ಮ್ಯೂಚುವಲ್ ಫಂಡ್
ಮ್ಯೂಚುವಲ್ ಫಂಡ್‌ಗಳ ಮೂಲಕ ಮಾಡಿರುವ ಹೂಡಿಕೆಗಳು ನಿಜವಾಗಿಯೂ ಉತ್ತಮ ಲಾಭವನ್ನು ತಂದುಕೊಡುತ್ತಿವೆಯೇ? ಈ ಪ್ರಶ್ನೆ ಹಲವಾರು ಮಂದಿ ಸಣ್ಣ ಹೂಡಿಕೆದಾರರನ್ನು ಒಂದಲ್ಲ ಒಂದು ಸಂದರ್ಭದಲ್ಲಿ ಕಾಡಿರಬಹುದು. ಈ ಪ್ರಶ್ನೆಯು ಬಹಳ ಸರಳವಾಗಿ ಕಾಣಿಸಿದರೂ, ಉತ್ತರವು ಬಹಳ ಸುಲಭದಲ್ಲಿ ಸಿಗುವುದಿಲ್ಲ.
ಮ್ಯೂಚುವಲ್ ಫಂಡ್‌ಗಳ ಮೂಲಕ ಈಕ್ವಿಟಿ ಮಾರುಕಟ್ಟೆಯಲ್ಲಿ ಮಾಡಿರುವ ಹೂಡಿಕೆಗಳು ಹಲವು ಅಂಶಗಳನ್ನು ಆಧರಿಸಿ ಲಾಭ ತಂದುಕೊಡುತ್ತವೆ, ಕೆಲವು ಸಂದರ್ಭಗಳಲ್ಲಿ ಅವುಗಳಲ್ಲಿ ನಷ್ಟವನ್ನೂ ಕಾಣಬಹುದು. ಆದರೆ ಮಾಡಿರುವ ಹೂಡಿಕೆ ಸರಿಯಾಗಿ ಇದೆಯೇ, ನಿರ್ದಿಷ್ಟ ಫಂಡ್‌ನಲ್ಲಿ ದೊರೆಯುತ್ತಿರುವ ಲಾಭದ ಪ್ರಮಾಣವು ಅದೇ ಬಗೆಯ ಇತರ ಫಂಡ್‌ಗಳಿಂದ ಸಿಗುತ್ತಿರುವ ಲಾಭಕ್ಕೆ ಸರಿಸಮನಾಗಿ ಇದೆಯೇ, ಮ್ಯೂಚುವಲ್ ಫಂಡ್ ಹೂಡಿಕೆ ಪೋರ್ಟ್‌ಫೋಲಿಯೊದಲ್ಲಿ ಬದಲಾವಣೆ ತರುವ ಅಗತ್ಯ ಇದೆಯೇ ಎಂಬ ಪ್ರಶ್ನೆಗಳಿಗೆ ಸರಳ ಪ್ರಕ್ರಿಯೆಯೊಂದರ ಮೂಲಕ ಉತ್ತರ ಕಂಡುಕೊಳ್ಳಲು ಹಲವು ವೇದಿಕೆಗಳು ನೆರವಾಗುತ್ತಿವೆ.
ಫಿಸ್ಡಮ್ ಸೇರಿದಂತೆ ಕೆಲವು ಮ್ಯೂಚುವಲ್ ಫಂಡ್ ಹೂಡಿಕೆ ವೇದಿಕೆಗಳು ಹೂಡಿಕೆದಾರರಿಗೆ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನೆರವು ಒದಗಿಸುತ್ತಿವೆ. ಈ ವೇದಿಕೆಗಳಿಗೆ ಭೇಟಿ ನೀಡಿ, ಒಂದು ಬಾರಿ ಬಳಸುವ ಪಾಸ್‌ವರ್ಡ್ (ಒಟಿಪಿ) ಬಳಸಿ ಲಾಗಿನ್ ಆಗಬಹುದು. ಅಲ್ಲಿ ಹೂಡಿಕೆದಾರರು ತಮ್ಮ ಪ್ಯಾನ್ ಸಂಖ್ಯೆ, ಮೊಬೈಲ್ ದೂರವಾಣಿ ಸಂಖ್ಯೆಯ ವಿವರ ನೀಡಿ, ತಮ್ಮ ಹೂಡಿಕೆಗಳ ಪೋರ್ಟ್‌ಫೋಲಿಯೊ ವಿಶ್ಲೇಷಣೆ ನಡೆಸಬಹುದು.
