ಪ್ರಶ್ನೆ: ನಾನು ಕಾಂಟ್ರಾ ವರ್ಗದ ರೆಗ್ಯುಲರ್ ಗ್ರೋತ್ ಫಂಡ್ ಆಯ್ಕೆ ಮಾಡಿದ್ದು, ಅದರಲ್ಲಿ ಮಾಸಿಕ ₹2,000 ಮೊತ್ತವನ್ನು ಪ್ರತಿ ತಿಂಗಳೂ ಎಸ್‌ಐಪಿ ಮೂಲಕ ಹೂಡಿಕೆ ಮಾಡುತ್ತಿದ್ದೇನೆ. ಇದು ನನ್ನ ಮೊದಲ ಹೂಡಿಕೆ. ಪ್ರಸ್ತುತ ಈ ಹೂಡಿಕೆಯ ಮೌಲ್ಯ ಋಣಾತ್ಮಕ ಸ್ಥಿತಿಯಲ್ಲಿ ಇದೆ. ಇದರಿಂದ ನನಗೆ ನಷ್ಟವಾಗುತ್ತದೆಯೇ ಎಂಬ ಆತಂಕ ಆಗಾಗ ಕಾಡುತ್ತದೆ. ಈ ಹೂಡಿಕೆಯಿಂದ ನನಗೆ ಭವಿಷ್ಯದಲ್ಲಿ ಲಾಭ ದೊರೆಯುವ ಸಾಧ್ಯತೆ ಇದೆಯೇ? ನಾನು ತೊಡಗಿಸಿರುವ ಮೊತ್ತಕ್ಕೆ ಬಡ್ಡಿ ಅಥವಾ ಲಾಭವನ್ನು ಯಾವಾಗ ಸೇರಿಸಲಾಗುತ್ತದೆ? ಮ್ಯೂಚುವಲ್ ಫಂಡ್‌ನ ಎನ್‌ಎವಿ ದಿನನಿತ್ಯ ಏರಿಕೆ–ಇಳಿಕೆ ಆಗುವ ಪ್ರಕ್ರಿಯೆ ನನ್ನ ಹೂಡಿಕೆಗೆ ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ? – ಸುನಿತಾ, ಊರು ತಿಳಿಸಿಲ್ಲ
ಉತ್ತರ: ನೀವು ನಿಮ್ಮ ಹೂಡಿಕೆಯ ಕುರಿತು ಹೆಚ್ಚು ಆತಂಕಗೊಂಡಂತೆ ಕಾಣುತ್ತದೆ. ಕಾಂಟ್ರಾ ವರ್ಗದ ಮ್ಯೂಚುವಲ್ ಫಂಡ್‌ಗಳು ಈಕ್ವಿಟಿ ಆಧಾರಿತವಾಗಿರುವುದರಿಂದ ಮಾರುಕಟ್ಟೆಯ ಏರುಪೇರಿನಿಂದಾಗಿ ಹೂಡಿಕೆಯ ಮೌಲ್ಯವು ಕೆಲವೊಮ್ಮೆ ಋಣಾತ್ಮಕವಾಗಬಹುದು. ಇದು ನಿಜವಾದ ನಷ್ಟವಲ್ಲ. ಮಾರುಕಟ್ಟೆ ಏರಿಳಿತದ ತಾತ್ಕಾಲಿಕ ಫಲ ಮಾತ್ರ. ಇಂತಹ ಫಂಡ್‌ಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದಾಗ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆ ಹೆಚ್ಚು. ಸಾಮಾನ್ಯವಾಗಿ ಐದರಿಂದ ಏಳು ವರ್ಷಗಳ ಅವಧಿಗೆ ನಿರಂತರವಾಗಿ ಹೂಡಿಕೆ ಮುಂದುವರಿಸಿದರೆ ಮಾರುಕಟ್ಟೆಯ ಏರಿಳಿತಗಳನ್ನು ಸಮತೋಲನಗೊಳಿಸಿ ಲಾಭ ಪಡೆಯುವ ಸಾಧ್ಯತೆ ಹೆಚ್ಚುತ್ತದೆ.
