್ಕಿದ್ದಾಗಿದೆ. ನಾನು ಪ್ರತಿ ತಿಂಗಳೂ ಇದರಿಂದ ನಿಗದಿತ ಆದಾಯ ಬಯಸುತ್ತೇನೆ. ನನ್ನ ವಯಸ್ಸು ಸುಮಾರು 61 ವರ್ಷ, ಯಾವುದೇ ಪಿಂಚಣಿ ಇಲ್ಲ. ನನಗೆ ಮನೆ ಮಂದಿಯ ಯಾವುದೇ ಆರ್ಥಿಕ ಜವಾಬ್ದಾರಿಗಳಿಲ್ಲ. ನನಗೆ ಸಲಹೆ ನೀಡಿ. –ನಾಗೇಶ್ ಕುಮಾರ್, ಬೆಂಗಳೂರು
ಉತ್ತರ: ನೀವು ನಿವೃತ್ತರಾಗಿರುವುದರಿಂದ ಹಾಗೂ ಪಿಂಚಣಿ ಸೌಲಭ್ಯ ಇಲ್ಲದಿರುವುದರಿಂದ ನಿಮಗೆ ಮಾಸಿಕ ಆದಾಯದ ಅಗತ್ಯವಿರುತ್ತದೆ. ಇಂತಹ ಸಂದರ್ಭದಲ್ಲಿ ನಿಶ್ಚಿತ ಆದಾಯ ನಿರೀಕ್ಷಿಸಿ ಹೂಡಿಕೆ ಮಾಡುವಾಗ, ನಮ್ಮಲ್ಲಿ ಅದಕ್ಕಾಗಿಯೇ ಮೀಸಲಿಟ್ಟ ಒಂದಿಷ್ಟು ಹಣ ಇರಬೇಕು. ಇದು ಆರ್ಥಿಕ ಸಮತೋಲನ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪರಿಗಣಿಸಬೇಕಾದ ಬಹಳ ಮುಖ್ಯ ಅಂಶ. ನಿಮ್ಮ ವೈಯಕ್ತಿಕ ಬದುಕಿನ ಆರ್ಥಿಕ ಬೇಡಿಕೆಗಳ ಪೂರೈಕೆಗೆ ಈ ಕೆಳಗಿನ ಅಂಶಗಳನ್ನು ಪರಿಗಣಿಸಿ ನಿಗದಿತ ಆದಾಯ ನೀಡುವ ಹೂಡಿಕೆಗಳಲ್ಲಿ ಹಣ ತೊಡಗಿಸಿ.
* ನೀವು ಬ್ಯಾಂಕ್‌ಗಳಲ್ಲಿ ಹೂಡಿಕೆ ಮಾಡುವುದಿದ್ದರೆ ವಿವಿಧ ಬ್ಯಾಂಕ್‌ಗಳನ್ನು ಆರಿಸಿಕೊಳ್ಳಿ ಮತ್ತು ಹೂಡಿಕೆಯನ್ನು ಒಂದೇ ಉತ್ಪನ್ನದಲ್ಲಿ ಇಡುವುದನ್ನು ತಪ್ಪಿಸಿ. ಪ್ರತಿ ಬ್ಯಾಂಕ್‌ನಲ್ಲಿ ಈ ಮೊತ್ತ ₹5 ಲಕ್ಷ ಮೀರದಿರಲಿ. ನಿಮ್ಮ ಹೆಚ್ಚುವರಿ ಮೊತ್ತವನ್ನು, ಹೆಚ್ಚುವರಿ ಬಡ್ಡಿ ನೀಡುವ ಯೋಜನೆಗಳಲ್ಲಿ ಹೂಡಿಕೆ ಮಾಡಿ.
* ಅಂಚೆ ಇಲಾಖೆಯ ಹಿರಿಯ ನಾಗರಿಕರ ಉಳಿತಾಯ ಖಾತೆಗಳಲ್ಲಿ ವ್ಯಕ್ತಿಯೊಬ್ಬನ ಇಂತಹ ಎಲ್ಲಾ ಖಾತೆಗಳ ಒಟ್ಟು ಮೊತ್ತ ₹30 ಲಕ್ಷ ಮೀರದಂತೆ ಹೂಡಿಕೆ ಮಾಡಬಹುದು. ಈ ಹೂಡಿಕೆ ಸುಮಾರು ಶೇ 8.2ರಷ್ಟು ಬಡ್ಡಿ ನೀಡುತ್ತಿದ್ದು, ಮೂರು ತಿಂಗಳಿಗೊಮ್ಮೆ ಬಡ್ಡಿ ಮೊತ್ತ ಸಿಗುತ್ತದೆ. ಹೂಡಿಕೆದಾರರಿಗೆ ನಿಯಮಿತ ಆದಾಯ ಒದಗಿಸುತ್ತದೆ. ಐದು ವರ್ಷದ ಅವಧಿಯ ಈ ಖಾತೆಯಿಂದ ಹೂಡಿಕೆದಾರರು ಯಾವುದೇ ಸಮಯದಲ್ಲಿ ಹಣ ಹಿಂಪಡೆಯಬಹುದು. ಆದರೆ ಒಂದು ವರ್ಷದೊಳಗೆ ಮುಚ್ಚಿದರೆ ಬಡ್ಡಿ ನೀಡಲಾಗುವುದಿಲ್ಲ ಮತ್ತು ನೀಡಿದ ಬಡ್ಡಿಯನ್ನು ವಾಪಸ್ ಪಡೆಯಲಾಗುತ್ತದೆ. 1–2 ವರ್ಷಗಳಲ್ಲಿ ಮುಚ್ಚಿದರೆ ಠೇವಣಿಯ ಶೇ 1.5ರಷ್ಟು ಕಡಿತ ಹಾಗೂ 2 ವರ್ಷಗಳ ನಂತರ ಶೇ 1ರಷ್ಟು ಕಡಿತ ಇರುತ್ತದೆ. ವಿಸ್ತರಣೆ ಬಳಿಕ 1 ವರ್ಷದೊಳಗೆ ಮುಚ್ಚಿದರೆ ಶೇ 1ರಷ್ಟು ಕಡಿತ ಅನ್ವಯಿಸುತ್ತದೆ.
