ADVERTISEMENT

ಪ್ರಶ್ನೋತ್ತರ: ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಪ್ರಮೋದ ಶ್ರೀಕಾಂತ ದೈತೋಟ
Published 3 ಜನವರಿ 2024, 0:09 IST
Last Updated 3 ಜನವರಿ 2024, 0:09 IST
   

-ಆರ್. ಲಕ್ಷ್ಮಯ್ಯ, ಕೋರಮಂಗಲ, ಬೆಂಗಳೂರು

ನಾನು ರಾಜ್ಯ ಸರ್ಕಾರಿ ಪತ್ರಾಂಕಿತ ನಿವೃತ್ತ ಅಧಿಕಾರಿ. ಪ್ರಸ್ತುತ ನನಗೆ ನಿವೃತ್ತಿ ವೇತನ ಹಾಗೂ ಖಾಸಗಿ ಉದ್ಯೋಗದಿಂದ ಮಾಸಿಕ ಆದಾಯ ಹಾಗೂ ಮನೆ ಬಾಡಿಗೆ ರೂಪದಲ್ಲಿ ₹22,000 ಹೀಗೆ ಒಟ್ಟಾರೆ ₹11.47 ಲಕ್ಷ ವಾರ್ಷಿಕ ಆದಾಯವಿದೆ. ಹಿರಿಯ ನಾಗರಿಕರ ಉಳಿತಾಯ ಯೋಜನೆಯಡಿ ಅಂಚೆ ಕಚೇರಿಯಲ್ಲಿ ₹1.50 ಲಕ್ಷ ಹೂಡಿಕೆ ಮಾಡಿದ್ದೇನೆ. ವಾಹನ ಖರೀದಿಗೆ ₹20 ಲಕ್ಷವನ್ನು ಬ್ಯಾಂಕಿನಿಂದ ಸಾಲ ಪಡೆದಿದ್ದೇನೆ. ಈ ಸಾಲಕ್ಕೆ ಸಂಬಂಧಿಸಿ, ಇದರ ಮಾಸಿಕ ಕಂತು ನನ್ನ ವೇತನ ಖಾತೆಯಿಂದ ಪಾವತಿಯಾಗುತ್ತದೆ. ಮೇಲ್ಕಂಡ ಮಾಹಿತಿಯ ಮೇರೆಗೆ ನನ್ನ ವರಮಾನ ತೆರಿಗೆ ಉಳಿಸಲು ಮಾಹಿತಿ ನೀಡಬೇಕಾಗಿ ಕೋರಿಕೆ.  

ನೀವು ನೀಡಿರುವ ಮಾಹಿತಿಯಂತೆ ನಿಮಗೆ ನಿವೃತ್ತಿ ವೇತನ ಹಾಗೂ ಪ್ರಸ್ತುತ ಉದ್ಯೋಗದಲ್ಲಿರುವ ಖಾಸಗಿ ಕಂಪನಿಯಿಂದಲೂ ವೇತನ ಬರುತ್ತಿದೆ. ಇದಲ್ಲದೆ, ಮಾಸಿಕ ಬಾಡಿಗೆ ಆದಾಯವೂ ಬರುತ್ತಿದೆ. ವೇತನ ಆದಾಯಕ್ಕೆ ಸಂಬಂಧಿಸಿ ನಿಮ್ಮ ಆಯ್ಕೆ ಹಳೆಯ ತೆರಿಗೆ ಪದ್ಧತಿಯಾಗಿದ್ದರೆ, ವೇತನದ ವಿವಿಧ ಅಂಶಗಳಿಗೆ ಸಂಬಂಧಿಸಿ ಸಂಸ್ಥೆ ಎಲ್ಲರಿಗೂ ಅನ್ವಯವಾಗುವ ರಿಯಾಯಿತಿಗಳನ್ನು (ಸೆಕ್ಷನ್ 10) ನಿಮಗೂ ನೀಡಿರುತ್ತದೆ. ಉದಾಹರಣೆಗೆ ರಜಾ ಬಾಕಿಯ ನಗದೀಕರಣ ಇತ್ಯಾದಿ. ಉಳಿದಂತೆ ಸೆಕ್ಷನ್ 80ಸಿ ವಿನಾಯಿತಿಗೆ ಸಂಬಂಧಿಸಿ ಈಗಾಗಲೇ ನೀವು ಗರಿಷ್ಠ ಹೂಡಿಕೆ ಮಾಡಿದ್ದೀರಿ. ಯಾವುದೇ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದರೂ ನಿಮಗೆ ಒಟ್ಟಾರೆ ₹50 ಸಾವಿರದ ಸ್ಟ್ಯಾಂಡರ್ಡ್ ಡಿಡಕ್ಷನ್ ವಿನಾಯಿತಿ ಇದೆ.  