ನೀವು ಪ್ರತಿ ತಿಂಗಳು ₹2,000ವನ್ನು ಎಸ್ಐಪಿ ಮೂಲಕ ಹೂಡಿಕೆ ಮಾಡುತ್ತಿರುವುದು ಹೂಡಿಕೆ ಶಿಸ್ತನ್ನು ಕಾಯ್ದುಕೊಳ್ಳಲು ಸಹಾಯಕ. ನೀವು ಪ್ರಶ್ನೆಯಲ್ಲಿ ಕೇಳಿರುವಂತೆ, ಮ್ಯೂಚುವಲ್ ಫಂಡ್‌ಗಳು ಬ್ಯಾಂಕ್ ಠೇವಣಿಯಂತೆ ನಿಗದಿತ ಬಡ್ಡಿ ಅಥವಾ ಲಾಭ ನೀಡುವುದಿಲ್ಲ. ಬದಲಾಗಿ, ನಿಮ್ಮ ಹೂಡಿಕೆಯ ಮೌಲ್ಯವು ಪ್ರತಿದಿನದ ಮಾರುಕಟ್ಟೆ ಚಲನೆಯ ಪ್ರಕಾರ ಬದಲಾಗುತ್ತದೆ. ಮೌಲ್ಯದಲ್ಲಿನ ಏರಿಳಿತವು ಎನ್ಎವಿ ಬೆಲೆಯಲ್ಲಿ ಗೊತ್ತಾಗುತ್ತದೆ. ಲಾಭ ಅಥವಾ ನಷ್ಟವು ಎನ್‌ಎವಿ ಏರಿಕೆ ಅಥವಾ ಇಳಿಕೆಯಿಂದ ನಿರ್ಧಾರವಾಗುತ್ತದೆ.
ಮಾರುಕಟ್ಟೆಯ ಅಲ್ಪಾವಧಿಯ ಅಸ್ಥಿರತೆಯಿಂದ ಅಸಮಾಧಾನಗೊಂಡು ಹೂಡಿಕೆಯಿಂದ ವಿಮುಖರಾಗುವ ಅಥವಾ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ನೀವು ಅಗತ್ಯವಾಗಿ ಮಾಡಬೇಕಾದ ಕೆಲಸವೆಂದರೆ, ಹೂಡಿಕೆಯ ಬಗ್ಗೆ ತಿಳಿವಳಿಕೆ ಬೆಳೆಸಿಕೊಳ್ಳಿ. ಮ್ಯೂಚುವಲ್ ಫಂಡ್‌ಗಳನ್ನು ವೃತ್ತಿಪರ ನಿಧಿ ನಿರ್ವಾಹಕರು ನಿರ್ವಹಿಸುತ್ತಾರೆ. ಅವರು ಮಾರುಕಟ್ಟೆಯ ಚಲನೆ ಗಮನಿಸಿ ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಲಾಭ ತರಲು ಯತ್ನಿಸುತ್ತಾರೆ. ಆದ್ದರಿಂದ ನಿಮ್ಮ ಹೂಡಿಕೆಯನ್ನು ಧೈರ್ಯದಿಂದ ಮುಂದುವರಿಸಿ, ನಿಯಮಿತವಾಗಿ ಖಾತೆಯನ್ನು ಪರೀಕ್ಷಿಸಿ, ಅಗತ್ಯವಿದ್ದರೆ ನಿಮ್ಮ ಆರ್ಥಿಕ ಸಲಹೆಗಾರರೊಂದಿಗೆ ಚರ್ಚಿಸಿ ತಿದ್ದುಪಡಿ ಮಾಡಿಕೊಳ್ಳಿ. ದೀರ್ಘ ಅವಧಿಗೆ ಹೂಡಿಕೆ ಮುಂದುವರಿಸಿದಲ್ಲಿ ಭವಿಷ್ಯದಲ್ಲಿ ಬ್ಯಾಂಕ್ ಬಡ್ಡಿಗಿಂತ ಉತ್ತಮ ಲಾಭದ ನಿರೀಕ್ಷೆ ಮಾಡಬಹುದು.
