ADVERTISEMENT

ಪೇಟೆಯಲ್ಲಿ ಎಲ್ಲವೂ ತ್ವರಿತ,ಹರಿತ!

ಕೆ.ಜಿ ಕೃಪಾಲ್
Published 19 ಫೆಬ್ರುವರಿ 2017, 19:30 IST
Last Updated 19 ಫೆಬ್ರುವರಿ 2017, 19:30 IST

ಷೇರುಪೇಟೆಯಲ್ಲಿನ ಘಟನೆಗಳು ಘಟಿಸುವ ವೇಗ ಅರಿಯಲು ಸಂವೇದಿ ಸೂಚ್ಯಂಕದ ಭಾಗವಾಗಿರುವ ಎಚ್‌ಡಿಎಫ್‌ಸಿ ಬ್ಯಾಂಕ್ ಷೇರು ಶುಕ್ರವಾರ  ಕಂಡ ಏರಿಳಿತಗಳ  ಗಮನಿಸಬೇಕು. 

ಈ ಚಲನೆ ಎಷ್ಟು ತ್ವರಿತ  ಮತ್ತು ಹರಿತ ಎಂದರೆ ಷೇರಿನ ಬೆಲೆ ಹಿಂದಿನ ದಿನದ ಅಂತ್ಯವಾದ ₹1,327ರ ಸಮೀಪದಿಂದ  ₹1,439  ಆರಂಭವಾಗಿ ₹1,450ರ  ಗಡಿ ದಾಟಿತು.  ಮಧ್ಯಾಹ್ನ ಒಂದು ಗಂಟೆಗೆ ಷೇರಿನ ಬೆಲೆ ಇಳಿಯಲಾರಂಭಿಸಿ  ₹1,377 ರಲ್ಲಿ ಕೊನೆಗೊಂಡಿತು. ಅಂದರೆ  ಒಂದೇ ದಿನ ಇನ್ನೂರು ರೂಪಾಯಿಗೂ  ಹೆಚ್ಚಿನ ಏರಿಳಿತ ಪ್ರದರ್ಶಿಸಿತು. ಇದರ ಹಿಂದೆ ಅಡಕವಾಗಿರುವ ಅಂಶ ಇನ್ನೂ ರೋಚಕವಾಗಿದೆ.  ಗುರುವಾರ ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ಪ್ರಕಟಣೆಯಲ್ಲಿ ವಿದೇಶಿ ವಿತ್ತೀಯ ಸಂಸ್ಥೆಗಳು ಹೂಡಿಕೆ  ಮಿತಿಯೊಳಗೆ ಇದ್ದು  ಹೂಡಿಕೆಗೆ ಅವಕಾಶವಿದೆ ಎಂದು ತಿಳಿಸಿತು.

ಇದೇ ಕಾರಣ ಪೇಟೆ ಶುಕ್ರವಾರ  ಆರಂಭದಲ್ಲಿ ಕೊಳ್ಳುವ ಭರಾಟೆ ಪ್ರದರ್ಶಿಸಿತು. ಮಧ್ಯಾಹ್ನದ ಸಮಯಕ್ಕೆ ಮತ್ತೊಮ್ಮೆ ವಿದೇಶಿ ವಿತ್ತೀಯ ಸಂಸ್ಥೆಗಳಿಗೆ ನಿಗದಿ ಪಡಿಸಿದ ಮಿತಿ ಶೇ 74ರಷ್ಟನ್ನು ತಲುಪಿದ ಕಾರಣ ಅವು ಮತ್ತೆ ಕೊಳ್ಳಲು ಅವಕಾಶವಿಲ್ಲ ಎಂಬ ವರದಿ ಬಂದಾಗ ಪೇಟೆಯು ಕುಸಿಯಿತು.  

ADVERTISEMENT

ಸುಮಾರು ₹50 ರಷ್ಟು ಏರಿಕೆ ಕಂಡ  ಬೆಳವಣಿಗೆಯಿಂದ ಈ ಬ್ಯಾಂಕ್, ದೇಶದ ಅತ್ಯಂತ ಹೆಚ್ಚಿನ  ಬಂಡವಾಳೀಕರಣ ಮೌಲ್ಯ ಹೊಂದಿರುವ ಕಂಪೆನಿಗಳ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಟಾಟಾ ಕನ್ಸ್‌ಲ್ಟನ್ಸಿ ಸರ್ವೀಸಸ್ ಮೊದಲ ಸ್ಥಾನ ಪಡೆದುಕೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಮೂರನೇ ಸ್ಥಾನದಲ್ಲಿದೆ.  

