ADVERTISEMENT

ಪ್ರಶ್ನೋತ್ತರ | ಹಣಕಾಸು ಹೂಡಿಕೆ, ತೆರಿಗೆ ಸಂಬಂಧಿತ ಪ್ರಶ್ನೆಗಳಿಗೆ ತಜ್ಞರ ಉತ್ತರ

ಪ್ರಮೋದ ಶ್ರೀಕಾಂತ ದೈತೋಟ
Published 20 ಮಾರ್ಚ್ 2025, 23:07 IST
Last Updated 20 ಮಾರ್ಚ್ 2025, 23:07 IST
   

ನಾನು ಷೇರುಪೇಟೆಯಲ್ಲಿ ಸುಮಾರು ₹10 ಲಕ್ಷ ಹೂಡಿಕೆ ಮಾಡಿದ್ದೇನೆ. ಮುಂದೆಯೂ ಹೂಡಿಕೆ ಮಾಡುವ ಯೋಚನೆಯಲ್ಲಿದ್ದೇನೆ. ಆದರೆ, ಮುಂದಿನ ಹೆಚ್ಚುವರಿ ಹೂಡಿಕೆಯನ್ನು ಪೋರ್ಟ್‌ಫೋಲಿಯೊ ನಿರ್ವಹಿಸುವ ಸಂಸ್ಥೆಗೆ ವಹಿಸಿ ಕೊಡುವ ಅಂದಾಜು ಮಾಡಿದ್ದೇನೆ. ಈ ಬಗ್ಗೆ ಸೂಕ್ತ ಮಾಹಿತಿ ನೀಡಿ.

–ಗೌರವ್, ಜೆ.ಪಿ. ನಗರ, ಬೆಂಗಳೂರು.

ನೀವು ಈಗಾಗಲೇ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ ಅನುಭವ ಹೊಂದಿದ್ದೀರಿ. ಹೆಚ್ಚುವರಿ ಹೂಡಿಕೆಗೆ ಪೋರ್ಟ್‌ಫೋಲಿಯೊ ನಿರ್ವಹಣಾ ಸಂಸ್ಥೆಗಳ ಸೇವೆ ಪಡೆಯುವ ಯೋಚನೆಯಲ್ಲಿದ್ದೀರಿ. ತಜ್ಞ ನಿರ್ವಹಣೆ, ವೈವಿಧ್ಯ ಹೂಡಿಕೆ ಹಾಗೂ ಮಾರುಕಟ್ಟೆಯ ದೀರ್ಘಾವಧಿ ಪರಿಶೀಲನಾ ಪ್ರಕ್ರಿಯೆ ಗಮನಿಸಿ ನಿಮಗೆ ಇಂತಹ ಸೇವೆಗಳ ಬಗ್ಗೆ ಸಲಹೆ ನೀಡಲಾಗುತ್ತದೆ ಅಥವಾ ನಿಮ್ಮ ಹಣ ಹೂಡಿಕೆ ಮಾಡಲಾಗುತ್ತದೆ.

ADVERTISEMENT

ಪಿಎಂಎಸ್ ಸೇವೆ ಆಯ್ಕೆ ಮಾಡುವಾಗ ಸಂಸ್ಥೆಯ ಸ್ಥಿರತೆ, ನಿರ್ವಹಣಾ ಶುಲ್ಕ ಮತ್ತು ಹೂಡಿಕೆ ಮುಂತಾದ ಅಂಶಗಳನ್ನು ಪರಿಗಣಿಸಿ. ಕೆಲವು ಸೇವೆಗಳು ನಿಮಗೆ ಹೂಡಿಕೆ ಬಗ್ಗೆ ನಿರ್ದೇಶನ ನೀಡುತ್ತವೆ ಅಥವಾ ತಾವೇ ನಿಮ್ಮ ಪರವಾಗಿ ನಿರ್ಧಾರ ಕೈಗೊಂಡು ಹೂಡಿಕೆ ಮಾಡುತ್ತವೆ. ಇಂತಹ ಸಂದರ್ಭದಲ್ಲಿ ನಿಮ್ಮ ಮತ್ತು ಸೇವಾ ಸಂಸ್ಥೆಯ ಜವಾಬ್ದಾರಿ ಏನು ಎಂಬುದನ್ನು ಮುಖ್ಯವಾಗಿ ನಿರ್ಧರಿಸಿ.

