ADVERTISEMENT

ಪ್ರಶ್ನೋತ್ತರ | ನಿವೃತ್ತಿ ಅಂಚಿನಲ್ಲಿರುವವರಿಗೆ ಹೂಡಿಕೆಗೆ ಯಾವ ಯೋಜನೆ ಸೂಕ್ತ?

ಪ್ರಮೋದ ಶ್ರೀಕಾಂತ ದೈತೋಟ
Published 14 ಅಕ್ಟೋಬರ್ 2025, 23:36 IST
Last Updated 14 ಅಕ್ಟೋಬರ್ 2025, 23:36 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನನ್ನ ತಂದೆಯವರು 2010ರಲ್ಲಿ ₹25 ಲಕ್ಷಕ್ಕೆ ಕೊಂಡ ಜಮೀನು ಹಾಗೂ ಅದರಲ್ಲಿ ಇತ್ತೀಚೆಗೆ ಕಟ್ಟಿಸಿದ ಮನೆಯನ್ನು ನಾನು ಮಾರಾಟ ಮಾಡಲಿದ್ದೇನೆ. ಈ ಮನೆಯನ್ನು 2024ರ ಡಿಸೆಂಬರ್‌ನಲ್ಲಿ ನಿರ್ಮಿಸಲಾಗಿತ್ತು. ಕಾರಣಾಂತರಗಳಿಂದ ಈ ಮನೆ ಮಾರಬೇಕಾಗಿದೆ. ಮನೆ ನಿರ್ಮಾಣಕ್ಕೆ ₹35 ಲಕ್ಷ ಖರ್ಚಾಗಿದೆ. ಈಗ ಅಂದಾಜು ₹1 ಕೋಟಿ ಈ ಮನೆ ಮಾರಾಟದಿಂದ ಬರಬಹುದು. ನಾನು ವೈಯಕ್ತಿಕವಾಗಿ ಯಾವುದೇ ಮೊತ್ತ ವ್ಯಯಿಸಿಲ್ಲ. ಆದರೆ ನನ್ನ ತಂದೆ ಹಣ ಹೂಡಿದ್ದರು. ನನ್ನ ಪ್ರಶ್ನೆ ಏನೆಂದರೆ, ಈ ಲಾಭ ಯಾವ ವರ್ಗದ ಬಂಡವಾಳ ಲಾಭದ ಅಡಿ ತೆರಿಗೆಗೊಳಪಡುತ್ತದೆ? ಇದಕ್ಕೆ ತೆರಿಗೆ ಹೇಗೆ ಅನ್ವಯಿಸುತ್ತದೆ?

-ರಾಜೀವ್, ಮೈಸೂರು ರಸ್ತೆ, ಬೆಂಗಳೂರು

ADVERTISEMENT

ಉತ್ತರ: ನಿಮ್ಮ ತಂದೆಯವರು 2010ರಲ್ಲಿ ₹25 ಲಕ್ಷಕ್ಕೆ ಖರೀದಿಸಿದ ಜಮೀನು ನಿಮ್ಮ ಸ್ವಾಧೀನಕ್ಕೆ ಬಂದಿರುವುದರಿಂದ, ನೀವು ಅದನ್ನು ಮಾರಾಟ ಮಾಡಿದಾಗ ಬಂಡವಾಳ ಲಾಭ ತೆರಿಗೆ ಪಾವತಿಸಬೇಕಾಗುತ್ತದೆ. ಜಮೀನಿನ ಒಡೆತನವು ಖರೀದಿ ವರ್ಷ 2010ರಿಂದ 2025ರವರೆಗೆ 24 ತಿಂಗಳಿಗಿಂತ ಹೆಚ್ಚು ಅವಧಿ ಕಳೆದಿರುವುದರಿಂದ, ಈ ವ್ಯವಹಾರವು ದೀರ್ಘಾವಧಿ ಬಂಡವಾಳ ಲಾಭ ಆಗಿ ಪರಿಗಣಿತವಾಗುತ್ತದೆ ಮತ್ತು ತೆರಿಗೆ ದರ ಶೇ 12.5ರಷ್ಟು ಅನ್ವಯಿಸುತ್ತದೆ. ಇಂಡೆಕ್ಸೇಷನ್ ಪ್ರಯೋಜನದ ಸಹಿತ ನೀವು ತೆರಿಗೆ ಲೆಕ್ಕ ಹಾಕಿದಾಗ ನಿಮಗೆ ಒಟ್ಟಾರೆಯಾಗಿ ಅನುಕೂಲ ಆಗುತ್ತದೆಯೇ ಎಂಬುದನ್ನು ಪರಿಶೀಲಿಸಿ, ಇದರ ಅಡಿ ಶೇ 20ರಷ್ಟು ತೆರಿಗೆ ದರ ಅನ್ವಯಿಸುತ್ತದೆ. ಆದರೆ, ಇದನ್ನು ಜಮೀನು ಮತ್ತು ಮನೆ ನಡುವೆ ಸಮರ್ಪಕವಾಗಿ ಮೌಲ್ಯ ವರ್ಗೀಕರಣ ಮಾಡುವ ಮೂಲಕ ಲೆಕ್ಕ ಹಾಕಬೇಕಾಗುತ್ತದೆ. ಇದಕ್ಕೆ ನೀವು ಹೆಚ್ಚಿನ ಸಮಾಲೋಚನೆ ಮಾಡುವ ಅಗತ್ಯ ಇದೆ.

