ADVERTISEMENT

ದೇಶದ ಷೇರುಪೇಟೆಗಳಲ್ಲಿ ಮಾರಾಟ ಒತ್ತಡ, ಸೂಚ್ಯಂಕ ತಲೆಕೆಳಗು: ಕೋವಿಡ್‌–19 ಭೀತಿ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2020, 7:09 IST
Last Updated 18 ಮಾರ್ಚ್ 2020, 7:09 IST
ಷೇರುಪೇಟೆ
ಷೇರುಪೇಟೆ   

ಬೆಂಗಳೂರು: ಬ್ಯಾಂಕ್‌ ವಲಯದ ಷೇರುಗಳು ಬುಧವಾರ ಮಾರಾಟ ಒತ್ತಡಕ್ಕೆ ಸಿಲುಕಿದ್ದು,ಸೆನ್ಸೆಕ್ಸ್‌ ಮತ್ತು ನಿಫ್ಟಿ ಇಳಿಮುಖವಾಗಿವೆ. ಆರಂಭದಲ್ಲಿ ಸಕಾರಾತ್ಮ ವಹಿವಾಟು ಮೂಲಕ ಹೆಚ್ಚಿದ ಸಂಪತ್ತು ಕೆಲವೇ ನಿಮಿಷಗಳಲ್ಲಿ ಕರಗಿ ಹೋಯಿತು.

ದೇಶದ ಕಂಪನಿಗಳ ಷೇರುಗಳುಗಳಿಕೆ ಮತ್ತು ನಷ್ಟದ ನಡುವೆ ಹೋಯ್ದಾಡುತ್ತಿವೆ. ಕೊರೊನಾ ವೈರಸ್‌ ಸೋಂಕು ಭೀತಿ ಹೂಡಿಕೆದಾರರಲ್ಲಿ ಆತಂಕ ಸೃಷ್ಟಿಸಿದೆ. ವಹಿವಾಟು ಆರಂಭದಲ್ಲಿ 500 ಅಂಶ ಏರಿಕೆ ಕಂಡಿದ್ದ ಸೆನ್ಸೆಕ್ಸ್‌, ನಂತರದಲ್ಲಿ 1,223.79ಅಂಶ ಕಡಿಮೆಯಾಗಿ 29,355.30ಅಂಶ ಮುಟ್ಟಿತು. ಮೂರು ವರ್ಷಗಳ ಕನಿಷ್ಠ ಮಟ್ಟಕ್ಕೆ ಇಳಿದಿದೆ.

9,100 ಅಂಶಗಳ ಸಮೀಪದಲ್ಲಿ ವಹಿವಾಟು ಆರಂಭಿಸಿದ್ದ ರಾಷ್ಟ್ರೀಯ ಷೇರುಪೇಟೆ ಸಂವೇದಿ ಸೂಚ್ಯಂಕ ನಿಫ್ಟಿ,343.85ಅಂಶ (ಶೇ 3.83) ಇಳಿಕೆಯಾಗಿ8,623.20ಅಂಶಗಳಿಗೆ ತಲುಪಿದೆ.

ADVERTISEMENT

ಆರಂಭದಲ್ಲಿ ಶೇ 5ರಷ್ಟು ಗಳಿಕೆ ಕಂಡ ಇಂಡಸ್‌ಇಂಡ್‌ ಬ್ಯಾಂಕ್‌ ಶೇ 2ರಷ್ಟು ಇಳಿಕೆ ದಾಖಲಿಸಿದೆ. ಟೈಟಾನ್‌ ಕಂಪನಿ ಷೇರು ಶೇ 7ರಷ್ಟು ಕುಸಿದು, 52 ವಾರಗಳ ಕಡಿಮೆ ಮಟ್ಟ ₹921 ತಲುಪಿದೆ.

ಯೆಸ್‌ ಬ್ಯಾಂಕ್‌ ಷೇರು ಇಂದೂ ಸಹ ಗಳಿಕೆ ಕಂಡಿದೆ. ಶೇ 9.12ರಷ್ಟು ಏರಿಕೆಯೊಂದಿಗೆ ಷೇರು ಬೆಲೆ ₹64 ತಲುಪಿದೆ. ವೊಡಾಫೋನ್‌ ಐಡಿಯಾ ಷೇರು ಶೇ 40ರಷ್ಟು ಕುಸಿದಿದೆ.

ಅಮೆರಿಕ ಷೇರುಪೇಟೆಯ ಫ್ಯೂಚರ್‌ಗಳು ಹಾಗೂ ಏಷ್ಯಾ ವಲಯದ ಹಲವು ಷೇರುಗಳು ದಿಢೀರ್‌ ಕುಸಿತ ಕಂಡಿವೆ. ಸೋಮವಾರ ಐತಿಹಾಸಿಕ ಕುಸಿತ ದಾಖಲಿಸಿದ್ದ ಅಮೆರಿಕದ ಷೇರುಪೇಟೆಗಳು ಮಂಗಳವಾರ ಚೇತರಿಕೆ ದಾಖಲಿಸಿವೆ. ಇದರಿಂದ ಜಾಗತಿಕ ಷೇರುಪೇಟೆಗಳಲ್ಲಿ ಸಕಾರಾತ್ಮಕವಾತಾವರಣ ಸೃಷ್ಟಿಯಾದರೂ, ದೇಶದ ಷೇರುಪೇಟೆಗಳು ಕೋವಿಡ್‌–19 ಭೀತಿಯಿಂದ ಮುಕ್ತವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.