ಕನಿಷ್ಠ ಶುಲ್ಕ ಹಾಗೂ ಹೂಡಿಕೆ ಮೊತ್ತದಲ್ಲಿ ವಿವಿಧ ಸಂಸ್ಥೆಗಳ ನಡುವೆ ವ್ಯತ್ಯಾಸ ಇರುತ್ತದೆ. ಈ ಬಗ್ಗೆ ಚರ್ಚಿಸಿ ನಿರ್ಧರಿಸಿ. ಸಾಮಾನ್ಯವಾಗಿ ಈ ಬಗ್ಗೆ ಸಮಯ ನೀಡಲಾಗದಿದ್ದಾಗ ಮತ್ತು ಮಾರುಕಟ್ಟೆಯಲ್ಲಿ ಸಾಕಷ್ಟು ಬಂಡವಾಳ ತೊಡಗಿಸುವ ಉದ್ದೇಶ ಹೊಂದಿದವರು ಇಂತಹ ಸೇವೆ ಪಡೆಯಲು ಹೆಚ್ಚು ಆಸಕ್ತರಿರುತ್ತಾರೆ.

2015ರಲ್ಲಿ ನಾನು ತುಮಕೂರಿನಲ್ಲಿ ₹25 ಲಕ್ಷ ವೆಚ್ಚ ಮಾಡಿ ಒಂದು ಆಸ್ತಿಯಲ್ಲಿ ಹೂಡಿಕೆ ಮಾಡಿದ್ದೆ. ಈಗ ಅದರ ಮೌಲ್ಯ ಸುಮಾರು ₹60 ಲಕ್ಷ ಆಗಿದೆ. ಈಗ ವ್ಯಾಪಾರದ ಉದ್ದೇಶಕ್ಕಾಗಿ ಈ ಆಸ್ತಿಯ ಮಾರಾಟಕ್ಕೆ ಇಚ್ಛಿಸುತ್ತಿದ್ದೇನೆ. ಪ್ರಸ್ತುತ ಈ ಭಾಗದಲ್ಲಿ ಆಸ್ತಿಗೆ ಒಳ್ಳೆಯ ಬೇಡಿಕೆ ಇದೆ. ನನಗೆ ಈ ಸಂದರ್ಭದಲ್ಲಿ ಉಂಟಾಗುವ ತೆರಿಗೆ ಪರಿಣಾಮ ಏನು ಮತ್ತು ತೆರಿಗೆ ಉಳಿಸುವ ಆಯ್ಕೆ ಯಾವುವು? ನಾನು ಈಗ 60 ವರ್ಷ ದಾಟಿದ್ದೇನೆ. ನನಗೆ ಪ್ರಸ್ತುತ ಸುಮಾರು ₹1 ಲಕ್ಷದಷ್ಟು ಡಿವಿಡೆಂಡ್ ಆದಾಯ ಮಾತ್ರ ಇದೆ.

ನನ್ನ ವಯಸ್ಸು ಮತ್ತು ಆದಾಯವನ್ನು ಗಮನದಲ್ಲಿಟ್ಟುಕೊಂಡು ಮೂಲ ಆದಾಯ ವಿನಾಯಿತಿಗೆ ಹೆಚ್ಚಿನ ಮಿತಿ ಲಭ್ಯವಿದೆಯೇ? ನಾನು ಹಳೆಯ ಹಾಗೂ ಹೊಸ ಆದಾಯ ತೆರಿಗೆ ಪದ್ಧತಿಯಲ್ಲಿ ಯಾವುದನ್ನು ಆಯ್ಕೆ ಮಾಡಬೇಕು? ಮುಂದಿನ ವರ್ಷಗಳಲ್ಲಿ ನಾನು ತೆರಿಗೆ ರಿಟರ್ನ್ಸ್ ಸಲ್ಲಿಸುವ ಅಗತ್ಯ ಇಲ್ಲ ಎಂಬುದು ನನ್ನ ಅಭಿಪ್ರಾಯ. ಈ ಬಗ್ಗೆಯೂ ತಿಳಿಸಿ.

