ADVERTISEMENT

ಸಾಂಪ್ರದಾಯಿಕ ಚಿಂತನೆ ಮೀರಿದ ವಹಿವಾಟು

ಕೆ.ಜಿ ಕೃಪಾಲ್
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಷೇರುಪೇಟೆ ಹೊಸ ಹೊಸ ದಾಖಲೆಯನ್ನು ನಿರ್ಮಿಸುತ್ತಿರುವ ಈ ಸಂದರ್ಭದಲ್ಲಿ ಹಲವಾರು ವಿಸ್ಮಯಕಾರಿ ಸಂಗತಿಗಳು ಅನಾವರಣಗೊಳ್ಳುತ್ತಿವೆ. ಷೇರುಗಳ ಬೆಲೆಗಳ ಏರಿಳಿತಗಳು ಸಾಂಪ್ರದಾಯಿಕ ಚಿಂತನೆಗಳನ್ನು ಮೀರಿ ಪ್ರದರ್ಶಿತವಾಗುತ್ತಿವೆ.

ಸೋಮವಾರ ಹೆಲ್ತ್‌ಕೇರ್ ಗ್ಲೋಬಲ್ ಎಂಟರ್ ಪ್ರೈಸಸ್ ಕಂಪನಿ ಷೇರಿನ ಬೆಲೆ ಆರಂಭಿಕ ಕ್ಷಣಗಳಲ್ಲಿ ₹ 289 ರವರೆಗೂ ಜಿಗಿತ ಕಂಡು ನಂತರ ₹ 273ರ ಸಮೀಪಕ್ಕೆ ಹಿಂದಿರುಗಿ ₹258 ರಲ್ಲಿ ವಾರಾಂತ್ಯ ಕಂಡಿದೆ. ಈ ಕಂಪನಿಯ ಹಿಂದಿನ ತ್ರೈಮಾಸಿಕ ಸಾಧನೆ ಕಳಪೆಯಾಗಿರುವ ಕಾರಣ ಷೇರಿನ ಬೆಲೆ ₹299ರ ಗರಿಷ್ಠದಿಂದ ₹232ರ ಕನಿಷ್ಠಕ್ಕೆ ಒಂದು ತಿಂಗಳಲ್ಲಿ ಕುಸಿದಿರುವುದೇ ಈ ರೀತಿಯ ಅಸಹಜ ಚಟುವಟಿಕೆಗೆ ಕಾರಣವಾಗಿದೆ.

ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ಸ್‌ನ ಆಡಳಿತಮಂಡಳಿಯು, ತನ್ನ ಮುಂಬೈನ ₹18 ಸಾವಿರ ಕೋಟಿ ಮೊತ್ತದ ವಿದ್ಯುತ್‌ ವ್ಯವಹಾರವನ್ನು ಅದಾನಿ ಟ್ರಾನ್ಸ್‌ಮಿಷನ್‌ಗೆ ಮಾರಾಟ ಮಾಡಲು ನಿರ್ಧರಿಸಿದೆ. ಈ ಸುದ್ದಿಯಿಂದ ಕಂಪನಿಯ ಷೇರಿನ ಬೆಲೆ ₹477 ರವರೆಗೂ ಜಿಗಿತ ಕಂಡಿದೆ.

ADVERTISEMENT

ಒಂದು ತಿಂಗಳಲ್ಲಿ ₹371 ರ ಸಮೀಪದಿಂದ ₹477 ರವರೆಗೂ ಏರಿಕೆ ಕಂಡಿದೆ. ಈ ಕಂಪನಿಯು ಹಿಂದಿನ ವಾರ ತಾನು ವಿತರಿಸಿದ್ದ ಡಿಬೆಂಚರ್‌ಗಳ ಪಕ್ವತೆಯ ಹಣವನ್ನು ಹಿಂದಿರುಗಿಸಲು ತಪ್ಪಿದೆಯಾದರೂ ಈ ಮಾರಾಟದ ಹಣದಿಂದ ಈಗಿರುವ ಸುಮಾರು ₹22 ಸಾವಿರ ಕೋಟಿ ಸಾಲವನ್ನು ₹7,500 ಕೋಟಿಗೆ ಇಳಿಸಲಿದೆ ಎಂದು ಕಂಪನಿ ತಿಳಿಸಿದ ಕಾರಣ ಷೇರಿನ ಬೆಲೆ ₹477 ಕ್ಕೆ ಗುರುವಾರ ಜಿಗಿಯಿತು.

