ADVERTISEMENT

Factor Investing: ಹಣಕಾಸು; ಅರಿಯೋಣವೇ ಫ್ಯಾಕ್ಟರ್ ಹೂಡಿಕೆ ?

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2025, 23:30 IST
Last Updated 3 ಡಿಸೆಂಬರ್ 2025, 23:30 IST
   
ಹೂಡಿಕೆಯ ಜಗತ್ತಿನಲ್ಲಿ ಕಾಲನ ಅಗ್ನಿಪರೀಕ್ಷೆಯನ್ನು ಗೆದ್ದು ನಿಂತಿರುವ ಪಾಠವೊಂದು ಇದೆ. ಯಾವುದೇ ಒಂದು ಹೂಡಿಕೆ ಶೈಲಿಯು ಎಲ್ಲ ಸಂದರ್ಭಗಳಲ್ಲಿಯೂ ಗೆಲ್ಲುವ ಕುದುರೆಯಾಗಿ ಇರದು ಎಂಬುದು ಆ ಪಾಠ..

ಷೇರು ಮಾರುಕಟ್ಟೆಗಳ ಚಲನೆಯನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಒಂದು ಸರಳ ಸತ್ಯವು ನಿಮ್ಮ ಗಮನಕ್ಕೆ ಬಂದಿರಬಹುದು. ಷೇರುಪೇಟೆಯಲ್ಲಿ ಹೆಚ್ಚು ಲಾಭ ತಂದುಕೊಡುವವರು ಪ್ರತಿ ವರ್ಷವೂ
ಬದಲಾಗುತ್ತಿರುತ್ತಾರೆ. ಒಂದು ವರ್ಷ ದೊಡ್ಡ ಗಾತ್ರದ ಕಂಪನಿಗಳು ಮುಂಚೂಣಿಯಲ್ಲಿ ಇದ್ದರೆ, ಇನ್ನೊಂದು ವರ್ಷದಲ್ಲಿ ಸಣ್ಣ ಗಾತ್ರದ ಕಂಪನಿಗಳು ಅಥವಾ ಮಧ್ಯಮ ಗಾತ್ರದ ಕಂಪನಿಗಳು ಹೆಚ್ಚು ಲಾಭ ತಂದುಕೊಡಬಹುದು.

ಕೆಲವು ಸಂದರ್ಭಗಳಲ್ಲಿ ಸ್ಥಿರವಾದ ಬೆಳವಣಿಗೆ ಕಾಣುವ ಕಂಪನಿಗಳು ಹೆಚ್ಚು ಉತ್ತಮವಾಗಿ ಲಾಭ ತರಬಲ್ಲವು. ಇನ್ನು ಕೆಲವು ಸಂದರ್ಭಗಳಲ್ಲಿ ಹೆಚ್ಚು ವೇಗದ ಬೆಳವಣಿಗೆ ಕಾಣುವ ಷೇರುಗಳು ಹೆಚ್ಚಿನ ಲಾಭ ನೀಡುವ ಪಟ್ಟಿಯಲ್ಲಿ ಮೇಲಿನ ಸ್ಥಾನ ಪಡೆಯಬಲ್ಲವು. ಹೂಡಿಕೆಯ ಒಟ್ಟಾರೆ ದಿಕ್ಕು ಬದಲಾಗುತ್ತಲೇ ಇರುತ್ತದೆ. ಆದರೆ ಕಾಲನ ಪರೀಕ್ಷೆಯನ್ನು ಗೆದ್ದು ನಿಂತಿರುವ ಒಂದು ಪಾಠ ಇದೆ. ಅದೆಂದರೆ, ಯಾವುದೇ ಒಂದು ಹೂಡಿಕೆ ಶೈಲಿಯು ಎಲ್ಲ ಸಂದರ್ಭಗಳಲ್ಲಿಯೂ ಗೆಲ್ಲುವ ಕುದುರೆಯಾಗಿ ಇರುವುದಿಲ್ಲ!

