ADVERTISEMENT

ಇಟಿಎಫ್‌ಗಳ ಬಗ್ಗೆ ನಿಮಗೆ ಇವು ಗೊತ್ತಿರಲಿ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2021, 13:12 IST
Last Updated 10 ಡಿಸೆಂಬರ್ 2021, 13:12 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಈಚಿನ ವರ್ಷಗಳಲ್ಲಿ ಹೂಡಿಕೆದಾರರು ವಿನಿಮಯ ವಹಿವಾಟು ನಿಧಿಗಳ (ಇಟಿಎಫ್‌) ತಾಕತ್ತನ್ನು ಒಪ್ಪಿಕೊಳ್ಳಲು ಆರಂಭಿಸಿದ್ದಾರೆ. ಹೂಡಿಕೆದಾರರಲ್ಲಿ ಅರಿವಿನ ಮಟ್ಟ ಹೆಚ್ಚಾಗಿದ್ದು, ಡಿಜಿಟಲ್ ವೇದಿಕೆಗಳನ್ನು ಅವರು ಹೆಚ್ಚಿನ ಪ್ರಮಾಣದಲ್ಲಿ ಬಳಸಲು ಆರಂಭಿಸಿದ್ದು ಹಾಗೂ ಹೊಸ ಬಗೆಯಲ್ಲಿ ಈ ಹಣಕಾಸು ಉತ್ಪನ್ನವನ್ನು (ಇಟಿಎಫ್) ಹೂಡಿಕೆದಾರರ ಮುಂದೆ ಇರಿಸಿದ್ದು ಇದಕ್ಕೆ ಕಾರಣ. ಒಂದು ಷೇರಿನ ವಹಿವಾಟಿನಲ್ಲಿ ಇರುವ ಎಲ್ಲ ಬಗೆಯ ಅನುಕೂಲಗಳು ಇಟಿಎಫ್‌ ಹೂಡಿಕೆಯಲ್ಲಿಯೂ ಇರುತ್ತವೆ. ಅದರ ಜೊತೆಯಲ್ಲೇ, ಹೂಡಿಕೆಯಲ್ಲಿ ವೈವಿಧ್ಯವನ್ನು ಕಾಯ್ದುಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ ಮತ್ತು ಮ್ಯೂಚುವಲ್‌ ಫಂಡ್‌ ಹೂಡಿಕೆಗಳಿಗೆ ನೀಡಬೇಕಿರುವ ಶುಲ್ಕಕ್ಕಿಂತ ಕಡಿಮೆ ವೆಚ್ಚದಲ್ಲಿ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಸಾಧ್ಯ.

ಇಟಿಎಫ್‌ಗಳ ಮೂಲಕ ಬಹಳ ಕಡಿಮೆ ವೆಚ್ಚದಲ್ಲಿ ಹಲವು ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಮಾಡಬಹುದು. ಷೇರುಗಳಲ್ಲಿ ನೇರವಾಗಿ ಹೂಡಿಕೆ ಮಾಡುವುದಕ್ಕಿಂತ ಇಟಿಎಫ್‌ಗಳ ಮೂಲಕ ಮಾಡುವ ಹೂಡಿಕೆ ಹೆಚ್ಚು ಸುರಕ್ಷಿತ. ಈ ಕಾರಣದಿಂದಾಗಿಯೂ ಹೂಡಿಕೆದಾರರು ಇಟಿಎಫ್‌ಗಳ ಕಡೆ ಆಕರ್ಷಿತರಾಗುತ್ತಿದ್ದಾರೆ.

ಇಟಿಎಫ್‌ ಬಗ್ಗೆ ಒಂದಿಷ್ಟು ವಿವರ:

ADVERTISEMENT

* ಇಟಿಎಫ್‌ಗಳು ಹಣವನ್ನು ನಿರ್ದಿಷ್ಟ ಸೂಚ್ಯಂಕದಲ್ಲಿನ ಕಂಪನಿಗಳ ಷೇರುಗಳ ಮೇಲೆ ಹೂಡಿಕೆ ಮಾಡುತ್ತವೆ. ಆ ಸೂಚ್ಯಂಕದಲ್ಲಿ ಕಂಪನಿಗಳ ಷೇರುಗಳ ಪಾಲು ಎಷ್ಟು ಪ್ರಮಾಣದಲ್ಲಿ ಇರುತ್ತದೆಯೋ ಅಷ್ಟೇ ಪ್ರಮಾಣದಲ್ಲಿ ಹಣವನ್ನು ಹೂಡಿಕೆ ಮಾಡಲಾಗುತ್ತದೆ. ಇಟಿಎಫ್‌ ಯೂನಿಟ್‌ಗಳು ಷೇರು ಮಾರುಕಟ್ಟೆಯಲ್ಲಿ ದಿನವಿಡೀ ಖರೀದಿ–ಮಾರಾಟ ಆಗುತ್ತವೆ. ಇಟಿಎಫ್‌ ಯೂನಿಟ್‌ ಖರೀದಿಸಲು ಅಥವಾ ಅವುಗಳನ್ನು ಮಾರಾಟ ಮಾಡಲು ಹೂಡಿಕೆದಾರರು ಡಿಮ್ಯಾಟ್ ಖಾತೆ ಹೊಂದಿರಲೇಬೇಕು.