ADVERTISEMENT

ಸೆಕ್ಷನ್ 80ಸಿಸಿಡಿ (1ಬಿ) ಇದರಡಿ ಯಾವುದೇ ತೆರಿಗೆ ಪದ್ಧತಿಯನ್ನು ಆಯ್ಕೆ ಮಾಡಿದರೂ ಹೆಚ್ಚುವರಿ ₹50 ಸಾವಿರ ವಿನಾಯಿತಿ ಪಡೆಯುವುದಕ್ಕೆ ಇನ್ನೂ ಅವಕಾಶವಿದೆ. ಇದಕ್ಕೆ ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಹೂಡಿಕೆದಾರ ವಯಸ್ಸು 18ರಿಂದ 70 ವರ್ಷದ ಒಳಗಿರಬೇಕು. ಇನ್ನು ನೀವು ಪಡೆದ ವಾಹನ ಸಾಲಕ್ಕೆ ಪ್ರಸ್ತುತ ಯಾವುದೇ ರಿಯಾಯಿತಿ ಇರುವುದಿಲ್ಲ.

-ವಿಕಾಸ್ ಶರ್ಮಾ, ಬೆಂಗಳೂರು

ನಾನು ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದು ವೇತನ ನಂಬಿಕೊಂಡು ಬದುಕು ಸಾಗಿಸುತ್ತಿದ್ದೇನೆ. ನನಗೆ ಓರ್ವ ತಂಗಿ ಇದ್ದು ಆಕೆಗೆ ಜನ್ಮತಃ ಶ್ರವಣ ದೋಷದ ಸಮಸ್ಯೆಯಿದೆ. ಆಕೆಯ ವೈದ್ಯಕೀಯ ವೆಚ್ಚವನ್ನು ನಾನೇ ಭರಿಸುತ್ತಿದ್ದೇನೆ. ಸಾಮಾನ್ಯವಾಗಿ ವರ್ಷಕ್ಕೆ ₹25 ಸಾವಿರದಿಂದ ₹30 ಸಾವಿರವನ್ನು ಆಕೆಯ ತಪಾಸಣೆ, ಆರೈಕೆ ಹಾಗೂ ಶ್ರವಣ ಉಪಕರಣಗಳಿಗೆ ಖರ್ಚು ಮಾಡುತ್ತಿದ್ದೇನೆ. ನಾನು ವಾರ್ಷಿಕವಾಗಿ ₹10 ಲಕ್ಷ ಆದಾಯ ಪಡೆಯುತ್ತಿದ್ದೇನೆ.  