ಈ ಬದಲಾವಣೆಯ ಮಾದರಿಯು ‘ಹೀಗೇ ಸುಮ್ಮನೆ’ ಎಂಬಂತೆ ಇರುವುದಿಲ್ಲ. ಇದನ್ನು ಅರ್ಥ
ಮಾಡಿಕೊಂಡರೆ ನಿಮಗೆ ಹೆಚ್ಚು ಚೆನ್ನಾಗಿ ಇರುವ ಹಾಗೂ ಹೆಚ್ಚು ಸಮತೋಲನದ ಪೋರ್ಟ್‌ಫೋಲಿಯೊ ಒಂದನ್ನು ಮುಂದಿನ ವರ್ಷಗಳಲ್ಲಿ ರೂಪಿಸಲು ಸಾಧ್ಯವಾಗಬಹುದು.

ADVERTISEMENT

ಫ್ಯಾಕ್ಟರ್ ಹೂಡಿಕೆ ಅಂದರೆ ಏನು?

ಪ್ರತಿಯೊಂದು ಷೇರಿಗೂ ಅದರದೇ ಆದ ಗುಣಲಕ್ಷಣ ಗಳಿರುತ್ತವೆ. ಅವು ಆ ಷೇರಿನಿಂದ ಸಿಗುವ ಲಾಭದ ಪ್ರಮಾಣ ಎಷ್ಟು ಎಂಬುದನ್ನು ನಿರ್ಧರಿಸುತ್ತವೆ. ಅವುಗಳನ್ನು ಆ ಷೇರು ನಿರ್ದಿಷ್ಟವಾಗಿ ವರ್ತಿಸುವಂತೆ ಮಾಡುವ ‘ಘಟಕಾಂಶಗಳು’ ಎಂದು ಅರ್ಥ ಮಾಡಿಕೊಳ್ಳಿ. ಜಾಗತಿಕ ಮಟ್ಟದಲ್ಲಿ ಹಾಗೂ ಭಾರತದಲ್ಲಿ ಹೂಡಿಕೆದಾರರು ಸಾಮಾನ್ಯವಾಗಿ ಇಂತಹ ನಾಲ್ಕು ಮುಖ್ಯ ಅಂಶಗಳನ್ನು ಗಮನಿಸುತ್ತಾರೆ:

* ಮೌಲ್ಯ– ತಮ್ಮ ನಿಜ ಮೌಲ್ಯಕ್ಕಿಂತ ಕಡಿಮೆ ಬೆಲೆಗೆ ಸಿಗುತ್ತಿರುವ ಷೇರುಗಳು

* ಮೊಮೆಂಟಮ್‌– ಬೆಲೆಯನ್ನು ವೇಗವಾಗಿ ಹೆಚ್ಚಿಸಿಕೊಳ್ಳುತ್ತಿರುವ ಹಾಗೂ ಕೆಲವು ಸಮಯದವರೆಗೆ ಬೆಲೆಯನ್ನು ಇನ್ನೂ ಹೆಚ್ಚಿಸಿಕೊಳ್ಳಲಿರುವ ಷೇರುಗಳು

* ಗುಣಮಟ್ಟ– ಒಳ್ಳೆಯ ಲಾಭದ ಪ್ರಮಾಣ, ಕಡಿಮೆ ಸಾಲ ಮತ್ತು ಉತ್ತಮ ಆಡಳಿತ ಮಂಡಳಿ ಇರುವ ಕಂಪನಿಗಳ ಷೇರುಗಳು

* ಕಡಿಮೆ ಅಸ್ಥಿರತೆ– ಮಾರುಕಟ್ಟೆಯಲ್ಲಿ ಚಂಚಲ ವಹಿವಾಟು ಹೆಚ್ಚಿದ್ದಾಗಲೂ ತಾವು ಕಡಿಮೆ ಪ್ರಮಾಣದಲ್ಲಿ ಏರಿಳಿತ ಕಾಣುವ, ಹೆಚ್ಚಿನ ಮಟ್ಟದ ಸ್ಥಿರತೆ ಒದಗಿಸುವ ಷೇರುಗಳು