–ಶ್ರೀನಿವಾಸಮೂರ್ತಿ, ತುಮಕೂರು.

ಈ ಆಸ್ತಿಯು ಎರಡಕ್ಕೂ ಹೆಚ್ಚು ವರ್ಷ ನಿಮ್ಮ ಒಡೆತನದಲ್ಲಿದೆ. ಹಾಗಾಗಿ, ಇದನ್ನು ದೀರ್ಘಾವಧಿ ಬಂಡವಾಳ ಲಾಭ ಆದಾಯ ಎಂದು ಪರಿಗಣಿಸಲಾಗುತ್ತದೆ. ಈ ಲಾಭದ ಮೇಲೆ ನೀವು ಕಟ್ಟಬೇಕಾದ ತೆರಿಗೆ ಮತ್ತು ತೆರಿಗೆ ಉಳಿಸುವ ಆಯ್ಕೆಗಳನ್ನು ವಿಶ್ಲೇಷಿಸೋಣ.

ನೀವು ಹಿರಿಯ ನಾಗರಿಕರಾಗಿರುವುದರಿಂದ ನಿಮ್ಮ ಆದಾಯ ವಿನಾಯಿತಿ ಮಿತಿ ಯಾವುದೇ ತೆರಿಗೆ ಪದ್ಧತಿಯಾದರೂ ₹3 ಲಕ್ಷ ಆಗಿದೆ. ಡಿವಿಡೆಂಡ್ ಆದಾಯ ಕಳೆದು ಉಳಿದ ₹2 ಲಕ್ಷ ಮೊತ್ತವನ್ನು ಬಂಡವಾಳ ತೆರಿಗೆ ನಿರ್ಧರಿಸುವಾಗ ಮೂಲ ವಿನಾಯಿತಿಯಾಗಿ ತೆರಿಗೆಗೊಳಪಡುವ ಆದಾಯದಿಂದ ಕಡಿತಗೊಳಿಸುವ ಅವಕಾಶವಿದೆ. 

2015ರಲ್ಲಿ ಖರೀದಿಸಿದ ಆಸ್ತಿಯ ಸೂಚೀಕೃತ ಖರೀದಿಯ ವೆಚ್ಚ ಲೆಕ್ಕ ಹಾಕಲು ಆದಾಯ ತೆರಿಗೆ ಇಲಾಖೆಯು ಪ್ರಕಟಿಸಿದ ಆಯಾ ವರ್ಷದ ಹಣದುಬ್ಬರ ಸೂಚ್ಯ೦ಕವನ್ನು ಬಳಸಿಕೊಳ್ಳಬೇಕು. 2015ರಲ್ಲಿ ಈ ಮೌಲ್ಯಾಂಕ 254 ಆಗಿದೆ. 2024-25ರಲ್ಲಿ ಈ ಮೌಲ್ಯಾಂಕ 363 ಆಗಿದೆ. ಈ ಮೂಲಕ ಸೂಚೀಕೃತ ಖರೀದಿ ವೆಚ್ಚ ₹25 ಲಕ್ಷ (363/ 254) ಇದ್ದುದು ₹35.73 ಲಕ್ಷ ಆಗುತ್ತದೆ. ಹೀಗಾಗಿ, ಮೂಲ ವಿನಾಯಿತಿ ಕಳೆದು ಉಳಿದ ಬಂಡವಾಳ ಲಾಭವಾದ ₹22.27 ಲಕ್ಷದ ಮೇಲೆ ಸೆಸ್ ಸಹಿತ ತೆರಿಗೆ ₹4.63 ಲಕ್ಷ ಆಗುತ್ತದೆ.

