ಜಗದೀಪ್ ಸಿಂಗ್
ನವದೆಹಲಿ: ಭಾರತೀಯ ಮೂಲದ ವ್ಯಕ್ತಿಯೊಬ್ಬರು ಜಗತ್ತಿನಲ್ಲೇ ಅತಿ ಹೆಚ್ಚು ಆದಾಯ ಗಳಿಸುವ ಟೆಕಿ ಎಂದು ಸುದ್ದಿಯಾಗುತ್ತಿದ್ದಾರೆ.
ಅಮೆರಿಕದ ಕ್ವಾಂಟಮ್ ಸ್ಕೇಪ್ ಎನ್ನುವ ವಿದ್ಯುತ್ ಚಾಲಿತ ವಾಹನದ (ಇವಿ) ಬ್ಯಾಟರಿ ತಯಾರಿಸುವ ಕಂಪನಿಯ ಸ್ಥಾಪಕರಲ್ಲಿ ಒಬ್ಬರಾಗಿರುವ ಜಗದೀಪ್ ಸಿಂಗ್ ಅವರ ಆದಾಯ ಎಲ್ಲರ ಕಣ್ಣರಳಿಸಿದೆ.
ಆದರೆ ಸಿಂಗ್ ಅವರು ಈ ಆದಾಯ ಪಡೆಯುತ್ತಿದ್ದುದು ಅವರು ಕಂಪನಿಯ ಸಿಇಒ ಆಗಿದ್ದಾಗ. ಅವರು ಸಂಸ್ಥೆಯನ್ನು ಮುನ್ನಡೆಸುವಾಗ ದಿನಕ್ಕೆ ₹48 ಕೋಟಿ ($5.8 ಮಿಲಿಯನ್) ಆದಾಯ ಗಳಿಸುತ್ತಿದ್ದರು. ವಾರ್ಷಿಕವಾಗಿ ₹17,500 ಕೋಟಿ ($2.3 ಬಿಲಿಯನ್) ಅವರ ಆದಾಯವಾಗಿತ್ತು. (ಇಂದಿನ ವಿನಿಮಯ ದರದ ಆಧಾರದಲ್ಲಿ ₹19,337 ಕೋಟಿ ಆಗಿದೆ)
ಆದರೆ, ಕಳೆದ ಫೆಬ್ರುವರಿಯಲ್ಲಿ ಸಿಂಗ್ ಅವರು ಕಂಪನಿಯ ಸಿಇಒ ಸ್ಥಾನದಿಂದ ಕೆಳಕ್ಕಿಳಿದು 2023ರಲ್ಲಿ ಕಂಪನಿಯ ಅಧ್ಯಕ್ಷರಾಗಿ ಸೇರಿದ್ದ ಶಿವ ಶಿವರಾಮ ಎನ್ನುವವರನ್ನು ಸಿಇಒ ಆಗಿ ಮಾಡಿದ್ದರು. ಕಂಪನಿಯ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಸಿಂಗ್ ಮುಂದುವರಿದಿದ್ದಾರೆ.
2021ರಲ್ಲಿಯೂ ಇದೇ ಸುದ್ದಿ ಹರಿದಾಡಿತ್ತು. ಈಗ ಅದನ್ನು ವಿವಿಧ ಮಾಧ್ಯಮಗಳು ಮತ್ತೆ ಮುನ್ನೆಲೆಗೆ ತಂದಿವೆ. ಸಿಂಗ್ ಅವರಿಗೆ ಭಾರಿ ಮೊತ್ತದ ಪ್ಯಾಕೇಜ್ ನೀಡಲು ಕಂಪನಿಯ ಷೇರುದಾರರ ಒಪ್ಪಿಗೆ ನೀಡಿತ್ತು. ಆಗ ಈ ಸುದ್ದಿ ಹರಿದಾಡಿತ್ತು.
ಸಿಂಗ್ ಅವರು ಸ್ಟಾನ್‌ಫೋರ್ಡ್ ಯುನಿವರ್ಸಿಟಿಯಲ್ಲಿ ಬಿ–ಟೆಕ್ ಪದವಿ ಪಡೆದಿದ್ದಾರೆ. ಜತೆಗೆ ಕ್ಯಾಲಿಫೋರ್ನಿಯಾ ಯುನಿವರ್ಸಿಟಿಯಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.
ಸಿಂಗ್ 2010ರಲ್ಲಿ ಕ್ವಾಂಟಮ್ ಸ್ಕೇಪ್ ಕಂಪನಿ ಆರಂಭಿಸಿದರು. ಇದು ವಿಶೇಷವಾಗಿ ಬ್ಯಾಟರಿ ತಂತ್ರಜ್ಞಾನದಲ್ಲಿ ಹೊಸ ಆವಿಷ್ಕಾರವನ್ನು ಸಾಧಿಸಿದೆ.
ಕ್ವಾಂಟಮ್ ಸ್ಕೇಪ್ ಕಂಪನಿಯಲ್ಲಿ ಸಾಂಪ್ರದಾಯಿಕ ಲೀಥಿಯಂ ಆಯಾನ್ ಬ್ಯಾಟರಿಗಳನ್ನು ಅಭಿವೃದ್ಧಿಪಡಿಸುವ ಬದಲು ವಿದ್ಯುತ್ ಚಾಲಿತ ವಾಹನಗಳಿಗೆ ಘನ ಸ್ಥಿತಿಯ ಬ್ಯಾಟರಿಗಳನ್ನು ಅಳವಡಿಸಲಿದೆ. ಇದು ವಾಹನಗಳು ವೇಗವಾಗಿ ಚಾರ್ಜ್ ಆಗುವಂತೆ ಮಾಡಬಲ್ಲದು. ಜತೆಗೆ ಇಂಧನ ಸಾಂದ್ರತೆಯನ್ನೂ ಹೆಚ್ಚಿಸಲು ನೆರವಾಗುತ್ತದೆ. ಈ ಮೂಲಕ ವಿದ್ಯುತ್ ಚಾಲಿತ ವಾಹನಗಳ ಬಳಕೆದಾರರು ಎದುರಿಸುವ ಸಮಸ್ಯೆ ನಿವಾರಣೆಯಾಗುತ್ತದೆ ಎನ್ನುವುದು ಈ ಕಂಪನಿಯ ಧೋರಣೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.