* ತಿಂಗಳ ಆದಾಯದ ಗಳಿಕೆಗಾಗಿ ಅಂಚೆ ಇಲಾಖೆಯ ಮಾಸಿಕ ಆದಾಯ ಯೋಜನೆಯಲ್ಲಿ ನೀವು ₹9 ಲಕ್ಷದ ತನಕ ಹೂಡಿಕೆ ಮಾಡಬಹುದು. ಇದಕ್ಕೆ ಶೇ 7.4ರಷ್ಟು ಬಡ್ಡಿ ಸಿಗುತ್ತದೆ. ಇದು ಐದು ವರ್ಷಗಳ ಅವಧಿಯ ಹೂಡಿಕೆಯಾಗಿರುತ್ತದೆ. ಮೊದಲ ಮೂರು ವರ್ಷಗಳ ಅವಧಿಯಲ್ಲಿ ಖಾತೆಯಲ್ಲಿರುವ ಹಣ ಹಿಂಪಡೆದರೆ ಶೇ 2ರ ದಂಡ ಹಾಗೂ ನಂತರ ಪೂರ್ಣಾವಧಿ ಪೂರೈಸುವುದರೊಳಗೆ ಖಾತೆ ಮುಚ್ಚಿದರೆ ಶೇ 1ರ ದಂಡ ಇರುತ್ತದೆ.
ಈ ವಿಚಾರಗಳನ್ನು ಪರಿಗಣಿಸಿ ನಿಮ್ಮ ಹೂಡಿಕೆಯ ಮೊತ್ತವನ್ನು ನಿರ್ಧರಿಸಿ. ನೀವು ವಾರ್ಷಿಕವಾಗಿ ₹4 ಲಕ್ಷದ ತನಕ ಆದಾಯ ಗಳಿಸಬಹುದು.
ಪ್ರಶ್ನೆ: ನನ್ನ ಮಗ ಸರ್ಕಾರಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾನೆ. ಕಂಪನಿಯ ನೌಕರರ ಹಿತದೃಷ್ಟಿಯಿಂದ ಕುಟುಂಬದ ಸದಸ್ಯರ ವೈದ್ಯಕೀಯ ವೆಚ್ಚವನ್ನು ಭರಿಸುವ ಸೌಲಭ್ಯ ಅಲ್ಲಿ ಇದೆ. ಆತನ ತಾಯಿಯ ಆರೋಗ್ಯ ಹದಗೆಟ್ಟಿದ್ದು ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದರ ಚಿಕಿತ್ಸೆಗೆ ಬಹಳಷ್ಟು ಹಣ ವೆಚ್ಚ ಮಾಡಿದ್ದೇವೆ. ಕಂಪನಿಯವರು ಬಿಲ್ ಆಧಾರದ ಮೇಲೆ ಹಣವನ್ನು ಆತನಿಗೆ ನೀಡುವವರಿದ್ದಾರೆ. ನನ್ನ ಪ್ರಶ್ನೆ ಏನೆಂದರೆ, ಇದಕ್ಕೆ ತೆರಿಗೆ ಅನ್ವಯಿಸುತ್ತದೆಯೇ? –ರಾಜು ಎಂ.ಆರ್., ರಾಜಾಜಿನಗರ, ಬೆಂಗಳೂರು
ಉತ್ತರ: ನಿಮ್ಮ ಮಗ ಸರ್ಕಾರಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದು, ಕಂಪನಿಯು ನೌಕರರ ಕಲ್ಯಾಣಕ್ಕಾಗಿ ವೈದ್ಯಕೀಯ ವೆಚ್ಚ ಭರಿಸುವ ಸೌಲಭ್ಯ ನೀಡುತ್ತಿದೆ ಎಂದು ತಿಳಿಸಿರುತ್ತೀರಿ. ಆತನ ತಾಯಿ ನರದೌರ್ಬಲ್ಯ ಕಾಯಿಲೆಯಿಂದ ಬಳಲುತ್ತಿದ್ದು, ಅದಕ್ಕಾಗಿ ಆಗಿರುವ ವೈದ್ಯಕೀಯ ವೆಚ್ಚವನ್ನು ಬಿಲ್ ಆಧಾರದ ಮೇಲೆ ಕಂಪನಿಯವರು ಮರುಪಾವತಿ ಮಾಡುತ್ತಿರುವುದಾಗಿ ತಿಳಿಸಿರುವಿರಿ. ಆದಾಯ ತೆರಿಗೆ ಕಾಯ್ದೆ–1961ರ ಸೆಕ್ಷನ್ 17(2)ರ ಅಡಿ ‘ಪರ್ಕ್ವಿಸಿಟ್’ ಎಂಬ ಪರಿಕಲ್ಪನೆಯ ಅಡಿ ವೈದ್ಯಕೀಯ ಸೌಲಭ್ಯಗಳನ್ನೂ ಸೇರಿಸಲಾಗಿದೆ. ಇದರಲ್ಲಿ, ಕೆಲವು ವಿಶೇಷ ವೈದ್ಯಕೀಯ ಚಿಕಿತ್ಸೆಗಳಿಗಾಗಿ ನೀಡುವ ಸೌಲಭ್ಯಗಳಿಗೆ ತೆರಿಗೆಯಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಆದಾಯ ತೆರಿಗೆ ಕಾನೂನಿನ ನಿಯಮ 3ಎ ಅಡಿ ನಿರೂಪಿಸಿರುವ ಕಾಯಿಲೆಗಳ ಪಟ್ಟಿಯಲ್ಲಿ ನರ ಸಂಬಂಧಿತ ಕಾಯಿಲೆಗಳೂ ಒಳಗೊಂಡಿವೆ. ಇಂತಹ ಕಾಯಿಲೆಗಳಿಗೆ ಸರ್ಕಾರಿ ಆಸ್ಪತ್ರೆ ಅಥವಾ ಆದಾಯ ತೆರಿಗೆಯ ಮುಖ್ಯ ಆಯುಕ್ತರಿಂದ ಅನುಮೋದಿಸಲ್ಪಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಲ್ಲಿ, ಆ ಚಿಕಿತ್ಸೆಗೆ ಕಂಪನಿಯೇ ನೇರವಾಗಿ ಮಾಡಿದ ವೈದ್ಯಕೀಯ ವೆಚ್ಚ ಅಥವಾ ಬಿಲ್‌ಗಳ ಮರುಪಾವತಿಯನ್ನು ‘ಪರ್ಕ್ವಿಸಿಟ್’ ಎಂದು ಪರಿಗಣಿಸಲಾಗುವುದಿಲ್ಲ. ಅಂದರೆ, ಅಂತಹ ಮೊತ್ತವನ್ನು ನೌಕರನ ತೆರಿಗೆ ಆದಾಯದಲ್ಲಿ ಸೇರಿಸುವ ಅಗತ್ಯವಿಲ್ಲ.
ಆದರೆ ಈ ತೆರಿಗೆ ವಿನಾಯಿತಿಗೆ ಕೆಲವು ಷರತ್ತುಗಳಿವೆ. ಚಿಕಿತ್ಸೆ ಪಡೆದ ಆಸ್ಪತ್ರೆಯ ವಿಶೇಷ ವೈದ್ಯರಿಂದ ನೀಡಲಾದ ಪ್ರಮಾಣಪತ್ರ ಇರಬೇಕು; ಅದರಲ್ಲಿ ಕಾಯಿಲೆಯ ಸ್ವರೂಪ, ರೋಗಿಯ ವಿವರಗಳು ಸ್ಪಷ್ಟವಾಗಿರಬೇಕು. ಈ ದಾಖಲೆಗಳ ಆಧಾರದ ಮೇಲೆ ಕಂಪನಿಯವರು ಮರುಪಾವತಿ ಮಾಡಿದರೆ, ಅದು ಸಂಪೂರ್ಣ ತೆರಿಗೆ ವಿನಾಯಿತಿಯ ವೈದ್ಯಕೀಯ ಸೌಲಭ್ಯವಾಗುತ್ತದೆ. ಹೀಗಾಗಿ, ನಿಮ್ಮ ಮಗನಿಗೆ ಕಂಪನಿಯಿಂದ ದೊರಕುವ ಈ ವೈದ್ಯಕೀಯ ವೆಚ್ಚ ಮರುಪಾವತಿಯು ಮೇಲ್ಕಂಡ ಕಾನೂನು ಷರತ್ತುಗಳನ್ನು ಪೂರೈಸಿದರೆ, ಅಂತಹ ಮೊತ್ತ ಆದಾಯ ತೆರಿಗೆಗೆ ಒಳಪಡುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.