ಬೇರೆ ಬೇರೆ ಬಗೆಯ ಹೂಡಿಕೆದಾರರು ಬೇರೆ ಬೇರೆ ಅಂಶಗಳತ್ತ ಆಕರ್ಷಿತರಾಗುತ್ತಾರೆ. ಕೆಲವರಿಗೆ ವೇಗವಾಗಿ ಮೌಲ್ಯ ಹೆಚ್ಚಿಸಿಕೊಳ್ಳುತ್ತಿರುವ ಷೇರುಗಳನ್ನು ಹೊಂದುವುದರಿಂದ ಸಿಗುವ ಥ್ರಿಲ್‌ ಬೇಕು. ಇನ್ನು ಕೆಲವರಿಗೆ ಕಡಿಮೆ ಅಸ್ಥಿರತೆಯಿಂದ ಸಿಗುವ ನೆಮ್ಮದಿ ಬೇಕು. ಇನ್ನು ಕೆಲವರಿಗೆ ಗುಣಮಟ್ಟದ ಷೇರು ಬೇಕು. ಆದರೆ ಯಾವುದೇ ಒಂದು ಅಂಶ ಎಲ್ಲ ಕಾಲದಲ್ಲಿಯೂ ಮುಂಚೂಣಿಯಲ್ಲಿ ಉಳಿಯುವುದಿಲ್ಲ ಎಂಬುದನ್ನು ಇತಿಹಾಸ ಹೇಳುತ್ತದೆ.

ಕಳೆದ ಎರಡು ದಶಕಗಳ ಅವಧಿಯಲ್ಲಿ ದೇಶದಲ್ಲಿ ಒಂದೊಂದು ಅವಧಿಯಲ್ಲಿ ಒಂದೊಂದು ಅಂಶವು – ಮೌಲ್ಯ, ಮೊಮೆಂಟಮ್, ಗುಣಮಟ್ಟ ಮತ್ತು ಕಡಿಮೆ ಅಸ್ಥಿರತೆ – ಆವರ್ತನದಲ್ಲಿ ಗಣನೀಯ ಮಹತ್ವ ಪಡೆದಿದೆ. ಈ ವರ್ಷ ಮುಂಚೂಣಿಯಲ್ಲಿ ಇದ್ದ ಅಂಶವು ಮುಂದಿನ ವರ್ಷದಲ್ಲಿ ಹಿಂದೆ ಸರಿದಿದೆ. ಈ
ಬದಲಾವಣೆಗಳನ್ನು ಅರ್ಥ ಮಾಡಿಕೊಳ್ಳುವುದು ಹಾಗೂ ಅದಕ್ಕೆ ಹೊಂದಿಕೊಳ್ಳುವುದು
ಫ್ಯಾಕ್ಟರ್‌ ಹೂಡಿಕೆ ವಿಧಾನದಲ್ಲಿ ಮಹತ್ವದ್ದು.

ಏಕೆ ಹೀಗೆ ?

ಮಾರುಕಟ್ಟೆಯ ಚಲನೆಗೆ ಒಂದು ಗತಿ ಇದೆ. ಅರ್ಥ ವ್ಯವಸ್ಥೆಯ ಸ್ಥಿತಿ ಬೇರೆ ಬೇರೆ ರೀತಿಯಲ್ಲಿ ಇದ್ದಾಗ ಹೂಡಿಕೆಯೂ ಬೇರೆ ಬೇರೆ ರೀತಿಯಲ್ಲಿ ಇರಬೇಕಾಗುತ್ತದೆ.

* ಆರ್ಥಿಕ ಬೆಳವಣಿಗೆಯು ಚೆನ್ನಾಗಿ ಇದ್ದಾಗ, ಕಾರ್ಪೊರೇಟ್ ಕಂಪನಿಗಳ ಲಾಭದ ಪ್ರಮಾಣವು ಹೆಚ್ಚುತ್ತಿದ್ದಾಗ, ಉತ್ತಮ ‘ಮೌಲ್ಯ’ದ ಹಾಗೂ ‘ವೇಗವಾಗಿ ಮೌಲ್ಯವನ್ನು ಹೆಚ್ಚಿಸಿಕೊಳ್ಳುತ್ತಿರುವ’ ಮೊಮೆಂಟಮ್‌ ಷೇರುಗಳು ಹೆಚ್ಚಿನ ಲಾಭವನ್ನು ತಂದುಕೊಡುತ್ತವೆ.

