ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಕಂಪನಿಯ ಷೇರುಮೌಲ್ಯವು ₹5,650ಕ್ಕೆ ತಲುಪಬಹುದು ಎಂದು ಬ್ರೋಕರೇಜ್ ಸಂಸ್ಥೆ ಆನಂದ ರಾಠಿ ಅಂದಾಜು ಮಾಡಿದೆ.
ದೇಶದ ರಕ್ಷಣೆ ಮತ್ತು ವೈಮಾನಿಕ ವಲಯದಲ್ಲಿ ಎಚ್‌ಎಎಲ್ ದೊಡ್ಡ ಪಾಲು ಹೊಂದಿರುವ ಕಂಪನಿ. ಇದಕ್ಕೆ ದೇಶಿ ಮಾರುಕಟ್ಟೆಯಲ್ಲಿ ಸ್ಪರ್ಧೆ ಇಲ್ಲ. ಯುದ್ಧ ವಿಮಾನ, ಯುದ್ಧದಲ್ಲಿ ಬಳಸುವ ಹೆಲಿಕಾಪ್ಟರ್‌ಗಳ ತಯಾರಿಕೆಯಲ್ಲಿ ಇದು ಪ್ರಮುಖವಾಗಿ ತೊಡಗಿಸಿಕೊಂಡಿದೆ. ದೇಶದ ರಕ್ಷಣಾ ವೆಚ್ಚಗಳು ಹೆಚ್ಚುತ್ತಿರುವುದರ ದೊಡ್ಡ ಪ್ರಯೋಜನವು ಕಂಪನಿಗೆ ದೊರೆಯಲಿದೆ ಎಂದು ಆನಂದ ರಾಠಿ ಹೇಳಿದೆ.
ದೇಶಿ ಮಾರುಕಟ್ಟೆಯಲ್ಲಿ ಯುದ್ಧ ವಿಮಾನಗಳ ತಯಾರಿಕಾ ವಿಭಾಗದಲ್ಲಿ ಕಂಪನಿ ಹೊಂದಿರುವ ನಾಯಕತ್ವದ ಸ್ಥಾನ, ಸರ್ಕಾರದ ಬಲವಾದ ಬೆಂಬಲವು ಕಂಪನಿಗೆ ಗಮನಾರ್ಹ ಪ್ರಮಾಣದಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಕೂಡ ಬ್ರೋಕರೇಜ್ ಸಂಸ್ಥೆಯು ಹೇಳಿದೆ.
ರಕ್ಷಣಾ ಉಪಕರಣಗಳನ್ನು ದೇಶದಲ್ಲಿಯೇ ತಯಾರಿಸುವುದು ಎಚ್‌ಎಎಲ್‌ನ ಆದ್ಯತೆಯ ಕೆಲಸಗಳಲ್ಲಿ ಒಂದಾಗಿದೆ. ವಿದೇಶಗಳ ಮೇಲಿನ ಅವಲಂಬನೆಯನ್ನು ತಗ್ಗಿಸುವುದು ಕಂಪನಿಯ ಪ್ರಮುಖ ಗುರಿಗಳಲ್ಲಿ ಒಂದು. ದೇಶದ ರಕ್ಷಣಾ ಪಡೆಗಳು ಕಂಪನಿಯ ಪ್ರಮುಖ ಗ್ರಾಹಕರು ಎಂದು ಜುಲೈ 14ರಂದು ಸಿದ್ಧಪಡಿಸಿರುವ ವರದಿಯಲ್ಲಿ ಆನಂದ ರಾಠಿ ಹೇಳಿದೆ. ಬುಧವಾರದ ಅಂತ್ಯಕ್ಕೆ ಎಚ್‌ಎಎಲ್ ಷೇರು ಮೌಲ್ಯವು ₹4,859.90 ಆಗಿತ್ತು.
(ಬ್ರೋಕರೇಜ್ ಕಂಪನಿಗಳು ನೀಡುವ ಮಾಹಿತಿ, ವಿವರಗಳಿಗೆ ಪತ್ರಿಕೆ ಹೊಣೆಯಲ್ಲ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.