ADVERTISEMENT

ಟ್ರಂಪ್‌ ಸುಂಕ ನೀತಿ: ಅಮೆರಿಕದ ಷೇರುಪೇಟೆ ತಲ್ಲಣ

ರಾಯಿಟರ್ಸ್
Published 4 ಏಪ್ರಿಲ್ 2025, 14:33 IST
Last Updated 4 ಏಪ್ರಿಲ್ 2025, 14:33 IST
ಡೊನಾಲ್ಡ್‌ ಟ್ರಂಪ್‌
ಡೊನಾಲ್ಡ್‌ ಟ್ರಂಪ್‌   

ಲಂಡನ್‌: ಟ್ರಂಪ್‌ ಸುಂಕ ನೀತಿಯಿಂದಾಗಿ ಶುಕ್ರವಾರ ಅಮೆರಿಕ ಸೇರಿ ಜಾಗತಿಕ ಷೇರುಪೇಟೆಗಳು ಕುಸಿತ ಕಂಡಿವೆ. ಚೀನಾವು ಅಮೆರಿಕದ ಸರಕುಗಳ ಮೇಲೆ ಹೆಚ್ಚುವರಿ ಸುಂಕ ಘೋಷಿಸಿರುವುದು ಈ ಇಳಿಕೆಗೆ ಕಾರಣವಾಗಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.‌

ಎಸ್‌ ಆ್ಯಂಡ್‌ ಪಿ 500 ಸೂಚ್ಯಂಕವು ಶೇ 2.5ರಷ್ಟು ಕುಸಿದಿದೆ. ಅತಿಹೆಚ್ಚು ಮಾರುಕಟ್ಟೆ ಬಂಡವಾಳ ಹೊಂದಿರುವ 500 ಕಂಪನಿಗಳು ಈ ಗುಚ್ಛದಲ್ಲಿವೆ. ಈ ಕಂಪನಿಗಳ ಮಾರುಕಟ್ಟೆ ಮೌಲ್ಯವು ಒಂದೇ ದಿನ ₹205 ಲಕ್ಷ ಕೋಟಿ ಕರಗಿದೆ.

ಡೌ ಜೋನ್ಸ್ ಶೇ 3.98 ಹಾಗೂ ನಾಸ್ಡಾಕ್‌ ಸೂಚ್ಯಂಕ ಶೇ 2.6ರಷ್ಟು ಇಳಿಕೆಯಾಗಿದೆ. 

ADVERTISEMENT

2020ರ ಮಾರ್ಚ್‌ 16ರ ಕೋವಿಡ್‌ ಸಾಂಕ್ರಾಮಿಕದ ಅವಧಿಯಲ್ಲಿ ಅಮೆರಿಕದ ಷೇರುಪೇಟೆಯು ಅತಿದೊಡ್ಡ ಕುಸಿತ ಕಂಡಿತ್ತು. ಇದಾದ ಬಳಿಕ ದಿನವೊಂದರಲ್ಲಿ ಕಂಡಿರುವ ಅತಿಹೆಚ್ಚು ಕುಸಿತ ಇದಾಗಿದೆ.

ಆ್ಯಪಲ್‌ ಶೇ 9ರಷ್ಟು ಹಾಗೂ ಎನ್ವಿಡಿಯಾ ಕಂಪನಿಯ ಷೇರಿನ ಮೌಲ್ಯದಲ್ಲಿ ಶೇ 8ರಷ್ಟು ಇಳಿಕೆಯಾಗಿದೆ.

ಟ್ರಂಪ್‌ ನೀತಿಯು ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಸೃಷ್ಟಿಗೆ ಕಾರಣವಾಗಲಿದೆ. ಹಣದುಬ್ಬರ ಏರಿಕೆಯಾಗುವ ಸಾಧ್ಯತೆಯಿದೆ. ಹಾಗಾಗಿ, ಮಾರುಕಟ್ಟೆಗಳು ಕುಸಿತ ಕಂಡಿವೆ ಎಂದು ತಜ್ಞರು ಹೇಳಿದ್ದಾರೆ.

‌ಅಮೆರಿಕದ ದೊಡ್ಡ ಕಂಪನಿಗಳ ಪೂರೈಕೆ ಸರಪಳಿಯು ವಿದೇಶಗಳಲ್ಲಿ ಹರಡಿಕೊಂಡಿದೆ. ಆ ರಾಷ್ಟ್ರಗಳು ಸುಂಕ ಹೆಚ್ಚಿಸಿದರೆ ಬಿಡಿಭಾಗ ಮತ್ತು ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಇದರಿಂದ ನಷ್ಟವಾಗುವ ಆತಂಕ ದೊಡ್ಡ ಕಂಪನಿಗಳಿಗೆ ಎದುರಾಗಿದೆ. ಇದು ಹೂಡಿಕೆದಾರರ ಬಲವನ್ನು ಕುಗ್ಗಿಸಿದೆ ಎಂದು ಹೇಳಿದ್ದಾರೆ.

ಟೋಕಿಯೊ ಮತ್ತು ಸೋಲ್‌ ಮಾರುಕಟ್ಟೆಯೂ ಇಳಿಕೆ ಕಂಡಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.