ಮನೆಯ ನಿರ್ಮಾಣಕ್ಕೆ 2023–24ರಲ್ಲಿ ₹35 ಲಕ್ಷ ವೆಚ್ಚ ಮಾಡಿದ್ದೀರಿ. ಇದರ ನಿರ್ಮಾಣದ ನಂತರದ ಅವಧಿ 24 ತಿಂಗಳಿಗಿಂತ ಕಡಿಮೆ. ಹೀಗಾಗಿ ಇದಕ್ಕೆ ಅಲ್ಪಾವಧಿ ಬಂಡವಾಳ ತೆರಿಗೆ ಬರುತ್ತದೆ. ಜಮೀನು ಹಾಗೂ ಮನೆ, ಇವೆರಡೂ ಪ್ರತ್ಯೇಕ ವರ್ಗಗಳಲ್ಲಿ ತೆರಿಗೆಗೊಳಪಡುತ್ತವೆ. ಇನ್ನೂ ಒಂದು ವಿಚಾರವೆಂದರೆ, ನಿಮ್ಮ ತಂದೆಯವರು ಜಮೀನು ಖರೀದಿ-ಮನೆ ನಿರ್ಮಾಣಕ್ಕೆ ವ್ಯಯಿಸಿದ ಮೊತ್ತ ಹಾಗೂ ಹೂಡಿಕೆ ಅವಧಿ ಲೆಕ್ಕಾಚಾರಕ್ಕೆ ಅವರು ಖರೀದಿಸಿದ ಹಳೆಯ ದಿನವೇ ಅನ್ವಯಿಸುತ್ತದೆ.

ಆದರೆ, ನೀವು ಈ ಲಾಭದ ಮೊತ್ತವನ್ನು ಸೆಕ್ಷನ್ 54ರ ಅಡಿ ಉಲ್ಲೇಖಿಸಿರುವಂತೆ ಇನ್ನೊಂದು ಮನೆ ಖರೀದಿ ಅಥವಾ ನಿರ್ಮಾಣಕ್ಕೆ ಬಳಸಿಕೊಂಡರೆ ಅಥವಾ ಮುಂದಿನ 3 ವರ್ಷದೊಳಗೆ ಹೊಸ ಮನೆ ಖರೀದಿಗೆ ಕ್ಯಾಪಿಟಲ್ ಗೈನ್ಸ್ ಅಕೌಂಟ್ ಸ್ಕೀಮ್‌ನಲ್ಲಿ ಠೇವಣಿ ಮಾಡಿ ಬಳಸಿಕೊಂಡರೆ, ತೆರಿಗೆ ವಿನಾಯಿತಿ ಪಡೆಯಬಹುದು.  

