ADVERTISEMENT

ಐಆರ್‌ಎಫ್‌ಸಿ ಐಪಿಒ; ₹14,950 ಇದ್ದರೆ ನೀವೂ ಖರೀದಿಸಬಹುದು!

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 15 ಜನವರಿ 2021, 17:17 IST
Last Updated 15 ಜನವರಿ 2021, 17:17 IST
ಭಾರತೀಯ ರೈಲ್ವೆ–ಸಾಂದರ್ಭಿಕ ಚಿತ್ರ
ಭಾರತೀಯ ರೈಲ್ವೆ–ಸಾಂದರ್ಭಿಕ ಚಿತ್ರ   

ನವದೆಹಲಿ: ಭಾರತೀಯ ರೈಲ್ವೆಗೆ ಸಂಬಂಧಿಸಿದ ಮತ್ತೊಂದು ಐಪಿಒ ಜನವರಿ 18ರಂದು (ಸೋಮವಾರ) ಸಾರ್ವಜನಿಕರಿಗೆ ಬಿಡ್‌ ಮಾಡಲು ಮುಕ್ತವಾಗಲಿವೆ. ಕಳೆದ ವರ್ಷ ಐಆರ್‌ಸಿಟಿಸಿ ಐಪಿಒ ವಹಿವಾಟಿಗೆ ತೆರೆದುಕೊಳ್ಳುತ್ತಿದ್ದಂತೆ ಉತ್ತಮ ಗಳಿಕೆ ತಂದುಕೊಟ್ಟಿದ್ದು ಹೂಡಿಕೆದಾರರಲ್ಲಿ ಐಆರ್‌ಎಫ್‌ಸಿ ಬಗೆಗೂ ನಿರೀಕ್ಷೆ ಹುಟ್ಟುಹಾಕಿದೆ.

ಭಾರತೀಯ ರೈಲ್ವೆ ಹಣಕಾಸು ನಿಗಮದ (ಐಆರ್‌ಎಫ್‌ಸಿ) ₹4,600 ಕೋಟಿ ಮೊತ್ತದ ಷೇರುಗಳು ಸಾರ್ವಜನಿಕರಿಗೆ ಆರಂಭಿಕ ಖರೀದಿಗೆ (ಐಪಿಒ) ಸೋಮವಾರದಿಂದ ಮುಕ್ತವಾಗಲಿವೆ. ಪ್ರತಿ ಷೇರಿಗೆ ₹ 25ರಿಂದ ₹ 26ರ ಬೆಲೆ ನಿಗದಿ ಮಾಡಲಾಗಿದೆ.

ಸಂಪೂರ್ಣ ಸರ್ಕಾರಿ ಸ್ವಾಮ್ಯದ ಬ್ಯಾಂಕೇತರ ಹಣಕಾಸು ಕಂಪನಿಯಾಗಿರುವ ಐಆರ್‌ಎಫ್‌ಸಿಯ ಮೊದಲ ಐಪಿಒ ಇದಾಗಿದೆ. ಭಾರತದ ರಾಷ್ಟ್ರಪತಿಗಳು ಐಆರ್‌ಎಫ್‌ಸಿ ಷೇರುಗಳ ಪ್ರೊಮೋಟರ್‌ ಆಗಿದ್ದು, 59.4 ಕೋಟಿ ಷೇರುಗಳೊಂದಿಗೆ ಹೊಸದಾಗಿ 118.8 ಕೋಟಿ ಷೇರುಗಳನ್ನು ಬಿಡುಗಡೆ ಮಾಡಲಾಗುತ್ತಿದೆ. ₹10 ಮುಖಬೆಲೆಯ ಒಟ್ಟು 178.20 ಕೋಟಿ ಷೇರುಗಳನ್ನು ಮಾರಾಟಕ್ಕೆ ಇಡಲಾಗಿದೆ.

ADVERTISEMENT

1986ರಲ್ಲಿ ಸ್ಥಾಪನೆಯಾದ ಐಆರ್‌ಎಫ್‌ಸಿ ಭಾರತೀಯ ರೈಲ್ವೆಗೆ ಅಗತ್ಯವಿರುವ ಹಣಕಾಸು ಸಹಕಾರವನ್ನು ಪೂರೈಸುತ್ತಿದೆ. 2020ರ ಸೆಪ್ಟೆಂಬರ್‌ವರೆಗೆ ಅರ್ಧ ವರ್ಷದ ಲಾಭಾಂಶ (ತೆರಿಗೆ ಕಡಿತದ ನಂತರ) ₹1,886.84 ಕೋಟಿ ದಾಖಲಾಗಿದೆ.

ನಿಮ್ಮ ಡಿಮ್ಯಾಟ್‌ ಖಾತೆಯ ಮೂಲಕ ಐಪಿಒಗೆ ಬಿಡ್‌ ಸಲ್ಲಿಸಿ, ಯುಪಿಐ ಬಳಸಿ ಆನ್‌ಲೈನ್‌ ಮೂಲಕ ಹಣ ಪಾವತಿಸುವ ಮೂಲಕ ಬಿಡ್‌ಗೆ ಪ್ರವೇಶಿಸಬಹುದು. ನೀವು ಸಲ್ಲಿಸುವ ಷೇರುಗಳಿಗೆ (ಲಾಟ್‌) ತಕ್ಕಷ್ಟು ಹಣ ಬಿಡ್‌ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೂ ಬ್ಲಾಕ್‌ ಆಗುತ್ತದೆ. ನಿಮ್ಮ ಖಾತೆಗೆ ಐಪಿಒ ಹಂಚಿಕೆಯಾಗಿದ್ದರೆ, ಪಾವತಿಸಿರುವ ಮೊತ್ತ ಬ್ಯಾಂಕ್‌ ಖಾತೆಗೆ ಜಮೆಯಾಗುತ್ತದೆ.

ಐಆರ್‌ಎಫ್‌ಸಿ ಐಪಿಒ ವಿವರ:

* ಐಪಿಒ ಬಿಡ್ ಸಲ್ಲಿಕೆ ಆರಂಭ: 2021ರ ಜನವರಿ 18
* ಐಪಿಒ ಬಿಡ್ ಸಲ್ಲಿಕೆಗೆ ಕೊನೆಯ ದಿನ: 2021ರ ಜನವರಿ 20
* ಐಪಿಒ ಬೆಲೆ: ಪ್ರತಿ ಷೇರಿಗೆ ₹25ರಿಂದ ₹26
* ಕನಿಷ್ಠ ಬಿಡ್‌ ಸಲ್ಲಿಕೆ: 575 ಷೇರು (1 ಲಾಟ್‌); ಬೆಲೆ: ₹14,950
* ಗರಿಷ್ಠ ಬಿಡ್‌ ಸಲ್ಲಿಕೆ: 7475 ಷೇರು (13 ಲಾಟ್); ಬೆಲೆ: ₹1,94,350
* ಹಂಚಿಕೆಯಾಗಲಿರುವ ಒಟ್ಟು ಷೇರು: 178,20,69,000

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.