ಹೊಸತಂತ್ರ: ವಹಿವಾಟುದಾರರು ಇತ್ತೀಚಿಗೆ ಹೊಸ ರೀತಿಯ ತಂತ್ರ ಪ್ರದರ್ಶಿಸುತ್ತಿದ್ದಾರೆ.  ಒಂದು ಕಂಪೆನಿ  ತನ್ನ ಫಲಿತಾಂಶ ಪ್ರಕಟಿಸುವ ದಿನಕ್ಕಿಂತ ಮುಂಚಿತವಾಗಿಯೇ ಕೆಲವು ಕಂಪೆನಿಗಳ ಷೇರು  ಬೆಲೆ ಅನಿರೀಕ್ಷಿತ ಏರಿಳಿತ ಪ್ರದರ್ಶಿಸುತ್ತಿವೆ.   ಆರ್‌ಪಿಪಿ  ಇನ್ಫ್ರಾ ಪ್ರಾಜೆಕ್ಟ್ಸ್ ಕಂಪೆನಿ ಫೆ.11 ರಂದು ತನ್ನ ತ್ರೈಮಾಸಿಕ ಫಲಿತಾಂಶ ಪ್ರಕಟಿಸುವುದಾಗಿ ತಿಳಿಸಿದ ನಂತರ ಫೆ.10 ರವರೆಗೂ ಹೆಚ್ಚಿನ ರಭಸದ ಚಟುವಟಿಕೆಯಿಂದ ₹362ರ ವಾರ್ಷಿಕ ಗರಿಷ್ಠ ದಾಖಲಿಸಿತು.    ವಹಿವಾಟಿನ ಗಾತ್ರ ಕ್ಷೀಣಿತವಾಗಿ ₹329ರ ಸಮೀಪ ವಾರಾಂತ್ಯ ಕಂಡಿದೆ.   ಆದರೆ ಈ ಷೇರಿನ ಬೆಲೆಯು ಒಂದೇ ತಿಂಗಳಲ್ಲಿ ₹236ರ ಸಮೀಪದಿಂದ ₹362 ರವರೆಗೂ ಏರಿಕೆ ಕಂಡಿರುವುದು ಗಮನಾರ್ಹ.

ಸರ್ಕಾರಿ ವಲಯದ ಇಂಡಿಯನ್ ಟೂರಿಸಂ ಡೆವೆಲಪ್‌ಮೆಂಟ್ ಕಾರ್ಪೊರೇಷನ್  ಕಂಪೆನಿಯು ಫೆಬ್ರುವರಿ 14 ರಂದು ಫಲಿತಾಂಶ ಪ್ರಕಟಿಸುವ ಕಾರ್ಯ ಸೂಚಿ ಹೊರಬೀಳುತ್ತಿದ್ದಂತೆಯೇ  ಷೇರಿನ ಬೆಲೆ ₹262ರ ಸಮೀಪದಿಂದ ನಾಗಾಲೋಟದಿಂದ ಫಲಿತಾಂಶದ ದಿನ ₹460ನ್ನು ತಲುಪಿ ನಂತರ ಅಂದೇ ₹409 ಕ್ಕೆ ಕುಸಿಯಿತು. 

ಈ ಕಂಪೆನಿಯಲ್ಲಿ ಕೇಂದ್ರ ಸರ್ಕಾರದ ಭಾಗಿತ್ವ ಶೇ 87.03ರಷ್ಟಿದ್ದು,  ಸಾರ್ವಜನಿಕ ಭಾಗಿತ್ವದ ಶೇ 12.97ರಲ್ಲಿ ಶೇ.3.52ರಷ್ಟನ್ನು ಎಲ್ಐಸಿ ಆಫ್ ಇಂಡಿಯಾ ಮತ್ತು ಶೇ.7.87 ರಷ್ಟನ್ನು ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಹೊಂದಿವೆ.  ಇಂತಹ ಹರಿದಾಡುವ ಷೇರುಗಳ ಕೊರತೆಯಿರುವ ಬಿಎಸ್ಇ ಸಿಪಿಎಸ್ಇ ಸೂಚ್ಯಂಕದಲ್ಲಿರುವ ಷೇರಿನ ದರಗಳಲ್ಲಿ  ಸುಲಭವಾಗಿ ವಹಿವಾಟುದಾರರು ಏರಿಳಿತ  ಉಂಟುಮಾಡಲು ಸಾಧ್ಯವಾಗಿದೆ.    ಕಂಪೆನಿ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಹಾನಿಗೊಳಗಾಗಿದ್ದರೆ ಡಿಸೆಂಬರ್ ತ್ರೈಮಾಸಿಕದಲ್ಲಿ ಲಾಭಗಳಿಸಿದೆ. ಈ ಕಾರಣ ಷೇರಿನ ಬೆಲೆಯಲ್ಲಿ ಏರಿಳಿತ ಪ್ರದರ್ಶಿತವಾಗುತ್ತಿದೆ.₹406ರ ಸಮೀಪ ವಾರಾಂತ್ಯ ಕಂಡಿದೆ. 