ನನ್ನ ವಯಸ್ಸು 57 ವರ್ಷ, ಉದ್ಯೋಗದಲ್ಲಿದ್ದೇನೆ. ಇತ್ತೀಚಿನ ಎಸ್‌.ಐ.ಎಫ್‌ ವರ್ಗದ ಹೊಸ ಮ್ಯೂಚುವಲ್‌ ಫಂಡ್‌ ಯೋಜನೆಗಳು ಹೂಡಿಕೆದಾರರ ಗಮನ ಸೆಳೆಯುತ್ತಿವೆ. ಈ ಬಗ್ಗೆ ಅನೇಕ ಕಡೆ ಜಾಹೀರಾತು ನೋಡಿದ್ದೇನೆ. ಈ ಹೊಸ ಯೋಜನೆಗಳಲ್ಲಿ ಹೂಡಿಕೆ ಮಾಡುವ ಆಯ್ಕೆ ಹೂಡಿಕೆದಾರರಿಗೆ ಯಾವ ರೀತಿಯಲ್ಲಿ ಪ್ರಯೋಜನಕಾರಿ? ಇವುಗಳು ಇತರ ಮ್ಯೂಚುವಲ್‌ ಫಂಡ್‌ಗಳಿಗಿಂತ ವಿಭಿನ್ನವಾದ ಹೂಡಿಕೆ ತಂತ್ರ ಹೊಂದಿವೆಯೇ? ಪ್ರಸ್ತುತ ನನ್ನ ಷೇರು ಹೂಡಿಕೆಯ ಹಣವನ್ನು ಇದಕ್ಕೆ ವರ್ಗಾಯಿಸುವುದು ಸೂಕ್ತವೇ? ಇದರಲ್ಲಿ ಹೂಡಿಕೆ ಮಾಡಲು ಕನಿಷ್ಠ ₹10 ಲಕ್ಷ ಅಗತ್ಯ ಎನ್ನುತ್ತದೆ ಹೂಡಿಕೆಯ ಮಾಹಿತಿ ದಾಖಲೆ. ಇದರಲ್ಲಿ ಲಾಭದ ಸಾಧ್ಯತೆ ಮತ್ತು ಅಪಾಯ ನಿರ್ವಹಣೆ ಯಾವ ರೀತಿಯಲ್ಲಿದೆ? ನಿವೃತ್ತಿ ಅಂಚಿನಲ್ಲಿರುವ ನನ್ನಂತಹವರಿಗೆ ಈ ಯೋಜನೆ ಸೂಕ್ತ ಆಯ್ಕೆಯಾಗಬಹುದೇ?

-ಜಯಚಂದ್ರ, ವೈಟ್‌ಫೀಲ್ಡ್, ಬೆಂಗಳೂರು

ಉತ್ತರ: ನಿಮ್ಮ ವಯಸ್ಸು, ಉದ್ಯೋಗಸ್ಥಿತಿ ಮತ್ತು ನಿವೃತ್ತಿಯ ಅಂಚಿನಲ್ಲಿರುವ ಹಿನ್ನೆಲೆಯನ್ನು ಗಮನಿಸಿದರೆ, ಎಸ್‌.ಐ.ಎಫ್‌ನ ಹೊಸ ಮ್ಯೂಚುವಲ್‌ ಫಂಡ್‌ ಯೋಜನೆಗಳಲ್ಲಿ ಹೂಡಿಕೆ ಮಾಡುವುದನ್ನು ತ್ವರಿತ ನಿರ್ಧಾರವಾಗಿ ಕೈಗೊಳ್ಳುವುದಕ್ಕಿಂತ ಮೊದಲು ವಿಶ್ಲೇಷಣಾತ್ಮಕವಾಗಿ ಪರಿಗಣಿಸುವುದು ಅಗತ್ಯ. ಇವು ‘ನಿಫ್ಟಿ 500’ ಟೋಟಲ್ ರಿಟರ್ನ್ಸ್ ಇಂಡೆಕ್ಸ್ ಆಧರಿಸಿ ನಡೆಯುತ್ತವೆ ಮತ್ತು ಇತ್ತೀಚೆಗೆ ಪರಿಚಯಿಸಲಾದ ಲಾಂಗ್ ಶಾರ್ಟ್ ಮ್ಯೂಚುವಲ್ ಫಂಡ್‌ಗಳು ಸಾಮಾನ್ಯವಾಗಿ ನಿರ್ದಿಷ್ಟ ಪ್ರತಿಶತ ಪ್ರಮಾಣದ ಮೊತ್ತವನ್ನು ಈಕ್ವಿಟಿ ಷೇರುಗಳಲ್ಲಿ ತೊಡಗಿಸುತ್ತವೆ. ಇದರ ಆಧಾರದಲ್ಲಿ ತುಸು ಪ್ರಮಾಣದ ಪ್ಯೂಚರ್ಸ್-ಆಪ್ಷನ್ ಹಾಗೂ ಒಂದಷ್ಟು ಮೊತ್ತವನ್ನು ಏಕಮುಖ ಪ್ಯೂಚರ್ಸ್-ಆಪ್ಷನ್‌ನಲ್ಲಿ ಹೂಡಿಕೆ ಮಾಡುವ ವೈಶಿಷ್ಟ್ಯಪೂರ್ಣ ಹೂಡಿಕೆ ತಂತ್ರಗಳೂ ಇದರಲ್ಲಿ ಇವೆ. ಇದು ಈಗ ಮೊದಲ ಹಂತದ ಪ್ರಯೋಗ. ಹೀಗಾಗಿ ಇನ್ನಷ್ಟು ಕಾಲ ಯೋಚಿಸಿ ಹೂಡಿಕೆ ಮಾಡುವುದೊಳಿತು.