ಅದಾನಿ ಟ್ರಾನ್ಸ್‌ಮಿಷನ್‌ ಕಂಪನಿ ಷೇರಿನ ಬೆಲೆಯೂ ₹170 ರ ಸಮೀಪದಿಂದ ₹245 ರವರೆಗೂ ಜಿಗಿತ ಕಂಡಿತು. ₹ 227 ರ ಸಮೀಪ ವಾರಾಂತ್ಯ ಕಂಡಿತು. ಈ ಮಧ್ಯೆ ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್ಸ್‌ ಕಂಪನಿ ವಿತರಿಸಲಿರುವ ಪ್ರತಿ ಷೇರಿಗೆ ₹ 9.50 ರ ಲಾಭಾಂಶಕ್ಕೆ ಸೆಪ್ಟೆಂಬರ್ 15 ನಿಗದಿತ ದಿನ ಎಂದು ಪ್ರಕಟಿಸಿದ ಬೆಳವಣಿಗೆಯು ಷೇರಿನ ಬೆಲೆ ಜಿಗಿತಕ್ಕೆ ಕಾರಣವಾಗಿದೆ. ಸಮೂಹ ಕಂಪನಿ ರಿಲಯನ್ಸ್ ಕ್ಯಾಪಿಟಲ್ ಷೇರಿನ ಬೆಲೆ ಸಹ ಗಮನಾರ್ಹ ಏರಿಕೆ ಪ್ರದರ್ಶಿಸಿದೆ. ಪ್ರತಿ ಷೇರಿಗೆ ₹ 11ರ ಲಾಭಾಂಶಕ್ಕೆ ಸೆಪ್ಟೆಂಬರ್ 15 ನಿಗದಿತ ದಿನವಾಗಿರುವುದು ಸಹ ಷೇರಿನ ಬೆಲೆ ಏರಿಕೆಗೆ ಪೂರಕ ಅಂಶವಾಯಿತು.

ಬೊರೊಸಿಲ್ ಗ್ಲಾಸ್ ವರ್ಕ್ಸ್ ಲಿಮಿಟೆಡ್ ಕಂಪನಿ ಇತ್ತೀಚಿಗೆ 3:1 ರ ಅನುಪಾತದ ಬೋನಸ್ ಷೇರು ವಿತರಿಸಿದ ನಂತರ ಷೇರಿನ ಬೆಲೆ ₹ 397ರ ಗರಿಷ್ಠದಿಂದ ₹281 ರ ಕನಿಷ್ಠಕ್ಕೆ ಈ ತಿಂಗಳು ಕುಸಿದಿತ್ತು. ಗುರುವಾರ ಷೇರಿನ ಬೆಲೆ ₹294 ರ ಸಮೀಪದಿಂದ ಗರಿಷ್ಠ ಆವರಣ ಮಿತಿ ₹354ರವರೆಗೂ ಜಿಗಿತ ಕಂಡು ₹341 ರ ಸಮೀಪ ಕೊನೆಗೊಂಡು ವ್ಯಾಲ್ಯೂ ಪಿಕ್‌ನ ಪ್ರಭಾವ ಪ್ರದರ್ಶಿಸಿತು.

ಷೇರುಪೇಟೆಯ ಹೆಗ್ಗುರುತಾದ ಸಂವೇದಿ ಸೂಚ್ಯಂಕವು ಬುಧವಾರ 38,989 ಅಂಶಗಳನ್ನು ತಲುಪಿ ಸಾರ್ವಕಾಲಿಕ ಗರಿಷ್ಠದ ದಾಖಲೆ ನಿರ್ಮಿಸಿದೆ. ವಾರದ ಅಂತಿಮ ದಿನ ಎಫ್‌ಎಂಸಿಜಿ, ಮಾಹಿತಿ ತಂತ್ರಜ್ಞಾನ ಹಾಗೂ ಫಾರ್ಮಾ ವಲಯದ ಸೂಚ್ಯಂಕಗಳು ವಾರ್ಷಿಕ ಗರಿಷ್ಠದೊಂದಿಗೆ ಕೊನೆಗೊಂಡಿವೆ.

