ADVERTISEMENT

ಈಕ್ವಿಟಿ ಎಂ.ಎಫ್‌: ಒಳಹರಿವು ಶೇ 24ರಷ್ಟು ಏರಿಕೆ

ಪಿಟಿಐ
Published 9 ಜುಲೈ 2025, 14:08 IST
Last Updated 9 ಜುಲೈ 2025, 14:08 IST
ಈಕ್ವಿಟಿ ಎಂ.ಎಫ್‌
ಈಕ್ವಿಟಿ ಎಂ.ಎಫ್‌   

ನವದೆಹಲಿ: ಜೂನ್‌ ತಿಂಗಳಿನಲ್ಲಿ ಈಕ್ವಿಟಿ ಮ್ಯೂಚುವಲ್‌ ಫಂಡ್‌ಗಳಲ್ಲಿ (ಎಂ.ಎಫ್‌) ಒಳಹರಿವು ಶೇ 24ರಷ್ಟು ಏರಿಕೆಯಾಗಿದ್ದು, ₹23,587 ಕೋಟಿ ಆಗಿದೆ ಎಂದು ಭಾರತದ ಮ್ಯೂಚುವಲ್‌ ಫಂಡ್‌ ಕಂಪನಿಗಳ ಒಕ್ಕೂಟವು (ಎಎಂಎಫ್‌ಐ) ಬುಧವಾರ ತಿಳಿಸಿದೆ. 

ಕಳೆದ ವರ್ಷದ ಡಿಸೆಂಬರ್‌ನಲ್ಲಿ ₹41,156 ಕೋಟಿ ಒಳಹರಿವು ಇತ್ತು. ಈ ಬಳಿಕ ಒಳಹರಿವಿನ ಪ್ರಮಾಣವು ಕಡಿಮೆಯಾಗಿತ್ತು. ಜನವರಿಯಲ್ಲಿ ₹39,688 ಕೋಟಿ, ಫೆಬ್ರುವರಿಯಲ್ಲಿ ₹29,303 ಕೋಟಿ, ಮಾರ್ಚ್‌ನಲ್ಲಿ ₹25,082 ಕೋಟಿ, ಏಪ್ರಿಲ್‌ನಲ್ಲಿ ₹24,269 ಕೋಟಿ ಮತ್ತು ಮೇ ತಿಂಗಳಿನಲ್ಲಿ ₹19,013 ಕೋಟಿ ಹೂಡಿಕೆಯಾಗಿತ್ತು. ಸತತ ಐದು ತಿಂಗಳ ಇಳಿಕೆ ಬಳಿಕ ಒಳಹರಿವಿನ ಪ್ರಮಾಣ ಜೂನ್‌ನಲ್ಲಿ ಏರಿಕೆ ಕಂಡಿದೆ. 

ವ್ಯವಸ್ಥಿತ ಹೂಡಿಕೆ ಯೋಜನೆಗಳ (ಎಸ್‌ಐಪಿ) ಅಡಿ ಮೇ ತಿಂಗಳಿನಲ್ಲಿ ₹26,688 ಕೋಟಿ ಒಳಹರಿವಾಗಿತ್ತು. ಜೂನ್‌ನಲ್ಲಿ ₹27,269 ಕೋಟಿಗೆ ಏರಿಕೆಯಾಗಿದೆ ಎಂದು ತಿಳಿಸಿದೆ.