ಈ ಹೂಡಿಕೆ ಯೋಜನೆಗೆ ಕನಿಷ್ಠ ₹10 ಲಕ್ಷ ಬಂಡವಾಳದ ಅಗತ್ಯವಿದೆ. ಇದು ಸ್ವಲ್ಪ ಹೆಚ್ಚಿನ ಹೂಡಿಕೆ ಆಗಿದ್ದು, ನಿವೃತ್ತಿಯ ಹಂತದ ಹೂಡಿಕೆದಾರರಿಗೆ ಹಣದ ಅಗತ್ಯ ಬಂದರೆ ದ್ರವ್ಯತೆಯ ಸಮಸ್ಯೆ ಉಂಟುಮಾಡಬಹುದು. ಷೇರು ಮಾರುಕಟ್ಟೆಯಲ್ಲಿನ ಅಸ್ಥಿರತೆಯಿಂದ ನಿಮ್ಮ ಹೂಡಿಕೆ ಮೌಲ್ಯದಲ್ಲಿ ಬದಲಾವಣೆ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಷೇರು ಹೂಡಿಕೆಯಿಂದ ನೇರವಾಗಿ ಈ ಹೊಸ ಫಂಡ್‌ಗೆ ಸಂಪೂರ್ಣ ಹಣ ವರ್ಗಾಯಿಸುವುದಕ್ಕಿಂತ, ಇದೇ ಫಂಡ್‌ನಲ್ಲಿ ಎಸ್‌ಐಪಿ ಮೂಲಕ ಹಂತ ಹಂತವಾಗಿ ಹೂಡಿಕೆ ಮಾಡುವುದು ಸುರಕ್ಷಿತ.

ತೆರಿಗೆ ದೃಷ್ಟಿಯಿಂದ, ಈಕ್ವಿಟಿ-ಆಧಾರಿತ ಮ್ಯೂಚುವಲ್‌ ಫಂಡ್‌ಗಳಲ್ಲಿನ ಬಂಡವಾಳ ವೃದ್ಧಿಗೆ ಇರುವ ನಿಯಮಗಳು ಅನ್ವಯಿಸುತ್ತವೆ. ಒಂದು ವರ್ಷದೊಳಗಿನ ಹೂಡಿಕೆ ಮಾರಾಟದ ಮೇಲೆ ಅಲ್ಪಾವಧಿ ಬಂಡವಾಳ ವೃದ್ಧಿ ತೆರಿಗೆ ಶೇ 20ರಷ್ಟು ಆಗಿದ್ದು, ಒಂದು ವರ್ಷಕ್ಕಿಂತ ಹೆಚ್ಚು ಕಾಲದ ಹೂಡಿಕೆ ಮಾರಾಟದ ಲಾಭಕ್ಕೆ ದೀರ್ಘಾವಧಿ ಬಂಡವಾಳ ವೃದ್ಧಿ ತೆರಿಗೆ ಶೇ 12.50ರಷ್ಟು ಆಗಿರುತ್ತದೆ. ಆದರೆ, ವಾರ್ಷಿಕ ₹1.25 ಲಕ್ಷಕ್ಕಿಂತ ಅಧಿಕ ಮೊತ್ತದ ಲಾಭಕ್ಕೆ ಮಾತ್ರ ಇದನ್ನು ವಿಧಿಸಲಾಗುತ್ತದೆ. ನಿವೃತ್ತಿಯ ಹಂತದಲ್ಲಿ ಸ್ಥಿರ ಆದಾಯದ ಅವಶ್ಯಕತೆಗನುಗುಣವಾಗಿ ತೆರಿಗೆ ಬಳಿಕದ ನಿಜವಾದ ಲಾಭದ ಮೊತ್ತವನ್ನು ಪರಿಗಣಿಸಿ ನಿರ್ಧಾರ ಮಾಡುವುದು ಸೂಕ್ತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.