ನನ್ನ ಪ್ರಶ್ನೆ ಏನೆಂದರೆ, ನನ್ನ ತಂಗಿಯ ವೈದ್ಯಕೀಯ ವೆಚ್ಚಕ್ಕೆ ನಾನು ಯಾವುದಾದರೂ ಆದಾಯ ತೆರಿಗೆಯ ಸೌಲಭ್ಯ ಪಡೆಯಬಹುದೇ? ಇದಕ್ಕೆ ಏನೆಲ್ಲಾ ಷರತ್ತುಗಳಿವೆ. ತೆರಿಗೆ ವಿನಾಯಿತಿಯನ್ನು ಕೇವಲ ಸ್ವತಃ ಸಮಸ್ಯೆ ಇದ್ದ ಸಂದರ್ಭದಲ್ಲಿ ಮಾತ್ರ ಪಡೆಯಬಹುದೇ ಅಥವಾ ನಮ್ಮ ಕುಟುಂಬದ ಮಂದಿಯ ಸಮಸ್ಯೆಗೂ ಅನ್ವಯಿಸುತ್ತದೆಯೇ? ಖರ್ಚು ಮಾಡಿದ ಬಗ್ಗೆ ಯಾವುದಾದರೂ ಬಿಲ್, ವರದಿ ಇತ್ಯಾದಿ ಇಟ್ಟುಕೊಳ್ಳಬೇಕೇ. ಈ ಬಗ್ಗೆ ತಿಳಿಸಿ.
 
ಉತ್ತರ: ಕೆಲವು ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿದ್ದ ಸಂದರ್ಭದಲ್ಲಿ ಆದಾಯ ತೆರಿಗೆ ಕಾನೂನಿನಡಿ ವಿನಾಯಿತಿ ಕಲ್ಪಿಸಲಾಗಿದೆ. ಇದು ಸ್ವತಃ ತೆರಿಗೆದಾರನಿಗೆ ಇರುವ ಆರೋಗ್ಯ ಸಮಸ್ಯೆ ಆಗಿರಬಹುದು ಅಥವಾ ಕುಟುಂಬದ ಸದಸ್ಯರಿಗೆ ಇರಬಹುದು. ಒಂದು ವೇಳೆ ಕುಟುಂಬದ ಮಂದಿಗೆ ಇರುವ ಆರೋಗ್ಯ ಸಮಸ್ಯೆಗೆ ತೆರಿಗೆ ವಿನಾಯಿತಿ ಪಡೆಯಲು ಅಂತಹ ವ್ಯಕ್ತಿಯನ್ನು ತೆರಿಗೆದಾರ ನೋಡಿಕೊಳ್ಳುತ್ತಿರಬೇಕು. ಈ ಎರಡೂ ಸೌಲಭ್ಯಗಳು ಕ್ರಮಾಗತವಾಗಿ ಸೆಕ್ಷನ್ 80ಯು ಹಾಗೂ ಸೆಕ್ಷನ್ 80ಡಿಡಿ ಇದರಡಿ ಲಭ್ಯವಿವೆ. ನಿಮಗೆ ಸಂಬಂಧಿಸಿದಂತೆ ಸೆಕ್ಷನ್ 80ಡಿಡಿ ಇದರಡಿ ತೆರಿಗೆ ಸೌಲಭ್ಯ ಸಿಗುತ್ತದೆ.  

ನಿವಾಸಿ ಭಾರತೀಯನಾಗಿರುವ ಯಾವುದೇ ವ್ಯಕ್ತಿ ನಿರ್ದಿಷ್ಟ ಆರೋಗ್ಯ ಸಮಸ್ಯೆ ಇರುವ ತನ್ನ ಕುಟುಂಬದ ವ್ಯಕ್ತಿಗಳ ಆರೈಕೆ, ತಪಾಸಣೆ, ತರಬೇತಿ, ಪುನರ್ವಸತಿ ಇತ್ಯಾದಿಗೆ ಸಂಬಂಧಿಸಿ ವೆಚ್ಚ ಭರಿಸಿರಬೇಕು. ಆಥವಾ ಭಾರತೀಯ ವಿಮಾ ನಿಗಮ ಅಥವಾ ಇತರೆ ಮಾನ್ಯತೆ ಪಡೆದ ವಿಮಾ ಕಂಪನಿಗಳಲ್ಲಿ ಹಣ ನಿಕ್ಷೇಪಿಸಿ ಕುಟುಂಬದ ಸದಸ್ಯರನ್ನು ಮುಂದೆ ನೋಡಿಕೊಳ್ಳಲು ಯಾವುದೇ ಪಾವತಿ ಮಾಡಿದ್ದರೂ ಅಂತಹ ಮೊತ್ತಕ್ಕೆ ತೆರಿಗೆ ರಿಯಾಯಿತಿ ಇದೆ.