* ಅನಿಶ್ಚಿತತೆ ಹೆಚ್ಚಿದ್ದಾಗ – 2008ರ ಬಿಕ್ಕಟ್ಟಿನ ಅವಧಿ, 2018ರಲ್ಲಿ ಎನ್‌ಬಿಎಫ್‌ಸಿ ವಲಯದಲ್ಲಿ ಸಮಸ್ಯೆ ಎದುರಾಗಿದ್ದ ಸಂದರ್ಭ, ಕೋವಿಡ್‌ ಸಾಂಕ್ರಾಮಿಕದ ಸಂದರ್ಭ – ಕಡಿಮೆ ಅಸ್ಥಿರತೆಯ ಹಾಗೂ ಹೆಚ್ಚಿನ ಗುಣಮಟ್ಟದ ಷೇರುಗಳು ಪ್ರಾಮುಖ್ಯ ಪಡೆಯುತ್ತವೆ.

* ವ್ಯವಸ್ಥೆಯಲ್ಲಿ ನಗದು ಹರಿವು ಜಾಸ್ತಿ ಇದ್ದಾಗ ಹಾಗೂ ಸಣ್ಣ ಹೂಡಿಕೆದಾರರು ಹೆಚ್ಚು ಸಕ್ರಿಯವಾಗಿ ಇರುವಾಗ ‘ಮೌಲ್ಯವನ್ನು ವೇಗವಾಗಿ ಹೆಚ್ಚಿಸಿಕೊಳ್ಳುತ್ತಿರುವ’ ಷೇರುಗಳಿಗೆ (ಮೊಮೆಂಟಮ್‌) ಹೊಸ ಬಲ ಸಿಗುತ್ತದೆ.

2005ರಿಂದ 2008ರವರೆಗೆ ಭಾರತದ ಅರ್ಥ ವ್ಯವಸ್ಥೆಯಲ್ಲಿ ಕಂಡುಬಂದ ವೇಗದ ಬೆಳವಣಿಗೆ ಘಟ್ಟ, 2011ರಿಂದ 2013ರವರೆಗಿನ ಎಚ್ಚರಿಕೆಯ ಘಟ್ಟ, ಕೋವಿಡ್‌ ನಂತರದ ಚೇತರಿಕೆಯ ಘಟ್ಟ ಸೇರಿದಂತೆ ಪ್ರತಿ ಘಟ್ಟವೂ ಒಂದೊಂದು ಅಂಶಕ್ಕೆ ಹೆಚ್ಚಿನ ಲಾಭ ಮಾಡಿಕೊಟ್ಟಿದೆ. ಹೀಗಾಗಿಯೇ ಯಾವುದೇ ಒಂದು ಬಗೆಯ ಹೂಡಿಕೆ ತಂತ್ರವನ್ನು ನೆಚ್ಚಿಕೊಳ್ಳುವುದು ಸವಾಲು ಮೈಮೇಲೆ ಎಳೆದುಕೊಳ್ಳುವ ಕೆಲಸವಾಗುತ್ತದೆ.

ಹೂಡಿಕೆದಾರರು ಯಾವುದೋ ಒಂದು ಅಂಶವನ್ನು ನೆಚ್ಚಿಕೊಂಡು ಹೂಡಿಕೆ ಮಾಡಬೇಕಾಗಿಲ್ಲ. ಅವರು ಬಹು ಅಂಶಗಳನ್ನು ಆಧರಿಸಿದ ಪೋರ್ಟ್‌ಫೋಲಿಯೊ ಒಂದನ್ನು ಕಟ್ಟಬಹುದು. ಅದರಲ್ಲಿ ಮೌಲ್ಯಯುತ, ಹೆಚ್ಚಿನ ಗುಣಮಟ್ಟದ, ಮೌಲ್ಯವವನ್ನು ಬಹಳ ವೇಗವಾಗಿ ವರ್ಧಿಸಿಕೊಳ್ಳುತ್ತ ಸಾಗುವ, ಕಡಿಮೆ ಅಸ್ಥಿರತೆಯ ಷೇರುಗಳೆಲ್ಲವೂ ಸರಿಯಾದ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳಬಹುದು.