* ಕನಿಷ್ಠ ಹೂಡಿಕೆ: ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವ ಇಟಿಎಫ್‌ಗಳಿಗೆ ಕನಿಷ್ಠ ಹೂಡಿಕೆ ಮೊತ್ತ ಎಂಬುದು ಇಲ್ಲ. ಹೂಡಿಕೆದಾರರು ಕನಿಷ್ಠ ಒಂದು ಯೂನಿಟ್‌ ಖರೀದಿಸಬೇಕು. ಆ ಯೂನಿಟ್‌ನ ಮಾರುಕಟ್ಟೆ ಬೆಲೆ ಪಾವತಿಸಿ ಖರೀದಿ ಮಾಡಬೇಕು. ಬಾಂಡ್‌ಗಳಲ್ಲಿ ಹೂಡಿಕೆ ಮಾಡುವ ಇಟಿಎಫ್‌ಗಳಲ್ಲಿ ಕನಿಷ್ಠ ₹ 1,000 ತೊಡಗಿಸಬೇಕಾಗುತ್ತದೆ. ಚಿನ್ನದಲ್ಲಿ ಹೂಡಿಕೆ ಮಾಡುವ ಇಟಿಎಫ್‌ಗಳಲ್ಲಿ ಕನಿಷ್ಠ ಒಂದು ಯೂನಿಟ್‌ಗೆ ಆಗುವಷ್ಟು ಹಣವನ್ನು ತೊಡಗಿಸಬೇಕು.

ಇಟಿಎಫ್‌ ಏಕೆ?:

ಇಲ್ಲಿ ಹೇಳಿರುವ ಪ್ರಯೋಜನಗಳ ಕಾರಣದಿಂದಾಗಿ ಹೂಡಿಕೆದಾರರು ಇಟಿಎಫ್‌ಗಳಲ್ಲಿ ಹಣ ತೊಡಗಿಸುವ ಬಗ್ಗೆ ಆಲೋಚಿಸಬಹುದು.

* ಷೇರು ವಹಿವಾಟು ನಡೆಯುವ ಸಮಯದಲ್ಲಿ ಹೂಡಿಕೆದಾರರು ಇಟಿಎಫ್‌ ಯೂನಿಟ್‌ಗಳನ್ನು ಸುಲಲಿತವಾಗಿ ಖರೀದಿಸಬಹುದು, ಮಾರಾಟ ಮಾಡಬಹುದು.

* ಕಡಿಮೆ ಶುಲ್ಕ: ಇತರ ಹೂಡಿಕೆ ಆಯ್ಕೆಗಳಿಗೆ ಹೋಲಿಸಿ ನೋಡಿದರೆ, ಇಟಿಎಫ್‌ಗಳಿಗೆ ಇರುವ ಶುಲ್ಕ ಬಹಳ ಕಡಿಮೆ.

* ಬಹುತೇಕ ಇಟಿಎಫ್‌ಗಳು ನಿರ್ದಿಷ್ಟ ಸೂಚ್ಯಂಕವನ್ನು ಆಧರಿಸಿ ಇರುತ್ತವೆಯಾದ ಕಾರಣ, ಹಣವು ಯಾವ ಕಂಪನಿಗಳ ಷೇರುಗಳಲ್ಲಿ ಹೂಡಿಕೆ ಆಗುತ್ತದೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತದೆ.

* ಹೂಡಿಕೆಯಲ್ಲಿ ವೈವಿಧ್ಯ ಕಾಯ್ದುಕೊಳ್ಳಲು ಇಟಿಎಫ್‌ಗಳು ಸಹಾಯ ಮಾಡುತ್ತವೆ.