ಒಬ್ಬ ವ್ಯಕ್ತಿಗೆ ಸಂಬಂಧಪಟ್ಟಂತೆ ಇಲ್ಲಿ ಹೇಳಿರುವ ಕುಟುಂಬದ ಸದಸ್ಯರೆಂದರೆ ಪತಿ–ಪತ್ನಿ, ಮಕ್ಕಳು, ಪೋಷಕರು, ವ್ಯಕ್ತಿಯ ಸಹೋದರರು ಮತ್ತು ಸಹೋದರಿಯರು ಒಳಗೊಳ್ಳುತ್ತಾರೆ. ನಿಮ್ಮ ಸನ್ನಿವೇಶದಲ್ಲಿ ನಿಮ್ಮ ತಂಗಿಯ ಶ್ರವಣದೋಷದ ನಿವಾರಣೆ ಬಗ್ಗೆ ಮಾಡುವ ವೆಚ್ಚಕ್ಕೆ ಈ ತೆರಿಗೆ ರಿಯಾಯಿತಿ ಸಿಗುತ್ತದೆ. ಅಂಗವೈಕಲ್ಯ ಶೇ 80ಕ್ಕಿಂತ ಹೆಚ್ಚಿದ್ದರೆ ₹1.25 ಲಕ್ಷದ ತನಕ ಆದಾಯದಲ್ಲಿ ವಿನಾಯಿತಿ ಲಭ್ಯ. ಈ ಪ್ರಮಾಣವು ಶೇ 40ಕ್ಕಿಂತ ಹೆಚ್ಚು ಇದ್ದ ಸಂದರ್ಭದಲ್ಲಿ ₹75 ಸಾವಿರ ವಿನಾಯಿತಿ ಪಡೆಯಬಹುದು. ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸುವಾಗ ನೀವು ನಿಗದಿತ ಫಾರಂ (ಫಾರಂ 10ಐಎ) ಭರ್ತಿ ಮಾಡಿರಬೇಕು. ಇಂತಹ ಸಮಸ್ಯೆ ಇರುವುದನ್ನು ಖಚಿತಪಡಿಸಿ ದೃಢೀಕರಿಸಿರುವ ವೈದ್ಯಕೀಯ ಪ್ರಮಾಣ ಪತ್ರದ ಪ್ರತಿಯನ್ನೂ ಹೊಂದಿರಬೇಕು.

ಇಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ, ಸಮಸ್ಯೆಯ ಪ್ರಮಾಣಕ್ಕೆ ಅನುಗುಣವಾಗಿ ನಿಶ್ಚಿತ ರಿಯಾಯಿತಿ ಸಿಗುತ್ತದೆ. ಹಾಗಾಗಿ, ವೆಚ್ಚಕ್ಕೆ ನೇರ ಸಂಬಂಧ ಕಲ್ಪಿಸದೆ ಆರೋಗ್ಯ ಸಮಸ್ಯೆ ಮುಂದುವರಿಯುತ್ತಿರುವ ಹಿನ್ನೆಲೆ ಹಾಗೂ ಊರ್ಜಿತದಲ್ಲಿರುವ ವೈದ್ಯಕೀಯ ಪ್ರಮಾಣ ಪತ್ರದ ಆಧಾರದ ಮೇಲೆ ತೆರಿಗೆದಾರರಿಗೆ ರಿಯಾಯಿತಿ ಲಭ್ಯವಾಗುತ್ತದೆ. ನೀವು ಹೊಸ ತೆರಿಗೆ ಪದ್ಧತಿ ಅನುಸರಿಸುತ್ತಿದ್ದರೆ ಈ ತೆರಿಗೆ ಸೌಲಭ್ಯ ನಿಮಗೆ ಸಿಗುವುದಿಲ್ಲ ಎಂಬುದು ಗಮನದಲ್ಲಿ ಇರಲಿ.

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–560001.

ಇ–ಮೇಲ್‌:businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.