ರಿಲಯನ್ಸ್ ಇಂಡಸ್ಟ್ರೀಸ್ ಷೇರಿನ ಬೆಲೆ ₹1,328 ರಲ್ಲಿ ವಾರ್ಷಿಕ ಗರಿಷ್ಠ ತಲುಪಿದೆ. ಪೇಟೆಯ ಬಂಡವಾಳ ಮೌಲ್ಯ ₹8 ಲಕ್ಷ ಕೋಟಿ ದಾಟಿದ ದಾಖಲೆ ನಿರ್ಮಿಸಿದ್ದ ಈ ಕಂಪನಿಯ ಷೇರು ಶುಕ್ರವಾರ ₹1,237 ರವರೆಗೂ ಕುಸಿದು ₹1,240 ರಲ್ಲಿ ಕೊನೆಗೊಂಡು ₹21 ಸಾವಿರ ಕೋಟಿ ಬಂಡವಾಳ ನಷ್ಟ ಕಂಡಿತು. ಆದರೂ ಸಹ ಶುಕ್ರವಾರ ಪೇಟೆಯ ಬಂಡವಾಳ ಮೌಲ್ಯವು ₹ 159 ಲಕ್ಷ ಕೋಟಿಯಲ್ಲಿ ಕೊನೆಗೊಂಡು ಸಾರ್ವಕಾಲಿಕ ಗರಿಷ್ಠದ ದಾಖಲೆ ನಿರ್ಮಿಸಿದೆ.

ಷೇರುಪೇಟೆಯ ಚಟುವಟಿಕೆ ಪೂರ್ವ ನಿರೀಕ್ಷಿತ ರೀತಿಯಲ್ಲಿ ಸಾಗುವುದಿಲ್ಲವಾದರೂ, ಕಡೆಗಣಿಸಿರುವ ಒಂದು ವಲಯದ ಚಟುವಟಿಕೆಗೆ ದಿಢೀರ್ ಬೇಡಿಕೆ ಬರುವುದರಿಂದ ಆ ವಲಯದಲ್ಲಿ ಉತ್ಸಾಹ ಮೂಡಿಸುತ್ತದೆ. ಈ ವಾರ ಇದೇ ರೀತಿ ಕಡೆಗಣಿಸಲಾಗಿದ್ದ ಲೋಹ ವಲಯದ ಕಂಪನಿಗಳಾದ ಜೆಎಸ್‌ಡಬ್ಲ್ಯು ಸ್ಟೀಲ್‌, ಟಾಟಾ ಸ್ಟೀಲ್, ಜಿಂದಾಲ್ ಸ್ಟೀಲ್ ಆ್ಯಂಡ್‌ ಪವರ್, ವೇದಾಂತ ಮುಂತಾದವುಗಳಿಗೆ ವೈವಿಧ್ಯಮಯ ಕಾರಣಗಳಿಂದ ಬೇಡಿಕೆಯುಂಟಾಗಿ ಏರಿಕೆ ಕಂಡವು.

ಈ ಹಿಂದಿನ ದಿನಗಳಲ್ಲಿ ಫಾರ್ಮಾ ವಲಯ ಕಂಡಿದ್ದಂತಹ ಏರಿಕೆ ಈ ವಾರವೂ ಮುಂದುವರೆಯಿತು.

ಪ್ರಭಾವಿ ಬದಲಾವಣೆಗಳು ಯಾವ ಮಟ್ಟ ಮತ್ತು ವೇಗವಾಗಿರುತ್ತವೆ ಎಂದರೆ ಬುಧವಾರ ಕ್ಯಾಂಡಿಲ್ಲ ಹೆಲ್ತ್ ಕೇರ್ ಕಂಪನಿಯ ವಡೋದರಾ ಘಟಕದ ಯುಎಸ್‌ ಎಫ್‌ಡಿಎ ತನಿಖೆಯಲ್ಲಿ 5 ನ್ಯೂನತೆಗಳು ಗುರುತಿಸಲಾಗಿದೆ ಎಂಬ ಸುದ್ದಿಯು ಷೇರಿನ ಬೆಲೆಯನ್ನು ₹400 ರ ಸಮೀಪದಿಂದ ₹384 ರ ವರೆಗೂ ಕುಸಿಯುವಂತೆ ಮಾಡಿತು. ಆದರೆ, ಗುರುವಾರ ಕಂಪನಿಯ ಎರಡು ಉತ್ಪನ್ನಗಳಿಗೆ ಯುಎಸ್‌ ಎಫ್‌ಡಿಎ ತನ್ನ ಸಮ್ಮತಿ ನೀಡಿದೆ ಎಂಬ ಕಾರಣಕ್ಕಾಗಿ ಷೇರಿನ ಬೆಲೆ ₹406 ರವರೆಗೂ ಚಿಗುರಿಕೊಳ್ಳುವಂತೆ ಮಾಡಿತು.

ಬೋನಸ್ ಷೇರು:ಅಲ್ಪೈನ್ ಹೌಸಿಂಗ್ ಡೆವಲಪಮೆಂಟ್ ಕಾರ್ಪೊರೇಷನ್ ಕಂಪನಿ ಸೆಪ್ಟೆಂಬರ್ 1 ರಂದು ಬೋನಸ್ ಷೇರು ಪರಿಶೀಲಿಸಿದೆ.