ಇಟಿಎಫ್‌ಗಳ ಬಗ್ಗೆ ಇರುವ ಕೆಲವು ಅಪನಂಬಿಕೆಗಳು:

* ಇಟಿಎಫ್‌ಗಳ ಮೂಲಕ ನಿರ್ದಿಷ್ಟ ವಲಯದಲ್ಲಿ ಹೂಡಿಕೆ ಸಾಧ್ಯವಿಲ್ಲ: ಇದು ತಪ್ಪು ನಂಬಿಕೆ. ಇಟಿಎಫ್‌ಗಳು ಸೆನ್ಸೆಕ್ಸ್‌ ಅಥವಾ ನಿಫ್ಟಿಯಂತಹ ಸೂಚ್ಯಂಕವನ್ನು ಅನುಕರಿಸುತ್ತವೆಯಾದರೂ, ನಿರ್ದಿಷ್ಟ ವಲಯ ಹಾಗೂ ನಿರ್ದಿಷ್ಟ ಸೂಚ್ಯಂಕವನ್ನು ಆಧರಿಸಿ ಹೂಡಿಕೆ ಮಾಡುವ ಇಟಿಎಫ್‌ಗಳೂ ಇವೆ. ಬ್ಯಾಂಕ್‌ಗಳಲ್ಲಿ ಮಾತ್ರ ಹೂಡಿಕೆ ಮಾಡುವ, ಮಿಡ್‌ ಕ್ಯಾಪ್‌ ಕಂಪನಿಗಳಲ್ಲಿ ಮಾತ್ರ ಹೂಡಿಕೆ ಮಾಡುವ ಇಟಿಎಫ್‌ಗಳೂ ಇವೆ.

* ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಿದರೆ ಡಿವಿಡೆಂಡ್ ಸಿಗದು: ಇದು ಸುಳ್ಳು. ಇಟಿಎಫ್‌ ತಾನು ಹಣ ತೊಡಗಿಸಿರುವ ಕಂಪನಿಯು ಡಿವಿಡೆಂಡ್ ಘೋಷಣೆ ಮಾಡಿದಾಗ, ಆ ಡಿವಿಡೆಂಡ್‌ ಮೊತ್ತವು ಇಟಿಎಫ್‌ನ ಎನ್‌ಎವಿ ಮೌಲ್ಯಕ್ಕೆ ಸೇರ್ಪಡೆ ಆಗುತ್ತದೆ. ಆ ಮೂಲಕ ಹೂಡಿಕೆದಾರರ ಸಂಪತ್ತು ಮೌಲ್ಯ ಹೆಚ್ಚಳ ಆಗುತ್ತದೆ.

* ಇಟಿಎಫ್‌ನಲ್ಲಿನ ಹಣವನ್ನು ಸುಲಭವಾಗಿ ನಗದು ಮಾಡಿಕೊಳ್ಳಲು ಆಗದು: ಇದು ಕೂಡ ತಪ್ಪು ನಂಬಿಕೆ. ಇಟಿಎಫ್‌ಗಳಲ್ಲಿ ಈಗ ಹೂಡಿಕೆ ಹಣದ ನಗದೀಕರಣದ ಸಮಸ್ಯೆ ಇಲ್ಲ. ನಗದೀಕರಣದ ಕುರಿತ ಕಳವಳವು 2000ನೆಯ ಇಸವಿಯ ಸುಮಾರಿನಲ್ಲಿ ಇತ್ತು ಎಂಬುದು ನಿಜ. ಆದರೆ, ಈಗ ಆ ಸಮಸ್ಯೆ ಇಲ್ಲ.

ಒಟ್ಟಿನಲ್ಲಿ ಹೇಳಬೇಕು ಎಂದಾದರೆ, ಈಕ್ವಿಟಿ ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಲು ಇರುವ ಅತ್ಯಂತ ಸರಳ ಹಣಕಾಸು ಉತ್ಪನ್ನಗಳ ಸಾಲಿನಲ್ಲಿ ಇಟಿಎಫ್‌ ಮುಂಚೂಣಿಯಲ್ಲಿ ನಿಲ್ಲುತ್ತದೆ. ಮೊದಲ ಬಾರಿಗೆ ಹೂಡಿಕೆ ಜಗತ್ತಿಗೆ ಪ್ರವೇಶ ಪಡೆಯುತ್ತಿರುವವರು ದೊಡ್ಡ ನೆಲೆಯ ಸೂಚ್ಯಂಕವನ್ನು ಅನುಸರಿಸುವ ಇಟಿಎಫ್‌ಗಳನ್ನು ಆಯ್ಕೆ ಮಾಡಿಕೊಳ್ಳಬೇಕು.

ಲೇಖಕ ಐಸಿಐಸಿಐ ಪ್ರುಡೆನ್ಷಿಯಲ್‌ ಆಸ್ತಿ ನಿರ್ವಹಣಾ ಕಂಪನಿಯ ಹಿರಿಯ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.