ADVERTISEMENT

ಷೇರು ಮಾತು: ‘ಐಪಿಒ’ದಲ್ಲಿ ಹೂಡಿಕೆ ಮಾಡುವುದು ಹೇಗೆ?

ಶರತ್ ಎಂ.ಎಸ್.
Published 13 ಡಿಸೆಂಬರ್ 2021, 19:45 IST
Last Updated 13 ಡಿಸೆಂಬರ್ 2021, 19:45 IST
ಶರತ್ ಎಂ.ಎಸ್.
ಶರತ್ ಎಂ.ಎಸ್.   

ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಹೂಡಿಕೆ ಮಾಡುವ ಮುನ್ನ ಯಾವೆಲ್ಲ ವಿಚಾರಗಳನ್ನು ಗಮನಿಸಬೇಕು ಎನ್ನುವುದನ್ನು ಹಿಂದೊಮ್ಮೆ ಇದೇ ಅಂಕಣದಲ್ಲಿ ಪ್ರಸ್ತಾಪಿಸಲಾಗಿತ್ತು.ಈಗ, ಐಪಿಒಗಳಲ್ಲಿ ಹೂಡಿಕೆ ಮಾಡುವ ಪ್ರಕ್ರಿಯೆಯ ಬಗ್ಗೆ ಒಂದಿಷ್ಟು ಕಲಿಯೋಣ.

1. ಯಾವ ಕಂಪನಿಯಲ್ಲಿ ಹೂಡಿಕೆ ಮಾಡಬೇಕು ತೀರ್ಮಾನಿಸಿ: ಮೊದಲು ನೀವು ಯಾವ ಕಂಪನಿಯ ಐಪಿಒದಲ್ಲಿ ಹೂಡಿಕೆ ಮಾಡಬೇಕು ಎಂದು ತೀರ್ಮಾನಿಸಿ. ಕಂಪನಿಯ ಹಿನ್ನೆಲೆ, ಆಡಳಿತ ಮಂಡಳಿಯಲ್ಲಿ ಯಾರಿದ್ದಾರೆ, ಯಾವ ಉದ್ದೇಶಕ್ಕೆ ಐಪಿಒ ನಡೆಯುತ್ತಿದೆ, ಭವಿಷ್ಯದಲ್ಲಿ ಕಂಪನಿ ಹೇಗೆ ಬೆಳವಣಿಗೆ ಸಾಧಿಸಬಹುದು, ಕಂಪನಿಯ ಮೌಲ್ಯಮಾಪನ ಸರಿಯಾದ ರೀತಿಯಲ್ಲಿ ಆಗಿದೆಯಾ, ಕಂಪನಿಯ ಮುಂದಿನ ಯೋಜನೆಗಳೇನು ಎನ್ನುವುದನ್ನು ಅರಿತು ಮುಂದಿನ ತೀರ್ಮಾನ ಕೈಗೊಳ್ಳಿ.

2. ​ಐಪಿಒ ಹೂಡಿಕೆಗೆ ಹಣ ಹೊಂದಿಸುವುದು:ಯಾವ ಐಪಿಒದಲ್ಲಿ ಹೂಡಿಕೆ ಮಾಡಬೇಕು ಎಂದು ತೀರ್ಮಾನಿಸಿದ ಬಳಿಕ, ಎಷ್ಟು ಹಣ ಬೇಕಾಗುತ್ತದೆ ಎನ್ನುವುದನ್ನು ಅಂದಾಜು ಮಾಡಿಕೊಳ್ಳಿ. ನಿಮ್ಮ ಉಳಿತಾಯದ ಹಣ ಬಳಸಿ ಐಪಿಒಗಳಲ್ಲಿ ಹೂಡಿಕೆ ಮಾಡುವುದು ಸೂಕ್ತ. ಸಾಲ ಮಾಡಿ ಐಪಿಒ ಹೂಡಿಕೆ ಮಾಡುವುದು ಸರಿಯಲ್ಲ.

ADVERTISEMENT

3. ​ಡಿ-ಮ್ಯಾಟ್, ಟ್ರೇಡಿಂಗ್ ಖಾತೆ ಆರಂಭಿಸಿ:ಡಿ-ಮ್ಯಾಟ್ ಖಾತೆ ಇಲ್ಲದೆ ಐಪಿಒ ಹೂಡಿಕೆ ಸಾಧ್ಯವಿಲ್ಲ. ಬ್ಯಾಂಕ್‌ಗಳು ಅಥವಾ ವಿಶ್ವಾಸಾರ್ಹ ಆನ್‌ಲೈನ್ ಆ್ಯಪ್‌ಗಳ ಮೂಲಕ ಡಿ-ಮ್ಯಾಟ್ ಖಾತೆ ತೆರೆಯಬಹುದು. ಇದಕ್ಕೆ ಪ್ಯಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿ ಕೆಲವು ದಾಖಲೆಗಳು ಬೇಕಾಗುತ್ತವೆ. ಡಿ-ಮ್ಯಾಟ್ ಖಾತೆ ನಿಮ್ಮ ಹೂಡಿಕೆ ವಿವರಗಳು ಮತ್ತು ದಾಖಲೆಗಳನ್ನು ಎಲೆಕ್ಟ್ರಾನಿಕ್ ರೂಪದಲ್ಲಿ ಹೊಂದಿರುತ್ತದೆ.