ಷೇರುವಿಕ್ರಯ ಕಾರ್ಯಕ್ರಮದಂತೆ ಕೇಂದ್ರ ಸರ್ಕಾರ ಈ ಕಂಪೆನಿಯಲ್ಲಿನ  ಭಾಗಿತ್ವವನ್ನು ಮಾರಾಟ ಮಾಡುವ ಸಮಯ ಸನ್ನಿಹಿತವಾಗಿದೆ ಎಂದೆನಿಸುವಂತಹ ಮಟ್ಟದಲ್ಲಿ ಷೇರಿನ ಬೆಲೆ ತಲುಪಿದೆ. ಸರ್ಕಾರಿ ಸ್ವಾಮ್ಯದ ತೈಲ ವಲಯದ ಕಂಪೆನಿ ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್  ಫೆ.13 ರಂದು ತನ್ನ ಫಲಿತಾಂಶ ಪ್ರಕಟಿಸುವುದರೊಂದಿಗೆ ಆಕರ್ಷಕವಾದ  ಲಾಭಾಂಶ ಅಂದರೆ ಪ್ರತಿ ಷೇರಿಗೆ ₹22.50ರಂತೆ  ಲಾಭಾಂಶ ಘೋಷಿಸಿದೆ.  ಆದರೂ, ಷೇರಿನ ಬೆಲೆಯು 14 ರಂದು ಒಂದು ಹಂತದಲ್ಲಿ ₹35 ರಷ್ಟು ಕುಸಿತ ಕಂಡಿದೆ. ಆದರೆ, ಈ ಕುಸಿತದ ಹಿಂದೆ ಈ ಷೇರಿನ ಬೆಲೆಯು ಹಿಂದಿನ ಒಂದು ತಿಂಗಳಲ್ಲಿ ₹479 ರಿಂದ ₹584ರವರೆಗೂ ಏರಿಕೆ ಕಂಡಿರುವ ಅಂಶ ಗಮನಾರ್ಹ. 

ಲಾಭಾಂಶ ಪ್ರಕಟಣೆಯಾದ ನಂತರ ₹519ರ ಸಮೀಪದವರೆಗೂ ಇಳಿಕೆ ಕಂಡು ನಂತರ ವಾರಾಂತ್ಯದಲ್ಲಿ ಚೇತರಿಕೆ ಕಂಡು ₹543ರಲ್ಲಿ ಕೊನೆಗೊಂಡಿದೆ.  ಇದರಂತೆ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಆಕರ್ಷಕ ಲಾಭಾಂಶ ಪ್ರಕಟಿಸದ್ದರೂ  ಸಹ  ಇಳಿಕೆ ಕಂಡು ಚೇತರಿಸಿಕೊಂಡಿದೆ.   ಚೆನ್ನೈ ಪೆಟ್ರೋಲಿಯಂ ಕಾರ್ಪೊರೇಷನ್ ಶುಕ್ರವಾರ ₹361ರ ಸಮೀಪದಿಂದ ₹396 ರವರೆಗೂ ಏರಿಕೆ ಕಂಡಿದೆ. 
ಕಾರಣ ಹುಡುಕದಿರಿ: ಹೂಡಿಕೆದಾರರು ವಿಶೇಷವಾಗಿ ಸಣ್ಣ ಹೂಡಿಕೆದಾರರು ಏರಿಳಿತಗಳಿಗೆ ಕಾರಣ ಹುಡುಕದೆ  ಅವಕಾಶ ಉಪಯೋಗಿಸಿಕೊಳ್ಳುವುದನ್ನು ಅಳವಡಿಸಿಕೊಂಡರೆ  ಮಾತ್ರ ಉತ್ತಮ ಫಲಿತಾಂಶ ಪಡೆಯಲು ಸಾಧ್ಯ.