ಆದರೆ, ಕಳೆದ ವರ್ಷದ ಬಜೆಟ್ ಪ್ರಸ್ತಾಪದಂತೆ ಈ ಇಂಡೆಕ್ಸೇಷನ್ ಲಾಭ ಪಡೆಯದೆ ತೆರಿಗೆ ಲೆಕ್ಕ ಹಾಕುವುದಾದರೆ ಮೂಲ ವಿನಾಯಿತಿ ಕಳೆದು ನೇರವಾಗಿ ₹33 ಲಕ್ಷ ಲಾಭಕ್ಕೆ ಅನ್ವಯಿಸುವ ತೆರಿಗೆ ₹4.29 ಲಕ್ಷ. ಹೀಗಾಗಿ, ಇಂಡೆಕ್ಸೇಷನ್ ರಹಿತ ಪದ್ಧತಿಯಲ್ಲಿ ತೆರಿಗೆ ಲೆಕ್ಕ ಹಾಕಿ ಪಾವತಿಸುವುದು ಸೂಕ್ತ.

ಇನ್ನು ತೆರಿಗೆ ಉಳಿಸಿಕೊಳ್ಳಲು ನಿಮಗೆ ಕೆಲವು ಆಯ್ಕೆಗಳಿವೆ. ಸೆಕ್ಷನ್ 54ಎಫ್ ಅಡಿ ಮಾರಾಟ ಆದಾಯವನ್ನು ಹೊಸ ಆಸ್ತಿ ಅಥವಾ ಮನೆ ಖರೀದಿಗೆ ಹೂಡಿಕೆ ಮಾಡಿದರೆ (ಮಾರಾಟದ 1 ವರ್ಷ ಮೊದಲು ಅಥವಾ ಮಾರಾಟದ 2 ವರ್ಷ ಒಳಗೆ) ನೀವು ತೆರಿಗೆ ವಿನಾಯಿತಿ ಪಡೆಯಬಹುದು. ಹಾಗೆಯೇ, ಸೆಕ್ಷನ್ 54ಇಸಿ ಅಡಿ ₹50 ಲಕ್ಷದವರೆಗೆ ಲಾಭವನ್ನು ಮಾನ್ಯತೆ ಪಡೆದ ಬಾಂಡ್‌ಗಳು ಅಥವಾ ಮೂರು ವರ್ಷದ ಅವಧಿಗೆ ಕ್ಯಾಪಿಟಲ್ ಗೈನ್ ಬ್ಯಾಂಕ್ ಖಾತೆಯಲ್ಲಿ ಹೂಡಿಕೆ ಮಾಡಿ ಹೊಸ ಮನೆ ನಿರ್ಮಾಣಕ್ಕೂ ಬಳಸಿಕೊಳ್ಳಬಹುದು. ನಿಮ್ಮ ಹೆಚ್ಚಿನ ಮಾಹಿತಿಯೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಇನ್ನು ಮುಂದಿನ ವರ್ಷದ ರಿಟರ್ನ್ಸ್ ಸಲ್ಲಿಕೆ ಬಗ್ಗೆ ಹೇಳುವುದಾದರೆ ನಿಮ್ಮ ಊಹೆಯಂತೆ ಈ ರಿಟರ್ನ್ಸ್ ಸಲ್ಲಿಕೆಯು ಭೂಮಿ ಮಾರಾಟ ಮಾಡಿದ ವರ್ಷಕ್ಕೆ ಮಾತ್ರ ಅನ್ವಯಿಸುತ್ತದೆ. ತೆರಿಗೆ ವಿನಾಯಿತಿ ಮಿತಿಗಿಂತ ಕೆಳಗೆ ವಾರ್ಷಿಕ ಆದಾಯ ಇದ್ದ ಸಂದರ್ಭದಲ್ಲಿ ರಿಟರ್ನ್ಸ್ ಸಲ್ಲಿಕೆ ಅನಿವಾರ್ಯವಲ್ಲ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ.

ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.

ಇ–ಮೇಲ್‌: businessdesk@prajavani.co.in

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.