ಪ್ರಶ್ನೆ: ನಾನು ಕೇಂದ್ರ ಸರ್ಕಾರದ ಉದ್ಯೋಗಿಯಾಗಿ 2020ರಲ್ಲಿ ನಿವೃತ್ತಿ ಹೊಂದಿದ್ದೇನೆ. ಈಗ ನಿವೃತ್ತಿ ವೇತನ ಪಡೆಯುತ್ತಿದ್ದೇನೆ. ನಾನು 1999ರಲ್ಲಿ ಇಲಾಖೆಯಿಂದ ಅನುಮತಿ ಪಡೆದು ಒಂದು ಮನೆ ಕಟ್ಟಿಸಿ ಅದರಲ್ಲಿ ವಾಸವಾಗಿದ್ದೇನೆ. 1998ನೇ ಇಸವಿಯಿಂದ ಆದಾಯ ತೆರಿಗೆ ಕಟ್ಟುತ್ತಿದ್ದೇನೆ. ಆದರೆ ನಾನು ವಾಸ ಮಾಡುವ ಮನೆಯನ್ನು ಆದಾಯ ತೆರಿಗೆ ಭರ್ತಿ ಮಾಡುವಾಗ ತೋರಿಸಿರಲಿಲ್ಲ, ಅದನ್ನು ಈಗ ತೋರಿಸಬಹುದೇ? ಅಲ್ಲದೆ 2017ನೇ ಇಸವಿಯಲ್ಲಿ ನನಗೆ ತಂದೆಯಿಂದ ಗದ್ದೆ ಹಾಗೂ ಅಡಿಕೆ ತೋಟ ಬಂದಿರುತ್ತದೆ. ಅದನ್ನು ಆದಾಯ ತೆರಿಗೆ ವಿವರ ಸಲ್ಲಿಸುವಾಗ ಉಲ್ಲೇಖಿಸಲಿಲ್ಲ. ಎರಡೂ ಸ್ಥಿರಾಸ್ಥಿಗಳ ವಿವರಗಳನ್ನು ಪ್ರತಿ ವರ್ಷ ಇಲಾಖೆಗೆ ಸಲ್ಲಿಸಿದ್ದೇನೆ. ಈಗ ಎರಡೂ ಸ್ಥಿರಾಸ್ಥಿಗಳ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ವಿವರ ಸಲ್ಲಿಸುವಾಗ ತೋರಿಸಬಹುದೇ? – ಎಚ್.ಎಸ್. ಸುರೇಶ, ಮಂಗಳೂರು
ಉತ್ತರ: ಆದಾಯ ತೆರಿಗೆ ವಿವರ ಸಲ್ಲಿಸುವಾಗ ವ್ಯಕ್ತಿಯ ಆದಾಯ, ಸಂಬಂಧಿತ ಆಸ್ತಿ ಮತ್ತು ಅನ್ವಯಿಸುವ ವಿನಾಯಿತಿಗಳ ವಿವರಗಳನ್ನು ಸರಿಯಾಗಿ ನೀಡುವುದು ಕಾನೂನುಬದ್ಧ ಜವಾಬ್ದಾರಿ. ಕೆಲವೊಮ್ಮೆ ಇಂತಹ ವಿಚಾರದಲ್ಲಿ ಲೋಪಗಳಾಗಬಹುದು. ಆದರೆ ತೆರಿಗೆ ವಂಚಿಸುವ ಉದ್ದೇಶ ಅಥವಾ ಉದ್ದೇಶಪೂರ್ವಕವಾಗಿ ಮಾಹಿತಿ ಗೋಪ್ಯವಾಗಿಟ್ಟು ಅದು ತೆರಿಗೆ ವಿಚಾರದಲ್ಲಿ ಯಾವುದೇ ಪರಿಣಾಮ ಬೀರಿದರೆ ಮಾತ್ರ ಸಮಸ್ಯೆ ಉದ್ಭವಿಸುತ್ತದೆ. ನೀವು ನಿಮ್ಮ ಉದ್ಯೋಗದ ಸಂದರ್ಭದಲ್ಲಿ ಪಡೆದ ಅನುಮತಿ ನಿಮ್ಮ ಉದ್ಯೋಗ ಸಂಬಂಧಿತ ವಿಚಾರವಾಗಿದ್ದು ಆದಾಯ ತೆರಿಗೆಗೆ ನೇರ ಸಂಬಂಧ ಇಲ್ಲ.