ಪೇಟೆಯಲ್ಲಿ ಕಂಪೆನಿಗಳು ಫಲಿತಾಂಶ ಪ್ರಕಟಿಸುವ ಮುನ್ನವೇ ಅದರ ರಸವನ್ನು ಹೀರಿಕೊಂಡಿರುವುದರಿಂದ, ಉತ್ತಮ ಫಲಿತಾಂಶದ ನಂತರವೂ ಸಹ ಕುಸಿತ ಕಾಣುವುದು ಸಹಜ.  ಆದ್ದರಿಂದ ಅಂಕಿ ಅಂಶಗಳ ಪ್ರಕಟಣೆ ಕೇವಲ ಸಂಪ್ರದಾಯವಷ್ಟೇ. ಅದಕ್ಕೆ ಬಲಿಯಾಗುವುದು ಬೇಡ.

ಲಾಭಾಂಶ: ಕಂಟೇನರ್ ಕಾರ್ಪೊರೇಷನ್ ಪ್ರತಿ ಷೇರಿಗೆ ₹9.60,  ಎಐಎ ಎಂಜಿನಿಯರಿಂಗ್ ಪ್ರತಿ ಷೇರಿಗೆ ₹4 (ಮುಖಬೆಲೆ₹2), ಹಿಂದುಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್   ₹22.50 (ನಿಗದಿತ ದಿನ ಮಾರ್ಚ್‌ 2),  ಕಂಟ್ರೋಲ್ ಪ್ರಿಂಟ್  ₹2.50,  ಡಿಸಿಎಂ ಶ್ರೀರಾಮ್  ₹2.80 (ಮುಖ ಬೆಲೆ ₹ 2,  ನಿಗದಿತ ದಿನ ಫೆಬ್ರುವರಿ 23),  ಎಂಒಐಎಲ್   ₹5 (  ಫೆಬ್ರುವರಿ 24),  ಫ್ಯಾಗ್ ಬೇರಿಂಗ್ಸ್  ₹12, ಎಲ್ ಡೆಕೋ ಹೌಸಿಂಗ್ ಅಂಡ್ ಇಂಡಸ್ಟ್ರೀಸ್   ₹12.50,  ನ್ಯಾಟ್ಕೊ ಫಾರ್ಮ ₹6 (₹2, ಫೆ.27), ರೂರಲ್ ಎಲೆಕ್ಟ್ರಿಫಿಕೇಷನ್ ಕಾರ್ಪೊರೇಷನ್  ₹7(  ಫೆ.28),  ನೆಸ್ಲೆ   ₹23, ಸಿಇಎಸ್ಇ   ₹10 ಮತ್ತು ಸುಂದರಂ ಫೈನಾನ್ಸ್ ಪ್ರತಿ ಷೇರಿಗೆ ₹5 .

ಬೋನಸ್ ಷೇರು: ಸರ್ಕಾರಿ ವಲಯದ ಕಂಟೇನರ್ ಕಾರ್ಪೊರೇಷನ್ ಕಂಪೆನಿ ಪ್ರತಿ ನಾಲ್ಕು ಷೇರಿಗೆ ಒಂದರಂತೆ (1:4) ಬೋನಸ್  ಮತ್ತು ರಾಮ್ ಮಿನರಲ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್  ಪ್ರತಿ ಒಂದು ಷೇರಿಗೆ  ನಾಲ್ಕರಂತೆ (4:1) ಬೋನಸ್ ಷೇರು ಪ್ರಕಟಿಸಿವೆ.
ಎನ್‌ಬಿಸಿಸಿ ಲಿಮಿಟೆಡ್ ಕಂಪೆನಿಯು ವಿತರಿಸಲಿರುವ 1:2ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 21 ನಿಗದಿತ ದಿನವಾಗಿದೆ.
ಮುಖಬೆಲೆ ಸೀಳಿಕೆ: ಅಡ್ವಾನ್ಸ್ ಎಂಜೈಮ್ ಟೆಕ್ನಾಲಜಿಸ್ ಲಿಮಿಟೆಡ್ ಕಂಪೆನಿಯು ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ನಿರ್ಧರಿಸಿದೆ.