ಮುನ್ನೋಟ:ಕಚ್ಚಾತೈಲ ಬೆಲೆ ದಿನೇ ದಿನೇ ಏರಿಕೆ ಹಾದಿಯಲ್ಲಿದ್ದರೆ, ಡಾಲರ್ ಎದುರುರೂಪಾಯಿ ಮೌಲ್ಯ ಭಾರಿ ಕುಸಿತ ಕಂಡಿದೆ. ಈ ಎರಡೂ ವಿದ್ಯಮಾನಗಳು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ.

ಈ ತಿಂಗಳಲ್ಲಿ ಹೆಚ್ಚಿನ ಕಂಪನಿಗಳು ವಿಶೇಷವಾಗಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಯ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಇದರಿಂದ ಹೆಚ್ಚಿನ ಕಂಪನಿಗಳ ಷೇರುಗಳ ಬೆಲೆಗಳು ಏರಿಕೆ ಪ್ರದರ್ಶಿಸುವ ಸಾಧ್ಯತೆ ಇದೆ. ಈ ಏರಿಕೆಯನ್ನು ಕಂಪನಿಯ ಯೋಗ್ಯತೆಗೆ ಅನುಸಾರವಾಗಿ, ಲಾಭದ ನಗದೀಕರಣಕ್ಕೆ ಉಪಯೋಗಿಸಿಕೊಳ್ಳಬಹುದು. ಕೆಲವೊಮ್ಮೆ ಅನೇಕ ಕಂಪನಿಗಳ ಈಗಿನ ಬೆಲೆ ದೊರಕಬೇಕಾದರೆ ಮತ್ತೊಂದು ವರ್ಷ ಕಾಯಬೇಕಾಗಲೂಬಹುದು. ಜಿಡಿಪಿ ಬೆಳವಣಿಗೆಯು ಹೆಚ್ಚು ಏರಿಕೆ ಕಂಡಿರುವುದೂ ಸೋಮವಾರದ ವಹಿವಾಟಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ.

ವಾರದ ಮುನ್ನೋಟ
ಕಚ್ಚಾತೈಲ ಬೆಲೆ ದಿನೇ ದಿನೇ ಏರಿಕೆ ಹಾದಿಯಲ್ಲಿದ್ದರೆ, ಡಾಲರ್ ಎದುರುರೂಪಾಯಿ ಮೌಲ್ಯ ಭಾರಿ ಕುಸಿತ ಕಂಡಿದೆ. ಈ ಎರಡೂ ವಿದ್ಯಮಾನಗಳು ಈ ವಾರದ ಷೇರುಪೇಟೆ ವಹಿವಾಟಿನ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ.

ಈ ತಿಂಗಳಲ್ಲಿ ಹೆಚ್ಚಿನ ಕಂಪನಿಗಳು ವಿಶೇಷವಾಗಿ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿ ಕಂಪನಿಗಳು ತಮ್ಮ ವಾರ್ಷಿಕ ಸಾಮಾನ್ಯ ಸಭೆಯ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗಿದೆ. ಇದರಿಂದ ಹೆಚ್ಚಿನ ಕಂಪನಿಗಳ ಷೇರುಗಳ ಬೆಲೆಗಳು ಏರಿಕೆ ಪ್ರದರ್ಶಿಸುವ ಸಾಧ್ಯತೆ ಇದೆ. ಈ ಏರಿಕೆಯನ್ನು ಕಂಪನಿಯ ಯೋಗ್ಯತೆಗೆ ಅನುಸಾರವಾಗಿ, ಲಾಭದ ನಗದೀಕರಣಕ್ಕೆ ಉಪಯೋಗಿಸಿಕೊಳ್ಳಬಹುದು. ಕೆಲವೊಮ್ಮೆ ಅನೇಕ ಕಂಪನಿಗಳ ಈಗಿನ ಬೆಲೆ ದೊರಕಬೇಕಾದರೆ ಮತ್ತೊಂದು ವರ್ಷ ಕಾಯಬೇಕಾಗಲೂಬಹುದು. ಜಿಡಿಪಿ ಬೆಳವಣಿಗೆಯು ಹೆಚ್ಚು ಏರಿಕೆ ಕಂಡಿರುವುದೂ ಸೋಮವಾರದ ವಹಿವಾಟಿಗೆ ಉತ್ತೇಜನ ನೀಡುವ ಸಾಧ್ಯತೆ ಇದೆ.

(ಮೊ:9886313380, ಸಂಜೆ 4.30 ರನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.