ನಾವೇ ಇಲ್ಲಿರುವ ಸವಾಲು!:

ಹೂಡಿಕೆಯಲ್ಲಿ ಅತ್ಯಂತ ಕಷ್ಟದ ಸಂಗತಿಯೆಂದರೆ ಮಾರುಕಟ್ಟೆಗಳನ್ನು ಅರ್ಥ ಮಾಡಿಕೊಳ್ಳುವುದು ಅಲ್ಲ. ನಮ್ಮ ಭಾವನೆಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದೇ ಇಲ್ಲಿ ಬಹಳ ದೊಡ್ಡ ಸವಾಲು. ಬಹುತೇಕ ಹೂಡಿಕೆದಾರರು ಈಚಿನ ಅವಧಿಯಲ್ಲಿ ಹೆಚ್ಚಿನ ಗಳಿಕೆ ತಂದುಕೊಟ್ಟ ಷೇರುಗಳ ಹಿಂದೆ ಓಡುತ್ತಾರೆ. ಉತ್ತಮ ಮೌಲ್ಯದ ಷೇರುಗಳು ಕಳೆದ ವರ್ಷದಲ್ಲಿ ಉತ್ತಮ ಸಾಧನೆ ತೋರಿದ್ದವು ಎಂದಾದರೆ ಎಲ್ಲರೂ ಆ ಬಗೆಯ ಷೇರುಗಳನ್ನೇ ಈ ವರ್ಷ ಖರೀದಿಸಲು ಬಯಸುತ್ತಾರೆ. ಆದರೆ ಎಲ್ಲರೂ ಈ ಬಗೆಯ ಷೇರುಗಳ ಹಿಂದೆ ಬರುವ ಹೊತ್ತಿಗೆ ಪರಿಸ್ಥಿತಿ ಬದಲಾಗಿರುತ್ತದೆ.

2010ರಲ್ಲಿ ಉತ್ತಮ ಮೌಲ್ಯದ ಷೇರುಗಳು ಒಳ್ಳೆಯ ಲಾಭ ತಂದುಕೊಟ್ಟವು. ಆ ಸಂದರ್ಭದಲ್ಲಿ ಹಲವಾರು ಹೂಡಿಕೆದಾರರು ಆ ಬಗೆಯ ಷೇರುಗಳನ್ನು ಖರೀದಿಸಲು ಮುಂದಾದರು. ಆದರೆ ನಂತರದ ವರ್ಷದಲ್ಲಿ ಆ ವರ್ಗದ ಷೇರುಗಳು ಅಷ್ಟೇನೂ ಉತ್ತಮ ಗಳಿಕೆ ತಂದುಕೊಡಲಿಲ್ಲ. ಬೇರೆ ಬೇರೆ ವರ್ಷಗಳಲ್ಲಿ ‘ಮೊಮೆಂಟಮ್’ ಹಾಗೂ ‘ಉತ್ತಮ ಗುಣಮಟ್ಟದ’ ಷೇರುಗಳ ವಿಚಾರದಲ್ಲಿಯೂ ಇದೇ ಆಯಿತು.

ಮಾರುಕಟ್ಟೆಯಲ್ಲಿ ಸರಿಯಾದ ಸಮಯಕ್ಕಾಗಿ ಕಾಯುತ್ತ ಕೂರುವ ಬದಲು, ಬೇರೆ ಬೇರೆ ಅಂಶಗಳಿಗೆ ಆದ್ಯತೆ ನೀಡಿ ಹೂಡಿಕೆಯನ್ನು ವ್ಯವಸ್ಥಿತವಾಗಿ ಮಾಡುತ್ತ ಸಾಗುವುದು ಮುಖ್ಯ. ಮಾರುಕಟ್ಟೆಯ ಸ್ಥಿತಿ ಹೇಗೇ ಇರಲಿ, ಎಸ್‌ಐಪಿ ಮೊತ್ತವನ್ನು ಪ್ರತಿ ತಿಂಗಳೂ ತೊಡಗಿಸುತ್ತ ಸಾಗುವ ಬಗೆಯಲ್ಲೇ ಇದೂ ಮುಖ್ಯ. ಇಲ್ಲಿರುವ ಸಂದೇಶ ಸರಳ: ಶಿಸ್ತಿನಿಂದ ಇರಿ, ವೈವಿಧ್ಯಮಯ ಹೂಡಿಕೆ ಇರಲಿ.

ಫ್ಯಾಕ್ಟರ್‌ ಹೂಡಿಕೆಯನ್ನು ಸಮತೋಲನದ ಊಟ ಸಿದ್ಧಪಡಿಸುವ ಬಗೆ ಎಂಬಂತೆ ಕಾಣಬಹುದು...

