ADVERTISEMENT

ಷೇರು ಪೇಟೆ ಕುಸಿತ; ಕರಗಿದ ₹ 3.11 ಲಕ್ಷ ಕೋಟಿ 

ಏಜೆನ್ಸೀಸ್
Published 6 ಜನವರಿ 2020, 11:05 IST
Last Updated 6 ಜನವರಿ 2020, 11:05 IST
ಕುಸಿದ ಷೇರುಪೇಟೆ ಸೂಚ್ಯಂಕ
ಕುಸಿದ ಷೇರುಪೇಟೆ ಸೂಚ್ಯಂಕ    

ನವದೆಹಲಿ:ಇರಾಕ್‌, ಇರಾನ್‌ ಕುರಿತು ಅಮೆರಿಕ ನೀಡುವ ಪ್ರತಿ ಹೇಳಿಕೆಯೂ ಭಾರತದ ಷೇರು ಪೇಟೆಯ ಮೇಲೆ ಪರಿಣಾಮ ಬೀರುತ್ತಿದೆ?!

ಸೋಮವಾರ ದೇಶೀಯ ಷೇರು ಪೇಟೆಗಳಲ್ಲಿ ಉಂಟಾದ ತಲ್ಲಣ ಮೇಲಿನ ಮಾತಿಗೆ ಪುಷ್ಠಿ ನೀಡುವಂತಿದೆ. ಸಂವೇದಿ ಸೂಚ್ಯಂಕ ಕುಸಿತದೊಂದಿಗೆ ಹೂಡಿಕೆದಾರರ ₹ 3.11 ಲಕ್ಷ ಕೋಟಿ ಕರಗಿ ಹೋಗಿದೆ. ಬಿಎಸ್‌ಇ ಸೆನ್ಸೆಕ್ಸ್‌ 679.85 ಅಂಶಗಳ ಇಳಿಕೆಯೊಂದಿಗೆ 40,784.76 ಅಂಶಗಳಿಗೆ ತಲುಪಿದರೆ, ನಿಫ್ಟಿ 233.60 ಅಂಶ ಕುಸಿಯುವ ಮೂಲಕ 11,993.05 ಅಂಶ ತಲುಪಿದೆ.

ಶುಕ್ರವಾರ ₹ 157 ಲಕ್ಷ ಕೋಟಿ ತಲುಪಿದ್ದಮುಂಬೈ ಷೇರು ಪೇಟೆಯಲ್ಲಿ (ಬಿಎಸ್‌ಇ) ವಹಿವಾಟು ಹೊಂದಿರುವ ಕಂಪನಿ ಷೇರುಗಳ ಮಾರುಕಟ್ಟೆ ಮೌಲ್ಯ, ಸೋಮವಾರ ₹ 154 ಲಕ್ಷ ಕೋಟಿಗೆ ಇಳಿಕೆಯಾಗಿ ₹ 3 ಲಕ್ಷ ಕೋಟಿ ಕರಗಿದಂತಾಗಿದೆ. ಐದು ಕಂಪನಿಗಳ ಷೇರುಗಳ ಪೈಕಿ ಕನಿಷ್ಠ ನಾಲ್ಕು ಕಂಪನಿಗಳ ಷೇರು ಬೆಲೆ ಕುಸಿದಿದೆ. ಸ್ಮಾಲ್‌ಕ್ಯಾಪ್‌ ಕಂಪನಿ ಷೇರುಗಳು ಹೆಚ್ಚು ಹೊಡೆತಕ್ಕೆ ಸಿಲುಕಿವೆ.

ADVERTISEMENT

ಇರಾನ್‌ ಪ್ರತೀಕಾರಕ್ಕೆ ಮುಂದಾದರೆ ದೊಡ್ಡ ಮಟ್ಟದ ದಾಳಿಯನ್ನು ಎದುರಿಸಬೇಕಾಗುತ್ತದೆ. ಅಮೆರಿಕ ಸೇನೆಯ ಯೋಧರನ್ನು ಬಾಗ್ದಾದ್‌ ವಾಯುನೆಲೆಯಿಂದ ಹೊರ ಕಳಿಸಲು ಇರಾಕ್‌ ಮುಂದಾದರೆ, ಆರ್ಥಿಕ ನಿರ್ಬಂಧ ಹೇರಬೇಕಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆದರಿಯೊಡ್ಡಿದ ಬೆನ್ನಲ್ಲೇ ಬ್ರೆಂಟ್‌ ಕಚ್ಚಾ ತೈಲ ದರ ಶೇ 3ರಷ್ಟು ಏರಿಕೆ ಕಂಡಿದೆ.

ಎಸ್‌ಬಿಐ, ಬಜಾಜ್‌ ಫೈನಾನ್ಸ್‌, ಮಾರುತಿ ಸುಜುಕಿ ಇಂಡಿಯಾ, ಎಚ್‌ಡಿಎಫ್‌ಸಿ ಸೇರಿದಂತೆ ಬ್ಯಾಂಕಿಂಗ್‌ ವಲಯದ ಷೇರುಗಳು ಶೇ 2 ರಿಂದ ಶೇ 4.5ರ ವರೆಗೂ ಕುಸಿದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.