4. ಅರ್ಜಿಯ ಪ್ರಕ್ರಿಯೆ: ಹೂಡಿಕೆದಾರ ಬ್ಯಾಂಕ್ ಖಾತೆ ಅಥವಾ ಟ್ರೇಡಿಂಗ್ ಖಾತೆ ಮೂಲಕ ಐಪಿಒಗೆ ಅರ್ಜಿ ಸಲ್ಲಿಸಬಹುದು. ಕೆಲ ವಿಶ್ವಾಸಾರ್ಹ ಆ್ಯಪ್‌ಗಳ ಮೂಲಕವೂ ನೀವು ಐಪಿಒಗೆ ಬಿಡ್ ಮಾಡಬಹುದು. ಐಪಿಒ ಹೂಡಿಕೆಗೆ ಮತ್ತೊಂದು ಅಗತ್ಯ ಎಎಸ್‌ಬಿಎ (ASBA) ವ್ಯವಸ್ಥೆ. ಎಎಸ್‌ಬಿಎ ವಿಸ್ತೃತ ರೂಪ ಅಪ್ಲಿಕೇಷನ್‌ ಸಪೋರ್ಟೆಡ್ ಬೈ ಬ್ಲಾಕ್ಡ್ಫೆಸಿಲಿಟಿ. ಈ ವ್ಯವಸ್ಥೆ ಇದ್ದಾಗ ಐಪಿಒಗೆ ಬಿಡ್ ಮಾಡಿರುವ ಮೊತ್ತವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಕಾಯ್ದಿರಿಸಲು ಸಾಧ್ಯವಾಗುತ್ತದೆ. ಯುಪಿಐ ಮ್ಯಾಂಡೇಟ್ ಮೂಲಕವೂ ಐಪಿಒ ಹೂಡಿಕೆ ಬಿಡ್ಡಿಂಗ್ ಹಣ ಮೀಸಲಿರಿಸಲು ಸಾಧ್ಯ.

5. ಬಿಡ್ಡಿಂಗ್: ಹೂಡಿಕೆದಾರ ಈ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡ ನಂತರ ಬಿಡ್ಡಿಂಗ್‌ಗೆ ಸಜ್ಜಾಗಬೇಕು. ನಿಗದಿತ ಲಾಟ್ ಸೈಜ್‌ಗೆ (ಹೂಡಿಕೆದಾರ ಖರೀದಿಸಬೇಕಿರುವ ಕನಿಷ್ಠ ಸಂಖ್ಯೆಯ ಷೇರುಗಳು), ನಿಗದಿತ ದರಕ್ಕೆ ಅನುಗುಣವಾಗಿ ನೀವು ಬಿಡ್ಡಿಂಗ್ ಮಾಡಬೇಕಾಗುತ್ತದೆ. ಅಂದಾಜು ಮಾಡಿದ್ದಕ್ಕಿಂದ ಹೆಚ್ಚು ಮಂದಿ ಐಪಿಒದಲ್ಲಿ ಹೂಡಿಕೆಗೆ ಮುಂದಾದರೆ ಕೆಲವು ಸಂದರ್ಭಗಳಲ್ಲಿಷೇರುಗಳು ಸಿಗುವುದಿಲ್ಲ.

ಈ ವೇಳೆ ಎಎಸ್‌ಬಿಎ ಅಡಿ ಐಪಿಒ ಖರೀದಿಗಾಗಿ ಕಾಯ್ದಿರಿಸಿದ್ದ ಹಣವನ್ನು ಬ್ಯಾಂಕ್ ಗ್ರಾಹಕನಿಗೆ ಹಿಂದಿರುಗಿಸುತ್ತದೆ. ಐಪಿಒ ಅಡಿ ನಿಮಗೆಷೇರುಗಳು ಸಿಕ್ಕಿವೆ ಎಂದಾದರೆ ನಿಗದಿತ ಮೊತ್ತ ಬ್ಯಾಂಕ್ ಖಾತೆಯಿಂದ ಕಡಿತಗೊಂಡು ಐಪಿಒ ಪ್ರಕ್ರಿಯೆ ಆದ ಆರು ದಿನಗಳಲ್ಲಿ ಐಪಿಒ ಹಂಚಿಕೆ ದೃಢೀಕರಣ ಪತ್ರ (Confirmatory Allotment Note) ಲಭ್ಯವಾಗುತ್ತದೆ. ನಂತರದಲ್ಲಿಷೇರುಗಳು ಹಂಚಿಕೆಯಾಗಿ ಡಿ-ಮ್ಯಾಟ್ ಖಾತೆಗೆ ವರ್ಗಾವಣೆಯಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.