ನ್ಯೂಟ್ರಾ ಪ್ಲಸ್ ಇಂಡಿಯಾ ಲಿಮಿಟೆಡ್ ಷೇರಿನ ಮುಖಬೆಲೆಯನ್ನು ₹10 ರಿಂದ ₹5 ಕ್ಕೆ ಸೀಳಲು ಫೆ. 28 ನಿಗದಿತ ದಿನವಾಗಿದೆ.  ಬಿಎಲ್ಎಸ್ ಇಂಟರ್ ನ್ಯಾಷನಲ್ ಸರ್ವಿಸಸ್  ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹1 ಕ್ಕೆ ಸೀಳಲು ಮಾರ್ಚ್ 3 ರಂದು ಆಡಳಿತ ಮಂಡಳಿ ನಿರ್ಧರಿಸಲಿದೆ.

ಕಂಪೆನಿ ಹೆಸರು ಬದಲಾವಣೆ: ಮೋದಿ ಉದ್ಯೋಗ ಲಿಮಿಟೆಡ್ ಕಂಪೆನಿಯ ಹೆಸರನ್ನು ಫಿನ್ಕಾನ್ ಲೈಫ್ ಸ್ಟೈಲ್ ಲಿಮಿಟೆಡ್ ಎಂದು ಬದಲಿಸಿಕೊಂಡಿದೆ.

ಸುಜನಾ ಟವರ್ಸ್ ಲಿಮಿಟೆಡ್  ಹೆಸರು ನಿಯೋನ್ ಟವರ್ಸ್ ಲಿಮಿಟೆಡ್, ಸುಜನಾ ಮೆಟಲ್ ಪ್ರಾಡಕ್ಟ್ಸ್ ಲಿಮಿಟೆಡ್ ಹೆಸರು ಸ್ಪ್ಲೆಂಡಿಡ್ ಮೆಟಲ್ ಪ್ರಾಡಕ್ಟ್ಸ್ ಲಿಮಿಟೆಡ್  ಮತ್ತು ಓಜಾಸ್ ಅಸೆಟ್ ರಿಕನ್ಸ್ ಟ್ರಕ್ಷನ್  ಲಿಮಿಟೆಡ್ ಹೆಸರು ಟೊಯಾಮ್ ಇಂಡಸ್ಟ್ರೀಸ್ ಲಿಮಿಟೆಡ್ ಎಂದು ಬದಲಾಗಿವೆ.

///////////

ಅಮೆರಿಕದ ಔಷಧ ನಿಯಂತ್ರಣ ಸಂಸ್ಥೆ ಎಫ್‌ಡಿಎ ಕ್ರಮವು ಎಷ್ಟರ ಮಟ್ಟಿಗೆ ಹರಿತ ಎಂಬುದನ್ನು ಇತ್ತೀಚಿಗೆ ಮತ್ತೊಮ್ಮೆ ಸಾಬೀತಾಗಿದೆ.
ಎಫ್‌ಡಿಎ ತನ್ನ  ವರದಿಯಲ್ಲಿ ಐದು ಕೊರತೆ ಅಂಶಗಳನ್ನು ಪಟ್ಟಿ ಮಾಡಿದ ಕಾರಣ ಭಾರತದ ಔಷಧ ತಯಾರಿಕಾ ಸಂಸ್ಥೆ ದಿವೀಸ್ ಲ್ಯಾಬೊರೇಟರೀಸ್ ಕಂಪೆನಿಯ ಷೇರಿನ ಬೆಲೆಯು  ₹1,100  ರ ಸಮೀಪದಿಂದ ₹673 ರವರೆಗೂ ಅಲ್ಪಾವಧಿಯಲ್ಲಿ ಕುಸಿದಿದ್ದು ಪೇಟೆಯಲ್ಲಿನ ಚಟುವಟಿಕೆ ಎಷ್ಟರ ಮಟ್ಟಿಗೆ ಹರಿತ ಎಂಬುದನ್ನು ತೋರಿಸಿದೆ. 