* ಉತ್ತಮ ಮೌಲ್ಯದ ಷೇರುಗಳು ಹೂಡಿಕೆದಾರರಿಗೆ ಪ್ರೊಟೀನ್ ಒದಗಿಸುತ್ತವೆ (ದೀರ್ಘಾವಧಿಯಲ್ಲಿ ಬಲ ತಂದುಕೊಡುತ್ತವೆ)

* ಮೊಮೆಂಟಮ್‌ ಎಂಬುದು ಒಂದಿಷ್ಟು ಮಸಾಲೆಯನ್ನು ನೀಡುತ್ತದೆ (ವೇಗದ ಮೌಲ್ಯವರ್ಧನೆ ಹಾಗೂ ಅದರಿಂದ ಸಿಗುವ ಚೇತೋಹಾರಿ ಅನುಭವ)

* ಗುಣಮಟ್ಟದ ಷೇರುಗಳು ನೀಡುವ ವಿಟಮಿನ್‌ಗಳು (ಸ್ಥಿರತೆ)

* ಕಡಿಮೆ ಅಸ್ಥಿರತೆಯ ಷೇರುಗಳು ನೀಡುವ ನಾರಿನಂಶ (ಕಷ್ಟದ ಕಾಲದಲ್ಲಿ ರಕ್ಷಣೆ)

ಒಂದು ಅಂಶವು ಒಂದು ಸಂದರ್ಭದಲ್ಲಿ ನೆರವಿಗೆ ಬರದೇ ಇದ್ದರೆ, ಇನ್ನೊಂದು ಅಂಶವು ನೆರವಾಗುತ್ತದೆ. ಒಟ್ಟಾರೆಯಾಗಿ ಹೂಡಿಕೆದಾರರಿಗೆ ಸಿಗುವ ಫಲಿತಾಂಶವು ಆರೋಗ್ಯಕರವಾಗಿರುತ್ತದೆ. ದೀರ್ಘಾವಧಿಯಲ್ಲಿ ಹೆಚ್ಚು ಸ್ಥಿರವಾಗಿ ಇರುತ್ತದೆ.

ಈಗ ಇದರ ಬಗ್ಗೆ ಏಕೆ ಗಮನ ನೀಡಬೇಕು?

ದೇಶದ ಮ್ಯೂಚುವಲ್‌ ಫಂಡ್‌ ಉದ್ಯಮವು ಈಗ ಹೊಸ ಘಟ್ಟವನ್ನು ಪ್ರವೇಶಿಸುತ್ತಿದೆ. ಈ ಹಂತದಲ್ಲಿ ಫ್ಯಾಕ್ಟರ್ ಆಧಾರಿತ ಹೂಡಿಕೆಯು ಸಕ್ರಿಯ ನಿರ್ವಹಣೆಯ ಕ್ವಾಂಟ್‌ ಫಂಡ್‌ಗಳ ಮೂಲಕ, ಬಹು–ಅಂಶಗಳ ಇಟಿಎಫ್‌ಗಳ ಮೂಲಕ ಹಾಗೂ ಇಂಡೆಕ್ಸ್‌ ಆಧಾರಿತ ಫಂಡ್‌ಗಳ ಮೂಲಕ ಹೆಚ್ಚು ಜನಪ್ರಿಯವಾಗುತ್ತಿದೆ.

ದತ್ತಾಂಶದ ಲಭ್ಯತೆ, ನಿಯಮಗಳ ವಿಚಾರದಲ್ಲಿನ ಸ್ಪಷ್ಟತೆ, ಹೂಡಿಕೆದಾರರಲ್ಲಿ ಮೂಡಿರುವ ಪ್ರಬುದ್ಧತೆಯು ಒಂದೆಡೆ ಸೇರಿರುವುದು ಫ್ಯಾಕ್ಟರ್‌ ಹೂಡಿಕೆ ತಂತ್ರವು ಮುಖ್ಯವಾಹಿನಿಗೆ ಬರಲು ಕಾರಣವಾಗಿದೆ.

ಲೇಖಕ ಯುಟಿಐ ಆಸ್ತಿ ನಿರ್ವಹಣಾ ಕಂಪನಿಯ ಸಮೂಹ ಅಧ್ಯಕ್ಷ, ಮಾರಾಟ ವಿಭಾಗದ ಮುಖ್ಯಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.