ನೀವು ಈಗಾಗಲೇ ಸಕಾಲಿಕವಾಗಿ ವಿವರ ಸಲ್ಲಿಸುತ್ತಿದ್ದೀರಿ. ಸ್ವಂತ ಮನೆಯಲ್ಲಿ ವಾಸಿಸುತ್ತಿರುವ ಕಾರಣ ಆ ಆಸ್ತಿಯಿಂದ ಯಾವುದೇ ಆದಾಯ ಇಲ್ಲ. ಹೀಗಾಗಿ ತೆರಿಗೆ ಪಾವತಿ ವಿಚಾರದಲ್ಲಿ ಯಾವುದೇ ಸಮಸ್ಯೆ ಇಲ್ಲ. ಮುಂದಿನ ವಿವರ ಸಲ್ಲಿಸುವಾಗ ‘ಹೌಸ್ ಪ್ರಾಪರ್ಟಿ’ ವಿಭಾಗದಲ್ಲಿ ಸ್ವಂತ ವಾಸಕ್ಕಾಗಿರುವ ಮನೆ ಹೊಂದಿರುವ ವಿವರ ಭರ್ತಿ ಮಾಡಿಕೊಳ್ಳಿ. ಇದರಿಂದ ಯಾವುದೇ ಸಮಸ್ಯೆ ಇಲ್ಲ.
ನಿಮಗೆ ನಿಮ್ಮ ತಂದೆಯಿಂದ ಕೃಷಿ ಭೂಮಿ ಈಗಾಗಲೇ ಬಂದಿದೆ. ಸಾಮಾನ್ಯವಾಗಿ ₹5 ಸಾವಿರಕ್ಕಿಂತ ಅಧಿಕ ಮೊತ್ತದ ನಿವ್ವಳ ಕೃಷಿ ಆದಾಯ ಇದ್ದಾಗ ಅದನ್ನು ವಿವರಗಳಲ್ಲಿ ತೋರಿಸಬೇಕಾಗಿರುವುದು ಆದಾಯ ತೆರಿಗೆ ನಿಯಮ. ಅದೇ ರೀತಿ ಒಟ್ಟು ₹5 ಲಕ್ಷಕ್ಕಿಂತ ಅಧಿಕ ನಿವ್ವಳ ಕೃಷಿ ಆದಾಯ ಇದ್ದಾಗ ಎಲ್ಲಾ ಕೃಷಿ ಭೂಮಿಯ ವಿವರಗಳನ್ನು ನೀಡಬೇಕಾಗಿರುವುದು ಅಗತ್ಯ. ಆದರೆ ಈ ಮೊತ್ತಕ್ಕಿಂತ ಕಡಿಮೆ ಆದಾಯ ಇದ್ದಾಗ ಈ ರೀತಿಯ ಆಸ್ತಿ ವಿವರ ನೀಡುವುದು ಕಡ್ಡಾಯವಲ್ಲ.
ಹೀಗಾಗಿ, ನಿಮಗೆ ಹೆಚ್ಚಿನ ಕೃಷಿ ಆದಾಯ ಇದ್ದರೆ, ಅದನ್ನು ಯಾವ ರೀತಿ ನಿಮ್ಮ ಐ.ಟಿ. ವಿವರದಲ್ಲಿ ತೋರಿಸಬೇಕು, ನಿವ್ವಳ ಕೃಷಿ ಆದಾಯ ಹೇಗೆ ನಿರ್ಧರಿಸಬೇಕು ಇತ್ಯಾದಿ ವಿವರಗಳ ಮಾಹಿತಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ ಹಾಗೂ ಅಗತ್ಯ ಕ್ರಮ ಕೈಗೊಳ್ಳಿ. ಆದರೆ ಒಂದು ವಿಚಾರ ಗಮನಿಸಿ, ಯಾವುದೇ ಮೊತ್ತದ ಕೃಷಿ ಆದಾಯವಿದ್ದರೂ ಅದಕ್ಕೆ ತೆರಿಗೆ ಇಲ್ಲ. ಆದರೆ ವೈಯಕ್ತಿಕ ತೆರಿಗೆ ಮಿತಿಗಿಂತ ಹೆಚ್ಚಿನ ಕೃಷಿಯೇತರ ಆದಾಯವಿದ್ದಾಗ, ಹಾಗೂ ಕೃಷಿ ಆದಾಯ ₹5000ದ ಮೇಲಿದ್ದಾಗ, ಆ ಬಗೆಗಿನ ಮಾಹಿತಿ ಸೇರಿಸಿ ವಿವರ ಸಲ್ಲಿಕೆ ಅನಿವಾರ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.