ಅದೇ ಸಮಯದಲ್ಲಿ ಕ್ಯಾಡಿಲ್ಲ ಹೆಲ್ತ್ ಕೇರ್ ಕಂಪೆನಿಯ ಎರಡು ಘಟಕಗಳು ಸಮರ್ಪಕವಾಗಿಲ್ಲ ಎಂಬ ಕಾರಣಕ್ಕಾಗಿ ಕಂಪೆನಿಯ ಷೇರಿನ ಬೆಲೆ ಮಾರಾಟದ ಒತ್ತಡಕ್ಕೊಳಗಾಯಿತು. ಷೇರಿನ ಬೆಲೆ ಅಲ್ಪಾವಧಿಯಲ್ಲೇ  ₹385 ರಿಂದ ₹320 ರ ಸಮೀಪಕ್ಕೆ ಕುಸಿಯುವಂತೆ ಮಾಡಿತು. ಅಲ್ಲಿಂದ ಕೇವಲ ಎರಡೇ ತಿಂಗಳಲ್ಲಿ,  ಗುರುವಾರ ಎಫ್‌ಡಿಎ ‘ಇನ್ಸಸ್ಪೆಕ್ಷನ್‌' ನಲ್ಲಿ ಯಾವುದೇ ತೊಂದರೆಗಳಿಲ್ಲದೆ ಕ್ಲಿನ್ ಚಿಟ್ ಸಿಕ್ಕಿದೆ ಎಂಬ ಸುದ್ದಿ ಮಧ್ಯಾಹ್ನ ಹೊರಬಿದ್ದದ್ದೇ ತಡ ಷೇರಿನ ಬೆಲೆಯು ₹357ರ ಸಮೀಪದಿಂದ ₹440 ರ ಸಮೀಪಕ್ಕೆ ಜಿಗಿತ ಕಂಡಿತು.  ಶುಕ್ರವಾರ ₹460 ರವರೆಗೂ ಜಿಗಿತ ಕಾಣುವಂತೆ ಮಾಡಿ ₹448ರಲ್ಲಿ ವಾರಾಂತ್ಯ ಕಂಡಿತು.  ಈ ಬೆಳವಣಿಗೆಯು ಏರಿಕೆ ಎಷ್ಟು ತ್ವರಿತ ಎಂಬ ಅಂಶವನ್ನು ಬೆಳಕಿಗೆ ತಂದಿದೆ. 

ಪೇಟೆಯಲ್ಲಿ ಎಲ್ಲವೂ ತ್ವರಿತ - ಹರಿತ. ಕ್ಯಾಡಿಲ್ಲ ಹೆಲ್ತ್ ಕೇರ್ ಷೇರಿನ ಬೆಲೆ ಚೇತರಿಕೆ ಕಂಡ ಕಾರಣ ಇತರೆ ಕಂಪೆನಿಗಳಾದ  ದಿವೀಸ್ ಲ್ಯಾಬೊರೇಟರೀಸ್,  ಸಿಂಜೀನ್ ಇಂಟರ್ ನ್ಯಾಷನಲ್, ಇಪ್ಕಾ ಲ್ಯಾಬ್‌ಗಳು ಏರಿಕೆ ಕಂಡವು. ಅಗ್ರಮಾನ್ಯ ಕಂಪೆನಿಗಳ ಷೇರಿನ ಬೆಲೆಗಳು ಕುಸಿತದಲ್ಲಿದ್ದಾಗ ದೀರ್ಘಕಾಲೀನ ಹೂಡಿಕೆಯಾಗಿ ಆಯ್ಕೆ ಮಾಡಿಕೊಂಡಲ್ಲಿ ಲಾಭ ಪಡೆಯುವ ಅವಕಾಶ ಹೆಚ್ಚು ಎಂಬುದಕ್ಕೆ ಗುರುವಾರ ಔಷಧ ವಲಯದ ಸಿಂಜೀನ್ ಇಂಟರ್ ನ್ಯಾಷನಲ್ ಕಂಪೆನಿಯ ಷೇರಿನ ಬೆಲೆಯು ₹463ರ ಸಮೀಪದಿಂದ ₹500ರವರೆಗೂ ಜಿಗಿತ ಕಂಡಿರುವುದು ನಿದರ್ಶನ.

ಶುಕ್ರವಾರ ಏರಿಕೆ ಮುಂದುವರೆಸಿಕೊಂಡು ₹520ನ್ನು ತಲುಪಿತು. ಈ ಷೇರಿನ ಬೆಲೆಯು ₹606 ರಿಂದ ಒಂದೇ ತಿಂಗಳಲ್ಲಿ ₹463 ರವರೆಗೂ ಕುಸಿದಿತ್ತು ಎಂಬುದು ಗಮನಾರ್ಹ.  ಏರಿಕೆಯ ಮುಂದಿನ ಸರದಿ ಇದುವರೆಗೂ ಇಳಿಕೆ ಕಂಡ ಅಲೆಂಬಿಕ್ ಫಾರ್ಮಾ ಇರಬಹುದೇ ಕಾದು ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.