ಫಿಸ್ಡಮ್ ವೇದಿಕೆಯ ಮೂಲಕ ಮ್ಯೂಚುವಲ್ ಫಂಡ್ ಪೋರ್ಟ್‌ಫೋಲಿಯೊ ವಿಶ್ಲೇಷಣೆ ನಡೆಸಿದಲ್ಲಿ, ಹೂಡಿಕೆಯು ಒಟ್ಟಾರೆಯಾಗಿ ಯಾವ ಪ್ರಮಾಣದಲ್ಲಿ ಲಾಭ ತಂದುಕೊಟ್ಟಿದೆ, ದೊರೆತಿರುವ ಲಾಭವು ಸಮರ್ಪಕವಾಗಿ ಇದೆಯೇ, ಲಾಭವನ್ನು ಹೆಚ್ಚು ಮಾಡಿಕೊಳ್ಳಲು ಪೋರ್ಟ್‌ಫೋಲಿಯೊದಲ್ಲಿ ಬದಲಾವಣೆಗಳನ್ನು ತರುವ ಅಗತ್ಯ ಇದೆಯೇ, ಬೇರೆ ಬೇರೆ ಫಂಡ್‌ಗಳ ಮೂಲಕ ಮಾಡಿರುವ ಹೂಡಿಕೆಗಳಲ್ಲಿ ಉತ್ತಮ ಲಾಭ ತಂದುಕೊಟ್ಟಿರುವ ಹಾಗೂ ಸಾಧಾರಣ ಮಟ್ಟದ ಲಾಭ ತಂದುಕೊಟ್ಟಿರುವ ಫಂಡ್‌ಗಳು ಯಾವುವು ಎಂಬ ವಿವರಗಳು ಸಿಗುತ್ತವೆ.
ಅಷ್ಟೇ ಅಲ್ಲ, ನೀವು ಯಾವ ಬಗೆಯ ಹೂಡಿಕೆದಾರರು – ಅಂದರೆ, ಹೆಚ್ಚು ರಿಸ್ಕ್ ತೆಗೆದುಕೊಂಡು ಹೆಚ್ಚಿನ ಲಾಭ ಬಯಸುವವರೋ ಅಥವಾ ಲಾಭ ಕಡಿಮೆ ಆದರೂ ತೊಂದರೆ ಇಲ್ಲ ರಿಸ್ಕ್ ಕಡಿಮೆ ಇರಲಿ ಎಂದು ಬಯಸುವವರೋ – ಎಂಬ ಪ್ರಶ್ನೆಗೂ ಈ ವಿಶ್ಲೇಷಣೆಯ ಮೂಲಕ ಉತ್ತರ ಕಂಡುಕೊಳ್ಳಬಹುದು.
ಹೂಡಿಕೆಯ ಹಣವು ಷೇರುಗಳಲ್ಲಿ ಯಾವ ಪ್ರಮಾಣದಲ್ಲಿ, ಸಾಲಪತ್ರಗಳಲ್ಲಿ ಯಾವ ಪ್ರಮಾಣದಲ್ಲಿ ವಿನಿಯೋಗ ಆಗಿದೆ ಎಂಬುದನ್ನು ಕೂಡ ಈ ವಿಶ್ಲೇಷಣೆಯ ಮೂಲಕ ತಿಳಿಯಬಹುದು. ಮ್ಯೂಚುವಲ್ ಫಂಡ್‌ಗಳ ಈ ವಿಶ್ಲೇಷಣೆಯು ಹೊಸ ಫಂಡ್‌ಗಳಲ್ಲಿ ಹೂಡಿಕೆ ಮಾಡುವ ಸಂದರ್ಭದಲ್ಲಿ ಹೆಚ್ಚು ಸಹಾಯಕ್ಕೆ ಬರುತ್ತದೆ. ಈಗಾಗಲೇ ಹೂಡಿಕೆ ಮಾಡಿರುವ ಫಂಡ್‌ಗಳಲ್ಲಿ ಇಲ್ಲದ ವಲಯಗಳು ಹಾಗೂ ಷೇರುಗಳಲ್ಲಿ ಹಣ ತೊಡಗಿಸುವ ಫಂಡ್‌ಗಳನ್ನು ಆಯ್ಕೆ ಮಾಡಿಕೊಳ್ಳಲು ಒಂದಿಷ್ಟು ಸಹಾಯ ಆಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.