ADVERTISEMENT

‘ಒಳಹರಿವಿನ ಪ್ರಮಾಣದ ಹೆಚ್ಚಳವು ಸಣ್ಣ ಹೂಡಿಕೆದಾರರಲ್ಲಿ ಹೆಚ್ಚಿದ ವಿಶ್ವಾಸವನ್ನು ಪ್ರತಿಬಿಂಬಿಸುತ್ತಿದೆ. ಮಿಡ್‌ ಕ್ಯಾಪ್‌ ಮತ್ತು ಸ್ಮಾಲ್ ಕ್ಯಾಪ್‌ ಫಂಡ್‌ಗಳಲ್ಲಿನ ಒಳಹರಿವು ಹೆಚ್ಚಳವು ಹೂಡಿಕೆಯ ಹೆಚ್ಚಳಕ್ಕೆ ನೆರವಾದವು ಎಂದು ಮಾರ್ನಿಂಗ್‌ಸ್ಟಾರ್‌ ರಿಸರ್ಚ್‌ ಇಂಡಿಯಾ ಸಂಸ್ಥೆಯ ಸಹ ನಿರ್ದೇಶಕ (ಸಂಶೋಧನೆ)   ಹಿಮಾಂಶು ಶ್ರೀವಾಸ್ತವ ಹೇಳಿದ್ದಾರೆ. 

ಜೂನ್‌ನಲ್ಲಿ ಫ್ಲೆಕ್ಸಿ ಕ್ಯಾಪ್‌ ಫಂಡ್‌ನಲ್ಲಿ ₹5,733 ಕೋಟಿ, ಸ್ಮಾಲ್‌ ಕ್ಯಾಪ್‌ ಫಂಡ್‌ನಲ್ಲಿ ₹4,024 ಕೋಟಿ, ಮಿಡ್‌ಕ್ಯಾಪ್‌ ಫಂಡ್‌ನಲ್ಲಿ ₹3,754 ಕೋಟಿ ಮತ್ತು ಲಾರ್ಜ್‌ಕ್ಯಾಪ್‌ ಫಂಡ್‌ನಲ್ಲಿ ₹1,694 ಕೋಟಿ ನಿವ್ವಳ ಹೂಡಿಕೆ ಆಗಿದೆ. ಮ್ಯೂಚುವಲ್‌ ಫಂಡ್‌ ಉದ್ಯಮದ ಒಟ್ಟು ನಿರ್ವಹಣಾ ಸಂಪತ್ತಿನ ಮೌಲ್ಯ (ಎಯುಎಂ) ₹74.4 ಲಕ್ಷ ಕೋಟಿಯಾಗಿದೆ. 

ಚಿನ್ನದ ಇಟಿಎಫ್‌ಗಳಲ್ಲಿ ₹2,081 ಕೋಟಿ ಹೂಡಿಕೆಯಾಗಿದೆ. ಇದು ಜನವರಿ ನಂತರ ಕಂಡ ಅತಿಹೆಚ್ಚಿನ ಒಳಹರಿವಾಗಿದೆ ಎಂದು ಎಎಂಎಫ್‌ಐ ತಿಳಿಸಿದೆ.

‘ಸಣ್ಣ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಹೆಚ್ಚಳ ಮತ್ತು ಎಸ್‌ಐಪಿಯಲ್ಲಿನ ಸ್ಥಿರವಾದ ಏರಿಕೆಯಿಂದ ಒಳಹರಿವು ಹೆಚ್ಚಾಗುತ್ತಿದೆ’ ಎಂದು ಎಎಂಎಫ್‌ಐ ಮುಖ್ಯ ಕಾರ್ಯನಿರ್ವಾಹಕ ವೆಂಕಟ್ ಚಲಸಾನಿ ಹೇಳಿದ್ದಾರೆ.

‘ಸಣ್ಣ ಹೂಡಿಕೆದಾರರಲ್ಲಿ ವಿಶ್ವಾಸ ಹೆಚ್ಚಿದೆ. ಇದು ಉದ್ಯಮ ಮತ್ತು ದೇಶದ ಮಾರುಕಟ್ಟೆಗೆ ಆರೋಗ್ಯಕರ ಮತ್ತು ಸಕಾರಾತ್ಮಕವಾದುದಾಗಿದೆ’ ಎಂದು ಮೋತಿಲಾಲ್‌ ಓಸ್ವಾಲ್‌ ಎಎಂಸಿಯ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಮುಖ್ಯ ವ್ಯವಹಾರ ಅಧಿಕಾರಿ ಅಖಿಲ್ ಚತುರ್ವೇದಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.